ಬಾರಾಮತಿ: ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟವು ಮುಂದಿನ 8–10 ದಿನಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ’ ಎಂದು ಎನ್‌ಸಿಪಿ (ಶರದ್ ಬಣ) ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದರು.
ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ತಾಲ್ಲೂಕಿನಲ್ಲಿಯೂ ಸಮೀಕ್ಷೆ ನಡೆಸಲಾಗುತ್ತಿದೆ. ಯಾರಿಗೆ ಗೆಲ್ಲುವ ಸಾಮರ್ಥ್ಯ ಇದೆಯೊ ಅವರಿಗೆ ಮಾತ್ರವೇ ಟಿಕೆಟ್ ನೀಡಲಾಗುತ್ತದೆ’ ಎಂದರು.
‘ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿಯಲ್ಲಿಯೇ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಿಧಾನಸಭೆ ಚುನಾವಣೆಯಲ್ಲಿಯೂ ಗೆಲುವಿಗೆ ಶ್ರಮಿಸಬೇಕು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಏನೇ ಆದರೂ ನಾವು ಗೆಲ್ಲಲೇಬೇಕಿದೆ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
‘ನಮ್ಮನ್ನು ಬಿಟ್ಟು ಬೇರೆ ಪಕ್ಷಗಳಿಗೆ ಹೋದವರಲ್ಲಿ ಯಾರೂ ಈ ಬಾರಿ ಗೆಲುವುದಿಲ್ಲ. ಪಕ್ಷದ ನಾಯಕರು ಏನೇ ಮಾಡಲಿ, ಕಾರ್ಯಕರ್ತರು ಮಾತ್ರ ಜನರೊಂದಿಗೆ ನಿಲ್ಲಬೇಕು’ ಎಂದರು.
‘ಜಾರ್ಖಂಡ್: ಎಲ್‌ಜೆಪಿ ಸ್ಪರ್ಧೆ’
ರಾಂಚಿ (ಪಿಟಿಐ): ‘ಜಾರ್ಖಂಡ್‌ನ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ. ಆದರೆ, ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕೇ ಅಥವಾ ಮೈತ್ರಿ ಮಾಡಿಕೊಳ್ಳಬೇಕೇ ಎನ್ನುವುದರ ಕುರಿತು ಚರ್ಚಿಸಲಾಗುತ್ತಿದೆ’ ಎಂದು ಎಲ್‌ಜೆಪಿ ಅಧ್ಯಕ್ಷ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್
ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಾರ್ಖಂಡ್, ನಾನು ಹುಟ್ಟಿದಾಗ ಬಿಹಾರದ್ದೇ ಭಾಗವಾಗಿತ್ತು. ಈ ಭೂಮಿಯು ನನ್ನ ತಂದೆಯವರ ಕಾರ್ಯಸ್ಥಾನವಾಗಿತ್ತು. ರಾಜ್ಯದಲ್ಲಿ ಪಕ್ಷಕ್ಕೆ ಗಟ್ಟಿ ನೆಲೆಯಿದೆ. ಇದೇ ಕಾರಣಕ್ಕಾಗಿಯೇ, ಪಕ್ಷವು ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧರಿಸಿದೆ’ ಎಂದರು.