ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಮುಖಂಡರು– ಸರ್ಕಾರದ ನಡುವೆ ತಡರಾತ್ರಿ 1 ಗಂಟೆವರೆಗೂ ಮಾತುಕತೆ: ಆಗಿದ್ದೇನು?

Published 19 ಫೆಬ್ರುವರಿ 2024, 2:34 IST
Last Updated 19 ಫೆಬ್ರುವರಿ 2024, 2:34 IST
ಅಕ್ಷರ ಗಾತ್ರ

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಹಾಗೂ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಜೊತೆ ಕೇಂದ್ರ ಸಚಿವರ ತಂಡ 4ನೇ ಸುತ್ತಿನ ಸುದೀರ್ಘ ಮಾತುಕತೆ ನಡೆಸಿದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ಚಂಡೀಗಢದ ಸೆಕ್ಟರ್‌ 26ರಲ್ಲಿ ಇರುವ ಮಹಾತ್ಮ ಗಾಂಧಿ ರಾಜ್ಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ರೈತ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಅವರೂ ಈ ಸಭೆಯಲ್ಲಿ ಇದ್ದರು. ರಾತ್ರಿ 8.15ಕ್ಕೆ ಆರಂಭವಾದ ಸಭೆ ತಡರಾತ್ರಿ 1 ಗಂಟೆವರೆಗೂ ನಡೆಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೀಯೂಷ್ ಗೋಯಲ್, ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಪ್ರಸ್ತಾವನ್ನು ಸಮಿತಿಯು ರೈತರ ಮುಂದೆ ಇಟ್ಟಿದೆ’ ಹೇಳಿದರು.

‘ಸರ್ಕಾರದ ಈ ಪ್ತಸ್ತಾಪವನ್ನು ತಮ್ಮ ವಲಯದಲ್ಲಿ ಚರ್ಚಿಸಿ ಎರಡು ದಿನಗಳ ಒಳಗೆ ತಮ್ಮ ಮುಂದಿನ ನಡೆಯನ್ನು ತಿಳಿಸುವುದಾಗಿ ರೈತ ನಾಯಕರು ಹೇಳಿದ್ದಾರೆ’ ಎಂದು ಗೋಯಲ್ ತಿಳಿಸಿದರು.

‘ಹುರಳಿ ಬೇಳೆ, ಉದ್ದಿನ ಬೇಳೆ, ಮಸೂದರ್‌ ದಾಲ್ ಅಥವಾ ಮೆಕ್ಕೆಜೋಳವನ್ನು ಮುಂದಿನ 5 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲಯಲ್ಲಿ ಖರೀದಿಸಲು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಹಾಗೂ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಖರೀದಿಯ ಪ್ರಮಾಣಕ್ಕೆ ಯಾವುದೇ ಮಿತಿ ಇಲ್ಲ. ಇದಕ್ಕಾಗಿ ಹೊಸ ಪೋರ್ಟಲ್ ಒಂದನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.

‘ಇದು ಪಂಜಾಬ್‌ನ ಕೃಷಿಯನ್ನು ಕಾಪಾಡುವುದಲ್ಲದೆ, ಅಂತರ್ಜಲ ಮಟ್ಟವನ್ನೂ ಹೆಚ್ಚಿಸುತ್ತದೆ. ಜೊತೆಗೆ ಭೂಮಿ ಬಂಜರಾಗುವುದನ್ನು ತಡೆಯಲಿದೆ’ ಎಂದು ಪೀಯೂಷ್‌ ಗೋಯಲ್ ತಿಳಿಸಿದರು.

ಕೇಂದ್ರದ ಪ್ರಸ್ತಾವಗಳ ಬಗ್ಗೆ ಮಾತನಾಡಿದ ರೈತ ನಾಯಕ ಸರ್ವನ್‌ ಸಿಂಗ್‌ ಪಂದೆರ್‌, ‘ಫೆ. 19–20ರಂದು ಇದನ್ನು ನಮ್ಮ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಇದರ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು, ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಹೇಳಿದರು.

‘ಸಾಲ ಮನ್ನಾ ಹಾಗೂ ಇತರ ಬೇಡಿಕೆಗಳ ಬಗ್ಗೆ ಚರ್ಚೆ ಬಾಕಿ ಇದ್ದು, ಇದೂ ಎರಡು ದಿನಗಳಲ್ಲಿ ಬಗೆಹರಿಯುವ ಸಾಧ್ಯತೆ ಇದೆ’ ಎಂದು ನುಡಿದರು.

ಅಲ್ಲದೆ ‘ದೆಹಲಿ ಚಲೋ’ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಸಮಸ್ಯೆಗಳು ಬಗೆಹರಿಯದಿದ್ದರೆ ಫೆ.21ರಂದು ಬೆಳಿಗ್ಗೆ 11 ಗಂಟೆಗೆ ಮುಂದುವರಿಯಲಿದೆ’ ಎಂದು ತಿಳಿಸಿದರು.

ಈ ಹಿಂದೆ ಫೆ. 8,12 ಹಾಗೂ 15ರಂದು ರೈತ ಮುಖಂಡರು ಹಾಗೂ ಸಚಿವರ ನಡುವೆ ಮಾತುಕತೆ ನಡೆದಿದ್ದರೂ, ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT