ಮಿಜೋರಾಂ ಎಂಬ ಪುಟ್ಟ ರಾಜ್ಯದ ಜನರ ಶಿಸ್ತು, ಕಾನೂನು ಪಾಲನೆ ಹೊರಗಿನವರಿಗೆ ಬೆರಗು ಮೂಡಿಸಿದರೆ, ಅವರಿಗೆ ಅದು ಸಹಜ ಜೀವನ. ಆರ್ಥಿಕವಾಗಿ ಬಹಳ ಶ್ರೀಮಂತವಲ್ಲದ ಆದರೆ, ಶೈಕ್ಷಣಿಕವಾಗಿ ಬಹಳ ಮುಂದಿರುವ, ಇದ್ದಿದ್ದರಲ್ಲೇ ತೃಪ್ತಿ ಪಡುವ ಮಿಜೋ ಜನರ ಜೀವನಶೈಲಿಯನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ...

ಮಿಜೋ ಜನರು ಬೆಟ್ಟದ ಮೇಲೆ ಬದುಕಲು ಇಷ್ಟಪಡುವವರು. ಅದಕ್ಕೆ ಮಿಜೋರಾಂನ ರಾಜಧಾನಿ ಐಜ್ವಾಲ್ ಕೂಡ ಬೆಟ್ಟದ ಮೇಲೆಯೇ ಇದೆ. ಬೆಟ್ಟ ಇಳಿದು ತಪ್ಪಲಿಗೆ ಬಂದ ಹಾಗೆ ಜನರ ವಾಸ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಈ ಜನರ ಬದುಕು ಮಾತ್ರ ಬೆಟ್ಟದ ತುದಿಯಲ್ಲಿ ಇರುವುದಲ್ಲ, ಶಿಸ್ತು ಮತ್ತು ಸಂಯಮವೂ ಅಷ್ಟೇ ಎತ್ತರದಲ್ಲಿದೆ.

ವಿದೇಶಗಳಿಗೆ ಹೋಗಿ ಬಂದವರೆಲ್ಲ ಅಲ್ಲಿನ ಸಂಚಾರ ನಿಯಮ, ಶಿಸ್ತು,್ವಚ್ಛತೆಯನ್ನು ರೋಮಾಂಚನಗೊಂಡು ವಿವರಿಸುವುದು, ಭಾರತದಲ್ಲಿ ಇಂಥ ಶಿಸ್ತೇ ಇಲ್ಲ ಎಂದೋ, ಯಾವಾಗ ಈ ಶಿಸ್ತು ಬರುತ್ತದೆ ಎಂದೋ ಕರುಬುವುದು ಮಾಡುತ್ತಿರುತ್ತಾರೆ. ಅಂಥವರೊಮ್ಮೆ ಈಶಾನ್ಯ ಭಾರತದ ಪುಟ್ಟ ರಾಜ್ಯ ಮಿಜೋರಾಂಗೆ ಭೇಟಿ ನೀಡಬೇಕು. ಅಲ್ಲಿನ ಜನರ ವೈಯಕ್ತಿಕ ಬದುಕಿನಲ್ಲಿ, ಸಾರ್ವಜನಿಕ ನಡವಳಿಕೆಯಲ್ಲಿ ಅಳವಡಿಸಿಕೊಂಡಿರುವ ಶಿಸ್ತು ಅಚ್ಚರಿಗೆ ಕಾರಣವಾಗಬಹುದು. ನಿಯಮ ಉಲ್ಲಂಘಿಸುವುದನ್ನೇ, ಬೇರೆಯವರನ್ನು ವಂಚಿಸುವುದನ್ನೇ ಬುದ್ಧಿವಂತಿಕೆ ಎಂದು ತಿಳಿದವರಿಗೆ ಮಿಜೋ ಜನರ ಶಿಸ್ತು ವಿಚಿತ್ರವಾಗಿಯೂ ಕಾಣಲೂಬಹುದು.

ಐಜ್ವಾಲ್ನಲ್ಲಿ ಸಿವಿಲ್ ಹಾಸ್ಪಿಟಲ್ (ಸರ್ಕಾರಿ ಆಸ್ಪತ್ರೆ) ಹೊರಗೆ ಇರುವ ಮೆಡಿಕಲ್ಗೆ ಹೋಗುವಾಗಲೂ ಜನರು ಸರದಿಯಲ್ಲೇ ಸಾಗುತ್ತಾರೆ. ಜನ ಜಾಸ್ತಿ ಇದ್ದರೂ ಸ್ವಲ್ಪವೂ ನೂಕುನುಗ್ಗಲು ಆಗದಂತೆ ಒಬ್ಬರ ಹಿಂದೆ ಒಬ್ಬರು ನಿಂತು ಸಂಯಮದಿಂದ ವರ್ತಿಸುತ್ತಾರೆ. ಇಂಥದ್ದೇ ಶಿಸ್ತು ರಸ್ತೆ, ಮಾರುಕಟ್ಟೆ ಸಹಿತ ಎಲ್ಲ ಕಡೆಯೂ ಕಾಣಸಿಗುತ್ತದೆ.

ಮಿಜೋರಾಂನಲ್ಲಿ ಶೇಕಡ 87ರಷ್ಟು ಜನ ಕ್ರೈಸ್ತ ಧರ್ಮಕ್ಕೆ ಸೇರಿದವರು. ಹಾಗಾಗಿ ಇಲ್ಲಿ ಭಾನುವಾರ ಯಾವುದೇ ಅಂಗಡಿಗಳ ಬಾಗಿಲು ತೆರೆಯುವುದಿಲ್ಲ. ವಾಹನಗಳು ಕೂಡ ರಸ್ತೆಗೆ ಇಳಿಯುವುದಿಲ್ಲ. ಭಾನುವಾರ ಐಜ್ವಾಲ್ನ ರಸ್ತೆಗಳನ್ನು ಕಂಡಾಗ ಕರ್ಫ್ಯೂ ವಿಧಿಸಿದ್ದಾರೋ ಅಥವಾ ಲಾಕ್ಡೌನ್ ಮಾಡಿದ್ದಾರೋ ಎಂಬಂತೆ ಭಾಸವಾಗುತ್ತದೆ. ಅಲ್ಲಲ್ಲಿ ಚರ್ಚ್ಗಳಿರುವುದರಿಂದ ಶೇಕಡ 99 ರಷ್ಟು ಜನರು ಚರ್ಚ್ಗಳಿಗೆ ನಡೆದುಕೊಂಡೇ ಹೋಗುತ್ತಾರೆ. ರಸ್ತೆಯಲ್ಲಿ ವಾಹನಗಳಿಲ್ಲದೇ ಇದ್ದರೂ ಪಾದಚಾರಿ ಮಾರ್ಗದಲ್ಲೇ ಸಾಗುತ್ತಾರೆ. ಪಾದಚಾರಿ ಮಾರ್ಗ ಇಲ್ಲದ ಕಡೆಗಳಲ್ಲಿ ಮಾತ್ರ ರಸ್ತೆ ಬದಿಯಲ್ಲಿ ಸಾಗುತ್ತಾರೆ. ಸೋಮವಾರ ಬೆಳಗ್ಗಿನಿಂದ ಶನಿವಾರ ಸಂಜೆವರೆಗೆ ದುಡಿಯುವ ಇಲ್ಲಿನ ಜನರು ಶನಿವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗಿನವರೆಗೆ ಪೂರ್ಣ ವಿಶ್ರಾಂತಿಯಲ್ಲಿರುತ್ತಾರೆ.

ಇಲ್ಲಿನ ಜನರು ಶಾಂತ ಸ್ವಭಾವದವರು. ಯಾರಾದರೂ ನಿಯಮ ಉಲ್ಲಂಘಿಸುವುದು ಕಂಡರೆ ಉಳಿದವರು ತಕ್ಷಣ ಬುದ್ಧಿ ಮಾತು ಹೇಳುತ್ತಾರೆ. ಹಾಗಾಗಿ ಪೊಲೀಸರಿಗೆ ಇಲ್ಲಿ ಕೆಲಸ ಬಹಳ ಕಡಿಮೆ. ಸಂಚಾರಿ ಪೊಲೀಸರು ಕೂಡ ಇಲ್ಲ. ನಾವು ಐಜ್ವಾಲ್ನಿಂದ ಸೈರಾಂಗ್ಗೆ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಎದುರು ಲಾರಿಯೊಂದು ಸಾಗುತ್ತಿತ್ತು. ಅದರ ಚಾಲಕ ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ನಮ್ಮ ಚಾಲಕ ಪೇಕು ಒಂದು ಬಾರಿ ಹಾರ್ನ್ ಮಾಡಿದರು. ಆದರೂ ಲಾರಿ ಚಾಲಕ ಮೊಬೈಲ್ನಲ್ಲಿ ಮಾತು ಮುಂದುವರಿಸಿದ್ದ. ಲಾರಿಯನ್ನು ಓವರ್ಟೇಕ್ ಮಾಡಿದ ಪೇಕು ಟ್ಯಾಕ್ಸಿಯನ್ನು ಅಡ್ಡವಾಗಿ ನಿಲ್ಲಿಸಿ ಕೆಳಗಿಳಿದರು. ಲಾರಿ ಚಾಲಕನಿಗೆ ಬೈದು ಬಂದು ಟ್ಯಾಕ್ಸಿಯನ್ನು ಮುಂದಕ್ಕೆ ಚಲಾಯಿಸಿದರು. ‘ಏನಾಯಿತು’ ಎಂದು ನಾವು ಕೇಳಿದೆವು. ‘ಮೊಬೈಲ್ನಲ್ಲಿ ಮಾತನಾಡಿಕೊಂಡು ಒಂದೇ ಕೈಯಲ್ಲಿ ಡ್ರೈವಿಂಗ್ ಮಾಡಬಾರದು ಎಂಬುದು ಗೊತ್ತಿಲ್ವ? ಹಾರ್ನ್ ಹಾಕಿದಾಗ ಸಣ್ಣ ಗಾಡಿಗಳಿಗೆ ಜಾಗ ಬಿಡಬೇಕು ಎಂಬುದು ಗೊತ್ತಿಲ್ವ? ಎಂದು ಕೇಳಿದೆ. ಆತ ಕ್ಷಮೆ ಕೇಳಿದ. ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ’ ಎಂದು ಪೇಕು ವಿವರಿಸಿದರು. ಅಲ್ಲಿ ನಿಯಮ ಉಲ್ಲಂಘಿಸುವುದನ್ನು ಸಾಮಾನ್ಯ ಜನರೂ ಸಹಿಸುವುದಿಲ್ಲ.

ಕಣಿವೆ ರಾಜ್ಯದ ರಸ್ತೆಗಳೆಲ್ಲ ಇಕ್ಕಟ್ಟಾದವುಗಳು. ವಾರಾಂತ್ಯದ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಿರುತ್ತದೆ. ಆದರೆ, ಎಲ್ಲೂ ಅನಗತ್ಯವಾಗಿ ಹಾರ್ನ್ ಮಾಡುವುದಿಲ್ಲ. ಇನ್ನೊಂದು ವಾಹನಕ್ಕೆ ದಾರಿ ಮಾಡಿಕೊಡಲು ಒಂದು ವಾಹನ ನಿಂತರೆ ಹಿಂದಿನಿಂದ ಬಂದ ವಾಹನ ಯಾವ ಕಾರಣಕ್ಕೂ ಓವರ್ಟೇಕ್ ಮಾಡಲು ಹೋಗವುದಿಲ್ಲ. ಮುಂದೆ ನಿಂತ ವಾಹನದ ಹಿಂಭಾಗದಲ್ಲಿಯೇ ನಿಲ್ಲಿಸುತ್ತಾರೆ. ಕಾರುಗಳಷ್ಟೇ ಅಲ್ಲ, ಬೈಕ್ ಸವಾರರೂ ಕೂಡ ಇದೇ ಶಿಸ್ತನ್ನು ಪಾಲಿಸುತ್ತಾರೆ.

24X7 ಮಾರುಕಟ್ಟೆ

ಐಜ್ವಾಲ್ನಲ್ಲಿ ಬಾರಾ ಬಜಾರ್ ರಸ್ತೆ ಸೇರಿದಂತೆ ಕೆಲವು ಮಾರ್ಗಗಳಲ್ಲಿ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿ, ಹಗಲು ವ್ಯವಹಾರ ನಡೆಯುತ್ತದೆ. ಇದನ್ನು 24X7 ಮಾರ್ಕೆಟ್ ಎಂದು ಕರೆಯಲಾಗುತ್ತದೆ. ದಿನದ 24 ಗಂಟೆಯೂ ವ್ಯಾಪಾರ ಇರುತ್ತದೆಯಾದರೂ ಹಗಲು ಮತ್ತು ರಾತ್ರಿ ನಡೆಯುವ ವ್ಯಾಪಾರಗಳು ಒಂದೇ ಅಲ್ಲ. ಬೆಳಿಗ್ಗೆ 9 ಗಂಟೆಗೆ ಎಲ್ಲ ಅಂಗಡಿಗಳು ಬಾಗಿಲು ತೆರೆಯುತ್ತವೆ. ರಾತ್ರಿ 7 ಗಂಟೆಯವರೆಗೆ ವ್ಯಾಪಾರ ನಡೆಯುತ್ತದೆ. ಅವುಗಳ ಬಾಗಿಲು ಹಾಕುತ್ತಿದ್ದಂತೆ ಅವುಗಳ ಎದುರು ರಸ್ತೆ ಬದಿಯಲ್ಲಿ ರಾತ್ರಿ ಮಾರುಕಟ್ಟೆ ತೆರೆದುಕೊಳ್ಳುತ್ತದೆ. ತರಕಾರಿ, ಹಣ್ಣು, ಕೋಳಿ, ಮೀನು ಸಹಿತ ಎಲ್ಲವೂ ರಾತ್ರಿ ಮಾರುಕಟ್ಟೆಯಲ್ಲಿರುತ್ತವೆ. ಇದು ಮರುದಿನ ಬೆಳಿಗ್ಗೆ 9ರವರೆಗೆ ಇರುತ್ತದೆ.

ಇನ್ನೊಂದು ವಿಶೇಷವೆಂದರೆ ತರಕಾರಿ, ಕೋಳಿ, ಮೊಟ್ಟೆ ಎಂದು ಭೇದ ಮಾಡದೇ ಒಟ್ಟೊಟ್ಟಿಗೆ ಇಟ್ಟು ಮಾರಾಟ ಮಾಡಲಾಗುತ್ತದೆ. ಅಲ್ಲದೇ ಮಾಂಸದ ಅಂಗಡಿಗಳಲ್ಲಿ ದನ ಮತ್ತು ಹಂದಿ ಮಾಂಸವನ್ನು ಒಂದೇ ಕಡೆ ನೇತು ಹಾಕಿ ಮಾರಾಟ ಮಾಡಲಾಗುತ್ತದೆ. ಹಿಂದೂ, ಮುಸ್ಲಿಂ, ಬೌದ್ಧ, ಕ್ರೈಸ್ತರ ಭಾವನೆಗಳಿಗೆ ಈ ಮಾರುಕಟ್ಟೆ ಯಾವುದೇ ಧಕ್ಕೆ ತಂದಿಲ್ಲ.

ತರಕಾರಿ ಮಾರಾಟ ಮಾಡಿದಂತೆ ಏಡಿಗಳನ್ನೂ ಮಾರಾಟ ಮಾಡುತ್ತಾರೆ. ನಾವು ಹೋದಾಗ ಎಂಟು ಏಡಿಗೆ ₹ 200 ದರ ಇತ್ತು. ಜೊತೆಗೆ ಏಡಿ ಒಯ್ಯಲು ಸ್ಥಳದಲ್ಲಿಯೇ ನೇಯ್ದ ಬಿದಿರಿನ ಚೀಲ ಉಚಿತವಾಗಿತ್ತು. ಅಂದರೆ ಏಡಿ ವ್ಯಾಪಾರಿಗೆ ಏಡಿ ಹಿಡಿಯುವ ಕಲೆಯ ಜೊತೆಗೆ ಬುಟ್ಟಿ ಹೆಣೆಯುವ ಕಲೆಯೂ ಒಟ್ಟೊಟ್ಟಿಗೆ ಗೊತ್ತಿರಬೇಕು.

ವಿಶಿಷ್ಟ ಬಾವಿ

ರಸ್ತೆಯಲ್ಲಿ ಅಲ್ಲಲ್ಲಿ ಪುಟ್ಟ ಬಾವಿಗಳಿವೆ. ಇವು ಗುಡ್ಡದ ಮೇಲಿನಿಂದ ಬೀಳುವ ನೀರನ್ನು ಸಂಗ್ರಹಿಸುತ್ತವೆ. ಇದೇ ಬಾವಿಯಿಂದ ಕುಡಿಯಲು ನೀರು ಒಯ್ಯುತ್ತಾರೆ. ಅಲ್ಲೇ ಪಕ್ಕದಲ್ಲಿ ಬಟ್ಟೆ ತೊಳೆಯುತ್ತಾರೆ. ನಗರದಲ್ಲಿ ಮಾತ್ರ ಟ್ಯಾಂಕಿಗಳು ಬಂದಿವೆ. ಉಳಿದವರಿಗೆ ಇದೇ ಬಾವಿಯೇ ನೈಸರ್ಗಿಕ ಟ್ಯಾಂಕ್ಗಳಾಗಿವೆ.

ಆರ್ಥಿಕವಾಗಿ ಶ್ರೀಮಂತವಲ್ಲದ, ಶೈಕ್ಷಣಿಕವಾಗಿ ಮುಂದಿರುವ, ನಿಸರ್ಗದ ಮಡಿಲಲ್ಲಿ ಅರಳಿರುವ ಮಿಜೋರಾಂ ಒಂದು ವಿಸ್ಮಯ ರಾಜ್ಯ. ಅಲ್ಲಿನ ಜನರ ನಡವಳಿಕೆ ಇನ್ನೂ ದೊಡ್ಡ ವಿಸ್ಮಯ. ತಾವು ಅಳವಡಿಸಿಕೊಳ್ಳದೇ ಬೇರೆಯವರಿಗೆ ಶಿಸ್ತಿನ ಪಾಠ ಮಾಡುವವರೆಲ್ಲ ಐಜ್ವಾಲ್ಗೆ ಹೋಗಿ ಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.