ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Congress-AAP ಮೈತ್ರಿಯು ಕೆಮಿಸ್ಟ್ರಿಯೂ ಅಲ್ಲ, ಗಣಿತವೂ ಅಲ್ಲ; ಭ್ರಷ್ಟರ ಕೂಟ: BJP

Published 24 ಫೆಬ್ರುವರಿ 2024, 12:36 IST
Last Updated 24 ಫೆಬ್ರುವರಿ 2024, 12:36 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಮತ್ತು ಆಮ್‌ ಆದ್ಮಿ ಪಕ್ಷ (ಎಎಪಿ) ಮೈತ್ರಿಯನ್ನು ಭ್ರಷ್ಟರ ಕೂಟ ಎಂದು ಜರಿದಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಇವರ ಕೆಮಿಸ್ಟ್ರಿ ಅಥವಾ ಗಣಿತ ಯಾವುದೂ ಕೆಲಸ ಮಾಡದು ಎಂದು ಲೇವಡಿ ಮಾಡಿದೆ.

ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ‘ಗುಜರಾತ್, ಹರಿಯಾಣ, ಚಂಡೀಗಢ, ಗೋವಾ ಅಥವಾ ದೆಹಲಿಯಲ್ಲೇ ಇವರು ಮೈತ್ರಿ ಮಾಡಿಕೊಳ್ಳಲಿ. ಅದು ಬಿಜೆಪಿಗೆ ಯಾವುದೇ ಹಾನಿ ಮಾಡದು. ಈ ಕ್ಷೇತ್ರಗಳಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ಶೇ 50ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದಿತ್ತು’ ಎಂದಿದ್ದಾರೆ.

‘ಜನರಿಗಾಗಿ ಕೆಲಸ ಮಾಡುತ್ತಿರುವ ಪಕ್ಷದ ಎದುರು ಭ್ರಷ್ಟರ ಮೈತ್ರಿ ಏನೂ ಮಾಡಲಾಗದು. ಕಾಂಗ್ರೆಸ್‌ನ ಇತಿಹಾಸಕ್ಕೆ ಹೋಲಿಸಿದಲ್ಲಿ ಸದ್ಯ ಅಧಿಕಾರದಲ್ಲಿರುವ ಎಎಪಿ ನಾಯಕರ ಭ್ರಷ್ಟಚಾರ ಸರಿಸಮವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜನರೊಂದಿಗಿನ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ’ ಎಂದು ಸಚ್‌ದೇವ್ ಆರೋಪಿಸಿದರು.

‘2004ರಿಂದ 14ರವರೆಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಬಹುತೇಕ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಅರವಿಂದ ಕೇಜ್ರಿವಾಲ್ ಅವರು, ಮಾಜಿ ಪ್ರಧಾನಿ ರಾಜೀವ ಗಾಂಧಿಗೆ ನೀಡಲಾಗಿದ್ದ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ತಮ್ಮ ಕಾಲಮೇಲೆ ನಿಲ್ಲಲು ಬಲ ಇಲ್ಲದ ಈ ಎರಡೂ ಪಕ್ಷಗಳು ಈಗ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಆದರೆ ಅದು ಕೆಲಸ ಮಾಡದು’ ಎಂದು ಲೇಖಿ ಕಿಚಾಯಿಸಿದರು.

‘ಪಶ್ಚಿಮಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯರ ಪರ ನಿಲ್ಲಬೇಕಾದ ಅಲ್ಲಿನ ಸರ್ಕಾರ, ಆರೋಪಿ ಶೇಖ್ ಶಹಜಹಾನ್ ವಿರುದ್ಧ ಕ್ರಮ ಕೈಗೊಳ್ಳದೇ ಜವಾಬ್ದಾರಿಯಿಂದ ನುಣುಚಿಕೊಳ್ಳಲಿದೆ’ ಎಂದು ಆರೋಪಿಸಿದ್ದಾರೆ.

‘ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ದೆಹಲಿ ವಿಧಾಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಎಎಪಿಯು ಒಂದೂ ಶಾಸಕರಿಲ್ಲದ ಕಾಂಗ್ರೆಸ್ ಎದುರು ಮಂಡಿಯೂರಿದೆ. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಸತತವಾಗಿ ನೋಟಿಸ್ ಕಳುಹಿಸುತ್ತಿರುವ ಜಾರಿ ನಿರ್ದೇಶನಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಕೇಜ್ರಿವಾಲ್, ಬಂಧನಕ್ಕೂ ಮೊದಲು ಮೈತ್ರಿ ಮಾಡಿಕೊಳ್ಳುವ ತವಕದಲ್ಲಿದ್ದಾರೆ’ ಎಂದು ಸಚ್‌ದೇವ್ ಹೇಳಿದ್ದಾರೆ.

ದೆಹಲಿ, ಚಂಡೀಗಢ, ಗುಜರಾತ್ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT