ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಆರಗ, ಅಶ್ವತ್ಥನಾರಾಯಣರನ್ನು ವಜಾಗೊಳಿಸಿ– ಸಿದ್ದರಾಮಯ್ಯ

Last Updated 4 ಮೇ 2022, 9:33 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಭಾಗಿಯಾಗಿದ್ದು, ಇಬ್ಬರನ್ನೂ ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಗೃಹ ಇಲಾಖೆಯ ಉಸ್ತುವಾರಿ ಹೊಂದಿರುವ ಆರಗ ಜ್ಞಾನೇಂದ್ರ ನೇರವಾಗಿ ಈ ಅಕ್ರಮಕ್ಕೆ ಹೊಣೆ. ಸಚಿವ ಅಶ್ವತ್ಥ ನಾರಾಯಣ ತಮ್ಮ ಸಂಬಂಧಿಗಳಿಗೆ ಪಿಎಸ್ಐ ಹುದ್ದೆ ಕೊಡಿಸಲು ನೆರವಾಗಿದ್ದಾರೆ' ಎಂದು ಆರೋಪಿಸಿದರು.

ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಕಾಟಾಚಾರದ ತನಿಖೆ ನಡೆಯುತ್ತಿದೆ. ನೇಮಕಾತಿ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್ ಮತ್ತು ಅದೇ ವಿಭಾಗದಲ್ಲಿದ್ದ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಯಾವ ಶಿಸ್ತು ಕ್ರಮವನ್ನೂ ಜರುಗಿಸಿಲ್ಲ. ಒಂದು ಕಡೆಯಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡು ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಲಾಗಿದೆ. ಆದರೆ, ಪ್ರಮುಖ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.

ಗೃಹ ಸಚಿವರು, ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ವಿಧಾನಮಂಡಲದಲ್ಲಿ ತಪ್ಪು ಉತ್ತರ ನೀಡಿದ್ದರು. ಈಗ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಸಚಿವ ಸ್ಥಾನದಲ್ಲಿ ಹೇಗೆ ಮುಂದುವರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಸಚಿವ ಅಶ್ವತ್ಥ ನಾರಾಯಣ ಸಂಬಂಧಿಗಳಾದ ದರ್ಶನ್ ಗೌಡ ಮತ್ತು ನಾಗೇಶ್ ಎಂಬ ಅಭ್ಯರ್ಥಿಗಳು ಅಕ್ರಮವಾಗಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು. ವಿಚಾರಣೆಗೆ ಕರೆತಂದಿದ್ದ ಅವರನ್ನು ಸಚಿವರು ಪ್ರಭಾವ ಬೀರಿ ಬಿಡಿಸಿದ್ದಾರೆ. ಅವರನ್ನೂ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಕುಲ ಸಚಿವರಾಗಿದ್ದ ನಾಗರಾಜ್ ಎಂಬುವವರನ್ನು ಬಂಧಿಸಲಾಗಿದೆ. ಇಲಾಖೆಯ ಜವಾಬ್ದಾರಿ ಹೊತ್ತಿರುವ ಅಶ್ವತ್ಥ ನಾರಾಯಣ ಶಾಮೀಲಾಗದೆ ಅಕ್ರಮ ನಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ₹300 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣದ ಕುರಿತು ಸಿಐಡಿ ತನಿಖೆಯಿಂದ ನ್ಯಾಯ ದೊರಕುವುದಿಲ್ಲ. ಪಿಎಸ್ಐ ನೇಮಕಾತಿ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮಗಳ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ, ಎಂ. ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT