ಸೋಮವಾರ, ಜನವರಿ 25, 2021
26 °C
ಮೊದಲ ದಿನ ಉತ್ತಮ ಸ್ಪಂದನೆ *ಶಾಲೆಗಳಿಗೆ ರಂಗೋಲಿ, ತಳಿರು – ತೋರಣಗಳ ಸಿಂಗಾರ

ಶಾಲೆ ಪುನರಾರಂಭ: ಹುಮ್ಮಸ್ಸಿನಿಂದ ಶಾಲೆಗೆ ಬಂದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪುನರಾರಂಭವಾಗಿದ್ದು, ಮೊದಲ ದಿನ ಉತ್ತಮ ಸ್ಪಂದನೆ ದೊರೆತಿದೆ. ಬಹುತೇಕ ಶಾಲೆ ಆವರಣ, ಕೊಠಡಿಗಳನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು.

ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲಾಗಿತ್ತು. ಸ್ಯಾನಿಟೈಸರ್‌, ನೀರು ಹಾಗೂ ಸೋಪಿನ ವ್ಯವಸ್ಥೆ ಮಾಡಲಾಗಿತ್ತು. ಅಂತರ ಕಾಪಾಡಿಕೊಂಡು ತರಗತಿಗೆ ಹಾಜರಾಗಿದ್ದರು. 6 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳೂ ವಿದ್ಯಾಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೈಸೂರಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲೇ ಹಾಜರಾತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದು ಕಂಡುಬಂತು.

ಮೊದಲ ದಿನ ಕೊಡಗು, ಹಾಸನ, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಮೈಸೂರು ನಗರ ಪ್ರದೇಶದಲ್ಲಿ ಶೇ 60 ಹಾಗೂ ಗ್ರಾಮೀಣ ಭಾಗದಲ್ಲಿ ಶೇ 70ರಷ್ಟು ಹಾಜರಾತಿ ಇತ್ತು ಎಂದು ಡಿಡಿಪಿಐ ಪಾಂಡುರಂಗ ತಿಳಿಸಿದರು.

ಸಿಬಿಎಸ್‍ಇ ಮತ್ತು ಐಸಿಎಸ್‍ಇ, ಸ್ಟೇಟ್ ಬೋರ್ಡ್ ಪ್ರೈವೇಟ್ ಸ್ಕೂಲ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ (ಸಿಐಎಸ್‍ಪಿಎಂಎಎಂ) ವ್ಯಾಪ್ತಿಗೆ ಶಾಲೆಗಳ ಆರಂಭ ಕುರಿತು ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಕಲಬುರ್ಗಿಯಲ್ಲೂ ಉತ್ತಮ ಸ್ಪಂದನೆ ದೊರೆತಿದ್ದು, ಮೊದಲ ದಿನ ಶೇ 60ರಷ್ಟು ಹಾಜರಾತಿ ಇತ್ತು. ಯಾದಗಿರಿಯಲ್ಲಿ ಶೇ 40, ಕೊಪ್ಪಳದಲ್ಲಿ ಶೇ 30, ಬೀದರ್‌ನಲ್ಲಿ ಶೇ 21, ರಾಯಚೂರಿನಲ್ಲಿ ಶೇ 10ರಷ್ಟು ಹಾಜರಾತಿ ಕಂಡುಬಂತು.

ನಗರ ಪ್ರದೇಶದಲ್ಲಿ ಹೆಚ್ಚು ಹಾಜರಾತಿ ಇತ್ತು. ಬೀದರ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಹಾಗೂ ರಾಯಚೂರು ಜಿಲ್ಲೆಯಲ್ಲಿ ಖಾಸಗಿ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 70ರಷ್ಟು ಹಾಜರಾತಿ ಇತ್ತು. ಅಂತೆಯೇ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 51.82, ಉಡುಪಿ ಜಿಲ್ಲೆಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಹಾಜರಾದರು.

ದಾವಣಗೆರೆ ಜಿಲ್ಲೆಯಲ್ಲಿ ಶಾಲೆಗೆ ಶೇ 60, ಕಾಲೇಜಿಗೆ ಶೇ 20ರಷ್ಟು ಹಾಜರಾತಿ ಕಂಡುಬಂದಿತು.

‘ಜಿಲ್ಲೆಯಲ್ಲಿ ಶೇ 60ರಷ್ಟು ಮಕ್ಕಳ ಹಾಜರಾತಿ ಇತ್ತು. ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಯಿತು. ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತಂದಿದ್ದರು’ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ತಿಳಿಸಿದರು.

‘ಕಾಲೇಜುಗಳಲ್ಲಿ ಶೇ 20ರಷ್ಟು ಹಾಜರಾತಿ ಇತ್ತು’ ಎಂದು ಡಿಡಿಪಿಯು ನಾಜರಾಜಪ್ಪ ಆರ್. ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ದಿನ ನಿರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಲಿಲ್ಲ. ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದು, ಕಾಲೇಜು ವಿದ್ಯಾರ್ಥಿಗಳಿಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಜರಿ ಹೆಚ್ಚಾಗಿತ್ತು.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮೊದಲ ದಿನ ಶೇ 50ರಿಂದ 60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹೂವು ನೀಡಿ, ಚಪ್ಪಾಳೆಯೊಂದಿಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ರಾಂಪುರ: ಮಕ್ಕಳಿಂದಲೇ ಶಾಲಾ ಆವರಣ ಸ್ವಚ್ಛತೆ‌
ಸಾಸ್ವೆಹಳ್ಳಿ:
ಶಾಲಾ ಆರಂಭದ ಮೊದಲ ದಿನ ದಾವಣಗೆರೆ ಜಿಲ್ಲೆಯ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದಲೇ ಶಾಲಾ ಆವರಣ ಸ್ವಚ್ಛತೆ ಮಾಡಿಸಿದ್ದು ಕಂಡುಬಂತು.

‘ಮಕ್ಕಳಿಂದ ಸ್ವಚ್ಛ ಮಾಡಿಸುವುದು ತಪ್ಪು. ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಸ್‌ ಮಾಡಿಸಬೇಕು. ಇಲ್ಲದಿದ್ದರೆ ಕೂಲಿಯವರಿಂದ ಸ್ವಚ್ಛತೆ ಮಾಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಇದನ್ನು ತರಲಾಗುವುದು’ ಎಂದು ಸಾಸ್ವೆಹಳ್ಳಿ ಸಿಆರ್‌ಪಿ ಚಂದ್ರಪ್ಪ ಎಂ.ಪಿ ಹೇಳಿದರು.

‘ಪಂಚಾಯಿತಿಯಿಂದ ಸ್ಯಾನಿಟೈಸ್‌ ಮಾಡಿಸಲಾಗಿದೆ. ಸ್ವಚ್ಛತೆ ಮಾಡಿಸಿಲ್ಲ. ಹೀಗಾಗಿ ಮಕ್ಕಳಿಂದ ಅನಿವಾರ್ಯವಾಗಿ ಮಾಡಿಸಲಾಯಿತು’ ಎಂದು ಪ್ರಭಾರ ಮುಖ್ಯ ಶಿಕ್ಷಕ ಸಾಕಮ್ಮ ಹೇಳಿದರು. ಮಕ್ಕಳು ಮಾಸ್ಕ್ ಧರಿಸದಿದ್ದುದು ಕಂಡುಬಂತು.

ಉಡುಪಿ: ಇಬ್ಬರು ಶಿಕ್ಷಕರಿಗೆ ಕೋವಿಡ್ ದೃಢ
ಉಡುಪಿ:
ಶಾಲೆ ಪುನಾರಂಭದ ದಿನವೇ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಕೋವಿಡ್–19 ದೃಢಪಟ್ಟಿರುವುದು ಗೊತ್ತಾಗಿದೆ. ಬ್ರಹ್ಮಾವರ ತಾಲ್ಲೂಕಿನ ಜಾನುವಾರು ಕಟ್ಟೆ ಶಾಲೆ ಮತ್ತು ಹೆಬ್ರಿ ತಾಲ್ಲೂಕಿನ ಶಾಲೆ ತಲಾ ಒಬ್ಬರು ಶಿಕ್ಷಕರೊಬ್ಬರಿಗೆ ಕೋವಿಡ್ ತಗುಲಿದೆ.

ಸೋಂಕಿತ ಶಿಕ್ಷಕರನ್ನು ಹೋಂ ಐಸೊಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಈ ಎರಡೂ ಶಾಲೆಗಳನ್ನು ಆರಂಭಿಸಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಮೈಸೂರಿನ ಪೀಪಲ್ಸ್ ಪಾರ್ಕ್ ಪ್ರೌಢಶಾಲೆಯ ಆವರಣದಲ್ಲಿ ನಡೆದ ‘ವಿದ್ಯಾಗಮ’ ತರಗತಿಗೆ ಹಾಜರಾದ ವಿದ್ಯಾರ್ಥಿಗಳು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು