ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ಮೈತ್ರಿ ಮತ್ತೆ ಹಳಿಗೆ: ಮಮತಾ ಮುನಿಸು ಶಮನಕ್ಕೆ ಕಾಂಗ್ರೆಸ್‌ ಪ್ರಯತ್ನ

*ಬಿಕ್ಕಟ್ಟು ಬಗೆಹರಿಸಲು ಸೌಹಾರ್ದ ಸೂತ್ರ
Published 23 ಫೆಬ್ರುವರಿ 2024, 13:26 IST
Last Updated 23 ಫೆಬ್ರುವರಿ 2024, 13:26 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಕಾಂಗ್ರೆಸ್‌ ನಡುವಿನ ಮೈತ್ರಿ ಮಾತುಕತೆ ಪುನರಾರಂಭಗೊಂಡಿದೆ. 

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಮೈತ್ರಿ ಬಿಕ್ಕಟ್ಟನ್ನು ಬಗೆಹರಿಸಲು ಕಾಂಗ್ರೆಸ್‌ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್‌ನ ಪ್ರಸ್ತಾವಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ‘ಈ ಮೈತ್ರಿ ವ್ಯಾಪ್ತಿ ರಾಜ್ಯಕ್ಕೆ ಮಾತ್ರ ಸೀಮಿತವಾಗಬಾರದು. ಅಸ್ಸಾಂ ಹಾಗೂ ಮೇಘಾಲಯದಲ್ಲೂ ಸೀಟು ಹಂಚಿಕೆ ಆಗಬೇಕು. ಈ ವಿಷಯದಲ್ಲಿ ಕಾಂಗ್ರೆಸ್‌ ನಾಯಕರು ಉದಾರವಾಗಿರಬೇಕು’ ಎಂಬ ಷರತ್ತನ್ನೂ ಒಡ್ಡಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ ಪಕ್ಷದ ಜತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಮಮತಾ ಬ್ಯಾನರ್ಜಿ ಕಳೆದ ತಿಂಗಳು ಪ್ರಕಟಿಸಿದ್ದರು. ಟಿಎಂಸಿ ವಿರುದ್ಧ ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿ ಅವರ ಕಟು ಟೀಕೆ, ರಾಜ್ಯದಲ್ಲಿ ಕನಿಷ್ಠ 10 ಸೀಟುಗಳನ್ನು ಬಿಟ್ಟುಕೊಡಬೇಕು ಎಂದು ‘ಕೈ’ ಪಾಳಯದ ನಾಯಕರು ಬೇಡಿಕೆ ಮುಂದಿಟ್ಟ ಕಾರಣಕ್ಕೆ ರಾಜ್ಯದಲ್ಲಿ ಮೈತ್ರಿ ಇಲ್ಲ ಎಂದು ಮಮತಾ ಹೇಳಿದ್ದರು. ರಾಜ್ಯದಲ್ಲಿ ಟಿಎಂಸಿ ಪ್ರಾಬಲ್ಯದ ಕ್ಷೇತ್ರಗಳಲ್ಲೇ ರಾಹುಲ್‌ ಗಾಂಧಿ ಅವರ ಭಾರತ ಜೋಡೋ ನ್ಯಾಯ್‌ ಯಾತ್ರೆ ಸಾಗಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. 

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಎರಡಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಟಿಎಂಸಿ ಪಟ್ಟು ಹಿಡಿದಿದೆ. ಅದರ ನಡುವೆಯೂ, ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಮಾತುಕತೆ ಮುಂದುವರಿದಿದೆ. ಮೈತ್ರಿಕೂಟದಲ್ಲಿ ಗೌರವಾನ್ವಿತ ಸಂಖ್ಯೆಯ ಸ್ಥಾನಗಳನ್ನು ಕೈಪಾಳಯ ಬಯಸುತ್ತಿದೆ. ಐದು ಕ್ಷೇತ್ರಗಳಿಗೆ ಸಮಾಧಾನ ಪಡಬಹುದು. ಬೆಹ್ರಾಂಪುರ, ಮಾಲ್ಡಾ ದಕ್ಷಿಣ, ಮಾಲ್ಡಾ ಉತ್ತರ, ರಾಯ್‌ಗಂಜ್ ಮತ್ತು ಡಾರ್ಜಿಲಿಂಗ್ ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಬಹುದು ಎಂದು ಮೂಲಗಳು ತಿಳಿಸಿವೆ.

ಮೇಘಾಲಯದ ತುರಾ ಹಾಗೂ ಅಸ್ಸಾಂನ ಎರಡು ಕ್ಷೇತ್ರಗಳನ್ನು ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಟಿಎಂಸಿ ಬೇಡಿಕೆ ಮುಂದಿರಿಸಿದೆ. 2019ರ ಚುನಾವಣೆಯಲ್ಲಿ ತುರಾದಲ್ಲಿ ಪಕ್ಷವು ಶೇ 28 ಮತಗಳನ್ನು ಪಡೆದಿತ್ತು. ಕಾಂಗ್ರೆಸ್‌ಗೆ ಸಿಕ್ಕಿದ್ದು ಶೇ 9 ಮತಗಳಷ್ಟೇ. ಇಲ್ಲಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂಬುದು ಟಿಎಂಸಿ ಮುಖಂಡರ ವಾದ. 

ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಟಿಎಂಸಿಗೆ ಪಕ್ಷಾಂತರಗೊಂಡಿದ್ದರು. ಹಾಗಾಗಿ, ಟಿಎಂಸಿ ಮತ ಪ್ರಮಾಣ ಹೆಚ್ಚಾಯಿತು. ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಸೌಹಾರ್ದಯುತವಾಗಿ ಪೂರ್ಣಗೊಳ್ಳಲು ತುರಾ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಹೇಳುತ್ತಾರೆ. 

2019ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22, ಬಿಜೆಪಿ 18 ಹಾಗೂ ಕಾಂಗ್ರೆಸ್‌ 2 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದವು. 

ಗುಜರಾತ್‌: ಭರೂಚ್‌ ಕಗ್ಗಂಟು

ದೆಹಲಿಯಲ್ಲಿ ಎಎಪಿ– ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಗುಜರಾತ್‌ನ ಭರೂಚ್‌ ಕ್ಷೇತ್ರಕ್ಕೆ ಸಂಬಂಧಿಸಿದ ಹಗ್ಗಜಗ್ಗಾಟದಿಂದ ಘೋಷಣೆ ವಿಳಂಬವಾಗಿದೆ. 

ದೆಹಲಿಯಲ್ಲಿ ಎಎಪಿ ನಾಲ್ಕರಲ್ಲಿ ಹಾಗೂ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಉಭಯ ಪಕ್ಷಗಳ ನಾಯಕರು ಸಹಮತಕ್ಕೆ ಬಂದಿದ್ದಾರೆ. ಹರಿಯಾಣದಲ್ಲಿ ಎಎಪಿಗೆ ಒಂದು ಕ್ಷೇತ್ರವನ್ನು ಬಿಡಲು ಕೈ ಪಾಳಯ ಒಪ್ಪಿದೆ. ಚಂಡೀಗಢ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಎಎಪಿ ಒಪ್ಪಿದೆ. 

ತಾತ್ವಿಕವಾಗಿ, ಗುಜರಾತ್‌ನಲ್ಲಿ ಎಎಪಿಗೆ ಭರೂಚ್ ಮತ್ತು ಭವಾನಗರ ಎರಡನ್ನೂ ಬಿಟ್ಟುಕೊಡಲು ಕಾಂಗ್ರೆಸ್‌ ಸಿದ್ಧವಾಗಿದೆ. ಆದರೆ, ಭರೂಚ್ ಜತೆಗೆ ಕಾಂಗ್ರೆಸ್‌ನ ಅಹ್ಮದ್‌ ಪಟೇಲ್‌ ಕುಟುಂಬಕ್ಕೆ ಭಾವನಾತ್ಮಕ ಸಂಬಂಧ ಇದೆ. ಹಾಗಾಗಿ, ಈ ಕ್ಷೇತ್ರದ ಮೇಲಿನ ಹಕ್ಕು ಸಡಿಲಿಸಿದರೆ ತಪ್ಪು ಸಂದೇಶ ರವಾನೆಯಾಗಬಹುದು ಎಂದು ಕೈ ಪಾಳಯದ ಒಂದು ವರ್ಗ ವಾದಿಸಿದೆ. 

ಎಎಪಿ ಜತೆಗಿನ ಮೈತ್ರಿಯನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT