ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS ಚುನಾವಣೆ: ರಾಜ್ಯದಿಂದಲೇ ಸ್ಪರ್ಧಿಸುವಂತೆ ಸೋನಿಯಾಗೆ ತೆಲಂಗಾಣ ಕಾಂಗ್ರೆಸ್ ಮನವಿ

Published 18 ಡಿಸೆಂಬರ್ 2023, 12:53 IST
Last Updated 18 ಡಿಸೆಂಬರ್ 2023, 12:53 IST
ಅಕ್ಷರ ಗಾತ್ರ

ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತೆಲಂಗಾಣದಿಂದಲೇ ಸ್ಪರ್ಧಿಸುವಂತೆ ಕೋರಲು ಪಕ್ಷದ ರಾಜ್ಯ ಘಟಕದ ರಾಜಕೀಯ ವ್ಯವಹಾರಗಳ ಸಮಿತಿಯು ಸೋಮವಾರ ನಿರ್ಣಯ ಕೈಗೊಂಡಿದೆ.

ತೆಲಂಗಾಣ ಕಾಂಗ್ರೆಸ್‌ ಮುಖ್ಯ ಕಚೇರಿ ಗಾಂಧಿ ಭವನದಲ್ಲಿ ಜರುಗಿದ ಸಭೆಯಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೂ ಪಾಲ್ಗೊಂಡಿದ್ದರು. ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಜಿ ಸಚಿವ ಶಬ್ಬೀರ್ ಅಲಿ, ‘ಬರಲಿರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಿಂದಲೇ ಸ್ಪರ್ಧಿಸುವಂತೆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಕೋರುವ ನಿರ್ಣಯನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲಾಗುವುದು‘ ಎಂದರು.

‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೂ ಮೇದಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸೋನಿಯಾ ಅವರೂ ಇಂದಿರಾ ಅವರಂತೆಯೇ ತೆಲಂಗಾಣವನ್ನು ಆಯ್ಕೆ ಮಾಡಿಕೊಳ್ಳಲು ಕೋರಲಾಗುವುದು. ಜತೆಗೆ ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಹಿರಿಯ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಲು ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಹೇಳಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಮಂತ್ರಿಯನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗುವುದು. ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಪಕ್ಷವು ಭರವಸೆ ನೀಡಿದ್ದ ಆರು ಗ್ಯಾರಂಟಿಗಳಲ್ಲಿ ಸದ್ಯ ಎರಡನ್ನು ಜಾರಿಗೊಳಿಸಲಾಗಿದೆ. ಉಳಿದವುಗಳ ಅನುಷ್ಠಾನವೂ ಶೀಘ್ರದಲ್ಲಿ ಆಗಲಿದೆ’ ಎಂದು ತಿಳಿಸಿದರು.

‘ಡಿ. 28ರಂದು ನಾಗ್ಪುರದಲ್ಲಿ ನಡೆಯಲಿರುವ ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ತೆಲಂಗಾಣದಿಂದ 50 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು‘ ಎಂದು ಅಲಿ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಎಐಸಿಸಿ ತೆಲಂಗಾಣ ಉಸ್ತುವಾರಿ ಮಾಣಿಕ್‌ರಾವ್‌ ಠಾಕ್ರೆ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT