ಗುರುವಾರ , ಆಗಸ್ಟ್ 11, 2022
21 °C

ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ: ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

‘ಸಿದ್ದರಾಮಯ್ಯ ಪ್ರಿಪ್ಲಾನ್‌ನಿಂದ ನನ್ನ ಹೆಸರು ಹಾಳು ಮಾಡಿದರು’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ರಾಜಕೀಯದ ಅನುಕುಲಕ್ಕೆ ತಕ್ಕಂತೆ ಹೇಳಿಕೆ ಕೊಡುತ್ತಿರುತ್ತಾರೆ. ಅವರ ಮಾತಿನಲ್ಲಿ ಸತ್ಯ‌ ಇರುವುದಿಲ್ಲ’ ಎಂದರು.

‘ದೇವೇಗೌಡರ ಕುಟುಂಬದವರಿಗೆ ಕಣ್ಣೀರು ಹಾಕುವುದು ಹೊಸತೇನಲ್ಲ. ಅವರು ಒಳ್ಳೆಯದು ಮತ್ತು ಕೆಟ್ಟದ್ದೆರಡಕ್ಕೂ ಕಣ್ಣೀರಿಡುತ್ತಾರೆ. ಇನ್ಯಾರನ್ನೋ ಓಲೈಸಲು ಕಣ್ಣೀರು ಹಾಕುತ್ತಾರೆ. ನಂಬಿಸಲು ಕಣ್ಣೀರಿಡುತ್ತಾರೆ. ಕುಮಾರಸ್ವಾಮಿ ಸೇರಿದಂತೆ ಆ ಕುಟುಂಬದವರ ಕಣ್ಣೀರಿಗೆ ಬೆಲೆ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವಿದ್ದಾಗ 12 ತಿಂಗಳು ಅಧಿಕಾರ ನಡೆಸಿದ್ದಾರೆ. ಆದರೆ, ಅವರು ಆಡಳಿತ ನಡೆಸಿದ್ದು ಸ್ಟಾರ್‌ ಹೋಟೆಲ್‌ನಿಂದ. ಅದೇ ಅವರ ಕೇಂದ್ರ ಸ್ಥಾನವಾಗಿತ್ತು. ಯಾವ ಶಾಸಕ ಹಾಗೂ ಸಚಿವರ ಕೈಗೂ ಸಿಗಲಿಲ್ಲ ಆ ಆಸಾಮಿ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ಕೊಟ್ಟೆ ಎನ್ನುತ್ತಾರಲ್ಲಾ ಅವರೇನು ಅವರ ಮನೆಯಿಂದ ಕೊಟ್ಟಿದ್ದರಾ? ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಕೊಟ್ಟಿದ್ದೆ. ಅದು ಜನರ ತೆರಿಗೆಯ ಹಣ’ ಎಂದು ತಿರುಗೇಟು ನೀಡಿದರು.

‘ಸಮ್ಮಿಶ್ರ ಸರ್ಕಾರ ಪತನ ಆಗಬೇಕೆಂದೇ ನಾನು ಅಮೆರಿಕಕ್ಕೆ ಹೋದೆ ಎಂದು ಕುಮಾರಸ್ವಾಮಿಯೇ ಹೇಳಿಕೆ ನೀಡಿದ್ದಾರೆ. ಅದನ್ಯಾರು ಯಾಕೆ ಪ್ರಶ್ನೆ ಮಾಡುವುದಿಲ್ಲ?’ ಎಂದು ಕೇಳಿದರು.

ಇದನ್ನೂ ಓದಿ: 

‘ಅವರಿಗೆ ಗುಡ್ ವಿಲ್ ಇಲ್ಲ. ಅದಿದ್ದರೆ ಅಲ್ವಾ ಹಾಳಾಗುವ ಪ್ರಶ್ನೆ ಬರುವುದು’ ಎಂದು ಪ್ರಶ್ನಿಸಿದರು.

‘ಜೆಡಿಎಸ್–ಕಾಂಗ್ರೆಸ್ ಸರ್ಕಾರದ ಪತನ ಮುಗಿದ ಅಧ್ಯಾಯ. ಆ ಬಗ್ಗೆ ಈಗ ಚರ್ಚಿಸುವ ಅಗತ್ಯವಿಲ್ಲ. ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ತಿಳಿಯಲು ಸತ್ಯ ಶೋಧನಾ ಸಮಿತಿ ರೀತಿಯ ಸಮಿತಿ ರಚಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು