ಗುವಾಹಟಿ/ ನವದೆಹಲಿ: ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ತ್ರಿಪುರಾ ಮತ್ತು ಮಣಿಪುರದಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಪರಿಸ್ಥಿತಿ ಮುಂದುವರಿದಿದ್ದು, ಜನಜೀವನ ತತ್ತರಿಸಿದೆ. ಮಳೆ ಸಂಬಂಧಿ ಅವಘಡಗಳಿಂದ ಕಳೆದ ಎರಡು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿದೆ.

ಅಸ್ಸಾಂನಲ್ಲಿ ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ ಪ್ರಮುಖ 10 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 15 ಜಿಲ್ಲೆಗಳಲ್ಲಿ 78 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಮತ್ತು ಭೂ ಕುಸಿತದ ಪರಿಣಾಮ ರಸ್ತೆ, ರೈಲು ಮತ್ತು ದೋಣಿ ಸಾರಿಗೆಯಲ್ಲಿ ವ್ಯತ್ಯಯಗಳು ಉಂಟಾಗಿವೆ.

ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ರಾಜ್ಯದಲ್ಲಿ ಕಟ್ಟೆಚ್ಚರವಹಿಸುವಂತೆ ಸೂಚನೆ ನೀಡಿದೆ.

ಸಾವು– ನೋವು:

ಮಳೆ ಮತ್ತು ಮಳೆ ಸಂಬಂಧಿ ಅವಘಡಗಳಿಂದ ಅಸ್ಸಾಂನಲ್ಲಿ ಇಲ್ಲಿಯವರೆಗೆ ಎಂಟು ಜನರು ಮೃತಪಟ್ಟಿದ್ದಾರೆ. ಭೂಕುಸಿತದಿಂದ ಐವರು ಮೃತಪಟ್ಟಿದ್ದರೆ, ಪ್ರವಾಹಕ್ಕೆ ಸಿಲುಕಿ ಮೂವರು ಅಸುನೀಗಿದ್ದಾರೆ ಎಂದು ಅಸ್ಸಾಂ ರಾಜ್ಯದ ವಿಪತ್ತು ನಿಯಂತ್ರಣಾ ಪ್ರಾಧಿಕಾರ ತಿಳಿಸಿದೆ.

ಅರುಣಾಚಲ ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಭೂಕುಸಿತದಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಸಿಕ್ಕಿಂ ರಾಜ್ಯದಲ್ಲಿ ವಿವಿಧೆಡೆ ಭೂಕುಸಿತ ಸಂಭವಿಸಿದ್ದು, ಹಲವೆಡೆ ರಸ್ತೆಗಳು ಬಂದ್ ಆಗಿವೆ. ಇದರ ಪರಿಣಾಮ 1,500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ 883 ಮನೆಗಳಿಗೆ ಹಾನಿ:

ಮಣಿಪುರದಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಭೂ ಕುಸಿತದಿಂದ 883 ಮನೆಗಳಿಗೆ ಹಾನಿಯಾಗಿವೆ. ಅಲ್ಲದೆ 3,802 ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಂಚಾರ ವ್ಯತ್ಯಯ:

ಅಸ್ಸಾಂನ ಬರಾಯಿಗ್ರಾಮ್– ದುಲ್ಲಾಬ್ಚೆರಾ ವಿಭಾಗದಲ್ಲಿ ಹಳಿಗಳ ಮೇಲೆ ನೀರು ಹರಿಯುತ್ತಿದೆ. ಇದರಿಂದ ದುಲ್ಲಾಬ್ಚೆರಾ–ಸಿಲ್ಚಾರ್ ನಡುವಿನ ಎರಡು ಪ್ರಯಾಣಿಕ ರೈಲುಗಳು ಮತ್ತು ಬದರ್ಪುರ್–ದುಲ್ಲಾಬ್ಚೆರಾ–ಬದರ್ಪುರ್ ಪ್ರಯಾಣಿಕ ರೈಲುಗಳ ಸಂಚಾರವನ್ನು ಎರಡು ದಿನಗಳವರೆಗೆ ರದ್ದುಗೊಳಿಸಲಾಗಿದೆ. ಅಲ್ಲದೆ ಇನ್ನೂ ಕೆಲ ಮಾರ್ಗಗಳ ರೈಲು ಸಂಚಾರವನ್ನು ಮಂಗಳವಾರದವರೆಗೆ ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ (ಎನ್ಎಫ್ಆರ್) ವಕ್ತಾರರು ತಿಳಿಸಿದ್ದಾರೆ.

ಕಾಮರೂಪ ಜಿಲ್ಲೆಯ ಚಾಯಗಾಂವ್ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿ 17ರ ಒಂದು ಭಾಗ ಮುಳುಗಡೆಯಾಗಿದೆ. ಪರ್ಯಾಯ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ರಹ್ಮಪುತ್ರ ನದಿ ನೀರಿನ ಮಟ್ಟ ಏರಿಕೆ ಆಗುತ್ತಿರುವುದರಿಂದ ಜೋರ್ಹತ್ ಮತ್ತು ಮಜುಲಿ ನಡುವಿನ ದೋಣಿ ಸೇವೆಯನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

14 ಜನರ ರಕ್ಷಿಸಿದ ವಾಯುಪಡೆ

ತಿನ್ಸುಕಿಯಾ (ಅಸ್ಸಾಂ): ಅಸ್ಸಾಂ– ಅರುಣಾಚಲ ಗಡಿಯಲ್ಲಿ ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿರುವ ಬೊಮ್ಜಿರ್ ನದಿಯಲ್ಲಿ ಸಿಲುಕಿದ್ದ 14 ಮಂದಿಯನ್ನು ಭಾರತೀಯ ವಾಯುಪಡೆ (ಐಎಎಫ್) ಭಾನುವಾರ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ಸಿಲುಕಿದ್ದ ಅಸ್ಸಾಂನ 13 ಮತ್ತು ಅರುಣಾಚಲ ಪ್ರದೇಶದ ಒಬ್ಬರನ್ನು ವಾಯುಪಡೆಯು ಹೆಲಿಕಾಪ್ಟರ್ ನೆರವಿನಿಂದ ರಕ್ಷಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ ನೆರವು ಸಿಗಲಿದೆ: ಅಮಿತ್ ಶಾ

ನವದೆಹಲಿ: ಭಾರಿ ಮಳೆ ಪ್ರವಾಹ ಮತ್ತು ಭೂ ಕುಸಿತದಿಂದ ತತ್ತರಿಸಿರುವ ಅಸ್ಸಾಂ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮಣಿಪುರದ ರಾಜ್ಯಪಾಲರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಮಾತುಕತೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ‘ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವನ್ನು ನೀಡಲಿದೆ. ಮೋದಿ ನೇತೃತ್ವದ ಸರ್ಕಾರವು ಈಶಾನ್ಯ ರಾಜ್ಯಗಳ ಜನರ ಬೆಂಬಲಕ್ಕೆ ಬಂಡೆಯಂತೆ ನಿಲ್ಲಲಿದೆ’ ಎಂದು ಅಮಿತ್ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.