ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಸಲ್ಕರ್ ಹತ್ಯೆ ಪ್ರಕರಣ: ಏಕನಾಥ ಶಿಂದೆ ಸರ್ಕಾರ ವಜಾಕ್ಕೆ ಉದ್ಧವ್ ಠಾಕ್ರೆ ಒತ್ತಾಯ

Published 10 ಫೆಬ್ರುವರಿ 2024, 11:21 IST
Last Updated 10 ಫೆಬ್ರುವರಿ 2024, 11:21 IST
ಅಕ್ಷರ ಗಾತ್ರ

ಮುಂಬೈ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಶನಿವಾರ ಆಗ್ರಹಿಸಿದ್ದಾರೆ.

ಶಿವಸೇನಾ ಪಕ್ಷದ ಉದ್ಧವ್‌ ಠಾಕ್ರೆ ಬಣದ (ಯುಬಿಟಿ) ನಾಯಕ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್‌ ಅವರ ಹತ್ಯೆ ಪ್ರಕರಣವನ್ನುದ್ದೇಶಿಸಿ ಠಾಕ್ರೆ ಮಾತನಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಎಂಬಾತ ಅಭಿಷೇಕ್‌ ಅವರನ್ನು ಫೆಬ್ರುವರಿ 8ರಂದು 'ಫೇಸ್‌ಬುಕ್ ಲೈವ್‌' ವೇಳೆ ಗುಂಡಿಕ್ಕಿ ಹತ್ಯೆ ಮಾಡಿದ್ದ. ಬಳಿಕ ತಾನೂ ಗುಂಡು ಹೊಡೆದುಕೊಂಡಿದ್ದ ಎನ್ನಲಾದ ಪ್ರಕರಣದಲ್ಲಿ ಮೂರನೆಯವರ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಠಾಕ್ರೆ ಒತ್ತಾಯಿಸಿದ್ದಾರೆ.

ಬಾಂದ್ರಾದಲ್ಲಿರುವ ತಮ್ಮ ನಿವಾಸ 'ಮಾತೋಶ್ರೀ'ಯಲ್ಲಿ ಮಾತನಾಡಿರುವ ಅವರು, 'ಅವರಿಂದ (ಏಕನಾಥ ಶಿಂದೆ ನೇತೃತ್ವದ ಸರ್ಕಾರದಿಂದ) ರಾಜ್ಯ ಮುನ್ನಡೆಸಲು ಸಾಧ್ಯವಿಲ್ಲ. ಸರ್ಕಾರವನ್ನು ವಜಾಗೊಳಿಸಿ, ರಾಷ್ಪ್ರಪತಿ ಆಡಳಿತ ಜಾರಿಗೊಳಿಸಬೇಕು ಮತ್ತು ಹೊಸದಾಗಿ ವಿಧಾನಸಭೆ ಚುನಾವಣೆ ಘೋಷಿಸುವ ಅಗತ್ಯವಿದೆ' ಎಂದು ಹೇಳಿದ್ದಾರೆ.

'ಘೋಸಲ್ಕರ್ ಮತ್ತು ಮೌರಿಸ್‌ ಭಾಗಿಯಾದ ಶೂಟ್‌ಔಟ್‌ ಪ್ರಕರಣದ ವಿಡಿಯೊದಲ್ಲಿ, ಇಬ್ಬರೂ ಒಟ್ಟಿಗೆ ಕುಳಿತಿರುವುದು ಕಾಣುತ್ತದೆ. ನಂತರ ಘೋಸಲ್ಕರ್ ಅವರತ್ತ ಗುಂಡು ಹಾರಿಸಿರುವುದನ್ನು ನೋಡಬಹುದಾಗಿದೆ. ಬಳಿಕ ಮೌರಿಸ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಆದರೆ, ಗುಂಡು ಹಾರಿಸಿದ್ದು ಯಾರು ಎಂಬ ವಿಡಿಯೊವನ್ನು ನಾವು ನೋಡಿಲ್ಲ' ಎಂದಿದ್ದಾರೆ. ಆ ಮೂಲಕ ಅವರು, ಈ ಪ್ರಕರಣದ ಹಿಂದೆ ಬೇರೆಯವರೂ ಇದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಶಿಂದೆ ಮತ್ತು ಗೃಹಸಚಿವರೂ ಆಗಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT