ನವದೆಹಲಿ: ಮಿದುಳಿಗೆ ಸಂಬಂಧಿಸಿದ ತೊಂದರೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಎಲ್ಲ ಹಂತದವರೆಗೆ ಲಭ್ಯವಿರುವ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಆರೋಗ್ಯ ಸಚಿವಾಲಯವು ‘ರಾಷ್ಟ್ರೀಯ ಮಿದುಳು ಆರೋಗ್ಯ ಕಾರ್ಯ ಪಡೆ‘ಯನ್ನು ರಚಿಸಿದೆ.
ಈ ಕುರಿತು ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.ಮಿದುಳು ತೊಂದರೆಗೆ ಸಂಬಂಧಿಸಿ ಸಾರ್ವತ್ರಿಕವಾಗಿ ಉತ್ತಮ ಚಿಕಿತ್ಸೆ ಒದಗಿಸುವುದು ಇಂದಿನ ತುರ್ತು. ಸಂಭಾವ್ಯ ತೊಂದರೆಯನ್ನು ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಚಾರ ನಡೆಸುವುದು ಹಾಗೂ ಮಿದುಳಿನ ತೊಂದರೆಯಿಂದ ಗುಣಮುಖರಾದವರ ಪುನರ್ವಸತಿಗೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಿದುಳು ಹಾಗೂ ನರವ್ಯೂಹಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವವರಿಗೆ ಉತ್ತಮ ಚಿಕಿತ್ಸೆ, ಪುನರ್ವಸತಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳು ಕುರಿತು ಕಾರ್ಯಪಡೆಯು ಜುಲೈ 15ರ ಒಳಗಾಗಿ ವರದಿ ಸಲ್ಲಿಸಲಿದೆ ಎಂದೂ ಸಚಿವಾಲಯ ತಿಳಿಸಿದೆ.
ಜಾಗತಿಕವಾಗಿ, ಸಾವುಗಳಿಗೆ ಮಿದುಳಿನ ತೊಂದರೆಯೇ ಎರಡನೇ ಪ್ರಮುಖ ಕಾರಣವಾಗಿದ್ದು, ಪ್ರತಿ ವರ್ಷ 90 ಲಕ್ಷದಷ್ಟು ಜನರು ಈ ಸಮಸ್ಯೆಯಿಂದ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದೆ.
ಭಾರತದಲ್ಲಿ ಕಳೆದ ಮೂರು ದಶಕಗಳಲ್ಲಿ ಕೈಗೊಂಡ ಅಧ್ಯಯನಗಳ ಪ್ರಕಾರ, ಪಾರ್ಶ್ವವಾಯು, ಅಪಸ್ಮಾರ, ತಲೆನೋವು, ಪಾರ್ಕಿನ್‌ಸನ್ಸ್ ಕಾಯಿಲೆ, ಬುದ್ಧಿಮಾಂದ್ಯದಂತಹ ತೊಂದರೆಗಳು ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರಲ್ಲಿಯೇ ಹೆಚ್ಚಾಗಿ ಕಂಡುಬಂದಿವೆ.
ಸಾಮಾಜಿಕ–ಆರ್ಥಿಕ ಸ್ಥಿತಿ, ವಯೋಮಾನ, ಭೌಗೋಳಿಕತೆ ಹಾಗೂ ಲಿಂಗತ್ವದಂತಹ ಕಾರಣಗಳಿಂದಾಗಿ ಆರೋಗ್ಯಸೇವೆಗೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಕ್ರಮದ ಲಾಭ ಎಲ್ಲರಿಗೂ ಸಿಗುತ್ತಿಲ್ಲ ಎಂದೂ ಸಚಿವಾಲಯ ತಿಳಿಸಿದೆ.