ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಪಿ ಶರದ್ ಪವಾರ್ ಬಣದ ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆ ಅನಾವರಣ

Published 24 ಫೆಬ್ರುವರಿ 2024, 9:15 IST
Last Updated 24 ಫೆಬ್ರುವರಿ 2024, 9:15 IST
ಅಕ್ಷರ ಗಾತ್ರ

ಮುಂಬೈ: ‍ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)–ಶರದ್‌ಚಂದ್ರ ಪವಾರ್ ಬಣದ ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಪಕ್ಷದ ಹಿರಿಯ ಮುಖಂಡ ಶರದ್ ಪವಾರ್ ಅವರು ಇಂದು (ಶನಿವಾರ) ಅನಾವರಣಗೊಳಿಸಿದ್ದಾರೆ.

ರಾಯಗಡ ಕೋಟೆಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದ ಜನರ ಹೊಸ ಸರ್ಕಾರವನ್ನು ಜಾರಿಗೆ ತರಲು ಹೋರಾಟ ನಡೆಸಬೇಕಾಗಿದೆ. ಆದ್ದರಿಂದ ಸಮಾಜದ ಎಲ್ಲಾ ವರ್ಗದ ಜನರು ಒಟ್ಟಾಗಿ ಸೇರಿ ‘ಕಹಳೆ ಚಿಹ್ನೆ’ಯನ್ನು ಬಲಪಡಿಸಬೇಕು. ಜನರ ಶ್ರೇಯೋಭಿವೃದ್ಧಿ ಮತ್ತು ಉನ್ನತಿಗಾಗಿ ಶ್ರಮಿಸುವ ಸರ್ಕಾರಕ್ಕಾಗಿ ಹೊಸ ಹೋರಾಟವನ್ನು ಪ್ರಾರಂಭಿಸಲು ತಮ್ಮ ಪಕ್ಷ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ‘ಕಹಳೆ’ ಸಂತೋಷವನ್ನು ತರಲಿದೆ ಎಂದಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಎನ್‌ಸಿಪಿಯ ಶರದ್‌ಚಂದ್ರ ಪವಾರ್ ಬಣಕ್ಕೆ ಗುರುವಾರ ಚಿಹ್ನೆಯನ್ನು ಹಂಚಿಕೆ ಮಾಡಿತ್ತು.

‘ಪಕ್ಷದ ಅಭ್ಯರ್ಥಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಹೊಸ ಚಿಹ್ನೆಯಡಿ ಸ್ಪರ್ಧಿಸುವರು’ ಎಂದು ಶರದ್‌ಚಂದ್ರ ಪವಾರ್ ಬಣದ ಪಕ್ಷ ವಕ್ತಾರ ಕ್ಲೈಡ್‌ ಕ್ರಾಸ್ಟೊ ತಿಳಿಸಿದ್ದಾರೆ.

ನೂತನ ಚಿಹ್ನೆ ಕುರಿತು ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಪಕ್ಷ, ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಕೊಟ್ಟಿರುವುದು ಪಕ್ಷದ ಪಾಲಿಗೆ ದೊಡ್ಡ ಗೌರವ. ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಸಂಕೇತವೂ ಆಗಿದೆ. ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿರುವವರನ್ನು ಅಧಿಕಾರದಿಂದ ಕೆಳಗಿಳಿಸಲು ಶರದ್‌ ನಾಯಕತ್ವದಲ್ಲಿ ಕಹಳೆ ಮೊಳಗಲಿದೆ’ ಎಂದೂ ಪೋಸ್ಟ್‌ ಮಾಡಿದೆ.

2023ರ ಜುಲೈನಲ್ಲಿ ಶರದ್‌ ಪವಾರ್‌ ಅವರ ಸೋದರ ಸಂಬಂಧಿ ಅಜಿತ್‌ ಪವಾರ್‌ ಅವರು ತಮ್ಮ ಬೆಂಬಲಿಗರೊಂದಿಗೆ ಶಿವಸೇನಾ– ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾಗಿ, ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ, ಅಜಿತ್‌ ಹಾಗೂ ಶರದ್‌ ಅವರ ಬಣಗಳು ವಿರೋಧಿ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದವು.

ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗವು ಫೆಬ್ರುವರಿ 6ರಂದು ಆದೇಶ ನೀಡಿತ್ತು. ಇದು ಎನ್‌ಸಿಪಿ ಸಂಸ್ಥಾಪಕರೂ ಆಗಿರುವ ಶರದ್ ಪವಾರ್ ಅವರಿಗೆ ಎದುರಾದ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿತ್ತು. ಎನ್‌ಸಿಪಿಯ ‘ಗಡಿಯಾರ’ ಚಿಹ್ನೆಯನ್ನು ಚುನಾವಣಾ ಆಯೋಗವು ಅಜಿತ್ ಪವಾರ್ ಬಣಕ್ಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT