ಶನಿವಾರ, ಅಕ್ಟೋಬರ್ 24, 2020
18 °C
ಕೋವಿಡ್‌ ಪರಿಣಾಮ: ಪ್ರತಿಷ್ಠಿತ ಕಾನ್ವೆಂಟ್‌ಗಳಿಂದಲೂ ವಾಪಸ್‌ ಬಂದ ಮಕ್ಕಳು

ಮಂಡ್ಯ: ಸರ್ಕಾರಿ ಪ್ರೌಢಶಾಲೆ ಸೀಟ್‌ಗಾಗಿ ಪೈಪೋಟಿ!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮಳವಳ್ಳಿ ತಾಲ್ಲೂಕು ಮಾರಗೌಡನಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೋಷಕರು ಪೈಪೋಟಿ ನಡೆಸುತ್ತಿದ್ದಾರೆ. ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳೂ ಅಲ್ಲಿಂದ ವಾಪಸ್ಸಾಗಿ, ಈ ಶಾಲೆ ಸೇರುತ್ತಿದ್ದಾರೆ.

ಇಲ್ಲಿ ಕನ್ನಡ–ಇಂಗ್ಲಿಷ್‌ ಎರಡೂ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ನೂರರಷ್ಟು ಫಲಿತಾಂಶ, ಉಚಿತ ಊಟ–ವಸತಿಯೊಂದಿಗೆ ರಾತ್ರಿ ಪಾಠ, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಒಂದೇ ವರ್ಷ 54 ವಿದ್ಯಾರ್ಥಿಗಳ ಆಯ್ಕೆ–ಹೀಗೆ ಹಲವು ಕಾರಣಗಳಿಂದ ಶಾಲೆಗೆ ಮೊದಲಿನಿಂದಲೂ ಬೇಡಿಕೆ ಇದೆ.

ಈ ಬಾರಿ, ಇಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 500 ದಾಟಿದೆ. ಬೆಂಗಳೂರು, ಮುಂಬೈಗೆ ವಲಸೆ ಹೋಗಿದ್ದವರು ಕೋವಿಡ್‌ ಕಾರಣದಿಂದಾಗಿ ಮರಳಿ ಬಂದಿದ್ದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಮಂಗಳೂರು, ಮೂಡಬಿದಿರೆ, ಕನಕಪುರದ ಹೆಸರಾಂತ ಶಾಲೆಗಳಲ್ಲಿ ದಾಖಲಾಗಿದ್ದ ಮಕ್ಕಳೂ ಇದೀಗ ಇಲ್ಲಿಗೇ ಬಂದಿದ್ದು, 60ಕ್ಕೂ ಹೆಚ್ಚು ಗ್ರಾಮಗಳ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

‘ಅಧಿಕ ಶುಲ್ಕ, ಕೋವಿಡ್‌ ಭಯದಿಂದ ಮೂಡಬಿದಿರೆಯಲ್ಲಿ ಮಗನ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಮಾರಗೌಡನಹಳ್ಳಿ ಶಾಲೆಯಲ್ಲಿ ಓದಿದವರು ಐಎಎಸ್‌, ಕೆಎಎಸ್‌ ಪಾಸ್‌ ಮಾಡಿದ್ದಾರೆ. ಡಾಕ್ಟರ್‌, ಎಂಜಿನಿಯರ್‌ ಆಗಿದ್ದಾರೆ. ಹೀಗಾಗಿ ಇಲ್ಲಿಗೆ ಕರೆತಂದಿದ್ದೇನೆ’ ಎಂದು ಹಲಗೂರು ಪಟ್ಟಣದ ರವಿ ಹೇಳಿದರು.

ಕಳೆದ ವರ್ಷ 437 ಇದ್ದ ಮಕ್ಕಳ ಸಂಖ್ಯೆ ಈ ವರ್ಷ 510ಕ್ಕೇರಿದೆ. 9 ಮತ್ತು 10ನೇ ತರಗತಿಯ ಪ್ರವೇಶಾತಿ ಮುಗಿದಿದೆ. 8ನೇ ತರಗತಿಯ ಕನ್ನಡ ಮಾಧ್ಯಮ ದಾಖಲಾತಿಯೂ ಪೂರ್ಣಗೊಂಡಿದೆ. ಇಂಗ್ಲಿಷ್‌ ಮಾಧ್ಯಮ ತರಗತಿಗೆ ಕೆಲವೇ ಸೀಟುಗಳು ಉಳಿದಿದ್ದು ಸೆ.30ರವರೆಗೆ ದಾಖಲಾತಿ ನಡೆಯಲಿದೆ. ಪ್ರವೇಶಕ್ಕಾಗಿ ಪೈಪೋಟಿ ನಡೆಸುತ್ತಿರುವ ಪೋಷಕರು, ಜನಪ್ರತಿನಿಧಿಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಈ ಶಾಲೆಯ ಹಳೆಯ ವಿದ್ಯಾರ್ಥಿ ಡಾ.ಅಭಿಷೇಕ್‌ಗೌಡ, ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ 275ನೇ ರ‍್ಯಾಂಕ್‌ ಪಡೆದಿದ್ದು, ತಮ್ಮ ಸಾಧನೆಗೆ ಸರ್ಕಾರಿ ಪ್ರೌಢಶಾಲೆಯೇ ಸ್ಫೂರ್ತಿ ಎಂದು ಎಲ್ಲೆಡೆ ಹೇಳಿದ್ದಾರೆ. ದಾಖಲಾತಿ ಹೆಚ್ಚಳಕ್ಕೆ ಇದೂ ಕಾರಣವಾಗಿದೆ. ಮತ್ತೊಬ್ಬ ಹಳೇ ವಿದ್ಯಾರ್ಥಿನಿ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಕೂಡ ಐಆರ್‌ಎಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

*
ಶಿಕ್ಷಕರ ಇಚ್ಛಾಶಕ್ತಿಯಿಂದ ನಮ್ಮ ಶಾಲೆ ಉತ್ತಮ ಹೆಸರು ಗಳಿಸುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ, ಖಾಲಿ ಇರುವ, ಶಿಕ್ಷಕ ಹುದ್ದೆಯ ಎರಡು ಸ್ಥಾನಗಳನ್ನು ಭರ್ತಿ ಮಾಡಬೇಕು.
-ಎ.ಎಸ್‌.ದೇವರಾಜು, ಮುಖ್ಯ ಶಿಕ್ಷಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು