ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿ. ಅಟಾರ್ನಿ ಜನರಲ್, TN ರಾಜ್ಯಪಾಲರು ಏನು ಮಾಡುತ್ತಿದ್ದಾರೆ?: ಸುಪ್ರೀಂ ಕೋರ್ಟ್‌

ಡಿಎಂಕೆ ಮುಖಂಡ ಕೆ.ಪೊನ್ಮುಡಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿದ ನಂತರವೂ, ಸಚಿವರಾಗಿ ನೇಮಿಸಲು ನಿರಾಕರಿಸಿದ ರಾಜ್ಯಪಾಲರ ನಡೆಗೆ SC ತೀವ್ರ ಅಸಮಾಧಾನ
Published 21 ಮಾರ್ಚ್ 2024, 14:05 IST
Last Updated 21 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ನವದೆಹಲಿ: ಡಿಎಂಕೆ ಮುಖಂಡ ಕೆ.ಪೊನ್ಮುಡಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿದ ನಂತರವೂ, ಸಚಿವರಾಗಿ ನೇಮಿಸಲು ನಿರಾಕರಿಸಿದ ರಾಜ್ಯಪಾಲರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, 24 ಗಂಟೆಯೊಳಗಾಗಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ.

ಘೋಷಣೆಗಿಂತ ಹೆಚ್ಚಿನ ಆದಾಯ ಹೊಂದಿದ್ದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಮಾಜಿ ಸಚಿವ ಪೊನ್ಮುಡಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಪೊನ್ಮುಡಿಗೆ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೀಗಾಗಿ ಇವರಿಗೆ ಮರಳಿ ಸಚಿವ ಸ್ಥಾನ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇದು ಸಂವಿಧಾನದ ನೈತಿಕತೆಗೆ ವಿರುದ್ಧ ಎಂದಿದ್ದ ರಾಜ್ಯಪಾಲ ಆರ್.ಎನ್.ರವಿ, ಪ್ರಮಾಣ ವಚನ ಬೋಧಿಸಲು ನಿರಾಕರಿಸಿದ್ದರು. ಹೀಗಾಗಿ ಈ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸುಪ್ರೀಂ ಕೋರ್ಟ್‌ನ ಆದೇಶವನ್ನು ರಾಜ್ಯಪಾಲ ರವಿ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕುರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಮೂರು ನ್ಯಾಯಮೂರ್ತಿಗಳಿದ್ದ ಪೀಠವು ವಿಚಾರಣೆ ನಡೆಸಿತು. ‘ಪೊನ್ಮುಡಿ ಅವರಿಗೆ ಮರಳಿ ಸಚಿವ ಸ್ಥಾನ ನೀಡುವುದು ಸಂವಿಧಾನ ನೈತಿಕತೆಗೆ ಹೇಗೆ ವಿರುದ್ಧವಾಗಲಿದೆ’ ಎಂದು ಪೀಠವು ರಾಜ್ಯಪಾಲರನ್ನು ಕೇಳಿತು.

‘ಮಿಸ್ಟರ್ ಅಟಾರ್ನಿ ಜನಲರ್‌, ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ನಮಗೆ ತೀವ್ರ ಕಳವಳ ಉಂಟಾಗುತ್ತಿದೆ. ಇದನ್ನು ನಾವು ತೆರೆದ ನ್ಯಾಯಾಲಯದಲ್ಲಿ ಹೇಳಲು ಬಯಸುವುದಿಲ್ಲ. ಆದರೆ ಅವರು ಸುಪ್ರೀಂ ಕೋರ್ಟ್‌ ಅನ್ನು ಧಿಕ್ಕರಿಸುತ್ತಿದ್ದಾರೆ. ಅವರಿಗೆ ಯಾರು ಸಲಹೆ ನೀಡುತ್ತಿದ್ದಾರೋ, ಆ ಕೆಲಸವನ್ನು ಅವರು ಸರಿಯಾಗಿ ಮಾಡುತ್ತಿಲ್ಲ. ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಎಂದರೆ, ಅದು ತಡೆ ಎಂದೇ ಅರ್ಥ’ ಎಂದು ರಾಜಭವನ ಪರ ವಾದ ಮಂಡಿಸಿದ ಆರ್.ವೆಂಕಟರಮಣಿ ಅವರಿಗೆ ನ್ಯಾ. ಚಂದ್ರಚೂಡ್ ಕಟುವಾಗಿ ಹೇಳಿದರು.

ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ, ಮನೋಜ್ ಮಿಶ್ರಾ ಇದ್ದರು. 

‘ಒಂದೊಮ್ಮೆ ಶುಕ್ರವಾರದೊಳಗಾಗಿ ಈ ವಿಷಯದಲ್ಲಿ ಅವರ ನಿರ್ಣಯ ಹೇಳದಿದ್ದರೆ, ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುವಂತೆ ರಾಜ್ಯಪಾಲರಿಗೆ ನಿರ್ದೇಶಿಸುವುದು ಅನಿವಾರ್ಯವಾಗಲಿದೆ. ‌ಅದನ್ನು ಪೀಠ ಮಾಡಲಿದೆ’ ಎಂದು ಖಡಕ್ ಎಚ್ಚರಿಕೆ ನೀಡಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ತಮಿಳುನಾಡು ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ‘ಮುಖ್ಯಮಂತ್ರಿ ಅವರ ಶಿಫಾರಸನ್ನು ತಿರಸ್ಕರಿಸಿದ ರಾಜ್ಯಪಾಲರ ನಡೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಮಿ. ಅಟಾರ್ನಿ ಜನರಲ್, ನಿಮ್ಮ ರಾಜ್ಯಪಾಲರು ಏನು ಮಾಡುತ್ತಿದ್ದಾರೆ? ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಅವಕಾಶ ನೀಡುತ್ತಿಲ್ಲ. ಈ ಕುರಿತು ಗಂಭೀರ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಈ ವಿಷಯದಲ್ಲಿ ಗಂಭೀರ ಸ್ವರೂಪದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬುದನ್ನು ರಾಜ್ಯಪಾಲರಿಗೆ ಸರಿಯಾಗಿ ಹೇಳಿ’ ಎಂದು ಸೂಚನೆ ನೀಡಿತು.

‘ಪೊನ್ನುಮುಡಿಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ತಡೆ ನೀಡಿದೆ. ಆದರೆ, ತಡೆ ನೀಡಿರುವುದು ಶಿಕ್ಷೆಯ ರದ್ಧತಿ ಅಲ್ಲ ಎಂದು ಹೇಳಲು ರಾಜ್ಯಪಾಲರಿಗೆ ಯಾವುದೇ ಅಧಿಕಾರವಿಲ್ಲ. ಇದು ಯಾವುದೇ ಒಬ್ಬ ವ್ಯಕ್ತಿಯ ಗ್ರಹಿಕೆಗೆ ಸಂಬಂಧಿಸಿದ ವಿಷಯವಲ್ಲ. ಒಬ್ಬ ವ್ಯಕ್ತಿ ಕುರಿತು ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ ಇರಬಹುದು. ಆದರೆ ಅದು ಈ ವಿಷಯದಲ್ಲಿ ಅನ್ವಯಿಸದು. ಇಲ್ಲಿ ಏನಿದ್ದರೂ, ಸಂವಿಧಾನ ಮತ್ತು ಕಾನೂನನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ಸಚಿವರನ್ನಾಗಿ ನೇಮಿಸಿಕೊಳ್ಳುತ್ತೇನೆ ಎಂದು ಹೇಳಲು ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗೆ ಅಧಿಕಾರವಿದೆ. ರಾಜ್ಯಪಾಲ ಒಬ್ಬ ನಾಮಸೂಚಕ ಮುಖ್ಯಸ್ಥರಷ್ಟೇ. ಸಮಾಲೋಚನೆ ನಡೆಸಲಷ್ಟೇ ಅವರಿಗೆ ಅವಕಾಶವಿದೆ. ಅಷ್ಟು ಮಾತ್ರ’ ಎಂದು ಪೀಠ ಹೇಳಿತು.

ತಮಿಳುನಾಡು ಮನವಿಗೆ ವೆಂಕಟರಮಣಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ರಾಜ್ಯಪಾಲ ಸಂವಿಧಾನವನ್ನು ಪಾಲಿಸದಿದ್ದರೆ, ಸರ್ಕಾರವಾದರೂ ಏನು ಮಾಡಲು ಸಾಧ್ಯ?’ ಎಂದು ಖಾರವಾಗಿ ಪ್ರಶ್ನಿಸಿತು.

ಘೋಷಣೆಗಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪೊನ್ಮುಡಿ ಅವರ ಶಾಸಕ ಸ್ಥಾನವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ ಇವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದರ ಬೆನ್ನಲ್ಲೇ ಪೊನ್ನುಮುಡಿಗೆ ಮರಳಿ ಸಚಿವ ಸ್ಥಾನ ನೀಡಲು ರಾಜ್ಯಸರ್ಕಾರ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT