ಮಂಗಳವಾರ, ಜುಲೈ 27, 2021
27 °C
ಹಡಿಲು ಭೂಮಿಯಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ

ಕರಾವಳಿ ಪ್ಯಾಕೇಜ್‌ | ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ: ಸಚಿವ ಬಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಎಕರೆ ಹಡಿಲು ಭೂಮಿಯಿದ್ದು, ಅಲ್ಲಿ ಕೃಷಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವುದು ಹಾಗೂ ಸಹಕಾರ ಸಂಸ್ಥೆಯ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಪೂರ್ವ ಸಿದ್ಧತೆಯ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಭ್ಯವಿರುವ ಹಡಿಲು ಭೂಮಿಯಲ್ಲಿ ಸುಮಾರು 3ಸಾವಿರ ಎಕರೆ ಭೂಮಿಯಲ್ಲಿ ಈ ಬಾರಿ ಕೃಷಿಗೆ ಸ್ಥಳೀಯ ಶಾಸಕರು ನಿರ್ಧರಿಸಿದ್ದಾರೆ ಎಂದರು.

ಕರಾವಳಿಯು ಭೌಗೋಳಿಕವಾಗಿ ವಿಭಿನ್ನವಾಗಿರುವುದರಿಂದ ಇಲ್ಲಿನ ಕೃಷಿ ಚಟುವಟಿಕೆಗಳು ಕೂಡಾ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿವೆ. ಹಾಗಾಗಿ ಇಲ್ಲಿನ ಕೃಷಿಗೆ ಪೂರಕವಾಗಿ ಸೂಕ್ತ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ತಯಾರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹೆಕ್ಟೇರ್‌ಗೆ ₹ 7,500 ರಂತೆ ಭತ್ತ ಕೃಷಿಗೆ ನೀಡಲಾಗುತ್ತಿದ್ದ ಕರಾವಳಿ ಪ್ಯಾಕೇಜ್‌ ಪ್ರೋತ್ಸಾಹಧನವನ್ನು ನಿಲ್ಲಿಸಲಾಗಿದ್ದು, ಅದನ್ನು ಮುಂದುವರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆ ಮಾಡುವಂತೆ ಬೇಡಿಕೆ ಇದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಆಹಾರ ಇಲಾಖೆಗೆ 20 ಲಕ್ಷ ಕ್ವಿಂಟಲ್‌ ಬೇಡಿಕೆ ಇರುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತಲ್ಲಿ, ಕರಾವಳಿಯಲ್ಲಿ ಬೆಳೆಯುವ ಅಕ್ಕಿಯನ್ನು ಖರೀದಿ ಮಾಡಿ, ಪಡಿತರ ಮೂಲಕ ವಿತರಣೆ ಮಾಡಲಾಗುವುದು. ಇದರಿಂದ ಕರಾವಳಿ ಜಿಲ್ಲೆಗಳ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ವಿತರಿಸುವ ನಿಟ್ಟಿನಲ್ಲಿ 12 ಲಕ್ಷ ಕ್ವಿಂಟಲ್ ಅಕ್ಕಿಯ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನವೆಂಬರ್‌ನಲ್ಲಿ ಆಹಾರ ಇಲಾಖೆಯ ಮೂಲಕ ಕುಚ್ಚಲಕ್ಕಿ ಕರಾವಳಿ ಜಿಲ್ಲೆಗೆ ವಿತರಣೆಯಾಗುವ ಸಾಧ್ಯತೆ ಇದೆ. ಈ ನಡುವೆ ಪ್ರಸ್ತುತ ಗುರುತು ಮಾಡಲಾಗಿರುವ ಹಡಿಲು ಭೂಮಿಯಿಂದ ಹೆಕ್ಟೆರ್‌ಗೆ 15 ಕ್ವಿಂಟಲ್ ಅಕ್ಕಿಯಂತೆ ಜಿಲ್ಲೆಯಲ್ಲಿ ಸುಮಾರು 20ಸಾವಿರ ಕ್ವಿಂಟಲ್ ಅಕ್ಕಿ ಬೆಳೆಯುವ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಗೋಷ್ಠಿಯಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಮೊದಲಾದವರು ಉಪಸ್ಥಿತರಿದ್ದರು.

ನಾಲ್ವರು ಅಧಿಕಾರಿಗಳ ವರ್ಗಾವಣೆ
ಮಂಗಳೂರು:
ಬೀದರ್ ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆಯಲ್ಲಿ ಅಕ್ರಮ ಎಸಗಿದ ನಾಲ್ವರು ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಹಡಿಲು ಭೂಮಿಯಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್‌ ಜಿಲ್ಲೆಗೆ ಕಳೆದ ವರ್ಷ 78 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿತ್ತು. ಆದರೆ, ಈ ಬಾರಿ 93,600 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದೆ. ಅಧಿಕಾರಿಗಳು ದುರುಪಯೋಗ ಮಾಡಿದ್ದಾರೆ ಎನ್ನುವ ಆರೋಪ ರೈತರಿಂದ ಕೇಳಿ ಬಂದಿತ್ತು. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದು, ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಎಲ್ಲ ರೈತರಿಗೂ ಅಗತ್ಯ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು