ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಕಥನ: ‘ಗಾಂಧಿ@150’ ಕರುನಾಡಲ್ಲಿ ಮಹಾತ್ಮನ ಹೆಜ್ಜೆ

Last Updated 29 ಜೂನ್ 2019, 12:14 IST
ಅಕ್ಷರ ಗಾತ್ರ

ರಾಷ್ಟ್ರಪಿತ ಮೋಹನದಾಸ್ ಕರಮಚಂದ್ ಗಾಂಧಿ ಜನಿಸಿ ಇಂದಿಗೆ 150 ವರ್ಷ. ತನ್ನ ಚಿಂತನೆ, ಜೀವನ ಸಂದೇಶಗಳಿಂದಲೇ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಈ ಮಹಾನ್ ಚೇತನವನ್ನು ನೆನಪಿಸಿಕೊಳ್ಳಲು ಅಕ್ಟೋಬರ್ 2 ಒಂದು ನೆಪ ಮಾತ್ರ. ಇಂಥ ಮಹಾತ್ಮ, ಕರುನಾಡನ್ನು ತಮ್ಮ ಚಿಂತನೆಗಳಿಂದ ಮಾತ್ರವೇ ಅಲ್ಲ, ಒಡನಾಟದಿಂದಲೂ ಅಪ್ಪಿಕೊಂಡಿದ್ದರು. ರಾಜ್ಯದಲ್ಲಿ ಅವರ ಒಡನಾಟದ ಆಯ್ದ ತಾಣಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.

(ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ ಆಚರಣೆ; ಚೆನ್ನೈನಲ್ಲಿ ಎಲ್‌ಇಡಿ ದೀಪಗಳಲ್ಲಿ ಮೂಡಿದ ಬಾಪು)

ಕರ್ನಾಟಕದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಜ್ಜೆಗಳನ್ನು ಹುಡುಕುತ್ತಾ ಹೊರಟರೆ, ಅವರ ಮೊದಲ ಹೆಜ್ಜೆ ಸಿಗುವುದು ಈಗಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ. ಗಾಂಧೀಜಿಯವರು ಜನವರಿ 9, 1915ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದರು. ನಂತರ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ದೇಶ ಪರ್ಯಟನೆ ಆರಂಭಿಸಿದರು. ಅದು ಬೆಂಗಳೂರಿನಿಂದಲೇ ಶುರುವಾಯಿತು. ಮೇ 8, 1915ರಂದು ಕರ್ನಾಟಕಕ್ಕೆ ಗಾಂಧೀಜಿ ಮೊದಲ ಭಾರಿಗೆ ಭೇಟಿ ನೀಡಿದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವನ್ನು ಅನಾವರಣಗೊಳಿಸಿದರು.

ಬೆಂಗಳೂರಿನಲ್ಲಿ ಗಾಂಧೀಜಿ
ಬೆಂಗಳೂರಿನಲ್ಲಿ ಗಾಂಧೀಜಿ

ಗಾಂಧೀಜಿಯವರ ಕರ್ನಾಟಕದ ಮೊದಲ ಭೇಟಿಗೆ ಕನ್ನಡನಾಡಿನ ಹಿರಿಯ ರಾಜಕಾರಿಣಿ ಸಾಹಿತಿ ಡಿ.ವಿ.ಗುಂಡಪ್ಪನವರ (ಡಿವಿಜಿ) ಪ್ರಯತ್ನವೂ ಕಾರಣ ಎಂದು ಸಿದ್ದವನಹಳ್ಳಿ ಕೃಷ್ಣಶರ್ಮ ಅವರು ’ಗಾಂಧೀ ಮತ್ತು ಕರ್ನಾಟಕ’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಪತ್ನಿ ಕಸ್ತೂರಬಾ ಅವರೊಂದಿಗೆ ರೈಲಿನಲ್ಲಿ ಗಾಂಧೀಜಿ ಬೆಂಗಳೂರಿಗೆ ಬಂದಿಳಿದರು. ರೈಲು ನಿಲ್ದಾಣದಲ್ಲಿದ್ದ ಉತ್ಸಾಹಿ ಯುವಕರು ಗಾಂಧೀಜಿ ಕೂರುವ ಸಾರೋಟನ್ನು ತಾವೇ ಎಳೆಯುವುದಕ್ಕೆ ಮುಂದಾದರು. ಆದರೆ, ’ಇದೊಂದು ಅಮಾನವೀಯ ಕೆಲಸ’ ಎಂದು ನಿರಾಕರಿಸುವ ಅವರು, ಆನಂದರಾವ್ ವೃತ್ತದಲ್ಲಿದ್ದ ಜಿಲ್ಲಾ ನ್ಯಾಯಾಧೀಶ ಎಸ್ ಕೃಷ್ಣಸ್ವಾಮಿ ಅಯ್ಯಂಗಾರರ ಮನೆಗೆ ನಡೆದೇ ಸಾಗಿದರು. ಅಲ್ಲೇ ಅವರಿಗೆ ಬಿಡಾರದ ವ್ಯವಸ್ಥೆ ಮಾಡಲಾಗಿತ್ತು. ನಂತರ ಗೌರ್ಮೆಂಟ್ ಹೈಸ್ಕೂಲ್ ಸಭಾಭವನಕ್ಕೆ ತೆರಳಿದರು (ಅದು ಈಗ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆಗಿದೆ). ಡಿ.ವಿ. ಗುಂಡಪ್ಪನವರ ಸೋಷಿಯಲ್ ಕ್ಲಬ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿ, ಗೋಖಲೆ ಅವರ ಭಾವಚಿತ್ರ ಅನಾವರಣ ಮಾಡಿದರು. ನಂತರ ಲಾಲ್‌ಬಾಗ್‌ನಲ್ಲಿ ನಡೆದ ಬಹಿರಂಗಸಭೆಯಲ್ಲಿ ಮಾತನಾಡಿದರು. ಈ ಭೇಟಿ ಗಾಂಧೀಜಿಯವರ ಕರ್ನಾಟಕದ ಒಡನಾಟಕ್ಕೆ ನಾಂದಿಯಾಯಿತು.

ಮಹಾತ್ಮಾ ಗಾಂಧಿ ಅವರು 1915, 1920, 1927, 1934 ಮತ್ತು 1936ರಲ್ಲಿ ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.

ಬೆಳಗಾವಿಯಲ್ಲಿ ’ಕಾಂಗ್ರೆಸ್ ಬಾವಿ’

ಮಹಾತ್ಮ ಗಾಂಧಿ ಅವರ ಜೊತೆ ಬೆಳಗಾವಿಗೆ ಚಾರಿತ್ರಿಕ ನಂಟಿದೆ. ಡಿಸೆಂಬರ್ 26, 1924ರಲ್ಲಿ ಕಾಂಗ್ರೆಸ್‌ನ 39ನೇ ಅಧಿವೇಶನ ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆದಿತ್ತು. ಜಿಲ್ಲೆಯ ಹುದಲಿ ಗ್ರಾಮದ ಜಮೀನುದಾರ್‌ರಾದ ಗಂಗಾಧರರಾವ್‌ ದೇಶಪಾಂಡೆ ಆಗ ಕಾಂಗ್ರೆಸ್‌ನಲ್ಲಿ ದೊಡ್ಡ ನೇತಾರರು. ಅವರ ಪ್ರಯತ್ನದ ಫಲವಾಗಿ ಕಾಂಗ್ರೆಸ್‌ ಅಧಿವೇಶನ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನ
1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನ

ಇಂದು ಟಿಳಕವಾಡಿ ಎಂದು ಕರೆಯಲಾಗುವ ಸ್ಥಳದಲ್ಲಿ ಅಧಿವೇಶನ ನಡೆದಿತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಲಾಗಿತ್ತು. ಇಡೀ ಪ್ರದೇಶವನ್ನು ಸಮತಟ್ಟಗೊಳಿಸಲಾಗಿತ್ತು. ಈ ಪ್ರದೇಶಕ್ಕೆ ವಿಜಯನಗರ ಸಾಮ್ರಾಜ್ಯದ ಸವಿನೆನಪಿಗಾಗಿ ವಿಜಯನಗರವೆಂದು ನಾಮಕರಣ ಮಾಡಲಾಗಿತ್ತು. ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಜನರಿಗೆ ಕುಡಿಯುವ ನೀರು ಪೂರೈಸಲು ಹತ್ತಿರದಲ್ಲಿಯೇ ದೊಡ್ಡ ಬಾವಿ ಅಗೆಯಲಾಯಿತು. ಅದಕ್ಕೆ ಪಂಪಾ ಸರೋವರ ಎಂದು ಹೆಸರಿಸಲಾಗಿತ್ತು. ಅದೀಗ ‘ಕಾಂಗ್ರೆಸ್‌ ಬಾವಿ’ ಎಂದು ಜನಪ್ರಿಯವಾಗಿದೆ.

ಅಧಿವೇಶನಕ್ಕಾಗಿ ಆಗಮಿಸಿದ್ದ ಜನರಿಗೆ ಸ್ಥಳೀಯರು ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಸ್ವಚ್ಛತಾ ಕಾರ್ಯಕ್ಕಾಗಿ ಸ್ಥಳೀಯರೇ ಟೊಂಕಕಟ್ಟಿ ನಿಂತಿದ್ದರು. ಮುಖಂಡರಾದ ಡಾ.ಎನ್‌.ಎಸ್‌. ಹರ್ಡಿಕರ್‌, ಭೀಮರಾವ್‌ ಪೋದ್ದಾರ್‌, ಆರ್‌.ಕೆಂಭಾವಿ, ಎಸ್‌.ಎಲ್‌. ವಾಮನ್‌, ಗೋವಿಂದರಾವ ಯಾಳಗಿ, ಜೀವನರಾವ ಯಾಳಗಿ ಸೇರಿದಂತೆ ಹಲವರು ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡರು. ಇಲ್ಲಿನ ಶಿಸ್ತುಬದ್ಧ ವ್ಯವಸ್ಥೆ ನೋಡಿದ ಗಾಂಧೀಜಿಯವರು ಮುಕ್ತಕಂಠದಿಂದ ಹೊಗಳಿದ್ದರು.

ಒಂದು ವಾರ ವಾಸ್ತವ್ಯ:ಅಧಿವೇಶನ ಆರಂಭವಾಗುವುದಕ್ಕೂ ಒಂದು ವಾರ ಮೊದಲು ಗಾಂಧೀಜಿ ಅವರು ಬೆಳಗಾವಿಗೆ ಆಗಮಿಸಿದ್ದರು. ಹಲವು ಜನ ಮುಖಂಡರು ಎಷ್ಟೇ ಒತ್ತಾಯ ಮಾಡಿದ್ದರೂ ಅವರ ಮನೆಯಲ್ಲಿ ವಾಸ್ತವ್ಯ ಮಾಡಲಿಲ್ಲ. ಅಧಿವೇಶನ ಸ್ಥಳದ ಸಮೀಪವೇ ಇರುವ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಟೆಂಟ್‌ ನಿರ್ಮಿಸಿಕೊಂಡು ಇದ್ದರು. ಈ ಸಮಯದಲ್ಲಿ ಅಕ್ಕಪಕ್ಕದ ಗ್ರಾಮಗಳಿಗೆ ಗಾಂಧಿ ಭೇಟಿ ನೀಡಿದ್ದರು.ಅಲ್ಲಿನ ಸ್ಥಳೀಯರ ಜೊತೆ ಮಾತನಾಡಿದ್ದರು.

ಬೆಳಗಾವಿಯ ಹುದಲಿ ಗ್ರಾಮದಲ್ಲಿ ಗಾಂಧೀಜಿ– 1937
ಬೆಳಗಾವಿಯ ಹುದಲಿ ಗ್ರಾಮದಲ್ಲಿ ಗಾಂಧೀಜಿ– 1937

ಅಸಹಕಾರ ‘ಬೀಜ ಮಂತ್ರ’: ‘ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯ ಹೋರಾಟ ಮುಂದುವರಿಸಬೇಕು. ಹಿಂಸೆಗೆ ಅವಕಾಶ ಮಾಡಿಕೊಡಬಾರದು. ಅಸಹಕಾರ ಮಾಡುವ ಮೂಲಕ ಬ್ರಿಟಿಷರೇ ದೇಶ ಬಿಟ್ಟುಹೋಗುವಂತೆ ಮಾಡಬೇಕು’ ಎಂದು ಮಹಾತ್ಮ ಗಾಂಧೀಜಿ ಕಾಂಗ್ರೆಸ್‌ ಅಧಿವೇಶನದಲ್ಲಿ ಕರೆ ನೀಡಿದ್ದರು. ಅಸಹಕಾರ ಆಂದೋಲನದ ಬೀಜ ಮೊದಲು ಬಿತ್ತಿದ್ದೇ ಬೆಳಗಾವಿಯಲ್ಲಿ ಎಂದು ಹೇಳಲಾಗುತ್ತಿದೆ. ಜವಾಹರಲಾಲ್‌ ನೆಹರೂ, ಪಟ್ಟಾಭಿರಾಮ ಸೀತಾರಾಮಯ್ಯ, ಸರೋಜಿನಿ ನಾಯ್ಡು, ಅನಿ ಬೆಸೆಂಟ್‌, ಮೌಲನಾ ಮೊಹಮ್ಮದ್‌ ಅಲಿ ಸೇರಿದಂತೆ ಹಲವು ನಾಯಕರು ಅಧಿವೇಶನದಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್‌ ಬಾವಿ ಹಾಗೂ ಗಾಂಧಿ ಸ್ಮಾರಕ ಭವನ
ಕಾಂಗ್ರೆಸ್‌ ಬಾವಿ ಹಾಗೂ ಗಾಂಧಿ ಸ್ಮಾರಕ ಭವನ

ವೀರಸೌಧ ನಿರ್ಮಾಣ: ಅಂದು ಅಧಿವೇಶನ ನಡೆದ ಸ್ಥಳದಲ್ಲಿ ಇಂದು ಹತ್ತು ಹಲವು ಕಟ್ಟಡಗಳು ತಲೆಎತ್ತಿವೆ. ಅಧಿವೇಶನದ ನೆನಪಿನ ರೂಪದಲ್ಲಿ ಪಂಪ ಸರೋವರ (ಕಾಂಗ್ರೆಸ್‌ ಬಾವಿ) ಮಾತ್ರ ಉಳಿದುಕೊಂಡಿದೆ. 2001–02ರಲ್ಲಿ ಈ ಬಾವಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಸುತ್ತಲೂ ಉದ್ಯಾನ ನಿರ್ಮಿಸಲಾಗಿದೆ. ಗಾಂಧೀಜಿ ಪ್ರತಿಮೆ ಒಳಗೊಂಡ ಸ್ಮಾರಕ ಭವನ ನಿರ್ಮಿಸಲಾಗಿದೆ. ಗಾಂಧೀಜಿ ಅವರ ಅಪರೂಪದ ಭಾವಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗಾಂಧೀಜಿ ಅವರಿಗೆ ಸಂಬಂಧಿಸಿದ ಕೃತಿಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಪಕ್ಕದಲ್ಲಿಯೇ ತೆರೆಯಲಾಗಿದೆ.

ನಂದಿ ಬೆಟ್ಟಕ್ಕೆ ಗಾಂಧೀಜಿ ನಂಟು

ಗಾಂಧೀಜಿ ಅವರು ತಮ್ಮ ಅನಾರೋಗ್ಯದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಎರಡು ಬಾರಿ ಭೇಟಿ ನೀಡಿದ್ದರು.

ನಂದಿ ಬೆಟ್ಟದಲ್ಲಿ ಗಾಂಧಿ ಪ್ರತಿಮೆ
ನಂದಿ ಬೆಟ್ಟದಲ್ಲಿ ಗಾಂಧಿ ಪ್ರತಿಮೆ

ಮೊದಲ ಬಾರಿಗೆ 1927ರಲ್ಲಿ 45 ದಿನ ಮತ್ತು ಎರಡನೇ ಬಾರಿ 1936ರಲ್ಲಿ 20 ದಿನ ಹೀಗೆ ಒಟ್ಟು 65 ದಿನ ನಂದಿಬೆಟ್ಟದಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ತಂಗಿದ್ದರು ಎನ್ನುವ ಮಾಹಿತಿ ಇತಿಹಾಸಕಾರ ವೇಮಗಲ್‌ ಸೋಮಶೇಖರ್‌ ಅವರ ನಂದಿಗಿರಿಧಾಮದಲ್ಲಿ ಗಾಂಧಿ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಎರಡು ಭೇಟಿಗಳಲ್ಲೂ ಸಂದರ್ಭದಲ್ಲೂ ಗಾಂಧೀಜಿ ಅವರು ಬೆಟ್ಟದಲ್ಲಿ ಸುದೀರ್ಘ ಕಾಲ ಉಳಿದು ಆರೋಗ್ಯ ಸುಧಾರಿಸಿಕೊಂಡು ನವಚೈತನ್ಯದೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಮರಳಿದ್ದರು. ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಗಾಂಧೀಜಿ ಅವರ ಹೆಜ್ಜೆಯ ಚರಿತ್ರೆ ಹುಡುಕುವವರಿಗೆ ನಂದಿಬೆಟ್ಟದೊಂದಿಗಿನ ಮಹಾತ್ಮರ ನಂಟಿನ ಅಂಶಗಳು ಗಮನ ಸೆಳೆಯುತ್ತವೆ.

1927ರ ಏಪ್ರಿಲ್ ತಿಂಗಳಲ್ಲಿ ಅಂಬೋಲಿಯಲ್ಲಿದ್ದ ಗಾಂಧೀಜಿ ಅವರಿಗೆ ಅಲ್ಲಿನ ಹವಾಗುಣ ಸರಿ ಹೊಂದದೇ ಹೋದಾಗ ಸಬರಮತಿ ಆಶ್ರಮಕ್ಕೆ ಹೊರಡಲು ಅಣಿಯಾಗುತ್ತಾರೆ. ಈ ವೇಳೆ ಅವರ ಜತೆಯಲ್ಲಿದ್ದವರು ’ಈಗ ಅಲ್ಲಿ ಬಿಸಿಲು ಜಾಸ್ತಿ ಹೋಗುವುದು ಬೇಡ’ ಎಂದು ಸಲಹೆ ನೀಡುತ್ತಾರೆ. ಈ ವೇಳೆ ಸಿ.ರಾಜಗೋಪಾಲಾಚಾರಿಯವರು ಮುಂದಿನ ಖಾದಿ ಪ್ರಚಾರದ ಪ್ರವಾಸ ಮೈಸೂರು ಸಂಸ್ಥಾನದಲ್ಲಿದೆ. ಅಲ್ಲಿನ ಕೋಲಾರ ಜಿಲ್ಲೆಯ ನಂದಿ ಗಿರಿಧಾಮವೇ ಮಹಾತ್ಮರ ವಿಶ್ರಾಂತಿಗೆ ಪ್ರಶಸ್ತವಾದ ಸ್ಥಳ ಎಂದು ನಿರ್ಧರಿಸಿದಾಗ ಗಾಂಧೀಜಿ ಅವರು ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಮಹಾತ್ಮರ ಸ್ವಾಗತಕ್ಕೆ ಸಮಿತಿಗಳು ರಚನೆಯಾಗುತ್ತವೆ.

ಪೂರ್ವ ಸಿದ್ಧತೆಗಾಗಿ ಮಹದೇವ ದೇಸಾಯಿ, ರಾಜ ಗೋಪಾಲಾಚಾರಿ, ಗಂಗಾಧರ ದೇಶಪಾಂಡೆಯವರು ಮುಂಚಿತವಾಗಿ ಅಂದರೆ ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿಗೆ ಬಂದು, ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಈ ಸುದ್ದಿ ತಿಳಿಸುತ್ತಾರೆ. ಬಳಿಕ ಮಹಾರಾಜರು ನಂದಿ ಗಿರಿಧಾಮದಲ್ಲಿದ್ದ ಕನ್ನಿಂಗ್ ಹ್ಯಾಮ್ ಭವನದಲ್ಲಿ ಗಾಂಧೀಜಿ ಅವರ ವಾಸ್ತವ್ಯಕ್ಕೆ ಸಕಲ ಏರ್ಪಾಡು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತಾರೆ.

ಅಂಬೋಲಿಯಿಂದ ಗಾಂಧೀಜಿ ಅವರು ರೈಲಿ ಮೂಲಕ ಬೆಳಗಾವಿ ಮಾರ್ಗವಾಗಿ ಏಪ್ರಿಲ್ 20ರಂದು ತಮ್ಮ ಪರಿವಾರದವರೊಂದಿಗೆ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಸುಲ್ತಾನ್‌ ಪೇಟೆಗೆ ಬಂದಾಗ ಅಲ್ಲಿ ಚಿಕ್ಕಬಳ್ಳಾಪುರದ ಸ್ವಾಗತ ಸಮಿತಿ ಪದಾಧಿಕಾರಿಗಳು ಅವರನ್ನು ಸಡಗರದಿಂದ ಸ್ವಾಗತಿಸಿದ್ದರು. ಬಳಿಕ ಸ್ವಯಂ ಸೇವಕರು,ಸುಲ್ತಾನ್ ಪೇಟೆ ಯುವಕರು ಗಾಂಧೀಜಿ, ಕಸ್ತೂರಬಾ ಮತ್ತು ಹಂಜಾ ಹುಸೇನ್ ಅವರನ್ನು ಡೋಲಿಗಳಲ್ಲಿ ಹೊತ್ತು ಜಯಘೋಷದೊಂದಿಗೆ ಎರಡೂವರೆ ಮೈಲಿ ದೂರದವರೆಗೆ (1775 ಮೆಟ್ಟಿಲುಗಳನ್ನು ಏರುತ್ತಾ) ಸಾಗಿದ್ದರು. ಅಂದು ಬೆಳಿಗ್ಗೆ 10ರ ಸುಮಾರಿಗೆ ಗಾಂಧೀಜಿ ಅವರು ಬೆಟ್ಟದ ಮೇಲಿದ್ದರು. ಈ ಭೇಟಿಯಲ್ಲಿ ಅವರ ಜತೆ ಕಿರಿಯ ಪುತ್ರ ದೇವದಾಸ್ ಸಹ ಇದ್ದರು.

ಬೆಟ್ಟದ ಮೇಲಿನ ಕನ್ನಿಂಗ್ ಹ್ಯಾಂ ಭವನವನ್ನು ತಳಿರು ತೋರಣಗಳಿಂದ ಶೃಂಗರಿಸಿ ಉತ್ತರ ದಿಕ್ಕಿನ ಬಯಲಿನಲ್ಲಿ ಪ್ರಾರ್ಥನೆಗಾಗಿ ವಿಶೇಷ ಚಪ್ಪರ ಹಾಕಲಾಗಿತ್ತು. ಅತಿಥಿಗಳ ಊಟೋಪಚಾರಕ್ಕೆ ಚಿಕ್ಕಬಳ್ಳಾಪುರ ಸ್ವಾಗತ ಸಮಿತಿಯವರು ಸಕಲ ಸಿದ್ಧತೆ ಮಾಡಿದ್ದರು. ಈ ಅವಧಿಯಲ್ಲಿ ಗಾಂಧೀಜಿ ಅವರು ನಿರಂತರ ಆರೋಗ್ಯ ತಪಾಸಣೆ, ನಿತ್ಯ ಪ್ರಾರ್ಥನೆ, ವಿವಿಧ ಭಾಗಗಳಿಂದ ಬಂದ ಕಾರ್ಯಕರ್ತರು, ನಾಯಕರೊಂದಿಗೆ ಮಾತುಕತೆ. ತಮ್ಮ ಪತ್ರಿಕೆಗಳಿಗೆ ಲೇಖನ ಬರೆಯುವುದರಲ್ಲಿ ಗಾಂಧಿ ಸಕ್ರಿಯರಾಗಿರುತ್ತಾರೆ.

ಚಿಕ್ಕಬಳ್ಳಾಪುರ ಜನರು ನಾಲ್ವಡಿ ಕೃಷ್ಣರಾಜ್ ಒಡೆಯರ ಅವರ ರಜತ ಮಹೋತ್ಸವ ಕಾರ್ಯಕ್ರಮ ಮಹಾತ್ಮರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಉದ್ದೇಶಿಸಿದ್ದರು. ಆದರೆ ಗಾಂಧೀಜಿ ಅವರು ನಂದಿ ಗಿರಿಧಾಮದ ಎರಡು ತಿಂಗಳು ವಿಶ್ರಾಂತಿಯನ್ನು ದಿಢೀರ್ ಮೊಟಕುಗೊಳಿಸಿ 15 ದಿನ ಮುಂಚಿತವಾಗಿಯೇ ಬೆಟ್ಟದಿಂದ ನಿರ್ಗಮಿಸಲು ನಿರ್ಧರಿಸಿದರು. ಹೀಗಾಗಿ ಸ್ಥಳೀಯ ಜನರ ಕನಸು ಈಡೇರಲಿಲ್ಲ.

ಜೂನ್ 5 ರಂದು ಗಾಂಧೀಜಿ ಅವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ನಾಗರಿಕರು ನೀಡಿದ ಭಿನ್ನವತ್ತಳೆ, ನಿಧಿ ಸ್ವೀಕರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.

ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ್ದರು!

1936ರ ಮೇ ತಿಂಗಳಲ್ಲಿ ಮದರಾಸ್‌ನಲ್ಲಿ ದ್ವೀತಿಯ ಹರಿಜನ ಪ್ರವಾಸದಲ್ಲಿದ್ದ ಗಾಂಧೀಜಿ ಅವರಿಗೆ ಹಠಾತ್ ರಕ್ತದ ಒತ್ತಡ ಹೆಚ್ಚಿ ಅನಾರೋಗ್ಯಕ್ಕೆ ಈಡಾಗುತ್ತಾರೆ. ಈ ವೇಳೆ ಕೂಡ ಮಹಾತ್ಮರ ವಿಶ್ರಾಂತಿಗೆ ನಂದಿ ಗಿರಿಧಾಮವೇ ಸೂಕ್ತ ಎಂದು ಅವರ ಪರಿವಾರದವರು ನಿರ್ಧರಿಸುತ್ತಾರೆ. ಪರಿಣಾಮ, ಗಾಂಧೀಜಿ ಅವರು 1936ರ ಮೇ 10 ರಂದು ಬೆಂಗಳೂರಿಗೆ ಬಂದು, ಕುಮಾರಕೃಪಾ ಭವನದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಬಳಿಕ ಎರಡನೇ ಬಾರಿಗೆ ನಂದಿ ಬೆಟ್ಟದತ್ತ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ.

ಈ ವೇಳೆ ಗಾಂಧೀಜಿ ಅವರನ್ನು ಡೋಲಿ ಮೂಲಕ ಬೆಟ್ಟಕ್ಕೆಕರೆದೊಯ್ಯಲು ಸುಲ್ತಾನ್ ಪೇಟೆಯಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಸೇರಿದಂತೆ ಅನೇಕ ಗಣ್ಯರು ಕಾಯುತ್ತಿದ್ದರು. ಆದರೆ ಗಾಂಧೀಜಿ ಅವರು ಬೆಟ್ಟದ ದಕ್ಷಿಣ ದಿಕ್ಕಿನಲ್ಲಿ ಕುಡುವತಿ ಗ್ರಾಮದ ಬಳಿ ಇದ್ದ ಮಣ್ಣಿನ ರಸ್ತೆಯ ಮೂಲಕ ಅನಾರೋಗ್ಯದ ನಡುವೆಯೇ ಮಧ್ಯಾಹ್ನದ ಸುಡುಬಿಸಿಲನ್ನು ಲೆಕ್ಕಿಸದೆ ಕಾಲ್ನಡಿಗೆಯಲ್ಲೇ 1478 ಮೀಟರ್ ಎತ್ತರದ ಬೆಟ್ಟ ಹತ್ತಿ, ಅವರಿಗಾಗಿ ಕಾಯ್ದಿದ್ದವರನ್ನು ಆಶ್ಚರ್ಯ ಚಕಿತಗೊಳಿಸಿದ್ದರು.

ಈ ಭೇಟಿಯ ವೇಳೆಗಾಗಲೇ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿಂದಿನಂತೆಯೇ ಮಹಾತ್ಮರಿಗೆ ಕನ್ನಿಂಗ್ ಹ್ಯಾಂ ಭವನದಲ್ಲಿಯೇ ಸಕಲ ವ್ಯವಸ್ಥೆ ಮಾಡಿಸಲಾಗಿತ್ತು. ದಿವಾನರು ಬಾಪೂ ಅವರಿಗೆ ಹಾಲಿಗಾಗಿ ಐದು ಮೇಕೆಗಳನ್ನು ವ್ಯವಸ್ಥೆ ಮಾಡಿದ್ದರು. ಬೆಟ್ಟದ ಮೇಲೆ ವಿಶ್ರಾಂತಿಯಲ್ಲಿರುವಾಗಲೇ ಗಾಂಧೀಜಿ ಅವರಿಗೆ ತಮ್ಮ ಹಿರಿಮಗ ಹರಿಲಾಲ್‌ ಗಾಂಧೀಜಿ ಅವರು ಮುಂಬಯಿಯ ಜುಮ್ಮಾ ಮಸೀದಿಯಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದರು ಎಂಬ ವಾರ್ತೆ ತಲುಪಿತ್ತು.ಇದೇ ಸಮಯದಲ್ಲಿ ವಿಜ್ಞಾನಿ ಸರ್ ಸಿ.ವಿ.ರಾಮನ್ ಸೇರಿದಂತೆ ಅನೇಕ ಗಣ್ಯರು ಗಾಂಧೀಜಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಮೇ 31ರಂದು ನಂದಿ ಬೆಟ್ಟದಿಂದ ಹೊರಟ ಗಾಂಧೀಜಿ ಅವರು ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ಬೌರಿಂಗ್‌ಪೇಟೆ ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.

ಗಾಂಧೀಜಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಈ ಭೇಟಿಯ ನೆನಪಿಗಾಗಿ ಗಾಂಧೀಜಿ ಅವರ ಚಿತಾಭಸ್ಮದ ಕಳಸವನ್ನು ಕೋಲಾರಕ್ಕೆ ತರಿಸಿ, ಅಂತರಗಂಗೆ ಮತ್ತು ನಂದಿಬೆಟ್ಟದ ಅಮೃತ ಸರೋವರದಲ್ಲಿ ವಿಸರ್ಜನೆ ಮಾಡಿಸಿದ್ದರು. ಆ ಸಮಯದಲ್ಲಿ ಕನ್ನಿಂಗ್ ಹ್ಯಾಂ ಭವನದಲ್ಲಿ ಭಜನೆ, ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಗಾಂಧೀಜಿಯವರ ಈ ಭೇಟಿಯ ಸ್ಮರಣಾರ್ಥ ಕನ್ನಿಂಗ್ ಹ್ಯಾಂ ಭವನಕ್ಕೆ ಗಾಂಧಿ ನಿಲಯಎಂದು ಮರು ನಾಮಕರಣ ಮಾಡಿ, ಭವನದ ಬಳಿಯೇ ಗಾಂಧೀಜಿ ಅವರ ಮೂರ್ತಿಯೊಂದನ್ನು ಸಹ ಸ್ಥಾಪಿಸಲಾಗಿದೆ. ಸದ್ಯ ಆ ಭವನವನ್ನು ಶಿಷ್ಟಾಚಾರ ವಿಭಾಗವು ಅತಿ ಗಣ್ಯರ ವಸತಿಗಾಗಿ ಕಾಯ್ದಿರಿಸಿದೆ.

ನಾಯಕರು ರೂಪುಗೊಳ್ಳಲು ಪ್ರೇರಣೆ

ದೊಡ್ಡಬಳ್ಳಾಪುರಕ್ಕೆ 1934ರ ಜನವರಿ 4 ರಂದು ಭೇಟಿ ನೀಡಿದ್ದರು. ಗಾಂಧಿ ನಮ್ಮ ಊರಿಗೆ ಬಂದಿದ್ದರು. ನಾವು ಗಾಂಧೀಜಿಯನ್ನು ಕಂಡಿದ್ದೇವೆ ಎನ್ನುವ ಹಿರಿಯರಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನಸಂಖ್ಯೆ ಕೇವಲ 25 ಸಾವಿರ(ಈಗಿನ ಜನ ಸಂಖ್ಯೆ1 ಲಕ್ಷ). ಇಲ್ಲಿನ ಜನತೆಗೆ ದೇಶ ಪ್ರೇಮದ ಭಾಷಣ ಮಾಡಿ, ಊರಿನ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದಲಿಂಗಯ್ಯ, ರುಮಾಲೆ ಭದ್ರಣ್ಣ, ಮುಗುವಾಳಪ್ಪ ಮೊದಲಾದವರು ಇಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಪ್ರೇರಣೆಯಾದರು.

ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ಎಚ್.ಮುಗುವಾಳಪ್ಪ, ನಾ.ನಂಜುಂಡಯ್ಯ ಮುಂತಾದವರೊಂದಿಗೆ ಊರಿನ ಜನ ಹೂ ಮಾಲೆ ಹಾಕಿ ಆತ್ಮೀಯ ಸ್ವಾಗತ ಕೋರಿದ್ದರು. ಪುರಸಭೆಯವರು ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿ ₹500ಗಳನ್ನು ನೀಡಿದರು. ಅದನ್ನು ಸ್ವೀಕರಿಸಿದ ಗಾಂಧೀಜಿಯವರು ಸ್ಥಳೀಕರು ತೋರಿದ ಆದರಾಭಿಮಾನಗಳಿಗಾಗಿ ವಂದಿಸಿದ್ದರು. ಗಾಂಜಿಯವರು ಉಪನ್ಯಾಸ ನೀಡಿದ ಪ್ರದೇಶಕ್ಕೆ ಅವರ ಸ್ಮರಣಾರ್ಥವಾಗಿ ಗಾಂಧಿನಗರ ಎಂದು ನಾಮಕರಣ ಮಾಡಲಾಗಿದೆ. ಇಂದಿಗೂ ಹಳೇ ಬಸ್ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಎಂದೇ ಕರೆಯಲಾಗುತ್ತಿದೆ. ಗಾಂಧೀಜಿ ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾಗ ರುಮಾಲೆ ಭದ್ರಣ್ಣ ಮತ್ತು ಸಂಗಡಿಗರು ರುಮಾಲೆ ಛತ್ರದಲ್ಲಿ ಖಾದಿ ಬಟ್ಟೆಗಳ ಪ್ರದರ್ಶನ ಏರ್ಪಡಿಸಿದ್ದರು. ಅಂದು ಸಾವಿರಾರು ಗಾಂಧೀ ಟೋಪಿಗಳು ಮಾರಾಟವಾಗಿದ್ದವು ಎನ್ನುವುದು ವಿಶೇಷ.

ಬಾಪು ಬಗ್ಗೆಮತ್ತಷ್ಟು ಓದು:ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ...

ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಗಾಂಧಿ

ಬಳ್ಳಾರಿಯ ರೈಲು ನಿಲ್ದಾಣಕ್ಕೆ ಬಂದವರಿಗೆ ಅಷ್ಟು ಸುಲಭವಾಗಿ ಕಾಣದ ರೀತಿಯಲ್ಲಿ ಒಂದು ಕಪ್ಪು ಫಲಕವನ್ನು ಅಳವಡಿಸಲಾಗಿದೆ.
‘ಈ ಪವಿತ್ರವಾದ ಸ್ಥಳದಲ್ಲಿ ಮಹಾತ್ಮಾ ಗಾಂಧೀಜಿಯವರು ಅಕ್ಟೋಬರ್ 10, 1921ರಂದು ಬಳ್ಳಾರಿಗೆ ಭೇಟಿಯಿತ್ತಾಗ ಸುಮಾರು 8 ಗಂಟೆಗಳ ಕಾಲ ತಂಗಿದ್ದರು’ ಎಂಬ ಮಾಹಿತಿಯು ಕನ್ನಡದಲ್ಲಷ್ಟೇ ಅಲ್ಲದೆ, ಇಂಗ್ಲಿಷ್‌ ಮತ್ತು ಹಿಂದಿಯಲ್ಲೂ ಇದೆ.

ಗಾಂಧೀಜಿಯೊಂದಿಗೆ ಬಳ್ಳಾರಿಯ ವಿಶಿಷ್ಟ ನಂಟನ್ನು ಸಾರುವ ಫಲಕವಿದು. ನಿಲ್ದಾಣದ ಮುಖ್ಯದ್ವಾರದ ಒಳಭಾಗದ ಗೋಡೆಯ ಮೇಲಿನ ಈ ಫಲಕ ಸ್ವಾತಂತ್ರ್ಯ ಹೋರಾಟದ ಕುರುಹು.

‘ಅಸಹಕಾರ ಚಳವಳಿಯ ಪ್ರಚಾರಕ್ಕೆಂದು ಗಾಂಧೀಜಿ ಬಳ್ಳಾರಿಗೆ ಬಂದ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಎರಡು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅವರನ್ನು ಎದುರುಗೊಳ್ಳಲು ಯಾರೂ ಬಂದಿರಲಿಲ್ಲ. ಪ್ರಚಾರ ಭಾಷಣದ ಬಳಿಕ ತೆರಳಲು ಅವರಿಗೆ ಟಿಕೆಟ್‌ ವ್ಯವಸ್ಥೆಯೂ ಆಗಿರಲಿಲ್ಲ. ಹೀಗಾಗಿ ಗಾಂಧೀಜಿ ಖಾದಿಶಾಲು ಹಾಸಿಕೊಂಡು ಪ್ಲಾಟ್‌ಫಾರಂನಲ್ಲಿ ಮಲಗಿದ್ದರು. ಮುಂಜಾನೆ ತಮ್ಮ ಟಿಕೆಟ್ಟನ್ನು ತಾವೇ ಖರೀದಿಸಿ ಪ್ರಯಾಣ ಮುಂದುವರಿಸಿದರು’ ಎಂಬ ಮಾಹಿತಿಯು ‘ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಕೃತಿಯಲ್ಲಿ ದಾಖಲಾಗಿದೆ.

(ಚಿತ್ರ ಕೃಪೆ: Pinterest)

ಬದುಕಿಗಾಗಿ ಮಹಿಳೆಯರ ಹೋರಾಟ ಕಂಡು ಮಮ್ಮಲ ಮರುಗಿದ ಮಹಾತ್ಮ

‘ಗ್ರಾಮೀಣರ ಸ್ವಾವಲಂಬಿ ಬದುಕಿಗೆ ‘ಖಾದಿ ಗ್ರಾಮೋದ್ಯೋಗದಿಂದ ಮಾತ್ರ ಪರಿಹಾರ...’ ಬರಗಾಲಕ್ಕೆ ರಾಟೆ ವಿಮೆಯಿದ್ದಂತೆ... ಮನೆ ಮನೆಯಲ್ಲಿ ರಾಟೆ ತಿರುಗಿದಾಗ ಸ್ವದೇಶಿ ಬೆಳೆಯುತ್ತದೆ...’

ವಿಜಯಪುರ ಜಿಲ್ಲೆಗೆ ಗಾಂಧೀಜಿ 1921ರ ಮೇ 28ರಂದು ಎರಡನೇ ಬಾರಿಗೆ ಭೇಟಿ ನೀಡಿದ ಸಂದರ್ಭ, ಇಲ್ಲಿನ ಐತಿಹಾಸಿಕ ತಾಜ್‌ ಬಾವಡಿ ಅಂಗಳದಲ್ಲಿ ಮುಸ್ಸಂಜೆ ನೆರೆದಿದ್ದ 12000 ಜನಸ್ತೋಮಕ್ಕೆ ಹೇಳಿದ ಮಾತುಗಳಿವು.

‘ಬಾಗಲಕೋಟೆಯಲ್ಲಿ ಇದೇ ದಿನ ತಿಲಕರ ಸ್ವರಾಜ್ಯ ನಿಧಿಗೆ ₹ 1000 ದೇಣಿಗೆ ಸಂಗ್ರಹಿಸಿಕೊಟ್ಟು, ಮೋಟಾರಿನಲ್ಲಿ ವಿಜಯಪುರಕ್ಕೆ ಪಯಣಿಸುವಾಗ ದಾರಿಯುದ್ದಕ್ಕೂ ಮಹಿಳೆಯರು ಬಿರು ಬಿಸಿಲಿನಲ್ಲಿ ಜಲ್ಲಿ ಕಲ್ಲುಗಳನ್ನು ಬಿಡುವಿಲ್ಲದೆ ಒಡೆಯುವುದನ್ನು ನೋಡಿದ ಮಹಾತ್ಮ ತುಂಬಾ ವಿಚಲಿತರಾಗುತ್ತಾರೆ.

ವಿಜಯಪುರದಲ್ಲಿ ಮಾತನಾಡುವಾಗ ಜಿಲ್ಲೆಯಲ್ಲಿ ಎಷ್ಟು ಚರಕಗಳಿವೆ ಎಂದು ಕೇಳುತ್ತಾರೆ. 1400 ರಾಟೆಗಳಿವೆ ಎಂಬ ಉತ್ತರ ಕೇಳಿ ಬೇಸರಪಟ್ಟುಕೊಳ್ಳುತ್ತಾರೆ. ಬದುಕಿಗಾಗಿ ಬಿರು ಬಿಸಿಲಿನಲ್ಲೇ ಮಹಿಳೆಯರು ನಡೆಸುವ ಹೋರಾಟ ಪ್ರಸ್ತಾಪಿಸಿ, ಖಾದಿ ಗ್ರಾಮೋದ್ಯೋಗ ನಡೆಸುವಂತೆ ಪ್ರೇರೇಪಿಸಿದರು’ ಎಂದು ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ್‌ ದೇಶಪಾಂಡೆ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ಸಿಟ್ಟಿಗೆದ್ದ ಸಹನಾಮೂರ್ತಿ..!

ಮೊದಲ ಜಾಗತಿಕ ಯುದ್ಧದ ಸಮಯ (1918). ಕಾಂಗ್ರೆಸ್ ರಾಜ್ಯದ ಎಲ್ಲೆಡೆ -ಸಮಾವೇಶ ಆಯೋಜಿಸಿತ್ತು. 17ನೇ ಸಮಾವೇಶ ನಡೆದಿದ್ದು ವಿಜಯಪುರದಲ್ಲಿ (1918ರ ಮೇ 5). ಇದರಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಮೊದಲ ಬಾರಿಗೆ ಗುಮ್ಮಟ ನಗರಿಗೆ ಭೇಟಿ ನೀಡಿದ್ದರು. ಇದೀಗ ಈ ಭೇಟಿಗೆ ಶತಮಾನದ ಸಂಭ್ರಮ.

ಬಾಪು ಬಗ್ಗೆಮತ್ತಷ್ಟು ಓದು:ಅಳಿದ ಮೇಲೆ ಉಳಿದ ‘ಗಾಂಧಿ’ಗಳು

ಅಸ್ಪೃಶ್ಯತಾ ನಿವಾರಣಾ ಸಭೆಯನ್ನು ಇದೇ ಸಂದರ್ಭ ಆಯೋಜಿಸಲಾಗಿತ್ತು. ಸಭೆಗೆ ಬರುತ್ತಿದ್ದಂತೆ ಗಾಂಧೀಜಿ ಅಸ್ಪೃಶ್ಯರಿದ್ದಾರೆಯೇ ಎಂದು ಪ್ರಶ್ನಿಸಿದರು. ಯಾರೂ ಇಲ್ಲ ಎಂಬ ಉತ್ತರ ಬರುತ್ತಿದ್ದಂತೆ, ಕೋಪಿಸಿಕೊಂಡು ಈ ಸಭೆ ನಡೆಸಿ ಪ್ರಯೋಜನವಿಲ್ಲ ಎಂದು ಹೊರ ನಡೆದರು. ನಂತರ ಸಂಘಟಕರು ಊರಲ್ಲಿದ್ದ ಎಲ್ಲ ಅಂತ್ಯಜರನ್ನು ಕಲೆ ಹಾಕಿದ ಬಳಿಕ, ಸಭೆಗೆ ಬಂದ ಗಾಂಧಿ ಮಾತನಾಡಿದರು.

ಗುಮ್ಮಟ ನಗರಿಯ ಸ್ಮಾರಕಗಳ ಬಗ್ಗೆ ಕೇಳಿದ್ದ ಗಾಂಧೀಜಿ ಈ ಸಭೆ ನಂತರ, ತಮ್ಮ ಪತ್ನಿ ಕಸ್ತೂರ್ಬಾ, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಸಹೋದರ ವಿಠ್ಠಲಭಾಯ್‌ ಪಟೇಲ್‌, ಸರೋಜಿನಿ ನಾಯ್ಡು ಜತೆ ಐತಿಹಾಸಿಕ ಗೋಳಗುಮ್ಮಟ ವೀಕ್ಷಿಸಿದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಗಾಂಧೀಜಿ ಸ್ಮರಣೆಯಲ್ಲಿ ಮೈಸೂರು

ಗಾಂಧೀಜಿ ಮೊದಲ ಬಾರಿಗೆ ಭೇಟಿಕೊಟ್ಟಿದ್ದು 1927ರಲ್ಲಿ. ಪುರಭವದಲ್ಲಿ ಮೊದಲ ಭಾಷಣ. ನಂತರ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ ಉದ್ಘಾಟನೆ. ಜಗನ್ಮೋಹನ ಅರಮನೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ್ದರು. ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಚರಕ ಉಡುಗೊರೆಯಾಗಿ ನೀಡಿದ್ದರು. ಹಿಂದುಳಿದವರ ಕಲ್ಯಾಣಕ್ಕಾಗಿ ಮಹಾರಾಜರು ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದರು. ಅದಕ್ಕಾಗಿ ಅವರನ್ನು‘ರಾಜರ್ಷಿ’ ಎಂದು ಕರೆದಿದ್ದರು.

ಮೈಸೂರು ಪುರಭವನ
ಮೈಸೂರು ಪುರಭವನ

ಆದಿ ಕರ್ನಾಟಕ ಸಮುದಾಯದವರಿಗಾಗಿ ಸಂಸ್ಥಾನ ಮನೆಗಳನ್ನು ಕಟ್ಟಿಕೊಟ್ಟಿದ್ದ ಪ್ರದೇಶಕ್ಕೆ ಗಾಂಧೀಜಿ ಭೇಟಿ ನೀಡಿದ್ದರು. ಆಗ ’ದೊಡ್ಡ ಆದಿ ಕರ್ನಾಟಕಪುರ’ ಎನ್ನಿಸಿಕೊಂಡಿದ್ದ ಪ್ರದೇಶ ಇಂದು ‘ಅಶೋಕಪುರಂ’ ಆಗಿದೆ. ಚಿಕ್ಕ ಹೊಲಗೇರಿ ಎಂಬ ಸ್ಥಳ ‘ಗಾಂಧಿ ನಗರ’ ಆಗಿದೆ. ಅವರ ಭೇಟಿ ಸ್ಮರಣಾರ್ಥ ಎರಡೂ ನಗರಗಳಲ್ಲಿ ಇಂದು ಗಾಂಧಿ ಪ್ರತಿಮೆಗಳಿವೆ. ಗಾಂಧಿ ಚೌಕ ಎಂಬ ವೇದಿಕೆಯೂ ಇದೆ.

1934ರಲ್ಲಿ ಮತ್ತೊಮ್ಮೆ ಗಾಂಧೀಜಿ ಎರಡನೇ ಬಾರಿಗೆ ಮೈಸೂರಿಗೆ ಬಂದಿದ್ದರು. ಎರಡು ಬಾರಿ ಭೇಟಿ ನೀಡಿದಾಗಲೂ ಅವರು ಶೇಷಾದ್ರಿ ಅಯ್ಯರ್ ರಸ್ತೆಯ ಶೇಷಾದ್ರಿ ಹೌಸ್ ನಲ್ಲಿ ತಂಗಿದ್ದರು. ಅವತ್ತಿನ ಶೇಷಾದ್ರಿ ಹೌಸ್ ಇಂದು ವಾಣಿಜ್ಯ ತೆರಿಗೆ ಇಲಾಖೆ ಕಚೇರಿ.

ಮಾನಸಗಂಗೋತ್ರಿ ಆವರಣದಲ್ಲಿ ಸಾಬರಮತಿ ಆಶ್ರಮದ ಮಾದರಿಯ ಕಟ್ಟಡವಿದೆ. ಅಲ್ಲಿ ಗಾಂಧಿ ಜೀವನ ಕುರಿತಾದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಈ ಭೇಟಿಯಲ್ಲಿ ಗಾಂಧೀಜಿ ಬಳಸಿದ್ದರೆನ್ನಲಾದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಮಾನಸಗಂಗೋತ್ರಿ ಆವರಣದಲ್ಲಿರುವ ಜಾನಪದ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.

ಬದನವಾಳು ಗ್ರಾಮ:ನಂಜನಗೂಡಿನಲ್ಲಿದ್ದ ಗಾಂಧಿವಾದಿ ತಗಡೂರು ರಾಮಚಂದ್ರರಾವ್ ಮನೆಗೆ ಭೇಟಿ ನೀಡಿದ್ದರು. ಅಲ್ಲಿಂದ 10 ಕಿ.ಮಿ ದೂರದಲ್ಲಿರುವ ಬದನವಾಳು ಗ್ರಾಮಕ್ಕೆ ಗಾಂಧೀಜಿ 2 ಬಾರಿ ಭೇಟಿ ಕೊಟ್ಟಿದ್ದರು. ಗಾಂಧೀಜಿ ಕರೆಗೆ ಓಗೊಟ್ಟು ಈ ಗ್ರಾಮದ ನಾಲ್ವರು ದಲಿತ ಮಹಿಳೆಯರು 1926ರಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರ ಆರಂಭಿಸಿದರು. ನಂತರ ಅದು ಆರ್ಥಿಕ ಸ್ವಾವಲಂಬನೆಗೆ ಮುನ್ನುಡಿ ಬರೆಯಿತು. ಬಟ್ಟೆಗಳ-ನೇಯ್ಗೆ-ಬಣ್ಣಗಾರಿಕೆಯೇಅಲ್ಲದೆ, ಕಾಗದ ತಯಾರಿಕೆ, ಕತ್ತಾಳೆ ನಾರು ಕೈಕಸಬು, ಎಣ್ಣೆ ಗಾಣ, ಬಟ್ಟೆ-ಸಾಬೂನು, ಮೈ-ಸಾಬೂನು ತಯಾರಿಕೆ, ರೇಷ್ಮೆಯ ಉರುಳೆಗೊಳಿಸುವಿಕೆ, ದೀಪದಕಡ್ಡಿ (ಚಕಮಕಿ) ಉತ್ಪಾದನೆ, ಮರಗೆಲಸ ಇತ್ಯಾದಿ ಬಗೆಬಗೆಯ ಉದ್ಯೋಗಗಳಲ್ಲೂ ತೊಡಗಿದ್ದ ಈ ಕೇಂದ್ರದಲ್ಲಿ ನೂರಾರು ಹಿಂದುಳಿದ ಹೆಣ್ಣುಮಕ್ಕಳಿಗೆ, ಕುಟುಂಬಗಳಿಗೆ ಜೀವನಾರ್ಥವು ದೊರಕಿತ್ತು. ಇದೇ ಕಾರಣಕ್ಕಾಗಿ ಈ ಪುಟ್ಟಹಳ್ಳಿ ಮಹಾತ್ಮನನ್ನು ತನ್ನತ್ತ ಆಕರ್ಷಿಸಿತು.

ಗಾಂಧೀಜಿ ಭೇಟಿಯ ನೆನಪಿಗಾಗಿ ‘1927’ ಮತ್ತು ‘ಚರಕ’ ಚಿಹ್ನೆ ಒಳಗೊಂಡ ಶಾಸನವೊಂದನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇತ್ತಿಚೇಗೆ ಸಂರಕ್ಷಣೆ ನೆಪದಲ್ಲಿ ಅದಕ್ಕೆ ಸುಣ್ಣ ಬಣ್ಣ ಬಳಸಿ ಅಂದಗೆಡಿಸಿರುವುದು ಮಾತ್ರ ವಿಪರ್ಯಾಸ. ಕೇಂದ್ರದ ಹಳೆಯ ಕಟ್ಟಡವನ್ನು 1927ರಲ್ಲಿ ನಿರ್ಮಿಸಲಾಗಿದ್ದು, ಅದರ ಮೇಲೆ ‘ಬದನವಾಳು ನೂಲುವ ಪ್ರಾಂತ್ಯ’ ಎನ್ನುವ ಕೆತ್ತನೆ ಇದೆ. ಕೇಂದ್ರದ ಆವರಣದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ಗಾಂಧೀಜಿಯ ಪ್ರತಿಮೆ ಗಮನ ಸೆಳೆಯುತ್ತದೆ. ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಈಗ ಬದನವಾಳು ಗ್ರಾಮೋದ್ಯೋಗ ಕೇಂದ್ರವನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ಖಾದಿ ತಯಾರಿಕೆ ಕುರಿತು ಜನರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. 60ಕ್ಕೂ ಹೆಚ್ಚು ಮಹಿಳೆಯರೂ ಇಲ್ಲಿ ಖಾದಿ ತಯಾರಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

ಬಾಪು ಬಗ್ಗೆಮತ್ತಷ್ಟು ಓದು:ನಿತ್ಯನೂತನ ಪ್ರಯೋಗಶಾಲೆ

1934ರಲ್ಲಿ ಗಾಂಧೀಜಿ ಈ ಹಳ್ಳಿಗೆ ಮತ್ತೊಮ್ಮೆ ಭೇಟಿ ನೀಡಿದ್ದರು. ಇದೇ ಕಾರಣಕ್ಕಾಗಿ ಈ ಹಳ್ಳಿ ಇಂದಿಗೂ ಪ್ರವಾಸಿಗರ, ಚಳುವಳಿಗಾರರ ನೆಚ್ಚಿಣ ತಾಣವಾಗಿದೆ. 2015ರಲ್ಲಿ ರಂಗಕರ್ಮಿ ಪ್ರಸನ್ನ ಅವರು ನಡೆಸಿದ ಸತ್ಯಾಗ್ರಹದಿಂದ ಬದನವಾಳು ಇಡೀ ದೇಶದ ಗಮನ ಸೆಳೆದದ್ದು ಗಮನಾರ್ಹ.

ತಗಡೂರಿನಲ್ಲಿ ತಂಗಿದ್ದರು

1934ರಲ್ಲಿ ಬದನವಾಳು ನೋಡಿದ ನಂತರ ಪ್ಲೇಗ್ ಪೀಡಿತವಾಗಿದ್ದ ಸಮೀಪದ ತಗಡೂರಿಗೆ ಗಾಂಧೀಜಿ ಭೇಟಿ ನೀಡಿದ್ದರು. ಅದು ಗಾಂಧಿವಾದಿ ತಗಡೂರು ರಾಮಚಂದ್ರರಾವ್ ಅವರ ಊರು. ಆಗ ಇಲ್ಲಿನ ಸತ್ಯಾಗ್ರಹ ಆಶ್ರಮದಲ್ಲಿ ತಂಗಿದ್ದರು. ಆದರೆ ಈಗ ಅದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿರುವ ಅತ್ಯಮೂಲ್ಯ ಛಾಯಾಚಿತ್ರಗಳು ಗೆದ್ದಲು ತಿನ್ನುತ್ತಿವೆ. ಆಶ್ರಮದಲ್ಲಿ ಅಂದಿನ ಖಾದಿ ಗ್ರಾಮೋದ್ಯೋಗ ಗತವೈಭವವನನ್ನು ನೆನಪಿಸುವ ಯಂತ್ರಗಳು, ಚರಕಗಳ ಪಳೆಯುಳಿಕೆಗಳು ಕಂಡುಬರುತ್ತವೆ.

ಗಾಂಧಿ ಭೇಟಿ ಸ್ಮರಣಾರ್ಥ ಆಶ್ರಮದಲ್ಲಿ ಗಾಂಧಿ ಪುತ್ಥಳಿಯೊಂದನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಸರ್ವೋದಯ ಸಂಘದ ಸುಪರ್ದಿಯಲ್ಲಿರುವ ಈ ಆಶ್ರಮದಲ್ಲಿಯೇ ಮೊದಲು ಮಹಿಳೆಯರು ಖಾದಿ ನೇಯುತ್ತಿದ್ದರು. ಈಗ ಸಮೀಪದಲ್ಲಿಯೇ ಹೊಸ ಕಟ್ಟಡ ಕಟ್ಟಲಾಗಿದೆ. ಖಾದಿ ಉತ್ಪಾದನೆ ಮುಂದುವರೆದಿದೆ. ಗಾಂಧೀಜಿ ಭೇಟಿಯಿಂದ ಪ್ರಭಾವಿತವಾಗಿರುವ ನಂಜನಗೂಡಿನ ಜನತೆ ಸಮೀಪದ ಹಳ್ಳಿಯೊಂದಕ್ಕೆ ‘ಗಾಂಧಿಗ್ರಾಮ’ ಎಂಬ ಹೆಸರಿಟ್ಟಿದ್ದಾರೆ.

ಕೊಡಗಿನಲ್ಲೊಂದು ‘ಗಾಂಧಿ ಗದ್ದೆ’

ಕೊಡಗಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ ಪೊನ್ನಂಪೇಟೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಮೆಟ್ಟಿದ ನಾಡು ಎಂಬ ಹೆಮ್ಮೆಗೂ ಪಾತ್ರವಾಗಿದೆ. ದೇಶದಾದ್ಯಂತ ಸ್ವಾತಂತ್ರ ಚಳವಳಿ ತೀವ್ರಗೊಂಡಿದ್ದ ಸಂದರ್ಭದಲ್ಲಿ ಫೆಬ್ರುವರಿ 22, 1934ರಂದು ಮಹಾತ್ಮ ಗಾಂಧಿ ಕೇರಳ ಮಾರ್ಗವಾಗಿ ಕೊಡಗಿನ ಪೊನ್ನಂಪೇಟೆಗೆ ಆಗಮಿಸಿದ್ದರು. ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಒಂದು ರಾತ್ರಿ ತಂಗಿದ್ದರು. ಅವರಿಗೆ ಸ್ಥಳೀಯವಾಗಿ ಪುತ್ತಾಮನೆ ಪೊನ್ನಮ್ಮ ಅವರು ಸತ್ಕಾರ ನೀಡಿದ್ದರು.

ಮರು ದಿವಸ ಗಾಂಧಿ ಕೊಡಗಿನ ಜನರನ್ನು ಉದ್ದೇಶಿಸಿ ಗದ್ದೆ ಬಯಲಿನಲ್ಲಿ ಸ್ವಾತಂತ್ರ್ಯ ಚಳವಳಿ ಕುರಿತು ಭಾಷಣ ಮಾಡಿದ್ದರು. ಈ ಗದ್ದೆ ಈಗ ಚೆಪ್ಪುಡೀರ ಪೊನ್ನಪ್ಪ ಅವರ ವಶದಲ್ಲಿದ್ದು ‘ಗಾಂಧಿ ಗದ್ದೆ’ ಎಂದೇ ಪ್ರಸಿದ್ಧಿ ಪಡೆದಿದೆ. ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಹುದಿಕೇರಿ ಮಾರ್ಗದಲ್ಲಿ 1 ಕಿ.ಮೀ. ದೂರದಲ್ಲಿದ್ದು, ಪೊನ್ನಪ್ಪ ಅವರು ಈ ಗದ್ದೆಗೆ ಪ್ರತಿವರ್ಷ ಭತ್ತದ ಕೃಷಿ ಮಾಡುತ್ತಿದ್ದಾರೆ.

ಗಾಂಧಿ ಬಂದ ನೆನಪಿಗಾಗಿ ಪಟ್ಟಣದ ಹಿರಿಯರು ಇಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಆದರೆ, ಪಟ್ಟಣದಿಂದ ದೂರವಿದ್ದುದರಿಂದ ಸಂರಕ್ಷಣೆ ಕಷ್ಟವೆಂದು ತಿಳಿದು, ಕಳೆದ 20 ವರ್ಷಗಳ ಹಿಂದೆ ಈ ಪತ್ರಿಮೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರತಿಮೆ ಮುಂದೆ ಪ್ರತಿವರ್ಷ ರಾಷ್ಟ್ರೀಯ ಹಬ್ಬಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಪೊನ್ನಂಪೇಟೆಗೆ ಗಾಂಧಿ ಬಂದ ಸುದ್ದಿಯನ್ನು ತಿಳಿದ ಮೈಸೂರು, ಹಾಸನ ಹಾಗೂ ಕೊಡಗಿನ ಜನರು ಎತ್ತಿನ ಗಾಡಿ ಮೂಲಕ ಸಾಗರೋಪಾದಿಯಲ್ಲಿ ಬಂದು ಗಾಂಧೀಜಿ ಅವರ ದರುಶನ ಪಡೆದು ಭಾಷಣ ಕೇಳಿದ್ದರು. ಬಳಿಕ ಗಾಂಧಿ ಪೊನ್ನಂಪೇಟೆಯಿಂದ ಗೋಣಿಕೊಪ್ಪಲು ಮಾರ್ಗವಾಗಿ ಕೈಕೇರಿಗೆ ತೆರಳಿ ಅಲ್ಲಿನ ಹರಿಜನ ವೃದ್ಧೆಯೊಬ್ಬರ ಕಷ್ಟಸುಖ ವಿಚಾರಿಸಿದ್ದರು.

ಬಾಪು ಬಗ್ಗೆಮತ್ತಷ್ಟು ಓದು:ಗಾಂಧಿ ಪ್ರೀತಿಯ ಮಕ್ಕಳು

ಗಾಂಧಿ ಬಳಸಿದ್ದ ಮೈಸೂರು ಸ್ಯಾಂಡಲ್‌ ಸೋಪ್‌

ಕಥೆಗಾರ್ಥಿ ಕೊಡಗಿನ ಗೌರಮ್ಮ ಅವರ ಒತ್ತಾಯಕ್ಕೆ ಮಣಿದು ಸುಂಟಿಕೊಪ್ಪ ಸಮೀಪದ ಗುಂಡಿಗುಟ್ಟಿ ಮಂಜುನಾಥಯ್ಯ ಅವರ ತೋಟದಲ್ಲಿದ್ದ ಗೌರಮ್ಮನವವರ ಮನೆಗೆ ತೆರಳಿದರು. ಅಲ್ಲಿ ಗೌರಮ್ಮ ಹರಿಜನ ಸೇವೆಗೆ ಉದಾರವಾಗಿ ನೀಡಿದ ಚಿನ್ನದ ಆಭರಣಗಳನ್ನು ಪಡೆದುಕೊಂಡು ಮಡಿಕೇರಿ ಮಾರ್ಗವಾಗಿ ಮಂಗಳೂರಿನತ್ತ ತೆರಳಿದರು. ಗೌರಮ್ಮ ಅವರ ಮನೆಯಲ್ಲಿ ಗಾಂಧಿ ಬಳಸಿದ ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಟವೆಲ್ ಅನ್ನು ಸುರಕ್ಷಿತವಾಗಿ ಇಡಲಾಗಿತ್ತು. ಈಗ ಅವುಗಳನ್ನು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ.

ಗಾಂಧೀಜಿ ಅವರು ಪೊನ್ನಂಪೇಟೆಯಿಂದ ತೆರಳುವಾಗ ಜನರು ತವರು ಮನೆಯಿಂದ ಮಗಳನ್ನು ಕಳಿಸುವಾಗ ಕಣ್ಣೀರು ಹಾಕುವಂತೆ ಕಂಬನಿಗೆರೆದರು. ಇಂತಹ ಬಾಂಧವ್ಯದಿಂದ ಕೊಡಗಿನ ಜನರು ಗಾಂಧಿ ಜಯಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಅಚ್ಚರಿಗೊಳಿಸಿದ ದೇವನಗರಿ ದಾನಿಗಳು

ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಅಣಿಗೊಳಿಸುವ ಕಾಲವದು. 1934ರ ಮಾರ್ಚ್ 2ರಂದು ಮಹಾತ್ಮ ಗಾಂಧೀಜಿ ಮಧ್ಯ ಕರ್ನಾಟಕದ ಕೇಂದ್ರ ದಾವಣಗೆರೆಗೆ ಬಂದರು. ಅಂದು ಭಾಷಣ ಮಾಡಿ, ಹೋರಾಟಗಾರರಲ್ಲಿ ಸ್ಫೂರ್ತಿ ತುಂಬಿದರು. ಊರಿನ ಜನ ಹುರುಪು–ಉತ್ಸಾಹಗಳಿಂದ ಅವರನ್ನು ಸುತ್ತುವರಿದರು. ಒಂದು ದಿನಕ್ಕಾಗಿ ಬಂದಿದ್ದ ಗಾಂಧೀಜಿಗೆ ಇನ್ನೊಂದು ದಿನ ಇರಲೇಬೇಕೆಂಬ ಪ್ರೀತಿಯ ಒತ್ತಾಯ ಹಾಕಿದರು. ಆದರೆ, ಇದಕ್ಕೆ ಗಾಂಧೀಜಿ ಒಪ್ಪಲಿಲ್ಲ. ಜನರೂ ತಮ್ಮ ಛಲ ಬಿಡಲಿಲ್ಲ.

‘ನಗರದಲ್ಲಿ ಹರಿಜನ ವಿದ್ಯಾರ್ಥಿನಿಲಯವೊಂದನ್ನು ಕಟ್ಟಬೇಕು. ಅದಕ್ಕೆ ಸ್ಥಳ ದಾನ ಮಾಡಬೇಕು. ಕಟ್ಟಡ ನಿರ್ಮಾಣ ಹಣ ಸಂಗ್ರಹಿಸಬೇಕು. ಹೀಗೆ ಮಾಡಿದರೆ ಮಾತ್ರ ಉಳಿದುಕೊಳ್ಳುವೆ’ ಎಂಬ ಷರತ್ತು ಹಾಕಿದರು ಗಾಂಧೀಜಿ. ಇದು ಕಷ್ಟದ ಸವಾಲು, ತಕ್ಷಣಕ್ಕೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಅಂದುಕೊಂಡಿದ್ದರು ಗಾಂಧೀಜಿ. ಆದರೆ, ದಾನಿಗಳ ಊರು ದೇವನಗರಿಯ ಮಂದಿ ಗಾಂಧೀಜಿಯನ್ನೇ ಅಚ್ಚರಿಗೊಳಿಸಿದರು. ಗಾಂಧೀಜಿ ಅವರ ಷರತ್ತನ್ನು ಸಂತೋಷದಿಂದ ಒಪ್ಪಿದರು. ವಿದ್ಯಾರ್ಥಿನಿಲಯದ ಸ್ಥಳದ ಜತೆಗೆ ಅಡಿಗಲ್ಲು ಸಮಾರಂಭಕ್ಕೂ ವ್ಯವಸ್ಥೆ ಮಾಡಿದರು. ಗಾಂಧೀಜಿ ಅವರೇ ಇನ್ನೂರು ಹೆಜ್ಜೆಗಳನ್ನು ಚೌಕಾಕಾರದಲ್ಲಿ ಅಳೆದು ಕೊಟ್ಟು ನಿವೇಶನ ಗುರುತಿಸಿ ಅಡಿಗಲ್ಲು ಹಾಕಿದರು.

ಜನ ಗಾಂಧೀಜಿಗೆ ಹಾಕಿದ ಹೂವಿನ ಹಾರವನ್ನೂ ಹರಾಜು ಹಾಕಿ ಕಟ್ಟಡಕ್ಕೆ ಹಣ ಸಂಗ್ರಹಿಸಿದರು. ಇದೇ ವಿದ್ಯಾರ್ಥಿನಿಲಯ ಮುಂದೆ ಹಲವರಿಗೆ ಬದುಕು ಕಟ್ಟಿಕೊಟ್ಟಿತು. ಗಾಂಧೀಜಿ ಅವರ ಭೇಟಿ ನೆನಪಿಗೆ ಇಂದಿಗೂ ಸಾಕ್ಷಿಯಾಗಿ ಈ ನಿಲಯ ನಿಂತಿದೆ. ಈ ಅವಿಸ್ಮರಣೀಯ ನೆನಪಿಗಾಗಿಯೇ ನಿಲಯದ ಮುಂದೆ ಗಾಂಧೀಜಿಯ ಸ್ಮಾರಕಗಳನ್ನು ಸ್ಥಾಪಿಸಲಾಗಿದೆ.

ದಾವಣಗೆರೆಯಲ್ಲಿ ಗಾಂಧಿ ತಂಗಿದ್ದ ಶಾಲಾ ಕೊಠಡಿ
ದಾವಣಗೆರೆಯಲ್ಲಿ ಗಾಂಧಿ ತಂಗಿದ್ದ ಶಾಲಾ ಕೊಠಡಿ

ಗಾಂಧೀಜಿ ವಾಸ್ತವ್ಯದ ಶಾಲಾ ಕೊಠಡಿ ಈಗ ಸ್ಮಾರಕ: ದಾವಣಗೆರೆ ಕಾರ್ಯಕ್ರಮ ಮುಗಿಸಿ ಬಳ್ಳಾರಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಹರಪನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಆಗ ಶಾಲೆ) ಒಂದು ಕೊಠಡಿಯಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ್ದರು. ಇದನ್ನು ಗಾಂಧಿ ಮೆಮೋರಿಯಲ್‌ ಹಾಲ್‌ ಎಂದೇ ಈಗ ಕರೆಯಲಾಗುತ್ತದೆ. ಇಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಗಾಂಧೀಜಿ ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಅವರು ಬಂದು ಹೋದ ದಿನದಿಂದ ಇಂದಿನವರೆಗೂ ಈ ಕೋಣೆ ಒಳಗೆ ಯಾರೂ ಚಪ್ಪಲಿ ಧರಿಸಿ ಪ್ರವೇಶಿಸುವುದಿಲ್ಲ. ಬ್ರಿಟಿಷರ ಕಾಲದ ಕಟ್ಟಡವಾಗಿದ್ದರಿಂದ ಅದರ ಮೂಲರೂಪಕ್ಕೆ ಧಕ್ಕೆ ಬರದಂತೆ ಹೊಸ ರೂಪ ನೀಡಲಾಗಿದೆ.

ಬಾಪು ಬಗ್ಗೆಮತ್ತಷ್ಟು ಓದು:ದಲಿತಪರ ಕಾವಲು ತತ್ವ

ರಾಷ್ಟ್ರಪಿತ ಬಾಪು ಈ ಊರಿನವರಿಗೆ ಮಾವ!

ಹಾವೇರಿ: ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ‘ರಾಷ್ಟ್ರಪಿತ’ ಎಂದರೆ, ‘ಮಾವ’ ಎಂದು ಕರೆಯುವ ಹಕ್ಕು ಹಾವೇರಿಗೆ ಸಂದಿದೆ. ಅವರಿಗೆ ಹುಟ್ಟು ಸಂಬಂಧದಲ್ಲಿ ಹಲವು ಅಳಿಯ–ಸೊಸೆಯಂದಿರು ಇರಬಹುದು, ಆದರೆ, ಅವರ ಮುದ್ದಿನ ದತ್ತು ಮಗಳಾದ ವೀರಮ್ಮನನ್ನು ಮದುವೆಯಾಗಿ ‘ಅಳಿಯ’ ಎನಿಸಿಕೊಂಡವರು ಇಲ್ಲಿನ ಸಂಗೂರಿನ ಕರಿಯಪ್ಪ ಯರ್ರೇಶೀಮೆ.

ವೀರಮ್ಮ (26 ಮೇ1924 ರಿಂದ 12ಮೇ1992) ಶಿರಸಿಯಲ್ಲಿ ದಲಿತ ಕುಟುಂಬದಲ್ಲಿ ಹುಟ್ಟಿ, ಸಾಬರಮತಿಯಲ್ಲಿ ಬೆಳೆದು, ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ (1ನವೆಂಬರ್1910ರಿಂದ 20 ಜುಲೈ1981)ಅವರನ್ನು ವಿವಾಹವಾಗಿ ಹಾವೇರಿಯ ಸಂಗೂರಿಗೆ ಬಂದು ನೆಲೆಸಿದ್ದರು. ಗಾಂಧೀಜಿ–ಕಸ್ತೂರಬಾ ದಂಪತಿ ಇಚ್ಛೆಯಂತೆ, ಈ ವಿವಾಹ ನಡೆದಿತ್ತು.

ಕರಿಯಪ್ಪ:1934ರಲ್ಲಿ ಹಾವೇರಿಯಲ್ಲಿ ಗಾಂಧೀಜಿ ಭಾಷಣದಿಂದ ಪ್ರಭಾವಿತರಾಗಿ ಕರಿಯಪ್ಪ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಗಾಂಧೀಜಿ ಸೂಚನೆಯಂತೆ ಹರಿಜನರಿಗಾಗಿ ಧರ್ಮಶಾಲೆಗಳನ್ನು ಆರಂಭಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಮಾತ್ರವಲ್ಲ, ಒಂದು ಕೈಯನ್ನೂ ಕಳೆದುಕೊಂಡಿದ್ದರು.

ವೀರಮ್ಮ:ಇದಕ್ಕೂ ಮೊದಲು ಶಿರಸಿಗೆ ಬಂದಿದ್ದ ಗಾಂಧೀಜಿ ಬಳಿ ಅನಾಥ ದಲಿತ ಹೆಣ್ಣು ಮಗಳೊಬ್ಬಳು ಬಂದಿದ್ದಳು. ‘ವೀರಮ್ಮ ’ ಹೆಸರಿನ ಆ ಬಾಲಕಿಯನ್ನು ಗಾಂಧೀಜಿ ದಂಪತಿ ದತ್ತು ಸ್ವೀಕರಿಸಿ, ಸಾಬರಮತಿ ಆಶ್ರಮದಲ್ಲಿ ಬೆಳೆಸಿದ್ದರು. ಆಗ, ಆಶ್ರಮಕ್ಕೆ ಜವಾಹರಲಾಲ್‌ ನೆಹರೂ ಜೊತೆ ಬರುತ್ತಿದ್ದ ಇಂದಿರಾ (ಮಾಜಿ ಪ್ರಧಾನಿ) ಜೊತೆ ಬಾಲಕಿಗೆ ಒಡನಾಟವಿತ್ತು.

ಆ ಸಂದರ್ಭದಲ್ಲಿ ಹುಬ್ಬಳ್ಳಿಯ ‘ಹರಿಜನ ಸೇವಕ ಸಂಘ’ದಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿಯ ಕರಿಯಪ್ಪ ಅವರನ್ನು ಕರೆಯಿಸಿಕೊಂಡ ಗಾಂಧೀಜಿ, ಮದುವೆ ಕುರಿತು ಪ್ರಸ್ತಾಪಿಸಿದ್ದರು. ಗಾಂಧಿ ಮಾತಿಗೆ ಒಪ್ಪಿದ ಕರಿಯಪ್ಪ 1940ರಲ್ಲಿ ವೀರಮ್ಮ ವಿವಾಹವಾಗಿ, ಸಂಗೂರಿಗೆ ವಾಪಸ್ ಬಂದು ನೆಲೆಸಿದ್ದರು ಎಂದು ಅವರ ಪುತ್ರಿ ಚಿಕ್ಕಮ್ಮಾ ಮತ್ತು ಯಶೋಧಾ ವಿವರಿಸಿದರು.

ಅಪೂರ್ವ ಸಂಗಮ

1934ರ ಮಾರ್ಚ್‌ 1ರ ಸಂಜೆ ಮಹಾತ್ಮ ಗಾಂಧೀಜಿ ಹಾಗೂ ಚಿತ್ರದುರ್ಗ ಮುರುಘರಾಜೇಂದ್ರ ಮಠದ 17ನೇ ಪೀಠಾಧಿಪತಿ ಜಯದೇವ ಮುರುಘರಾಜೇಂದ್ರ ಶರಣರು ನಗರದ ಹೊಂಡದ ಮಠದಲ್ಲಿ ಭೇಟಿಯಾಗಿದ್ದರು.

ಆಗ, ‘ದೇಶದ ಪ್ರಗತಿಗೆ ಅಸ್ಪೃಶ್ಯತೆ ಒಂದು ಶಾಪ. ಈ ಬಗ್ಗೆ ಸಮಾಜದಲ್ಲಿ ಸರಿಯಾಗಿ ಅರಿವು ಮೂಡಿಸಬೇಕಾಗಿದೆ’ ಎಂದು ಗಾಂಧೀಜಿ ಹೇಳಿದ್ದರು. ಅದಕ್ಕೆ ಸ್ವಾಮೀಜಿ, ‘ತಾವು ಕೈಗೊಂಡ ಈ ಯೋಜನೆ ತುಂಬಾ ಶ್ಲಾಘನೀಯ. 800 ವರ್ಷಗಳ ಹಿಂದೆಯೇ ಬಸವಾದಿ ಶರಣರು ಈ ತಾರತಮ್ಯ ಭಾವನೆಯನ್ನು ಬೇರು ಸಹಿತ ಕೀಳಲು ಕ್ರಿಯಾತ್ಮಕವಾಗಿ ಪ್ರಯತ್ನಿಸಿದ್ದಾರೆ. ಅದನ್ನು ಮುಂದುವರಿಸುವುದು ಸೂಕ್ತವೆಂದು ಕಾಣುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು. ಆಗ ಸಂತಸಗೊಂಡ ಗಾಂಧೀಜಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸಿದ ವಿಷಯ ತಮ್ಮಿಂದ ತಿಳಿಯಿತು’ ಎಂದು ಹೇಳಿದ್ದರು.

–ಗಾಂಧೀಜಿಯ ಈ ಭೇಟಿ ಬಗ್ಗೆ ‘ಶ್ರೀ ಜಯದೇವ ಲೀಲೆ’ಯ ಹದಿನೆಂಟನೆಯ ಸಂಧಿಯಲ್ಲೂ ಉಲ್ಲೇಖವಿದೆ ಎಂದು ಹಾವೇರಿಯ ಹೊಸಮಠ ಬಸವಕೇಂದ್ರದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ ವಿವರಿಸಿದರು.

1934ರ ಹಾವೇರಿ ಭೇಟಿ ಹೀಗಿತ್ತು...

1934ರ ಮಾರ್ಚ್‌1ರಂದು ಮಧ್ಯಾಹ್ನ ಶಿರಸಿಯಿಂದ ಮೋಟಾರು ಕಾರಿನಲ್ಲಿ ಹೊರಟು ಅಕ್ಕಿಆಲೂರ ಮೂಲಕ ಗಾಂಧೀಜಿ ಹಾವೇರಿಗೆ ಬಂದಿದ್ದರು. ಅಂದೇ ಹಾನಗಲ್‌ ಹಾಗೂ ಅಕ್ಕಿಆಲೂರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಅವರನ್ನು ಸ್ವಾಗತಿಸಿದ್ದರು. ‘ಹರಿಜನೋದ್ಧಾರ ನಿಧಿ’ಗೆ ಹಣ ನೀಡಿದ್ದರು. ಬಳಿಕ ದೇವಿಹೊಸೂರಿನಲ್ಲೂ 2 ಸಾವಿರ ಮಂದಿ ಸ್ವಾಗತಿಸಿ, ನಿಧಿಗೆ ನೆರವು ನೀಡಿದ್ದರು. ಸಂಜೆ ಸುಮಾರು 4.30ರ ವೇಳೆಗೆ ಗಾಂಧೀಜಿ ಹಾವೇರಿಗೆ ಬಂದಿದ್ದರು. ಹೊಂಡದ ಮಠದಲ್ಲಿ ಶರಣರನ್ನು ಭೇಟಿಯಾಗಿದ್ದರು. ಶರಣರೂ ನಿಧಿಗೆ ₹100 ಕೊಟ್ಟಿದ್ದರು.

ಅಲ್ಲಿಂದ ಮುನ್ಸಿಪಲ್‌ ಹೈಸ್ಕೂಲ್‌ಗೆ ಬಂದ ಗಾಂಧೀಜಿ, ‘ಹರಿಜನರಿಗೆ ಮುನ್ಸಿಪಲ್‌ ಹೈಸ್ಕೂಲ್‌ ರಾತ್ರಿ ಶಾಲೆ’ ತೆರೆದಿದೆ ಎಂದು ಘೋಷಿಸಿದ್ದರು. ಬಳಿಕ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಮುನ್ಸಿಪಲ್‌ ಧರ್ಮಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಬಳಿಕ ಮೋಟೆಬೆನ್ನೂರು, ಬ್ಯಾಡಗಿಗೆ ಹೋಗಿ ಸಭೆ ನಡೆಸಿದ ಗಾಂಧೀಜಿ ರಾತ್ರಿ 8ರ ಸುಮಾರಿಗೆ ಹಾವೇರಿಗೆ ವಾಪಾಸಾಗಿದ್ದರು. ಮುನ್ಸಿಪಲ್‌ ಬಳಿ ಸ್ವಾತಂತ್ರ್ಯ ಹೋರಾಟಗಾರರು ಆಯೋಜಿಸಿದ ಸಭೆಯಲ್ಲಿ ಮಾತನಾಡಿದ್ದರು. ಮಾ.2ರಂದು ಬೆಳಿಗ್ಗೆ ರಾಣೆಬೆನ್ನೂರಿಗೆ ಹೋಗಿ, ರೈಲು ನಿಲ್ದಾಣ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಆಗ ಬಿಹಾರದ ಪ್ರಕೃತಿ ವಿಕೋಪ ಹಾಗೂ ಹರಿಜನೋದ್ಧಾರ ನಿಧಿಗೂ ಹಲವರು ದಾನ ನೀಡಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಿರಿಯರು ತಿಳಿಸಿದರು.ಹಾವೇರಿಯು ಹೊಸಮನಿ ಸಿದ್ಧಪ್ಪ, ಸಂಗೂರು ಕರಿಯಪ್ಪ, ಗುದ್ಲೆಪ್ಪ ಹಳ್ಳಿಕೇರಿ, ಮೈಲಾರ ಮಹದೇವಪ್ಪ, ಮೈಲಾರ ಸಿದ್ದಮ್ಮ, ತಿರುಕಪ್ಪ ಮಡಿವಾಳರ, ನೇಸ್ವಿ, ತಿಮ್ಮನಗೌಡ ಸೇರಿದಂತೆ ಅಸಂಖ್ಯಾತ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ.

ಇಂದು:‘ಗಾಂಧೀಜಿ ಶಂಕುಸ್ಥಾಪನೆ ನೆರವೇರಿಸಿದ ಧರ್ಮಶಾಲಾದ ಸ್ಥಳದಲ್ಲಿ ಹೊಸದಾಗಿ ₹6.5 ಕೋಟಿಯಲ್ಲಿ ‘ಗಾಂಧಿ ಭವನ’ ನಿರ್ಮಿಸಲು ಸರ್ಕಾರ ಮುಂದಾಗಿದೆ. ಸ್ವತಃ ಗಾಂಧೀಜಿಯೇ ಶಿಲಾನ್ಯಾಸ ಮಾಡಿದ ಸ್ಥಳದಲ್ಲಿ ಗಾಂಧಿಭವನ ನಿರ್ಮಾಣಗೊಳ್ಳುತ್ತಿರುವುದು ಬಹುಶಃ ರಾಜ್ಯದಲ್ಲೇ ವಿಶೇಷ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.

ಬಾಪು ಬಗ್ಗೆಮತ್ತಷ್ಟು ಓದು:ಮತ್ತೆ ಮತ್ತೆ ಗಾಂಧಿ!

‘ದೇವಿ’ಕಂಡ ಗಾಂಧೀಜಿ ಆರ್ದ್ರರಾದರು!

1934, ಮಾರ್ಚ್‌ ತಿಂಗಳು ಅದು. ಸಿದ್ದಾಪುರ ತಾಲ್ಲೂಕು ಹುಡದೀಬೈಲಿನಲ್ಲಿ ಸುರಗಿ ಹೂವಿನಿಂದ ಅಲಂಕರಿಸಿದ ಮಂಟಪದಲ್ಲಿ ಮಹಾತ್ಮ ಗಾಂಧೀಜಿ ಭಾಷಣ. ಸುತ್ತಲ ಹಳ್ಳಿಗಳಿಂದ ಬಂದಿದ್ದ ಜನರು ಗಾಂಧೀಜಿ ಮಾತು ಕೇಳಲು ಉತ್ಸುಕರಾಗಿದ್ದರು. ಸಿದ್ದಾಪುರ ನಾಗರಿಕರು ‘ದೇವಿ ಶಿವಪ್ಪಾ’ ಎಂಬ ಮಹಿಳೆಯೊಬ್ಬರನ್ನು ವಾದ್ಯ ವೈಭವದೊಂದಿಗೆ ಮೆರವಣಿಗೆಯಲ್ಲಿ ಸಭಾಮಂಟಪಕ್ಕೆ ಕರೆತಂದು ಮಹಾತ್ಮರ ಎದುರು ನಿಲ್ಲಿಸಿದರು. ಅವರು ಮುಗುಳ್ನಗೆಯಿಂದ ದೇವಿಯನ್ನು ಸ್ವಾಗತಿಸಿದರು....

ಸ್ಥಳೀಯರಾದ ಶಂಕರ ಗುಲ್ವಾಡಿ ಅವರು, ಹಸಲರ ಮಹಿಳೆ ದೇವಿ ಪರಿಚಯಿಸುತ್ತ, ಹೇಳಿದ ಕಥೆಯನ್ನು ಆಲಿಸಿದ ಬಾಪು, ‘ದೇವಿಯಂಥ ಪುಣ್ಯಾತ್ಮರು ಭೂತಲದಲ್ಲಿ ಇನ್ನೂ ಇರುವರೆಂದೇ ಜಗತ್ತು ನಡೆದಿದೆ’ ಎಂದು ತೇವಗೊಂಡ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತ ಹೇಳಿದಾಗ, ಅಲ್ಲಿದ್ದವರ ಮನಸ್ಸು ಒದ್ದೆಯಾಯಿತು. ‘ಕರನಿರಾಕರಣೆಯ ವೀರಕಥೆ’ ಕೃತಿಯಲ್ಲಿ ಈ ಸಾಲುಗಳನ್ನು ಓದುತ್ತಿದ್ದರೆ, ಗಾಂಧೀಜಿ ಹಾಗೂ ದೇವಿ ಇಬ್ಬರ ಪಾತ್ರಗಳ ಉದಾತ್ತ, ಸರಳ, ಆಡಂಬರದ ಹಂಗಿಲ್ಲದ ಬದುಕಿನ ಪಟಗಳು ಕಲ್ಪನೆಯ ಬಯಲಿನಲ್ಲಿ ಹಾದುಹೋಗುತ್ತವೆ.

ಆ ಕಥೆಯಲ್ಲಿ ನಡೆದಿದ್ದು ಇಷ್ಟು– ‘ಕರನಿರಾಕರಣೆ ಚಳವಳಿಯ ಸಂದರ್ಭವದು. ಕರ ನಿರಾಕರಿಸಿದವರ ಮನೆ ಅಗಿಯುವುದು, ಅವರನ್ನು ಬಂಧಿಸುವುದು ಸಾಮಾನ್ಯವಾಗಿತ್ತು. ಕೆಳಗಿನಮನೆ ನಾಗೇಶ ಹೆಗಡೆ ಅವರು ಉಪಾಯ ಮಾಡಿ, ಮನೆಯಲ್ಲಿದ್ದ ಬಂಗಾರ, ಹಣವನ್ನು ತಪ್ಪೇಲಿಯಲ್ಲಿ ತುಂಬಿ, ಕಿರಿಯ ತಮ್ಮನ ಕೈಲಿತ್ತರು. ಅವನು ಅದನ್ನು ಭದ್ರವಾಗಿಡಲು ತೋಟದಲ್ಲಿ ಹೂತಿಟ್ಟಿದ್ದ. ನಂತರ ಆತನೂ ಬಂಧಿತನಾದ. ಬಿಡುಗಡೆಯಾಗಿ ಬಂದ ಮೇಲೆ ಹೂತಿಟ್ಟ ಒಡವೆ, ಕಾಸು ಅಲ್ಲಿರಲಿಲ್ಲ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ ಹುಚ್ಚನಾದ. ತಪ್ಪೇಲಿಯ ಶೋಧಕ್ಕಾಗಿ ಸಮೀಪದ ಮನೆಯ ಶಿವಪ್ಪ ಮತ್ತು ಆತನ ಹೆಂಡತಿ ದೇವಿಯನ್ನು ಪೊಲೀಸರು ಹಿಡಿದು ಹಿಂಸಿಸಿದರು. ಅವರು ತಮ್ಮ ಬಳಿ ಇಲ್ಲವೆಂದಾಗ, ಪೋಲಿಸರು ನಿರುಪಾಯವಾಗಿ ಅವರನ್ನು ಬಿಡುಗಡೆ ಮಾಡಿದರು.

ಎರಡು ವರ್ಷಗಳ ಜೈಲು ವಾಸದಿಂದ ನಾಗೇಶ ಹೆಗಡೆ ಅವರು ಬಿಡುಗಡೆಯಾಗಿ ಬಂದ ದಿನ ನಡುರಾತ್ರಿ ಬಾಗಿಲು ಬಡಿದ ಸಪ್ಪಳ. ಬಾಗಿಲು ತೆರೆದರೆ ದೇವಿ ಒಡವೆಯ ತಪ್ಪೇಲಿ ತಂದಿಟ್ಟಳು. ಎಲ್ಲರೂ ಜೈಲಿಗೆ ಹೋದ ನಂತರ ಒಮ್ಮೆ ಜೋರಾಗಿ ಸುರಿದ ಮಳೆಗೆ, ನೀರಿನಲ್ಲಿ ತಪ್ಪಲೆ ತೇಲಿಕೊಂಡು ಹೋಗುತ್ತಿರುವಾಗ, ಅದನ್ನು ತಂದು ಜತನದಿಂದ ಕಾಪಾಡಿಟ್ಟ ವಿಷಯ ತಿಳಿಸಿದಳು. ಖುಷಿಯಿಂದ ಹೆಗಡೆಯವರು ಬಂಗಾರದ ಸರವೊಂದನ್ನು ಆಕೆಯ ಕುತ್ತಿಗೆಗೆ ಹಾಕಿದಾಗ, ನನಗೆ ಇವೆಲ್ಲ ಆಗಿಬರದು, ನಿಮ್ಮ ಚಿನ್ನ ಇಟ್ಟುಕೊಂಡ ಮೇಲೆ ಒಂದು ದಿನವನ್ನೂ ಸುಖವಾಗಿ ಕಳೆಲಿಲ್ಲ. ಇದರಿಂದಾಗಿಯೇ ಗಂಡನನ್ನು ಕಳೆದುಕೊಂಡೆ, ಮತ್ತೆ ಇದನ್ನು ಇಟ್ಟುಕೊಂಡರೆ ನನ್ನ ಮಗನು ಬದುಕಿರಲಾರ ಎಂದಳು’.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ–ಸಿದ್ದಾಪುರ ಅವಳಿ ತಾಲ್ಲೂಕುಗಳಂತೆ. ಇಲ್ಲಿನ ಹಿರಿಯ ಜೀವಗಳಿಗೆ ಈ ಕಥೆ ಇಂದಿಗೂ ಮಾಸದ ನೆನಪು. ಇದರೊಂದಿಗೆ ಶಿರಸಿಯಲ್ಲಿ ನಡೆದ ಇನ್ನೊಂದು ಘಟನೆ ಕೂಡ ಚಿರಸ್ಥಾಯಿ. 1934ರ ಫೆಬ್ರುವರಿ 2ರಂದು ಶಿರಸಿಗೆ ಬಂದಿದ್ದ ಗಾಂಧೀಜಿಯವರನ್ನು ಸನ್ಮಾನಿಸಲಾಗಿತ್ತು. ಮಾರ್ಚ್‌ 1ರಂದು ಅವರು ಮತ್ತೆ ಶಿರಸಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಅದಕ್ಕೂ ಪೂರ್ವದಲ್ಲಿ ಅನೇಕಾರು ಬಾರಿ ಬಂದಿದ್ದನ್ನು ಹಿರಿಯರು ಸ್ಮರಿಸಿಕೊಳ್ಳುತ್ತಾರೆ. ಶಿರಸಿಯಲ್ಲಿ ಬಾಪುವಿನ ಹೆಜ್ಜೆ ಗುರುತುಗಳು ಲೆಕ್ಕವಿಲ್ಲದಷ್ಟು, ಆದರೆ, ದಾಖಲೆಯಲ್ಲುಳಿದಿದ್ದು ಬೆರಳೆಣಿಕೆಯಷ್ಟು.

ಬಾಪು ಬಗ್ಗೆಮತ್ತಷ್ಟು ಓದು:ವೈದ್ಯ ಗಾಂಧಿ!

ಶಿರಸಿಗೆ ಬಂದಿದ್ದ ಗಾಂಧೀಜಿ, ಈಗಿನ ಹಳೆ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಬಿಡಕಿಬೈಲಿನಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಆಗ ಅದು ಘಟ್ಟದ ಕೆಳಗಿನಿಂದ ಬರುತ್ತಿದ್ದ ಚಕ್ಕಡಿ ಗಾಡಿಗಳ ನಿಲುಗಡೆಯ ತಾಣ. ಅಲ್ಲಿಯೇ ಮುಖಂಡರೊಂದಿಗೆ ಚರ್ಚೆ, ಸಂವಾದ ಎಲ್ಲವೂ ನಡೆಯಿತು.

ನಂತರ, ಮಾರಿಕಾಂಬಾ ದೇವಾಲಯದ ಆಗಿನ ಅಧ್ಯಕ್ಷ ಎಸ್.ಎನ್. ಕೇಶವೈನ್ ಅವರು ಗಾಂಧೀಜಿಯನ್ನು ಮಾರಿಕಾಂಬಾ ದೇವಾಲಯಕ್ಕೆ ಕರೆದುಕೊಂಡು ಹೋದರು. ‘ಮಾರಿಕಾಂಬಾ ಜಾತ್ರೆಯಲ್ಲಿ ಪ್ರಾಣಿವಧೆ ನಿಷೇಧಿಸಬೇಕು, ದೇವಾಲಯದಲ್ಲಿ ಎಲ್ಲರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಬೇಕು, ಅಂದಾಗ ಮಾತ್ರ ನಾನು ದೇವಾಲಯಕ್ಕೆ ಬರುವೆ’ ಎಂಬ ಗಾಂಧೀಜಿಯವರ ವಿನಯಪೂರ್ವಕ ಕೋರಿಕೆಗೆ, ಕೇಶವೈನರು ಸಮ್ಮತಿಸಿದರು. ಕೇಶವೈನ್ ಈ ಮುಂಚಿನ ಯೋಜನೆ, ಗಾಂಧೀಜಿಯವರ ಬಾಯಿಂದಲೇ ಬಂದಾಗ ಅವರು ಸಂಭ್ರಮಿಸಿದರು.

ಅಂದಿನಿಂದ, ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಪ್ರಾಣಿವಧೆ ಸಂಪೂರ್ಣ ನಿಷೇಧಗೊಂಡಿದೆ. ಇಲ್ಲಿ ಕೋಣನನ್ನು ಎಣ್ಣೆ, ಹೂವು ಹಾಕಿ ಪೂಜಿಸುತ್ತಾರೆ.

ಗಾಂಧೀಜಿಗೊಂದು ಗುಡಿ

ಕಡೂರು ತಾಲೂಕಿನ ಒಂದು ಚಿಕ್ಕ ಗ್ರಾಮ ನಿಡಘಟ್ಟ. ಅಲ್ಲಿರುವ ಆಂಜನೇಯ ದೇವಾಲಯ ಬಹು ಪ್ರಸಿದ್ಧಿ. ಕೃಷಿ ಬದುಕಿನ-ಸುಸಂಸ್ಕೃತ ಗ್ರಾಮವಾದ ಅಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಗುಡಿಯಿದೆ.

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮತ್ತು ಭಾರತೀಯರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿ ಅಹಿಂಸಾ ತತ್ವವನ್ನು ಪ್ರತಿಪಾದಿಸಿದ ಗಾಂಧೀಜಿಯವರ ಪ್ರಭಾವ ಆಗಿನ ಕಡೂರಿನಲ್ಲಿ ಬಹಳಷ್ಟು ಪರಿಣಾಮ ಬೀರಿತ್ತು. ಗ್ರಾಮೀಣ ಭಾಗದಲ್ಲಿಯೂ ಸ್ವಾತಂತ್ರ್ಯ ಚಳುವಳಿಯ ವಿಚಾರಗಳು ಚರ್ಚಿತವಾಗುತ್ತಿದ್ದವು. ಗಾಂಧೀಜಿ ಬಗ್ಗೆ ನಿಢಘಟ್ಟ ಗ್ರಾಮದ ಜನತೆಯ ಅಭಿಮಾನ ಎಷ್ಟಿತ್ತೆಂದರೆ ಅವರಿಗಾಗಿ ದೇಗುಲವನ್ನೇ ಕಟ್ಟಿದರು.

1948 ಫೆಬ್ರವರಿ 22 ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪ್ರೊ.ಕೆ.ಟಿ ಭಾಷ್ಯಂ ಅಯ್ಯಂಗಾರ್ ಈ ದೇಗುಲದ ಉದ್ಘಾಟನೆ ನೆರವೇರಿಸಿದ್ದರು. ಆ ಸಮಯದಲ್ಲಿ ದೇಶ ಸ್ವತಂತ್ರವಾಗಿದ್ದರೂ ಆ ಕಾವು ಇಳಿದಿರಲಿಲ್ಲ. ಅಂದಿನಿಂದ ಇಂದಿನವರೆಗೂ ಪ್ರತಿದಿನವೂ ಇಲ್ಲಿ ಗಾಂಧೀಜಿಯವರಿಗೆ ಪೂಜೆ ಸಲ್ಲುತ್ತಿದೆ. ಸುಮಾರು 2 ಅಡಿ ಎತ್ತರವಿರುವ ಗಾಂಧೀಜಿ ವಿಗ್ರಹ ಒಂದು ಚಿಕ್ಕ ಗುಡಿಯಲ್ಲಿದೆ. 50ರ ದಶಕದಲ್ಲಿ ಜನಾಕರ್ಷಣೆಯ ಕೇಂದ್ರವಾಗಿದ್ದ ಈ ಗುಡಿಗೆ ಪ್ರಸಿದ್ಧವ್ಯಕ್ತಿಗಳು ಭೇಟಿ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಇಂದಿರಾಗಾಂಧಿ ಸಹ ಈ ಮಹಾತ್ಮನ ಗುಡಿಗೆ ಭೇಟಿ ಕೊಟ್ಟಿದ್ದರು.

ಗಾಂಧಿ ತತ್ವಗಳನ್ನು ಪಾಲಿಸುವ ಪ್ರಯತ್ನ ಇಲ್ಲಿ ನಿರಂತರವಾಗಿದೆ. ಇಂದಿಗೂ ಈ ಗ್ರಾಮ ಮಧ್ಯಪಾನಮುಕ್ತವಾಗಿದೆ. ಗಾಂಧೀಜಿ ಸದಾ ಬಯಸುತ್ತಿದ್ದ ಸ್ವಚ್ಚತೆ ಇಲ್ಲಿದೆ.1927 ಆಗಸ್ಟ್ 18 ರಂದು ಗಾಂಧೀಜಿಯವರು ಕಡೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವರಾಜ್ಯ ಸಂದೇಶ ನೀಡಿದ್ದರು.

ಹುಬ್ಬಳ್ಳಿಯಲ್ಲಿ ಚಿತಾಭಸ್ಮ ಸ್ಮಾರಕ

ಗಾಂಧೀಜಿ ನೆನಪಿನ ಸ್ಮಾರಕ ಈಗಲೂ ಬಿಡಕಿಬೈಲಿನಲ್ಲಿದೆ. ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳ ಪ್ರಮುಖರು ಧರಣಿ, ಹೋರಾಟ ಆರಂಭಿಸುವ ಮುಂಚೆ ಗಾಂಧಿ ಪ್ರತಿಮೆಗೆ ಹಾರ ಹಾಕಿ, ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಒಳಿತು, ಕೆಡಕುಗಳಿಗೆ ಮೌನ ಸಾಕ್ಷಿಯಾಗಿದ್ದಾರೆ ಸಂತೆ ಮಾರ್ಕೆಟ್ ಬಯಲಿನಲ್ಲಿರುವ ಈ ಗಾಂಧಿ ಅಜ್ಜ!

ಗಾಂಧೀಜಿ ಹಾಗೂ ದಲಿತಕೇರಿಗೆ ಅವಿನಾಭಾವ ಸಂಬಂಧವಿದೆ. ಅವರೊಂದಿಗೆ ನೇರ ಸಂಪರ್ಕವಿರದ್ದರೂ ಗಾಂಧೀಜಿ ಅವರ ತತ್ವ, ಆದರ್ಶಗಳ ಪ್ರಭಾವ ಮಾತ್ರ ದೇಶದ ಮೂಲೆ ಮೂಲೆಗಳಲ್ಲಿರುವ ಎಲ್ಲ ನಾಗರಿಕ ಮೇಲೆಯೂ ಆಗಿತ್ತು. ಅಂತಹ ಅಭಿಮಾನ, ಪ್ರೀತಿ, ಶ್ರದ್ಧೆ ಗಾಂಧೀಜಿ ಬದುಕಿದ್ದಾಗಲೂ ಇತ್ತು, ಅವರು ಹುತಾತ್ಮರಾದಾಗಲೂ ಇತ್ತು. ಹೀಗಾಗಿಯೇ ರಾಷ್ಟ್ರ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಅವರ ಚಿತಾಭಸ್ಮದ ಕರಂಡಿಕೆಯನ್ನಿಟ್ಟು ಸ್ಮಾರಕ ನಿರ್ಮಾಣ ಮಾಡಲಾಯಿತು. ಹುಬ್ಬಳ್ಳಿಯಲ್ಲಿ ಇನ್ನಷ್ಟು ವಿಶೇಷ ಎನ್ನುವಂತೆ ಎರಡು ಕಡೆಗಳಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕವಿದೆ. ಹಳೇ ಹುಬ್ಬಳ್ಳಿ, ಅಯೋಧ್ಯಾನಗರದ ದಲಿತಕೇರಿಯಲ್ಲಿ ಹಾಗೂ ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕ ಮಂದಿರಗಳಿವೆ.

ಆದರೆ ಗಾಂಧೀಜಿ ಚಿತಾಭಸ್ಮ ಸ್ಮಾರಕ ಮಂದಿರ ದಲಿತಕೇರಿಯಲ್ಲಿ ಇರುವುದು ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರವೇ ಎನ್ನುತ್ತಾರೆ ಇಲ್ಲಿನ ಸಮಗಾರ ಸಮಾಜದ ಹಿರಿಯರು. ‘ಬಹುಶಃ ನಮಗೆ ತಿಳಿದಂತೆ ದಲಿತಕೇರಿಯಲ್ಲಿ ಗಾಂಧೀಜಿಯವರ ಚಿತಾಭಸ್ಮ ಇಟ್ಟು ಸ್ಮಾರಕ ನಿರ್ಮಿಸಿದ ಉದಾಹರಣೆ ರಾಜ್ಯದ ಯಾವ ಮೂಲೆಯಲ್ಲೂ ಇಲ್ಲ. ಹುಬ್ಬಳ್ಳಿಯ ಬಡಗಿ ಭದ್ರಾಪುರ ಹಾಗೂ ರಾಜಪ್ಪ ಕಲ್ಲಪ್ಪ ಅರಕೇರಿ ಎಂಬ ನಮ್ಮ ಸಮಾಜದ ಹಿರಿಯರು ಮಹಾತ್ಮರ ಮೇಲಿನ ಅಭಿಮಾನದಿಂದ ದೆಹಲಿಯ ರಾಜಘಾಟ್‌ಗೆ ಹೋಗಿ ಚಿತಾಭಸ್ಮ ಕರಂಡಿಕೆ ತಂದು, ಗಾಂಧೀಜಿ ಪುತ್ಥಳಿ ಮಾಡಿಸಿ ಅದರ ಕೆಳಗಡೆ ಇಟ್ಟು ಗೌರವ ಸಲ್ಲಿಸಿದ್ದಾರೆ’ ಎನ್ನುತ್ತಾರೆ ಮಹಾತ್ಮಾಗಾಂಧಿ ಸಮಗಾರ ಸೇವಾ ಯುವಕ ಸಂಘ, ಶಿವಶರಣ ಹರಳಯ್ಯ (ಸಮಗಾರ) ಸಮಾಜ ಪಂಚ ಕಮಿಟಿಯ ಕಾರ್ಯದರ್ಶಿ ಮಂಜುನಾಥ ಅರಕೇರಿ.

ಆರಂಭದಲ್ಲಿ ಹೆಂಚಿನಮಾಡಿನ ಪುಟ್ಟ ಗುಡಿಸಲಿನಂತಿದ್ದ ಈ ಸ್ಮಾರಕ ಮಂದಿರವನ್ನು ಸಂಸದರ (ಪ್ರಹ್ಲಾದ ಜೋಶಿ)ಅನುದಾನದಲ್ಲಿ ದೊಡ್ಡದಾಗಿ ಕಟ್ಟಲಾಯಿತು. ಮೊದಲ ಮಹಡಿಯಲ್ಲಿ ಅಂಗನವಾಡಿಯನ್ನು ನಡೆಸಲಾಗುತ್ತಿದೆ. ನೆಲ ಮಹಡಿಯ ಸಭಾಂಗಣವನ್ನು ವಿವಿಧ ರಾಜಕೀಯ ಪಕ್ಷಗಳು ಕಿರು ಸಭೆ, ಸಮಾರಂಭಗಳಿಗೆ ಬಳಸುತ್ತಿದ್ದಾರೆ. ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ,ಅಂಬೇಡ್ಕರ್‌ ಜಯಂತಿ, ಗಾಂಧಿ ಜಯಂತಿ ಇತ್ಯಾದಿ ಆಚರಣೆ ಮಾಡಲಾಗುತ್ತದೆ.

ಮಹಿಳಾ ವಿದ್ಯಾಪೀಠ:ಹುಬ್ಬಳ್ಳಿಯ ಇನ್ನೊಂದು ಪ್ರಮುಖ ಸ್ಥಳದಲ್ಲಿ ಗಾಂಧಿ ಚಿತಾಭಸ್ಮ ಸ್ಮಾರಕವಿದೆ. ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿ 1948ರಲ್ಲಿ ಚಿತಾಭಸ್ಮದ ಕರಂಡಿಕೆ ತಂದು ಮಹಾತ್ಮಾಗಾಂಧಿ ಪ್ರಾರ್ಥನಾ ಮಂದಿರದಲ್ಲಿಟ್ಟು ಗೌರವ ಸಲ್ಲಿಸಲಾಗಿದೆ.

ಮಹಿಳಾ ವಿದ್ಯಾಪೀಠದ ಸ್ಥಾಪಕರಾದ ಸರ್ದಾರ್ ವೀರನಗೌಡ ಪಾಟೀಲ ಹಾಗೂ ನಾಗಮ್ಮ ಪಾಟೀಲ (ಸ್ವಾತಂತ್ರ್ಯ ಹೋರಟಗಾರ್ತಿ, ಬಾಂಬೇ ಕರ್ನಾಟಕದ ಮೊದಲ ಶಾಸಕಿ)ಅವರಿಗೆ ಗಾಂಧೀಜಿ ಅವರ ಮೇಲೆ ಅಪರಿಮಿತ ಗೌರವ. ಮಹಾತ್ಮರ ಮಾರ್ಗದರ್ಶನದಿಂದಲೇ ದಲಿತ ಮಕ್ಕಳಿಗೆ ಪಾಠಶಾಲೆ ಆರಂಭಿಸುವ ಕೆಲಸವನ್ನು 1934ರಲ್ಲಿಯೇ ಆರಂಭಿಸುತ್ತಾರೆ. ಬಳಿಕ ಮಹಿಳಾ ವಿದ್ಯಾಪೀಠ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸ್ನಾತಕೋತ್ತರ ತರಗತಿಗಳಿಂದಾಗಿ ಈಗ ಹೆಮ್ಮರವಾಗಿ ಬೆಳೆದಿದೆ.

‘ನಮ್ಮ ಅಪ್ಪ–ಅಮ್ಮನಿಗೆ ಗಾಂಧೀಜಿ ಅವರ ಮೇಲೆ ಬಹಳ ಪ್ರೀತಿ, ಅಭಿಮಾನ. ಹೀಗಾಗಿಯೇ ನಮ್ಮ ತಂದೆಯವರನ್ನು ಹರಿಜನ ಸೇವಾ ಸಂಘದ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಮಹಾತ್ಮರ ಸಲಹೆ, ಆಶೀರ್ವಾದದಿಂದ ಇಲ್ಲಿ ‘ಹರಿಜನ ಬಾಲಿಕಾಶ್ರಮ’ ಪ್ರಾರಂಭಿಸಿ ದಲಿತ ಮಕ್ಕಳಿಗೆ ಪಾಠ, ವಸತಿ ಆರಂಭಿಸಲಾಗುತ್ತದೆ. ದಾನಿಗಳ ನೆರವಿನಿಂದ ಮುಂದೆ ಪ್ರಾಥಮಿಕ, ಪ್ರೌಢಶಾಲೆ, ಪದವಿ, ಸ್ನಾತಕೋತ್ತರ ಕೇಂದ್ರ, ಐಟಿಐ, ನರ್ಸಿಂಗ್‌ ಕೋರ್ಸ್, ಡಿಇಡಿ, ವಸತಿಯುಕ್ತ ಶಿಕ್ಷಣ ಸೌಲಭ್ಯದವರೆಗೆ ವಿಸ್ತರಿಸಲಾಯಿತು. ಅದೇ ಮುಂದೆ ಮಹಿಳಾ ವಿದ್ಯಾಪೀಠವಾಗಿ ಹೆಸರಾಗುತ್ತದೆ. 1948ರಲ್ಲಿ ಗಾಂಧೀಜಿ ತೀರಿಕೊಂಡಾಗ ಅವರ ಚಿತಾಭಸ್ಮದ ಕರಂಡಿಕೆ ತಂದು ಪ್ರಾರ್ಥನಾ ಮಂದಿರದಲ್ಲಿ ಇಡಲಾಯಿತು. ಈಗಲೂ ನಮ್ಮ ಅನಾಥಾಶ್ರಮದ ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ಪ್ರಾರ್ಥನೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ’ ಎನ್ನುತ್ತಾರೆ ಸಂಸ್ಥಾಪಕರ ಪುತ್ರಿ, ಮಹಿಳಾ ವಿದ್ಯಾಪೀಠದ ಟ್ರಸ್ಟಿ ಅಮಲಾ ಕಡಗದ ಅವರು.

ಗಾಂಧಿ ಬದುಕಿನ ಅನಾವರಣ

ಎಷ್ಟೂ ಬಗೆದರೂ ಗಾಂಧಿ ಸಿಗುತ್ತಲೇ ಹೋಗುತ್ತಾರೆ. ಎಷ್ಟು ನೋಡಿದರೂ ಗಾಂಧಿಯನ್ನು ನೋಡುತ್ತಲೇ ಹೋಗಬೇಕು ಎನ್ನಿಸುತ್ತದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಫೆಡರೇಷನ್‌ನ ಸಭಾಂಗಣದಲ್ಲಿ ಮೊಗೆದಷ್ಟೂ ಗಾಂಧಿ ಸಿಗುತ್ತಾರೆ. ಇಲ್ಲಿ ಅವರ ಬದುಕೇ ಅನಾರವಣಗೊಂಡಿದೆ.

ಬೊಚ್ಚು ಬಾಯಿಯ ಗಾಂಧಿ ಚಿತ್ರ ನೋಡಿದ್ದೇವೆ. ನಾಲ್ಕೈದು ಹಲ್ಲುಗಳಷ್ಟೇ ಇರುವ ಗಾಂಧಿಯ ನಗು ನೋಡಲು ಸಿಗುವುದು ಕಷ್ಟ. ಇಂಥ ವಿಶೇಷ ಫೋಟೊಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇವುಗಳನ್ನು ಒಮ್ಮೆಗೇ ಸಂಗ್ರಹಿಸಿಲ್ಲ. ಸ್ವಾತಂತ್ರ್ಯ ಯೋಧ ದಿವಂಗತ ವೆಂಕಟೇಶ ಮಾಗಡಿ ಅವರು ಇದನ್ನೆಲ್ಲ ಮಾಡಿ ಹೋಗಿದ್ದಾರೆ.

ದಕ್ಷಿಣಾ ಆಫ್ರಿಕಾದಲ್ಲಿ ಕಸ್ತೂರಿ ಬಾಯಿ ಅವರೊಂದಿಗೆ ನಿಂತಿರುವ ಗಾಂಧಿ, ಮಗುವಿನೊಂದಿಗೆ ಮಗುವಾಗಿರುವುದು, ಗುಂಡೇಟು ತಿಂದು ಬುದ್ಧನಂತೆ ಮಲಗಿರುವ ಗಾಂಧಿ, ಜೈಲು ಕಂಬಿಗಳ ಹಿಂದೆ, ದಂಡಿ ಮಾರ್ಚ್, ದಲಿತರ ಉದ್ಧಾರಕ್ಕಾಗಿ ಹಣ ಸಂಗ್ರಹ, ಇಂಗ್ಲೆಂಡ್‌ನಲ್ಲಿ ಭಾರತೀಯರ ಜತೆ, ಜವಾಹರಲಾಲ್‌, ವಿನೋಬಾ ಭಾವೆ, ರವೀಂದ್ರನಾಥ ಟ್ಯಾಗೋರ್‌, ರಾಜಕುಮಾರಿ ಅಮೃತ ಕೌರ್ ಜತೆ, ಬಿಹಾರದಲ್ಲಿ ನಡೆದ ಕೋಮು ಹಿಂಸಾಚಾರದ ಪ್ರದೇಶದಲ್ಲಿ, ನೌಕಾಲಿಗೆ ಹೋಗಲು ರೈಲನ್ನೇರಿ ಕುಳಿತ ಗಾಂಧಿ... ಹೀಗೆ ನೂರಕ್ಕೂ ಹೆಚ್ಚು ಚಿತ್ರಗಳು ಗಮನ ಸೆಳೆಯುತ್ತವೆ. ಗಾಂಧಿ ಆಸಕ್ತರು ನೋಡಲೇಬೇಕಾದ ಸ್ಥಳ ಇದಾಗಿದೆ.


ಬಾಪು ಬಗ್ಗೆಇನ್ನಷ್ಟು

ಬಾಪು ನೆನಪು ಕಟ್ಟಿಕೊಟ್ಟವರು

ಈರಪ್ಪ ಹಳಿಕಟ್ಟಿ, ಚಿಕ್ಕಬಳ್ಳಾಪುರ
ಡಿ.ಬಿ.ನಾಗರಾಜ, ವಿಜಯಪುರ
ಪ್ರಕಾಶ ಕುಗ್ವೆ, ದಾವಣಗೆರೆ
ಶ್ರೀಕಾಂತ ಕಲ್ಲಮನವರ್, ಬೆಳಗಾವಿ
ಕೆ.ನರಸಿಂಹಮೂರ್ತಿ, ಬಳ್ಳಾರಿ
ಹನಮಂತಕೊಪ್ಪದ, ಮೈಸೂರು
ಸೋಮಣ್ಣ, ಪೊನ್ನಂಪೇಟೆ
ರಾಮಕೃಷ್ಣ ಸಿದ್ರಪಾಲ, ಹುಬ್ಬಳ್ಳಿ
ಸಂಧ್ಯಾ ಹೆಗಡೆ ಆಲ್ಮನೆ, ಶಿರಸಿ
ಹರ್ಷವರ್ಧನ ಪಿ.ಆರ್‌.,ಹಾವೇರಿ
ಸಿ.ಕೆ.ಮಹೇಂದ್ರ, ಹುಬ್ಬಳ್ಳಿ
ನಟರಾಜ ನಾಗಸಂದ್ರ, ದೊಡ್ಡಬಳ್ಳಾಪುರ
ಬಾಲು ಮಚ್ಚೇರಿ, ಕಡೂರು

ಗಾಂಧಿ ವಿಶೇಷ ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT