ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಇಲಾಖೆಯಿಂದ ಕಾಂಗ್ರೆಸ್‌ಗೆ ಹೊಸ ನೋಟಿಸ್: ₹3,567 ಕೋಟಿ ಪಾವತಿಸಲು ಸೂಚನೆ

Published 31 ಮಾರ್ಚ್ 2024, 11:10 IST
Last Updated 31 ಮಾರ್ಚ್ 2024, 11:10 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ (ಐಟಿ) ಇಲಾಖೆಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ನೋಟಿಸ್‌ ಜಾರಿಯಾಗಿದ್ದು, ₹1,745 ಕೋಟಿ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಇತ್ತೀಚೆಗಷ್ಟೇ ಐಟಿ ಇಲಾಖೆಯು ₹1,823 ಕೋಟಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್‌ಗೆ ನೋಟಿಸ್‌ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಹೊಸ ನೋಟಿಸ್‌ ನೀಡಲಾಗಿದೆ.

ಹೊಸ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿರುವ ಮೊತ್ತವನ್ನೂ ಸೇರಿಸಿದರೆ ಕಾಂಗ್ರೆಸ್ ಪಕ್ಷವು ಒಟ್ಟಾರೆ ಪಾವತಿಸಬೇಕಾದ ತೆರಿಗೆಯ ಮೊತ್ತ ₹3,567 ಕೋಟಿಗೆ ಏರಿದಂತಾಗಿದೆ.

ಹೊಸ ತೆರಿಗೆ ನೋಟಿಸ್‌ ಪ್ರಕಾರ, 2014–15 (₹663 ಕೋಟಿ), 2015–16 (ಸುಮಾರು ₹664 ಕೋಟಿ) ಮತ್ತು 2016–17ನೇ (ಸುಮಾರು₹ 417 ಕೋಟಿ) ಸಾಲಿನಲ್ಲಿ ಕಾಂಗ್ರೆಸ್‌ ಒಟ್ಟಾರೆ ₹1,745 ಕೋಟಿ ಪಾವತಿಸಬೇಕಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜಕೀಯ ಪಕ್ಷಗಳಿಗೆ ಲಭ್ಯವಿರುವ ತೆರಿಗೆ ವಿನಾಯಿತಿಯನ್ನು ಐಟಿ ಇಲಾಖೆ ಕೊನೆಗೊಳಿಸಿದೆ. ಸಂಗ್ರಹವಾದ ದೇಣಿಗೆಯ ಮೊತ್ತಕ್ಕೆ ಪಕ್ಷಕ್ಕೆ ತೆರಿಗೆ ವಿಧಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಕೆಲ ನಾಯಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆಗಳ ವೇಳೆಯಲ್ಲಿ ವಶಪಡಿಸಿಕೊಂಡ ಡೈರಿಗಳಲ್ಲಿ ಉಲ್ಲೇಖಿಸಿರುವ ‘ದೇಣಿಗೆ ನಮೂದು’ಗಳಿಗೂ ಕಾಂಗ್ರೆಸ್‌ ಮೇಲೆ ತೆರಿಗೆ ವಿಧಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈಗಾಗಲೇ, ಹಿಂದಿನ ವರ್ಷಗಳ ತೆರಿಗೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ಪಕ್ಷದ ಖಾತೆಯಿಂದ ₹135 ಕೋಟಿಯನ್ನು ಹಿಂಪಡೆದಿದ್ದಾರೆ. ಇದನ್ನು ಪ್ರಶ್ನಿಸಿ, ಸಲ್ಲಿಸಲಾಗಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ದೊರೆತಿರುವ ಇತರ ಡೈರಿಗಳಲ್ಲಿ ಬಿಜೆಪಿ ನಾಯಕರ ಹೆಸರುಗಳೂ ಇವೆ. ಆದರೆ ಇಲ್ಲಿರುವ ‘ದೇಣಿಗೆ ನಮೂದು’ಗಳಿಗೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ ಎಂದು ಕಾಂಗ್ರೆಸ್‌ ನಾಯಕರು ದೂರಿದ್ದಾರೆ.

‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲಾಗುತ್ತಿದೆ. ಬಿಜೆಪಿ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ. ಇದರಿಂದಾಗಿ, ಚುನಾವಣೆಯಲ್ಲಿ ಸರ್ವರಿಗೂ ಸಮಾನ ಅವಕಾಶ ತತ್ವವು ಪಾಲನೆ ಆಗುತ್ತಿಲ್ಲ. ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ. 

ಬಿಜೆಪಿಯ ಬಾಂಡ್‌ ‘ಹಗರಣ’ ಬಹಿರಂಗವಾದದ್ದರಿಂದ ಕೇಂದ್ರ ಸರ್ಕಾರವು ಸೇಡಿನ ಕ್ರಮವಾಗಿ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸಹಸ್ರಾರು ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್‌ಗಳನ್ನು ಕೊಡಿಸಿದೆ.
–ವರ್ಷಾ ಗಾಯಕವಾಡ್‌, ಮುಂಬೈ ಕಾಂಗ್ರೆಸ್‌ ಘಟಕದ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT