ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಟ್ಯಾಕ್ಟ್‌ ಲಿಸ್ಟ್​ನಲ್ಲಿ ಯುಐಡಿಎಐ ಸಹಾಯವಾಣಿ ಸಂಖ್ಯೆ ಸೇರಿಸಿದ್ದು ಗೂಗಲ್!

Last Updated 4 ಆಗಸ್ಟ್ 2018, 2:53 IST
ಅಕ್ಷರ ಗಾತ್ರ

ನವದೆಹಲಿ:ಯುಐಡಿಎಐ ಸಹಾಯವಾಣಿ ಸಂಖ್ಯೆ 1800–300–1947 ಗ್ರಾಹಕರ ಗಮನಕ್ಕೆ ಬಾರದೆ ಅವರ ಆಂಡ್ರಾಯ್ಡ್‌ ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್ ಸೇರಿಕೊಂಡಿದ್ದು, ಇದಕ್ಕೆ ತಾವೇ ಕಾರಣ ಎಂದು ಗೂಗಲ್ ಸಂಸ್ಥೆ ಒಪ್ಪಿಕೊಂಡಿದೆ.

ಇದು ಆಂಡ್ರಾಯ್ಡ್‌ ಫೋನ್‍ಗಳಲ್ಲಿನ ಸಮಸ್ಯೆ ಅಲ್ಲ ಎಂದು ಹೇಳಿದ ಗೂಗಲ್ ಮುಂದಿನ ಕೆಲವು ವಾರಗಳಲ್ಲಿ ಈ ಸಮಸ್ಯೆ ಪರಿಹರಿಸಲಾಗುವುದು ಎಂದಿದೆ.

ಆಂತರಿಕ ಪರಿಶೀಲನೆಯಲ್ಲಿ ತಿಳಿದು ಬಂದ ವಿಷಯ ಏನೆಂದರೆ, 2014ರಲ್ಲಿ ಚಾಲ್ತಿಯಲ್ಲಿದ್ದ ಯುಐಡಿಎಐ ಸಹಾಯವಾಣಿ ಸಂಖ್ಯೆ ಮತ್ತು ಅಪಾಯದ ವೇಳೆ ಸಹಾಯಕ್ಕೆ ಬರುವ 112 ಸಹಾಯವಾಣಿ ಸಂಖ್ಯೆಗಳನ್ನು ಅಂಡ್ರಾಯ್ಡ್ ನ ಸೆಟಪ್ ವಿಜಾರ್ಡ್ ನಲ್ಲಿ ಕೋಡ್ ಮಾಡಿ ಭಾರತದಲ್ಲಿ ಆಂಡ್ರಾಯ್ಡ್‌ ಬಿಡುಗಡೆ ಮಾಡುವ ಹೊತ್ತಿಗೆ ಒರಿಜಿನಲ್ ಇಕ್ವಿಪ್‌ಮೆಂಟ್ಸ್ ಮ್ಯಾನುಫಾಕ್ಚರರ್ಸ್ (OEM)ಗೆ ನೀಡಲಾಗಿತ್ತು.ಅದು ಅಲ್ಲಿಯೇ ಉಳಿದುಕೊಂಡಿದೆ. ಈ ಸಂಖ್ಯೆಗಳು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿರುವುದರಿಂದ, ಗ್ರಾಹಕರು ಯಾವುದೇ ಸಾಧನ ಬಳಸಿದರೂ ಅದು ಅಲ್ಲಿ ಅಪ್‍ಡೇಟ್ ಆಗುತ್ತದೆ ಎಂದು ಗೂಗಲ್ ವಕ್ತಾರ ಶುಕ್ರವಾರ ತಡರಾತ್ರಿ ತಿಳಿಸಿದ್ದಾರೆ.

ನಿಮಗೆ ತೊಂದರೆಯುಂಟಾಗಿದ್ದಕ್ಕೆ ನಾವು ಕ್ಷಮೆ ಕೇಳುತ್ತೇವೆ. ಅದೇ ವೇಳೆ ನಿಮ್ಮ ಆಂಡ್ರಾಯ್ಡ್‌ ಫೋನ್ ನಿಂದ ಅನಧಿಕೃತವಾಗಿ ಯಾವುದೇ ಡೇಟಾ ಪಡೆಯುವ ಕಾರ್ಯ ಇಲ್ಲಿ ನಡೆದಿಲ್ಲ. ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಿಂದ ಆ ಸಂಖ್ಯೆಯನ್ನು ಡಿಲೀಟ್ ಮಾಡಬಹುದು. ಮುಂಬರುವ ಸೆಟಪ್ ವಿಜಾರ್ಡ್ ನಲ್ಲಿ ಈ ರೀತಿಯ ಲೋಪ ಇಲ್ಲದಂತೆ ನಾವು ಜಾಗ್ರತೆ ವಹಿಸುತ್ತೇವೆ. ಅಪ್‍ಡೇಟ್ ಆಗಿರುವ ಸೆಟಪ್ ವಿಜಾರ್ಡ್ ಮುಂದಿನ ವಾರಗಳಲ್ಲಿ OEMಗಳಿಗೆ ಲಭ್ಯವಾಗಲಿದೆ ಎಂದು ಗೂಗಲ್ ಹೇಳಿದೆ.

ಯುಐಡಿಎಐಸ್ಪಷ್ಟನೆ

ಮೊಬೈಲ್‌ ಫೋನ್‌ಗಳಲ್ಲಿ ತನ್ನ ಸಹಾಯವಾಣಿ ಸಂಖ್ಯೆ ಸೇರಿಸುವಂತೆ ಯಾವುದೇ ಮೊಬೈಲ್‌ ಫೋನ್‌ ತಯಾರಕ ಕಂಪನಿ ಅಥವಾ ಸೇವಾದಾತ ಕಂಪನಿಗಳಿಗೆ ಮನವಿ ಮಾಡಿಕೊಂಡಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟಪಡಿಸಿದೆ.

ಯುಐಡಿಎಐ ಸಹಾಯವಾಣಿ ಸಂಖ್ಯೆ 1800–300–1947 ಗ್ರಾಹಕರ ಗಮನಕ್ಕೆ ಬಾರದೆ ಅವರ ಆಂಡ್ರಾಯ್ಡ್‌ ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್ ಸೇರಿಕೊಂಡ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ಕೇಳಿ ಬರುತ್ತಿದೆ. ಹೀಗಾಗಿ ಪ್ರಾಧಿಕಾರ ಈ ಸ್ಪಷ್ಟನೆ ನೀಡಿದೆ.

ಸ್ಮಾರ್ಟ್‌ ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಕಾಣಿಸುವ ಯುಐಡಿಎಐ ಶುಲ್ಕರಹಿತ ಸಹಾಯವಾಣಿ ಸಂಖ್ಯೆ (ಟೋಲ್‌ ಫ್ರೀ ನಂಬರ್‌) ಅನಧಿಕೃತ ಮತ್ತು ಹಳೆಯ ಸಂಖ್ಯೆಯಾಗಿದೆ. ಸದ್ಯ ಆ ಸಂಖ್ಯೆ ಚಾಲನೆಯಲ್ಲಿ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಯುಐಡಿಎಐ, ಎರಡು ವರ್ಷಗಳಿಂದ 1947 ಸಂಖ್ಯೆಯನ್ನು ಅಧಿಕೃತ ಸಹಾಯವಾಣಿಯನ್ನಾಗಿ ಬಳಸುತ್ತಿರುವುದಾಗಿ ತಿಳಿಸಿದೆ.

ಸದ್ಯ ಇದೇ ಸಂಖ್ಯೆ ಚಾಲನೆಯಲ್ಲಿದೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಆಧಾರ್‌ ದತ್ತಾಂಶ ಸುರಕ್ಷಿತ: ಕೇಂದ್ರ ಅಭಯ
ಆಧಾರ್‌ಗಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸಂಗ್ರಹಿಸಿರುವ ಎಲ್ಲ ಬಯೊಮೆಟ್ರಿಕ್‌ ಮಾಹಿತಿಗಳು (ದತ್ತಾಂಶ) ಅತ್ಯಂತ ಸುರಕ್ಷಿತವಾಗಿವೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಯುಐಡಿಎಐನ ದತ್ತಾಂಶಗಳು ದುರುಪಯೋಗವಾದ ಒಂದೇ ಒಂದು ನಿದರ್ಶನ ಇಲ್ಲಿಯತನಕ ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಆಧಾರ್‌ ದತ್ತಾಂಶ ಸೋರಿಕೆಯಾಗದಂತೆ ಸರ್ಕಾರ ಅತ್ಯಂತ ಸಮರ್ಥವಾದ ತಾಂತ್ರಿಕ ಮತ್ತು ಕಾನೂನಾತ್ಮಕ ರಕ್ಷಾ ಕವಚ ನಿರ್ಮಿಸಿದೆ. ಎಲ್ಲ ಮುಖ್ಯ ದತ್ತಾಂಶಗಳು ಅತ್ಯಂತ ಭದ್ರವಾಗಿದ್ದು ಆ ಬಗ್ಗೆ ಆತಂಕ ಬೇಡ ಎಂದರು.

ಆಧಾರ್ ದತ್ತಾಂಶ ಬಳಸಿ ಟ್ರಾಯ್‌ ಅಧ್ಯಕ್ಷ ಶರ್ಮಾ ಅವರ ಬ್ಯಾಂಕ್‌ ಖಾತೆಗೆ ಹ್ಯಾಕರ್ ಒಂದು ರೂಪಾಯಿ ಜಮಾ ಮಾಡಿದ ವಿಷಯವನ್ನು ಕೆಲವು ಸದಸ್ಯರು ಸದನದ ಗಮನಕ್ಕೆ ತಂದರು.

‘ಇದು ಪೂರ್ಣ ಸತ್ಯವಲ್ಲ’ ಎಂದು ಸಚಿವರು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT