ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ವಿಪಕ್ಷಗಳ ಆರೋಪ ಸೋಲು ಮರೆಮಾಚುವ ತಂತ್ರ: ಅಮಿತ್ ಶಾ

ಮೋದಿ ಅವರಿಂದಾಗಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ; ಮುಂದೆಯೂ ಮುಸ್ಲಿಮರ ಮೀಸಲಾತಿ ಬಗ್ಗೆ ಪ್ರಸ್ತಾಪ
Published 26 ಮೇ 2024, 14:19 IST
Last Updated 26 ಮೇ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಅವರಿಂದಾಗಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ‌ ಎಂದು ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣಾ ಆಯೋಗ ಕುರಿತ ವಿಪಕ್ಷಗಳ ಆರೋಪಗಳು, ಮುಂದೆ ಚುನಾವಣಾ ಫಲಿತಾಂಶದಲ್ಲಿ ಒದಗಲಿರುವ ಸೋಲನ್ನು ಮರೆಮಾಚುವ ತಂತ್ರ ಎಂದು ಟೀಕಿಸಿದರು.

ಪಿಟಿಐ ಜತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷವು ಧರ್ಮದ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿಲ್ಲ ಎಂದು ಪ್ರತಿಪಾದಿಸಿದರು. ‘ಆದರೆ, ಮುಸ್ಲಿಮರ ಮೀಸಲಾತಿ ಬಗ್ಗೆ, 370ನೇ ವಿಧಿ ರದ್ದತಿ ಬಗ್ಗೆ ಮತ್ತು ಮುಂದೆ ಜಾರಿಗೆ ತರಲಿರುವ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುವುದು ಧರ್ಮದ ಆಧಾರದ ಪ್ರಚಾರ ಎನ್ನುವುದಾದರೆ, ಬಿಜೆಪಿ ಅದನ್ನು ಮಾಡಿದೆ, ಮುಂದೆಯೂ ಮಾಡಲಿದೆ’ ಎಂದು ನುಡಿದರು.

ಮತದಾನ ಪ್ರಮಾಣ ಬಿಡುಗಡೆ ವಿಳಂಬ ಮತ್ತು ಇವಿಎಂ ಬಗೆಗಿನ ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯು ಸೋತ ತೆಲಂಗಾಣ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿವೆ ಎನ್ನುವುದಾದರೆ, ಈ ಚುನಾವಣೆಯೂ ನ್ಯಾಯಸಮ್ಮತವಾಗಿಯೇ ಇದೆ. ಅವರು ಸೋಲುತ್ತಿರಬೇಕಾದರೆ ಮುಂಚೆಯೇ ಅಳಲು ಶುರುಮಾಡುತ್ತಾರೆ ಮತ್ತು ವಿದೇಶಕ್ಕೆ ಹಾರಲು ನೆಪ ಹುಡುಕುತ್ತಾರೆ. ಇದು ಬಹಳ ದಿನ ಹೀಗೇ ನಡೆಯವುದಿಲ್ಲ. ಜೂನ್ 6ರಂದು ಅವರು ರಜೆಯ ಮೇಲೆ ತೆರಳಲು ಬಯಸಿದ್ದಾರೆ. ಅದಕ್ಕಾಗಿ ಏನೇನೋ ಹೇಳುತ್ತಿದ್ದಾರೆ’ ಎಂದರು.

‘ಇವಿಎಂ ವ್ಯವಸ್ಥೆಯಲ್ಲಿ ನಕಲಿ ಮತದಾನವು ಸಾಧ್ಯವೇ ಇಲ್ಲ. ಆದರೆ, ‘ಇಂಡಿಯಾ’ ಕೂಟಕ್ಕೆ ನಕಲಿ ಮತದಾನಕ್ಕೆ ಅವಕಾಶ ಇರುವಂತಹ ವ್ಯವಸ್ಥೆ ಬೇಕು’ ಎಂದರು.

ಬಿಜೆಪಿ ಮೋದಿ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅಮಿತ್ ಶಾ, ‘ಮೋದಿ ಅವರು ಬಡವರ ಕಲ್ಯಾಣ, ದೇಶದ ರಕ್ಷಣೆ, 370ನೇ ವಿಧಿಯ ರದ್ದತಿ, ಯುಸಿಸಿ, ಮಹಿಳಾ ಮೀಸಲಾತಿ, ರಾಮ ಮಂದಿರ ನಿರ್ಮಾಣದಂಥ ಬಿಜೆಪಿಯ ಪ್ರಮುಖ ಆದ್ಯತೆಯ ಯೋಜನೆಗಳನ್ನು ಕಾರ್ಯಗತಗೊಳಿಸಿದರು. ಹೀಗಾಗಿ ಅವರ ಜನಪ್ರಿಯತೆಯು ಬಿಜೆಪಿಯ ಬಲವಾಯಿತು. ಅವರು ನಮ್ಮ ಅತಿ ದೊಡ್ಡ ನಾಯಕ’ ಎಂದು ಹೇಳಿದರು.

ಒಡಿಶಾದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಲಿದೆ ಎಂದ ಅವರು, ಆಂಧ್ರಪ್ರದೇಶದಲ್ಲೂ ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂದು ಪ್ರತಿಪಾದಿಸಿದರು. ತಮಿಳುನಾಡು ಮತ್ತು ಕೇರಳದಲ್ಲಿ ಪಕ್ಷದ ಮತಪ್ರಮಾಣವು ಕಳೆದ ಬಾರಿಗಿಂತಲೂ ಉತ್ತಮವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ಕೊಡುವ ಕಾಂಗ್ರೆಸ್‌ನ ಭರವಸೆಯ ಬಗ್ಗೆ ಮಾತನಾಡಿದ ಶಾ, ‘ಅವರು ಎರಡು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾರೆ. ಹಿಮಾಚಲದಲ್ಲಿ ಭರವಸೆ ನೀಡಿದ್ದಂತೆ ಕನಿಷ್ಠ ₹1500 ನೀಡಲಿ. ಅವರನ್ನು ಯಾರು ನಂಬುತ್ತಾರೆ’ ಎಂದು ಹೇಳಿದರು.

ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

‘ನಮ್ಮ ಸಂವಿಧಾನದ ನಿರ್ಮಾತೃಗಳು ನಮ್ಮ ದೇಶದ ಸಂಸತ್ತು, ರಾಜ್ಯ ವಿಧಾನಸಭೆಗಳ ಮೇಲೆ ಯುಸಿಸಿ ಜಾರಿ ಮಾಡುವ ಜವಾಬ್ದಾರಿಯನ್ನು ಹೊರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು. ಅದೇ ರೀತಿ ಚುನಾವಣಾ ವೆಚ್ಚವನ್ನು ಕಡಿಮೆ ಮಾಡಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಜಾರಿಗೆ ತರುವುದಾಗಿ ತಿಳಿಸಿದರು.

‘ಯುವಕರಿಗೆ ‘ಅಗ್ನಿವೀರ್‌’ಗಿಂತ ಆಕರ್ಷಕವಾದ ಮತ್ತೊಂದು ಯೋಜನೆ ಇಲ್ಲ. ತುಂಬಾ ಚಿಂತನೆ ನಡೆಸಿದ ನಂತರ ಜಾರಿ ಮಾಡಿದ ಯೋಜನೆ ಅದು. ಅವರಿಗೆ ರಾಜ್ಯದ ಪೊಲೀಸ್ ಪಡೆಗಳಲ್ಲಿ ಕೆಲಸ ಸಿಗುವ ಸಾಧ್ಯತೆ ಹೆಚ್ಚು’ ಎಂದು ಹೇಳಿದರು.

ಜಿಎಸ್‌ಟಿ ಅನ್ನು ಗಬ್ಬರ್ ಸಿಂಗ್ ತೆರಿಗೆ ಎಂದು ರಾಹುಲ್ ಗಾಂಧಿ ಟೀಕಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರಸ್ತುತ ಸೈಕಲ್ ಮೇಲೆ ಶೇ 5 ಹಾಗೂ ಮರ್ಸಿಡಿಸ್ ಕಾರಿನ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಎರಡಕ್ಕೂ ಸಮಾನ ತೆರಿಗೆ ವಿಧಿಸಲು ಸಾಧ್ಯವೇ? ರಾಹುಲ್ ಉತ್ತರಿಸಲಿ’ ಎಂದರು.

‘ರಾಹುಲ್ ಮತ್ತು ಮೋದಿ ನಡುವಿನ ಆಯ್ಕೆ’

ಸಾಸಾರಾಮ್/ಕಾರಾಕಾಟ್ (ಪಿಟಿಐ): ಲೋಕಸಭಾ ಚುನಾವಣೆಯು ಹವಾಮಾನ ಕೊಂಚ ಹದಗೆಟ್ಟರೂ ವಿದೇಶಕ್ಕೆ ಹಾರುವ ರಾಹುಲ್ ಗಾಂಧಿ ಮತ್ತು ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಆಯ್ಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ‍ಪ್ರತಿಪಾದಿಸಿದರು.

ಬಿಹಾರದ ಸಾಸಾರಾಮ್ ಮತ್ತು ಕಾರಾಕಾಟ್ ಲೋಕಸಭಾ ಕ್ಷೇತ್ರಗಳಲ್ಲಿ ಸರಣಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ ಅವರು ‘ಇಂಡಿಯಾ’ ಕೂಟದವರು ₹12 ಲಕ್ಷ ಕೋಟಿ ಹಣಕಾಸು ಅವ್ಯವಹಾರ ನಡೆಸಿದವರು. ಆದರೆ 23 ವರ್ಷದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿ ಆಡಳಿತ ನಡೆಸಿದ್ದರೂ ಮೋದಿ ಅವರು ಕಳಂಕರಹಿತವಾಗಿದ್ದಾರೆ’ ಎಂದು ಆರೋಪಿಸಿದರು. 

‘ರಾಹುಲ್ ಗಾಂಧಿ ಬಂಗಾರದ ಚಮಚೆಯೊಂದಿಗೆ ಹುಟ್ಟಿದರೆ ಮೋದಿ ಅವರು ಅತ್ಯುನ್ನತ ಪದವಿಗೆ ಏರಲು ಅಪಾರವಾಗಿ ಶ್ರಮಿಸಿದ್ದಾರೆ. ಅತಿ ಹಿಂದುಳಿದ ವರ್ಗದಿಂದ ಬಂದ ಅವರು ಜೀವನ ನಡೆಸಲು ಒಂದು ಹಂತದಲ್ಲಿ ಟೀ ಕೂಡ ಮಾರುತ್ತಿದ್ದರು’ ಎಂದು ತಿಳಿಸಿದರು.

ಮೀಸಲು ಕ್ಷೇತ್ರವಾದ ಸಾಸಾರಾಮ್‌ನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಾ ‘ಹಿಂದಿನ ಯುಪಿಎ ಸರ್ಕಾರವು ದಲಿತರ ಕಲ್ಯಾಣಕ್ಕೆ ₹41 ಸಾವಿರ ಕೋಟಿ ಮೀಸಲಿಟ್ಟರೆ ತಮ್ಮ ಸರ್ಕಾರವು ಅದನ್ನು ₹1.65 ಲಕ್ಷ ಕೋಟಿಗೆ ಏರಿಕೆ ಮಾಡಿತು’ ಎಂದು ತಿಳಿಸಿದರು.

ಬಾಬಾ ಸಾಹೇಬರ ಬದುಕಿಗೆ ಸಂಬಂಧಪಟ್ಟ ಸ್ಥಳಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಮಾಡುವ ಮೂಲಕ ಮೋದಿ ಅವರು ಅಂಬೇಡ್ಕರ್ ಅವರಿಗೆ ಸೂಕ್ತ ಗೌರವ ಸಲ್ಲಿಸಿದರು’ ಎಂದು ಅಭಿಪ್ರಾಯಪಟ್ಟರು.

ಏಕರೂಪ ನಾಗರಿಕ ಸಂಹಿತೆಯು ಒಂದು ದೊಡ್ಡ ಸಾಮಾಜಿಕ ಕಾನೂನಾತ್ಮಕ ಹಾಗೂ ಧಾರ್ಮಿಕ ಸುಧಾರಣೆಯಾಗಿದೆ. ಈ ಬಗ್ಗೆ ಧಾರ್ಮಿಕ ಮುಖಂಡರನ್ನೂ ಸಹ ಸಂಪರ್ಕಿಸಲಾಗುವುದು.
–ಅಮಿತ್ ಶಾ, ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT