ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಬಿಐ, ನೀತಿ ನಿಯಮ ಸಮಿತಿ ಮುಂದೆ ಉತ್ತರಿಸಲು ಸಿದ್ಧ: ಮಹುವಾ ಮೊಯಿತ್ರಾ

Published 20 ಅಕ್ಟೋಬರ್ 2023, 10:17 IST
Last Updated 20 ಅಕ್ಟೋಬರ್ 2023, 10:17 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿಯೊಬ್ಬರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು, ಒಂದು ವೇಳೆ ವಿಚಾರಣೆಗೆ ಕರೆದರೆ ಸಿಬಿಐ ಅಥವಾ ಸದನದ ನೀತಿ ನಿಯಮ ಸಮಿತಿ ಮುಂದೆ ಹಾಜರಾಗಿ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

‘ವಿಚಾರಣೆಗೆ ಕರೆದರೆ ಬಿಜೆಪಿ ಸದಸ್ಯರೇ ಹೆಚ್ಚಿರುವ ಸಮಿತಿ ಮುಂದೆ ಹಾಜರಾಗುತ್ತೇನೆ. ಅದಾನಿ ನಿರ್ದೇಶಿತ ಮಾಧ್ಯಮ ಹಾಗೂ ಬಿಜೆಪಿಯ ಟ್ರೋಲ್‌ಗಳಿಗೆ ಉತ್ತರಿಸಲು ನನ್ನ ಬಳಿ ಸಮಯವಿಲ್ಲ. ನಾನು ನಾಡಿಯಾದಲ್ಲಿ ದುರ್ಗಾ ಪೂಜೆಯ ಸಂಭ್ರಮದಲ್ಲಿದ್ದೇನೆ. ಶುಭೋ ಶಾಂತಿ’ ಎಂದು ಮಹುವಾ ಮೊಯಿತ್ರಾ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ತನಿಖಾ ಸಮಿತಿ ರಚನೆ ಮಾಡಬೇಕು ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದರು.

ಅದಾನಿ ಸಮೂಹದ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಮಾಡಲು ಹೀರಾನಂದಾನಿ ಸಮೂಹದ ಸಿಇಒ ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಲಂಚ ಪಡೆದಿದ್ದರು. ಗೌತಮ್ ಅದಾನಿಯನ್ನು ಗುರಿಯಾಗಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಡುಕು ಹಾಗೂ ಮುಜುಗರ ಉಂಟು ಮಾಡಲು ಪ್ರಯತ್ನಿಸಿದ್ದರು ಎಂದು ದುಬೆ ಅವರು ಸ್ಪೀಕರ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೂರಿದ್ದಾರೆ.

ದುಬೆ ಅವರ ದೂರನ್ನು, ಸ್ಪೀಕರ್‌ ಓಂ ಬಿರ್ಲಾ ಅವರು ನೀತಿ ನಿಯಮ ಸಮಿತಿಗೆ ಒಪ್ಪಿಸಿದ್ದಾರೆ.

ಅರ್ಜಿ ಹಿಂಪಡೆಯಲು ಮಹುವಾ ನಿರ್ಧಾರ 

ನವದೆಹಲಿ: ಸಂಸದ ದುಬೆ ಹಾಗೂ ವಕೀಲ ಜೈಅನಂತ್‌ ದೇಹದ್ರಾಯ್ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ತಡೆ ಕೋರಿ ಸಂಸದೆ ಮಹುವಾ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ಆಕೆಯ ವಕೀಲರು ಶುಕ್ರವಾರ ಹೇಳಿದ್ದಾರೆ.

ಮಹುವಾ ಪರ ಹಾಜರಾದ ವಕೀಲ ಗೋಪಾಲ್ ಶಂಕರನಾರಾಯಣ ‘ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಸಂಸದೆಯು ಉದ್ಯಮಿಯಿಂದ ಲಂಚ ಪಡೆದಿದ್ದಾರೆ ಎಂದು ದೇಹದ್ರಾಯ್‌ ಸಿಬಿಐಗೆ ದೂರು ನೀಡಿದ್ದಾರೆ. ಇದನ್ನು ಹಿಂದಕ್ಕೆ ಪಡೆಯುವುದಾಗಿ ಅವರು ಒಪ್ಪಿದ್ದಾರೆ. ಇಬ್ಬರ ನಡುವಿನ ವಿವಾದದ ಇತ್ಯರ್ಥಕ್ಕೆ ತಾವು ಮಧ್ಯಸ್ಥಿಕೆವಹಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿದರು.

ವಕೀಲರ ಈ ಹೇಳಿಕೆ ಆಲಿಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಕ್ಷಣಕಾಲ ದಿಗಿಲುಗೊಂಡರು. ಬಳಿಕ ‘ಆಗಿದ್ದರೆ ವಾದಿಸಲು ನ್ಯಾಯಾಲಯಕ್ಕೆ ವಾದಿಸಲು ಏಕೆ ಬರಬೇಕಿತ್ತು’ ಎಂದು ಪ್ರಶ್ನಿಸಿದರು. ‘ದೇಹದ್ರಾಯ್ ವಕೀಲರ ಸಂಘದ ಸದಸ್ಯರಾಗಿದ್ದಾರೆ. ಹಿಂದೆ ಪ್ರಕರಣವೊಂದರಲ್ಲಿ ನನಗೆ ನೆರವಾಗಿದ್ದರು. ನನ್ನ ಕಕ್ಷಿದಾರರಾದ ಮಹುವಾ ಅವರ ಗಮನಕ್ಕೂ ಇದನ್ನು ತಂದಿದ್ದೇನೆ. ಅವರ ಒಪ್ಪಿಗೆ ಸೂಚಿಸಿದ ಬಳಿಕ ಮಧ್ಯಸ್ಥಿಕೆಗೆ ನಿರ್ಧರಿಸಿದೆ’ ಎಂದರು.

‘ಅಲ್ಲದೇ ಈ ಕುರಿತು ದೇಹದ್ರಾಯ್‌ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿದ್ದನ್ನು ಆಡಿಯೊ ರೆಕಾರ್ಡಿಂಗ್‌ ಮಾಡಿಕೊಂಡಿದ್ದೇನೆ’ ಎಂದರು. ‘ನೀವು ಮಧ್ಯಸ್ಥಿಕೆವಹಿಸುವುದಾದರೆ ಈ ಪ್ರಕರಣದಲ್ಲಿ ವಾದ ಮಂಡಿಸಲು ನಿಮಗೆ ಅರ್ಹತೆ ಇದೆಯೇ? ನಿಮ್ಮೊಳಗೆಯೇ ಈ ಪ್ರಶ್ನೆಗೆ ಉತ್ತರ ಕೊಂಡುಕೊಳ್ಳಬೇಕು’ ಎಂದು ಹೇಳಿದ ನ್ಯಾಯಮೂರ್ತಿ ಅವರು ಅಕ್ಟೋಬರ್‌ 31ಕ್ಕೆ ವಿಚಾರಣೆಯನ್ನು ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT