ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು: ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಬ್ಯಾನರ್‌ ಅಳವಡಿಕೆ

Last Updated 22 ಮಾರ್ಚ್ 2022, 19:32 IST
ಅಕ್ಷರ ಗಾತ್ರ

ಕಾಪು (ಉಡುಪಿ ಜಿಲ್ಲೆ): ಇಲ್ಲಿನ ಮಾರಿಗುಡಿ ಜಾತ್ರೆ ಮಂಗಳವಾರದಿಂದ ಆರಂಭವಾಗಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿಲ್ಲ. ಪಡು ಬಿದ್ರಿಯ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಲಾಗಿದೆ.

ಮಾರಿಗುಡಿ ಜಾತ್ರೆಯಲ್ಲಿ ಪ್ರತಿವರ್ಷ ನೂರಾರು ಮುಸ್ಲಿಂ ವ್ಯಾಪಾರಿಗಳು ಕೋಳಿ, ಐಸ್‌ಕ್ರೀಂ,, ಹೂ ಮಾರಾಟ ಮಳಿಗೆಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದರು. ಈ ವರ್ಷ ಮುಸ್ಲಿಮರ ಬದಲಾಗಿ ಹಿಂದೂ ವ್ಯಾಪಾರಿಗಳು ಸ್ಟಾಲ್‌ಗಳನ್ನು ಹಾಕಿದ್ದಾರೆ.

‘ದಶಕಗಳಿಂದಲೂ ಜಾತ್ರೆ, ಉತ್ಸವ ಸೇರಿದಂತೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಲಾಗಿದೆ. ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕಾಪು ಮಾರಿಗುಡಿ ದೇವಸ್ಥಾನ ಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಬೀದಿಬದಿ ವ್ಯಾಪಾರಿಗಳ ಹಾಗೂ ಜಾತ್ರೆ ವ್ಯಾಪಾರಿಗಳ ಒಕ್ಕೂಟದ ಕಾರ್ಯದರ್ಶಿ ಮಹಮ್ಮದ್ ಆರೀಫ್‌ ಬೇಸರ ವ್ಯಕ್ತಪಡಿಸಿದರು.

‘ಹಿಜಾಬ್‌ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ವಿರುದ್ಧ ಕರೆ ನೀಡಿದ್ದ ಬಂದ್‌ಗೆ ಬೀದಿ ಬದಿ ಹಾಗೂ ಜಾತ್ರಾ ವ್ಯಾಪಾರಿಗಳು ಬೆಂಬಲ ನೀಡಿಲ್ಲ. ಒಕ್ಕೂಟದಲ್ಲಿ ಎಲ್ಲ ಜಾತಿ– ಧರ್ಮಗಳಿಗೆ ಸೇರಿದ ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿದ್ದು, ಅವರಲ್ಲಿ 600ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಕೋಮು ಸಂಘರ್ಷದಿಂದ ಮುಸ್ಲಿಂ ವ್ಯಾಪಾರಿಗಳ ಜೀವನ ಬೀದಿಗೆ ಬರಲಿದೆ’ ಎಂದು ಹೇಳಿದರು.

ಗ್ರಾ.ಪಂ.ಗೆ ಮನವಿ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅನ್ಯ ಮತೀಯರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಸೋಮವಾರ ಕೊಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಶೆಟ್ಟಿ ಅವರಿಗೆ ಮನವಿ ನೀಡಲಾಗಿದೆ.

ದಕ್ಷಿಣ ಕನ್ನಡದಲ್ಲೂ ಬ್ಯಾನರ್‌: ಜಿಲ್ಲೆಯ ಮಂಗಳಾದೇವಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಕಾಟಿಪಳ್ಳ ಗಣೇಶಪುರ ಮಹಾಗಣಪತಿ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ದೇವಸ್ಥಾನಗಳ ಮುಂಭಾಗ ಬ್ಯಾನರ್ ಅಳವಡಿಸಲಾಗಿದೆ.

‘ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಸಂವಿಧಾನಕ್ಕೆ ವಿರುದ್ಧವಾದವರಿಗೆ, ಗೋ ಕಟುಕರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ’ ಎಂಬ ಬ್ಯಾನರ್‌ ಅನ್ನು ದೇವಸ್ಥಾನದ ಮುಂದೆ ಹಾಕಲಾಗಿದೆ.

‘ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ, ತಹಶೀಲ್ದಾರ್ ಜೊತೆ ಮಾತನಾಡಿದ್ದೇವೆ. ಬ್ಯಾನರ್ ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡುತ್ತೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

‘ಆಡಳಿತ ಮಂಡಳಿಯವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾನೂನು ತಜ್ಞರ ಬಳಿ ಮಾಹಿತಿ ಕೇಳಿದ್ದೇವೆ. ಬಪ್ಪನಾಡು ದೇವಸ್ಥಾನದ ಆಡಳಿತ ಮಂಡಳಿ ನಿಯಮದ ಪ್ರಕಾರ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹೇಳಿರುವುದಾಗಿ’ ತಿಳಿಸಿದ್ದಾರೆ.

ಬಪ್ಪ ಬ್ಯಾರಿ ನಿರ್ಮಿಸಿದ ದೇವಸ್ಥಾನ
800 ವರ್ಷ ಇತಿಹಾಸವಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನವನ್ನು ಮುಸ್ಲಿಂ ವ್ಯಾಪಾರಿ ಬಪ್ಪ ಬ್ಯಾರಿ ನಿರ್ಮಿಸಿದ್ದಾರೆ ಎಂಬುದು ಪ್ರತೀತಿ. ಮುಸ್ಲಿಮರು ಮೊದಲು ಪ್ರಸಾದವನ್ನು ಸ್ವೀಕರಿಸಲು ಅವಕಾಶ ನೀಡುವ ಅಪರೂಪದ ಸಂಪ್ರದಾಯಕ್ಕೆ ಇದು ಹೆಸರುವಾಸಿಯಾಗಿದೆ.

ಮೂಲ್ಕಿ ಶಾಂಭವಿ ನದಿಯ ಪ್ರವಾಹದಲ್ಲಿ ದೇವಸ್ಥಾನವು ನಶಿಸಿತು. ಆದರೆ 5ಲಿಂಗಗಳ ಪೀಠಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಒಂದು ದಿನ ಬಪ್ಪ ಬ್ಯಾರಿ ಹಡಗು ಆ ಕಲ್ಲುಗಳಿಗೆ ಡಿಕ್ಕಿ ಹೊಡೆದು ನಿಂತಿತು. ಆಗ ಬಪ್ಪ ಬ್ಯಾರಿಯ ಕನಸಿನಲ್ಲಿ ಬಂದ ದುರ್ಗಾದೇವಿಯು, ಆ ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದಂತಾಯಿತು. ಆದ್ದರಿಂದ ಈ ಸ್ಥಳವನ್ನು ಬಪ್ಪನಾಡು ಎಂದು ಕರೆಯುತ್ತಾರೆ.

ಬಪ್ಪರ ವಂಶಸ್ಥರು ಈಗಲೂ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದಾರೆ. ದೇವಸ್ಥಾನವನ್ನು ನಿರ್ಮಿಸಿದ ವ್ಯಕ್ತಿಯ ಗೌರವಾರ್ಥವಾಗಿ ದೇವಾಲಯದ ರಥೋತ್ಸವ ಪ್ರತಿವರ್ಷ ಈ ಮನೆಯಿಂದ ಪ್ರಾರಂಭವಾಗುತ್ತದೆ. ವಾರ್ಷಿಕ ಉತ್ಸವದ ಮೊದಲ ಪ್ರಸಾದವನ್ನು ಬಪ್ಪ ಬ್ಯಾರಿಯ ವಂಶಸ್ಥರಿಗೆ ನೀಡಲಾಗುತ್ತದೆ. ಪ್ರತಿಯಾಗಿ ಕುಟುಂಬದವರು ಹಣ್ಣು ಮತ್ತು ಹೂವುಗಳನ್ನು ದೇವಿಗೆ ಅರ್ಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT