ಸೋಮವಾರ, ಸೆಪ್ಟೆಂಬರ್ 21, 2020
22 °C

ರಾಗಿಣಿಗೆ 14 ದಿನ ಪರಪ್ಪನ ಅಗ್ರಹಾರ ಸೆರೆವಾಸ: ಸಂಜನಾ ಎರಡು ದಿನ ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಅವರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ನಟಿ ಸಂಜನಾ ಅವರನ್ನು ಪುನಃ ಸಿಸಿಬಿ ಕಸ್ಟಡಿಗೆ ವಹಿಸಲಾಗಿದೆ.

ಡ್ರಗ್ಸ್ ಪೆಡ್ಲರ್‌ ಜೊತೆ ಒಡನಾಟವಿಟ್ಟುಕೊಂಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್‌ ಮುಖಂಡ ಕೇಶವಮೂರ್ತಿಯ ಮಗ ಯಶಸ್‌ಗಾಗಿ ಎನ್‌ಸಿಬಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.  

ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದರು. ಅವಧಿ ಮುಗಿದಿದ್ದ
ರಿಂದಾಗಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿಗಳಾದ ರಾಗಿಣಿ, ಪ್ರಶಾಂತ್ ರಂಕಾ, ಸಿಮೋನ್, ರಾಹುಲ್ ಹಾಗೂ ನಿಯಾಜ್‌ನನ್ನು 14 ದಿನದವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತು. ಅವರೆಲ್ಲರನ್ನೂ ಪೊಲೀಸ್ಜೀಪಿನಲ್ಲೇ ಪರಪ್ಪನ ಅಗ್ರಹಾರ ಕೇಂದ್ರಕಾರಾಗೃಹಕ್ಕೆ ಕರೆದೊಯ್ಯಲಾಯಿತು.ಮುಂದಿನ 14 ದಿನಗಳವರೆಗೆ ಆರೋಪಿಗಳು, ಜೈಲಿನಲ್ಲೇ ಇರಲಿದ್ದಾರೆ.

‘ಸಂಜನಾ, ರವಿಶಂಕರ್, ವಿರೇನ್‌ನಿಂದ ಮಾಹಿತಿ ಕಲೆಹಾಕಬೇಕಿದೆ. ಅವರನ್ನು ಕಸ್ಟಡಿಗೆ ನೀಡಿ’ ಎಂದು ಪೊಲೀಸರು ಕೋರಿದರು. ಅದನ್ನು ಮನ್ನಿಸಿದ ನ್ಯಾಯಾಲಯ, ಮೂವರನ್ನು ಸೆ. 16ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿತು.

ನೋಟಿಸ್‌ ನೀಡಿದ್ದ ಎನ್‌ಸಿಬಿ: ಮುಂಬೈನಲ್ಲಿ ಸಿಕ್ಕಿ ಬಿದ್ದಿದ್ದ ಡ್ರಗ್ಸ್ ಪೆಡ್ಲರ್ ರೆಹಮಾನ್ ಎಂಬಾತ, ಬಿಬಿಎಂಪಿಯ ಬೆಂಗಳೂರಿನ ಮಹಾಲಕ್ಷ್ಮೀಪುರ ವಾರ್ಡ್‌ನ ಮಾಜಿ‌ ಸದಸ್ಯ, ಕಾಂಗ್ರೆಸ್‌ನ ಕೇಶವಮೂರ್ತಿ ಅವರ ಪುತ್ರ ಯಶಸ್ ಅವರಿಗೆ ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಮಾರಾಟ ಮಾಡಿರುವುದಾಗಿ ಹೇಳಿದ್ದ. ಅದಕ್ಕೆ ಸಂಬಂಧಪಟ್ಟ ದಾಖಲೆ ಕಲೆಹಾಕಿದ್ದ ಎನ್‌ಸಿಬಿ, ‘ಸೆಪ್ಟೆಂಬರ್ 7ರಂದು ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ಸೂಚಿಸಿತ್ತು.

ವಿಚಾರಣೆಗೆ ಹಾಜರಾಗದ ಯಶಸ್ ತಲೆಮರೆಸಿಕೊಂಡಿದ್ದಾರೆ. ಆತನ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರಿಂದ ಎನ್‌ಸಿಬಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.‌

ರಾಗಿಣಿ ಕೈದಿ ಸಂಖ್ಯೆ– 8912

ನಟಿ ರಾಗಿಣಿ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಮಹಿಳಾ ಜೈಲಿನಲ್ಲಿ ಇರಿಸಲಾಗಿದೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 8912 ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು