ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿನೋಮ್ ಸೀಕ್ವೆನ್ಸಿಂಗ್, ಕಣ್ಗಾವಲು, ಲಸಿಕೆ ಓಮೈಕ್ರಾನ್ ವಿರುದ್ಧ ಅಸ್ತ್ರ: ತಜ್ಞರು

Last Updated 3 ಡಿಸೆಂಬರ್ 2021, 8:30 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಕಣ್ಗಾವಲು, ಜಿನೋಮ್ ಸೀಕ್ವೆನ್ಸಿಂಗ್, ಗಡಿಯಲ್ಲಿ ಕಟ್ಟೆಚ್ಚರ ಮತ್ತು ಲಸಿಕೆ ಪಡೆಯುವುದು ಅಗತ್ಯ ಎಂದು ಮಹಾರಾಷ್ಟ್ರ ಸರ್ಕಾರದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ನಗರದ ಆಸ್ಪತ್ರೆಯೊಂದರಲ್ಲಿ ಸಾಂಕ್ರಾಮಿಕ ರೋಗಗಳ ಸಲಹೆಗಾರರೂ ಆಗಿರುವ ಡಾ. ವಸಂತ್ ನಗ್ವೇಕರ್ ಮಾತನಾಡಿ, ಗಾಬರಿ ಪಡುವ ಅಗತ್ಯವಿಲ್ಲದಿದ್ದರೂ, ಓಮೈಕ್ರಾನ್ ಆತಂಕಕಾರಿಯಾಗಿದೆ. ಸೋಂಕನ್ನು ತಡೆಯಲು ಕಣ್ಗಾವಲಿನ ಅಗತ್ಯವಿದೆ. ಈ ವೇರಿಯಂಟ್ ಸುಮಾರು 50 ರೂಪಾಂತರಗಳನ್ನು ಹೊಂದಿದ್ದು, ಇದು ವೇಗವಾಗಿ ಹರಡಬಹುದು ಮತ್ತು ರೋಗ ನಿರೋಧಕ ವ್ಯವಸ್ಥೆಯಿಂದಲೂ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೀಗಿದ್ದರೂ, ತೀವ್ರವಾದ ತೊಂದರೆಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ದಕ್ಷಿಣ ಆಫ್ರಿಕಾದಲ್ಲಿನ ಆರಂಭಿಕ ಮಾಹಿತಿ ಪ್ರಕಾರ, ಬಹುತೇಕ ರೋಗಿಗಳು ಯುವಜನತೆಯಾಗಿದ್ದು, ಇದು ಸೌಮ್ಯ ಲಕ್ಷಣಗಳನ್ನು ಹೊಂದಿದೆ' ಎಂದು ಹೇಳಿದ್ದಾರೆ.

ವೇಗವಾಗಿ ಹರಡುವಿಕೆಯೊಂದಿಗೆ ಈಗಿರುವ ರೂಪಾಂತರವು ಸ್ಥಿರವಾಗಿದೆ ಆದರೆ, ಕಡಿಮೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ನಾವು ಎಚ್ಚರಿಕೆ ವಹಿಸುವ ಅಗತ್ಯವಿದೆ. ಗಡಿಗಳಲ್ಲಿ ಕಣ್ಗಾವಲನ್ನು ಹೆಚ್ಚಿಸುವ, ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸುವ ಮತ್ತು ಲಸಿಕೆಯನ್ನು ಪಡೆಯುವ ಅಗತ್ಯವಿದೆ ಎಂದ ಅವರು ಜನರು ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.

'ಮಾಸ್ಕ್ ಧರಿಸುವುದರಿಂದ ಶೇ 53ರಷ್ಟು ಕೋವಿಡ್ ಹರಡುವಿಕೆಯನ್ನು ಕಡಿಮೆ ಮಾಡಬಹುದು ಎಂದು ವೈಜ್ಞಾನಿಕ ಅಂಕಿ ಅಂಶಗಳು ತಿಳಿಸಿವೆ. ಲಸಿಕೆಯ ಬೂಸ್ಟರ್ ಡೋಸ್ ಪಡೆದರೆ, ಅದು ಪರಿಣಾಮಕಾರಿಯಾಗಿದ್ದರೂ ಕೂಡ ಅದು ಕೇವಲ ತಾತ್ಕಾಲಿಕ. ಪ್ರತಿ ಆರು ತಿಂಗಳಿಗೊಮ್ಮೆ ಮತ್ತು ಕೊರೊನಾ ವೈರಸ್ ಹೊಸ ರೂಪಾಂತರಗಳು ಕಂಡುಬಂದಾಗಲೆಲ್ಲ ಬೂಸ್ಟರ್ ಡೋಸ್ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಮಾಸ್ಕ್ ಧರಿಸುವುದು ಈಗಿನ ಅಗತ್ಯ ಮತ್ತು ಲಸಿಕೆಗೆ ಯಾವುದೇ ಪರ್ಯಾಯಗಳಿಲ್ಲ' ಎಂದು ಹೇಳಿದ್ದಾರೆ.

'ನಿರ್ಬಂಧಗಳನ್ನು ಹೊರತುಪಡಿಸಿ, ಸೋಂಕಿತರ ಸಂಪರ್ಕ ಪಡೆದವರ ಪತ್ತೆ, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಐಸೋಲೇಷನ್ ಮತ್ತು ಕ್ವಾರಂಟೈನ್ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ತಿಳಿಸಿದರು.

ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮೈಕ್ರಾನ್‌’ ಎಂಬ ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಓಮೈಕ್ರಾನ್‌ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT