ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Sena vs Sena Update: ಶಿಂದೆ ಬಣವೇ ನಿಜವಾದ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್

Published 10 ಜನವರಿ 2024, 13:04 IST
Last Updated 10 ಜನವರಿ 2024, 13:04 IST
ಅಕ್ಷರ ಗಾತ್ರ

ಮುಂಬೈ: ಏಕನಾಥ ಶಿಂದೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಗಳು ಪರಸ್ಪರರ ವಿರುದ್ಧ ಸಲ್ಲಿಸಿರುವ ಶಾಸಕರ ಅನರ್ಹತೆ ಕುರಿತ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಬುಧವಾರ ಸಂಜೆ ಪ್ರಕಟಿಸಿದರು. 

ಶಿವಸೇನಾದ 55 ಶಾಸಕರ ಪೈಕಿ 37 ಶಾಸಕರ ಬೆಂಬಲ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಇದ್ದು, ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು ಸ್ಪೀಕರ್‌ ತೀರ್ಪು ನೀಡಿದರು. ಇದರಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. 

ಶಿವಸೇನಾದ ಎರಡೂ ಬಣಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಸಂಘಟನೆಯ ವಿಧಾನದಲ್ಲಿ ಯಾವುದೇ ಒಮ್ಮತವಿಲ್ಲ. ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಪರಿಗಣಿಸಬೇಕಾದ ಏಕೈಕ ಅಂಶವೆಂದರೆ ಶಾಸಕಾಂಗ ಪಕ್ಷದ ಬಹುಮತ ಎಂದು ನಾರ್ವೇಕರ್ ತೀರ್ಪಿನಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣವೇ ನಿಜವಾದ ಶಿವಸೇನಾ ಎಂದು ನಾರ್ವೇಕರ್ ಹೇಳಿದ್ದಾರೆ.

ನಾನು ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಜತೆಗೆ ನನಗೆ ಸಹಾಯ ಮಾಡಿದ ರಾಜ್ಯ ವಿಧಾನಮಂಡಲದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ. ಎರಡೂ ಕಡೆಯ ವಕೀಲರ ಸಹಕಾರವನ್ನು ನಾನು ಪ್ರಶಂಸಿಸುತ್ತೇನೆ ಎಂದು ನಾರ್ವೇಕರ್ ತಿಳಿಸಿದ್ದಾರೆ.

ನಾರ್ವೇಕರ್ ಅವರಿಗೆ ಆದೇಶ ಪ್ರಕಟಿಸುವುದಕ್ಕೆ ಸುಪ್ರೀಂ ಕೋರ್ಟ್‌ ಜನವರಿ 10ರ ಗಡುವು ನೀಡಿತ್ತು. ಆದೇಶ ತಮ್ಮ ವಿರುದ್ಧವಾಗಿ ಬಂದಲ್ಲಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಎರಡೂ ಬಣಗಳು ಸಿದ್ಧತೆ ನಡೆಸಿದ್ದವು. ನಾರ್ವೇಕರ್ ಅವರು 34 ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಎರಡೂ ಬಣಗಳು ಒಟ್ಟು 2.5 ಲಕ್ಷ ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದ್ದವು.

ಆದೇಶ ನೀಡುವ ಮೊದಲು ನಾರ್ವೇಕರ್ ಅವರು ಮುಖ್ಯಮಂತ್ರಿ ಶಿಂದೆ ಅವರನ್ನು ಭೇಟಿ ಮಾಡಿದ್ದು ಎಷ್ಟು ಸರಿ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

‘ನಾವು ಯಾವ ನ್ಯಾಯ ನಿರೀಕ್ಷಿಸಬಹುದು. ಸ್ಪೀಕರ್ ಅವರು ಮುಖ್ಯಮಂತ್ರಿ ಜೊತೆ ಎರಡು ಭಾರಿ ಸಭೆ ನಡೆಸಿದ್ದಾರೆ. ನಾನೂ ಮುಖ್ಯಮಂತ್ರಿ ಆಗಿದ್ದೆ. ಭೇಟಿಯಾಗಬೇಕು ಎಂದಿದ್ದರೆ, ಸ್ಪೀಕರ್‌ ಬಳಿ ಮುಖ್ಯಮಂತ್ರಿ ಹೋಗಬೇಕೇ ವಿನಾ ಮುಖ್ಯಮಂತ್ರಿ ಇದ್ದಲ್ಲಿ ಸ್ಪೀಕರ್ ಹೋಗಬಾರದು. ಆದರೆ ಇಲ್ಲಿ ಸ್ಪೀಕರ್ ಅವರೇ ಮುಖ್ಯಮಂತ್ರಿ ಇದ್ದಲ್ಲಿಗೆ ತೆರಳಿ ಸಭೆ ನಡೆಸುತ್ತಾರೆ’ ಎಂದು ಠಾಕ್ರೆ ಅವರು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ನಾರ್ವೇಕರ್ ಅವರು ಶಿಂದೆ ಅವರನ್ನು ಭೇಟಿ ಮಾಡುವುದು ‘ನ್ಯಾಯಾಧೀಶರೊಬ್ಬರು ಕ್ರಿಮಿನಲ್ ಅಪರಾಧ ಎಸಗಿದವನನ್ನು ಭೇಟಿಯಾಗುವುದಕ್ಕೆ ಸಮ’ ಎಂದು ಠಾಕ್ರೆ ಹೇಳಿದರು.

‘ಸ್ಪೀಕರ್ ಅವರು ನ್ಯಾಯಮಂಡಳಿ ಮುಖ್ಯಸ್ಥ ಇದ್ದಂತೆ... ನ್ಯಾಯಾಧೀಶನ ಸ್ಥಾನದಲ್ಲಿ ಇರುವವರು ಆದೇಶಕ್ಕೆ ಮೊದಲು ಅರ್ಜಿದಾರರೊಬ್ಬರನ್ನು ಭೇಟಿ ಮಾಡುವುದು ಎಷ್ಟು ಸರಿ... ಸಂವಿಧಾನದ ಹತ್ತನೆಯ ಪರಿಚ್ಛೇದದ ಅಡಿಯಲ್ಲಿ ನ್ಯಾಯ ನಿರ್ಣಯದ ಕೆಲಸ ಮಾಡುವ ಸ್ಪೀಕರ್ ನಿಷ್ಪಕ್ಷಪಾತದಿಂದ, ನ್ಯಾಯಸಮ್ಮತವಾಗಿ
ನಡೆದುಕೊಳ್ಳಬೇಕು ಎಂದು’ ಎಂದು ಶಿವಸೇನಾ (ಯುಬಿಟಿ) ಶಾಸಕ ಅನಿಲ್ ಪರಬ್ ಹೇಳಿದರು.

ಶಿಂದೆ ಮತ್ತು ಇತರ ಶಾಸಕರ ಬಂಡಾಯದ ನಂತರ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಸರ್ಕಾರವು ಉರುಳಿತ್ತು. ನಂತರ ಬಿಜೆಪಿ ಬೆಂಬಲದೊಂದಿಗೆ ಶಿಂದೆ ನೇತೃತ್ವದಲ್ಲಿ ಸರ್ಕಾರ ರಚನೆ ಆಯಿತು.

ಶಿವಸೇನಾ ಬಣ ಕಾದಾಟ: ಘಟನಾವಳಿ

2022

* 21 ಜೂನ್‌: ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯವೆದ್ದ ಏಕನಾಥ ಶಿಂದೆ, 10ಕ್ಕೂ ಹೆಚ್ಚು ಶಾಸಕರ ಜೊತೆ ಗುಜರಾತ್‌ಗೆ ಪ್ರಯಾಣ

* 22 ಜೂನ್‌: ಬಂಡಾಯ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರ ಜೊತೆಗೂಡಿ ಗುಜರಾತ್‌ನಿಂದ ಅಸ್ಸಾಂನ ಗುವಾಹಟಿಗೆ ತೆರಳಿದ ಶಿಂದೆ. ಅಧಿಕೃತ ನಿವಾಸ ‘ವರ್ಷಾ’ ತೊರೆದು  ಖಾಸಗಿ ನಿವಾಸ ‘ಮಾತೋಶ್ರೀ’ಗೆ ತೆರಳಿದ ಉದ್ಧವ್‌ ಠಾಕ್ರೆ

* 24 ಜೂನ್‌: ಶಿವಸೇನಾದ 39 ಶಾಸಕರು, ಪಕ್ಷೇತರ ಮತ್ತು ಚಿಕ್ಕ ಪಕ್ಷಗಳ 10 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ ಶಿಂದೆ‌

* 25 ಜೂನ್‌: ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಅಜಯ್‌ ಚೌಧರಿ ಆಜ್ಞೆ ‍ಪಾಲಿಸದ ಕಾರಣ 16 ಶಾಸಕರನ್ನು ಅನರ್ಹಗೊಳಿಸಿದ ಉಪಸ್ಪೀಕರ್‌ ನರಹರಿ ಝೀರ್ವಾಲ್‌.  ನರಹರಿ ಅವರ ವಿರುದ್ಧ ಇಬ್ಬರು ಪಕ್ಷೇತರ ಶಾಸಕರಿಂದ ಅವಿಶ್ವಾಸ ಗೊತ್ತುವಳಿ ಮಂಡನೆ

* 26 ಜೂನ್‌: ಅನರ್ಹತೆ ಪ್ರಕ್ರಿಯೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಏಕನಾಥ ಶಿಂದೆ

* 28 ಜೂನ್‌: ಉದ್ಧವ್‌ ಠಾಕ್ರೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌

* 29 ಜೂನ್: ಜೂನ್‌ 30ರ ಒಳಗೆ ವಿಶ್ವಾಸಮತ ಕೇಳಬೇಕು ಮತ್ತು ಪಕ್ಷದ ಸದಸ್ಯಬಲ ಸಾಬೀತುಪಡಿಸಬೇಕು ಎಂದು ಆದೇಶಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ 

* ಮಹಾವಿಕಾಸ ಅಘಾಡಿ ಸರ್ಕಾರದ ಸದಸ್ಯಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಸಮಾಲೋಚನೆ ನಡೆಸದೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ

* 30 ಜೂನ್‌: ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ಏಕನಾಥ ಶಿಂದೆ ಮತ್ತು ದೇವೇಂದ್ರ ಫಡಣವೀಸ್‌. ಕ್ರಮವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

* 1 ಜುಲೈ: ಶಿವಸೇನಾದ 40 ಶಾಸಕರು ಮತ್ತು ಪಕ್ಷೇತರ ಹಾಗೂ ಚಿಕ್ಕ ಪಕ್ಷಗಳ 10 ಶಾಸಕರ ಬೆಂಬಲದೊಂದಿಗೆ ಸದಸ್ಯಬಲ ಸಾಬೀತುಪಡಿಸಿದ ಶಿಂದೆ

* 3 ಜುಲೈ: ವಿಧಾನಸಭೆ ಸ್ಪೀಕರ್‌ ಆಗಿ ಆಯ್ಕೆ ಆದ ರಾಹುಲ್‌ ನಾರ್ವೇಕರ್‌

* 4 ಜುಲೈ: ಶಿಂದೆ–ಫಡಣವೀಸ್‌ ಸರ್ಕಾದಿಂದ ಬಹುಮತ ಸಾಬೀತು. ಶಿವಸೇನಾ– ಬಿಜೆಪಿ ಸರ್ಕಾರದ ಪರವಾಗಿ 164 ಮತಗಳು ಮತ್ತು ವಿರುದ್ಧವಾಗಿ 99 ಮತಗಳ ಚಲಾವಣೆ

* 9 ಆಗಸ್ಟ್‌: ಶಿಂದೆ ನೇತೃತ್ವದ ಸರ್ಕಾರದಿಂದ ಸಂಪುಟ ವಿಸ್ತರಣೆ. 18 ಶಾಸಕರು ಸಂಪುಟಕ್ಕೆ ಸೇರ್ಪಡೆ. ಒಟ್ಟು 20 ಸದಸ್ಯಬಲದ ಸಂಪುಟ ರಚನೆ

2023

* 17 ಫೆಬ್ರುವರಿ: ಏಕನಾಥ ಶಿಂದೆ ಬಣವನ್ನೇ ನ್ಯಾಯಬದ್ಧವಾದ ‘ಶಿವಸೇನಾ’ ಪಕ್ಷ ಎಂದು ಚುನಾವಣಾ ಆಯೋಗದಿಂದ ಅನುಮೋದನೆ, ಬಿಲ್ಲು ಮತ್ತು ಬಾಣದ ಗುರುತನ್ನು ಶಿಂದೆ ಬಣಕ್ಕೆ ನೀಡಿದ ಆಯೋಗ

* 11 ಮೇ: ಬಹುಮತ ಸಾಬೀತುಪಡಿಸುವ ಮೊದಲೇ ಉದ್ಧವ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ, ಅವರ ಮುಖ್ಯಮಂತ್ರಿ ಸ್ಥಾನವನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌. ರಾಜ್ಯದ ಅಂದಿನ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರ ಕರ್ತವ್ಯಪಾಲನೆ ಕುರಿತು ‘ಸುಪ್ರೀಂ’ ಅಸಮಾಧಾನ 

* 30 ಅಕ್ಟೋಬರ್‌: ಶಿವಸೇನಾದ ಬಿರುಕಿನ ಕುರಿತು 2023ರ ಡಿಸೆಂಬರ್‌ 31ರಂದು ಮತ್ತು ಎನ್‌ಸಿಪಿ ಬಿರುಕಿನ ಕುರಿತು 2024ರ ಜನವರಿ 31ರ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚನೆ

* 15 ಡಿಸೆಂಬರ್‌: ಶಿವಸೇನಾ ಬಿಕ್ಕಟ್ಟಿನ ಕುರಿತು ಜನವರಿ 1ರ ವರೆಗೆ ಕಾಲಾವಕಾಶ ಕೇಳಿದ ಸ್ಪೀಕರ್‌. ಅನುಮತಿ ನೀಡಿದ ಸುಪ್ರೀಂ ಕೋರ್ಟ್‌ 

2024

* ಜ. 10: ಶಿವಸೇನಾ ಶಾಸಕರ ಅನರ್ಹತೆ ಕುರಿತು ಆದೇಶ ನೀಡಲಿರುವ ಸ್ಪೀಕರ್ ರಾಹುಲ್‌ ನಾರ್ವೇಕರ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT