ಸೋಮವಾರ, ಮೇ 16, 2022
22 °C
ಕಾಡಂಚಿನ ಶಾಲೆಗಳಿಗೆ ಭೇಟಿ, ಪರಿಶೀಲನೆ

ಮರಾಠಿ ಶಾಲೆ ಮಕ್ಕಳಿಂದ ನಾಡಗೀತೆ ಹಾಡಿಸಿದ ಸುರೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಗಡಿಯಲ್ಲಿರುವ ಜಾಂಬೋಟಿ ಗ್ರಾಮದ ಮರಾಠಿ ಸರ್ಕಾರಿ ಶಾಲೆಗೆ ಸೋಮವಾರ ಭೇಟಿ ನೀಡಿದ್ದ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು, ಅಲ್ಲಿನ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡಿಸಿ, ತಾವೂ ದನಿಗೂಡಿಸಿ ಗಮನಸೆಳೆದರು.

‘ಮರಾಠಿ ಶಾಲೆಗಳಲ್ಲಿ ನಾಡಗೀತೆ ಹಾಡಿಸುವುದಿಲ್ಲ’ ಎಂಬ ಕನ್ನಡಪರ ಸಂಘಟನೆಗಳ ಆರೋಪದ ಹಿನ್ನೆಲೆಯಲ್ಲಿ ಸಚಿವರು ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಂದ ಖುದ್ದು ನಾಡಗೀತೆ ಹಾಡಿಸಿದರು. ಇದರೊಂದಿಗೆ, ‘ಮರಾಠಿ ಶಾಲೆಗಳನ್ನು ಕಡೆಗಣಿಸಲಾತ್ತಿದೆ’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೂ ತಿರುಗೇಟು ನೀಡಿದರು.

ಬೀಡಿ, ಮಂಗೇನಕೊಪ್ಪದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಇದೇ ಮೊದಲಿಗೆ ಆಲಿಸಿದರು. ನಂದಗಡದ ಸಂಗೊಳ್ಳಿರಾಯಣ್ಣ ವಸತಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಶಿಕ್ಷಕರಿಗೆ ಆಯೋಜಿಸಿರುವ ಮೂಲ ತರಬೇತಿ ಶಿಬಿರಕ್ಕೂ ಭೇಟಿ ಕೊಟ್ಟರು.

ಜಾಂಬೋಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರ ನಾಯಕರು ಪ್ರಬುದ್ಧರಾಗುವುದು ಒಳ್ಳೆಯದು. ಹಳೆಯ ವಿಷಯ ಕೆಣಕುವುದು ಯೋಗ್ಯವಲ್ಲ. ಸರ್ಕಾರಗಳು ಹೆಚ್ಚು ಪ್ರಬುದ್ಧರಾಗಿ ನಡೆದುಕೊಳ್ಳಬೇಕು. ಗಡಿ ಮತ್ತು ಭಾಷಾ ಸಮಸ್ಯೆ ಅಭಿವೃದ್ಧಿಗೆ ಅಡ್ಡಿ ಆಗಬಾರದು. ಒಳ್ಳೆಯ ಆಡಳಿತ ನೀಡಲಾಗದವರು ಆಗಾಗ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿರುತ್ತಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಟೀಕಿಸಿದರು.

‘ಆಂಧ್ರ, ತಮಿಳುನಾಡು ಗಡಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೆ. ಮುಂದಿನ ವಾರ ಯಾದಗಿರಿ ಗಡಿಗೂ ಹೋಗುತ್ತೇನೆ. ಗಡಿಯಲ್ಲಿನ ಶಿಕ್ಷಕರಿಗೆ ಚೈತನ್ಯ ತುಂಬಬೇಕಿದೆ’ ಎಂದರು.

‘ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳಿಗಾಗಿ ಪಂಚಾಯ್ತಿ ಮಟ್ಟದಲ್ಲಿ 1ನೇ ತರಗತಿಯಿಂದ ಪಿಯುಸಿವರೆಗೆ ಶಾಲೆ–ಕಾಲೇಜು ತೆರೆಯುವ ಚಿಂತನೆ ಇದೆ. ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಗಡಿಯಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ‌ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ತಹಶೀಲ್ದಾರ್ ರೇಷ್ಮಾ ತಾಳಿಕೋಟಿ, ಡಿಡಿಪಿಐಗಳಾದ ಎ.ಬಿ. ಪುಂಡಲೀಕ, ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಇದ್ದರು.

50 ವರ್ಷದ ಶಾಲೆಗಳ ಪುನಶ್ಚೇತನಕ್ಕೆ ಯೋಜನೆ

ಬೆಳಗಾವಿ: ‘ಗಡಿ ಸೇರಿದಂತೆ ರಾಜ್ಯದಾದ್ಯಂತ ಇರುವ ಐವತ್ತು ವರ್ಷ ದಾಟಿದ ಶಾಲೆಗಳ ಕಟ್ಟಡಗಳ ಪುನಶ್ಚೇತನಕ್ಕಾಗಿ ಯೋಜನೆ ರೂಪಿಸಲಾಗಿದೆ.  ಅದಕ್ಕಾಗಿ ಈ ಬಜೆಟ್‌ನಲ್ಲಿ ವಿಶೇಷ ಅನುದಾನ ನಿಗದಿಪಡಿಸುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ತಿಳಿಸಿದರು.

ಜಿಲ್ಲೆಯ ಖಾನಾಪುರದ ಬಿಇಒ ಕಚೇರಿ ಆವರಣದಲ್ಲಿ ಸೋಮವಾರ ವಿಜ್ಞಾನ ಉದ್ಯಾನ ಉದ್ಘಾಟನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ‘ಹಣಕಾಸಿನ ಲಭ್ಯತೆ ಮೇರೆಗೆ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದರು.

‘ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವುದು ಹಾಗೂ ಇನ್ನೂ 8ನೇ ತರಗತಿಗಳು ಪುನರಾರಂಭ ಆಗಿಲ್ಲದಿರುವುದರಿಂದ ಈ ಸಾಲಿನಲ್ಲಿ ಸೈಕಲ್ ವಿತರಣೆ ಸಾಧ್ಯತೆ ಕಡಿಮೆ ಇದೆ. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆ ಸಂಬಂಧ, ಕೇಂದ್ರದಿಂದ ಇನ್ನೂ ಮಾರ್ಗಸೂಚಿ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಕಳೆದ ಸಾಲಿನಂತೆ ಆಯ್ದ ಸರ್ಕಾರಿ ಶಾಲೆಗಳಲ್ಲಿ ದ್ವಿ ಮಾಧ್ಯಮ (ಒಂದೇ ಪಠ್ಯಪುಸ್ತಕದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಪಠ್ಯವೆರಡೂ ಇರಲಿದೆ) ಕಲಿಕೆ ಮುಂದುವರಿಯುತ್ತದೆ. ಗೋವಾದಲ್ಲಿನ ಎಸ್ಸೆಸ್ಸೆಲ್ಸಿ ಕನ್ನಡದ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪರೀಕ್ಷೆ ನಡೆಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಕನ್ನಡ ಕಲಿಸುವುದು ಕಡ್ಡಾಯ

‘ಬೆಂಗಳೂರಿನ ಕೇಂದ್ರೀಯ ಶಾಲೆಯಿಂದ ಹಿಡಿದು ಶಾಲೆ ಯಾವುದೇ ಆಗಿರಬಹುದು. ಅಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿಸಬೇಕು. ಇದು ಈ ನೆಲದ ಕಾನೂನು. ಅದನ್ನು ಯಾರೂ ಉಲ್ಲಂಘಿಸುವಂತಿಲ್ಲ’ ಎಂದು ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದರು.

‘ಇತರ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಕಲಿಸಲು ಶಿಕ್ಷಕರ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಯಾವ್ಯಾವ ಶಾಲೆಯಲ್ಲಿ ಕೊರತೆ ಇದೆಯೋ ಅಲ್ಲಿಗೆ ಶಿಕ್ಷಕರನ್ನು ನೇಮಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು