ಬೆಂಗಳೂರು: ‘ರಾಜ್ಯದಲ್ಲಿ 14 ವರ್ಷದ ಒಳಗಿನ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗುಳಿದಿದ್ದಾರೆ’ ಎಂಬ ಕಳವಳಕಾರಿ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿದ್ದು, ಈ ಕುರಿತ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ 2013 ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿ ರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾ ಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಕರಣದ ಅಮಿಕಸ್ ಕ್ಯೂರಿಯಾಗಿರುವ (ಕೋರ್ಟ್‌ಗೆ ಸಹಕರಿಸುವ ವಕೀಲರು) ಹೈಕೋರ್ಟ್‌ನ ಹಿರಿಯ ವಕೀಲಕೆ.ಎನ್. ಫಣೀಂದ್ರ ಅವರು ಸಮೀಕ್ಷಾ ವರದಿಯನ್ನು ನ್ಯಾಯಪೀಠಕ್ಕೆ ನೀಡಿದರು.
ಶಾಲೆಯಿಂದ ಹೊರಗುಳಿದ 18 ವರ್ಷದೊಳಗಿನ ಮಕ್ಕಳ ಪತ್ತೆಗೆ ನಗರಾಭಿವೃದ್ಧಿ, ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಗ್ರಾಮೀಣಾಭಿ ವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಪ್ರಾಧಿಕಾರಗಳು ನಡೆಸಿರುವ ಮನೆ-ಮನೆ ಸಮೀಕ್ಷೆಯ ವಸ್ತುಸ್ಥಿತಿ ಅಂಶಗಳನ್ನು ಈ ವರದಿ ಒಳಗೊಂಡಿದೆ.
ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿ ಸಿದಂತೆ ಹೈಕೋರ್ಟ್ ರಚಿಸಿರುವ ಉನ್ನತಾಧಿಕಾರ ಸಮಿತಿಯು ಇದೇ 16ರಂದು ಸಭೆ ನಡೆಸಬೇಕು.ಶಾಲೆಯಿಂದ ಹೊರಗುಳಿದ, ವಿಶೇಷವಾಗಿ ಅಂಗನವಾಡಿಗಳಿಂದ ಹೊರಗುಳಿದ 3ರಿಂದ 6ವರ್ಷದ ಒಳಗಿನ ಮಕ್ಕಳನ್ನು ವಾಪಸು ಕರೆತರುವ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸಲಹೆ ನೀಡಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದೆ.
ಸಮೀಕ್ಷೆ ನಡೆದಿರುವುದು ಹೇಗೆ?
ಗ್ರಾಮೀಣ ಭಾಗದಲ್ಲಿ ಶಾಲೆಗಳಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ 2021ರ ಅಕ್ಟೋಬರ್‌ನಲ್ಲಿ ಮತ್ತು ಬಿಬಿಎಂಪಿ ಸೇರಿ ರಾಜ್ಯದ ಎಲ್ಲಾ 319 ನಗರ ಸ್ಥಳೀಯ ಸಂಸ್ಥೆಗಳಲ್ಲಿ 2022ರ ಮಾರ್ಚ್‌ನಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.
ನಗರ ಪ್ರದೇಶಗಳಲ್ಲಿ ಶೇ 100ರಷ್ಟು ಸಮೀಕ್ಷೆ ನಡೆಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಭಾಗದಲ್ಲಿ 6ರಿಂದ 14 ವರ್ಷದ 15,338 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದೇ ವಯೋಮಾನದ 10 ಸಾವಿರ ಮಕ್ಕಳು ಶಾಲೆಗಳಲ್ಲಿ ಪ್ರವೇಶಾತಿಯನ್ನೇ ಪಡೆದಿಲ್ಲ. 3 ವರ್ಷದೊಳಗಿನ 4.54 ಲಕ್ಷ ಮಕ್ಕಳು ಹಾಗೂ 4ರಿಂದ 6 ವರ್ಷದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳ ಸಮೀಕ್ಷೆಯ ವಿವರ
ನಗರ ಪ್ರದೇಶ
lಕುಟುಂಬಗಳ ಸಮೀಕ್ಷೆ: 33.42 ಲಕ್ಷ
lಸಮೀಕ್ಷೆ ಶೇಕಡವಾರು 98.06
lಗುರುತಿಸಲಾದ 18 ವರ್ಷದೊಳಗಿನ ಮಕ್ಕಳು: 13.73 ಲಕ್ಷ
lಅಂಗನವಾಡಿಯಲ್ಲಿ ನೋಂದಾಯಿಸಿಕೊಳ್ಳದ 3 ವರ್ಷದೊಳಗಿನ ಮಕ್ಕಳು: 87,921
lಅಂಗನವಾಡಿಗಳಲ್ಲಿ ನೊಂದಾಯಿಸಿಕೊಳ್ಳದ 4ರಿಂದ 6 ವರ್ಷದ ಮಕ್ಕಳು: 1.23 ಲಕ್ಷ
lಶಾಲೆಗೆ ದಾಖಲಾದ 6ರಿಂದ 18 ವರ್ಷದ ಒಟ್ಟು ಮಕ್ಕಳು: 10.62 ಲಕ್ಷ
lಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 2,798
lದಾಖಲಾಗದ 6 ರಿಂದ 14 ವರ್ಷದ ಮಕ್ಕಳು: 3,225
ಗ್ರಾಮೀಣ ಪ್ರದೇಶ
lಕುಟುಂಬಗಳ ಸಮೀಕ್ಷೆ: 84.02 ಲಕ್ಷ
lಸಮೀಕ್ಷೆ ಶೇಕಡವಾರು: 100
lಗುರುತಿಸಲಾದ 18 ವರ್ಷದೊಳಗಿನ ಮಕ್ಕಳು: 35.24 ಲಕ್ಷ
lಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 3 ವರ್ಷದೊಳಗಿನ ಮಕ್ಕಳು: 93 ಸಾವಿರ
lಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 4ರಿಂದ 6 ವರ್ಷದ ಮಕ್ಕಳು: 1.07 ಲಕ್ಷ
lಶಾಲೆಗೆ ದಾಖಲಾತಿ ಪಡೆದ 6ರಿಂದ 18 ವರ್ಷದ ಒಟ್ಟು ಮಕ್ಕಳು: 27.11 ಲಕ್ಷ
lಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 10,378
lದಾಖಲಾಗದ 6 ರಿಂದ 14 ವರ್ಷದ ಮಕ್ಕಳು: 5,248
ಬಿಬಿಎಂಪಿ
lಕುಟುಂಬಗಳ ಸಮೀಕ್ಷೆ: 26.57 ಲಕ್ಷ
lಸಮೀಕ್ಷೆ ಶೇಕಡವಾರು: 106
lಗುರುತಿಸಲಾದ 18 ವರ್ಷದೊಳಗಿನ ಮಕ್ಕಳ ಸಂಖ್ಯೆ: 17.70 ಲಕ್ಷ
lಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 3 ವರ್ಷದೊಳಗಿನ ಮಕ್ಕಳು: 2.73 ಲಕ್ಷ
lಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 4ರಿಂದ 6 ವರ್ಷದ ಮಕ್ಕಳು: 3.02 ಲಕ್ಷ
lಶಾಲೆಗೆ ದಾಖಲಾತಿ ಪಡೆದ 6ರಿಂದ 18 ವರ್ಷದ ಒಟ್ಟು ಮಕ್ಕಳು: 11.83 ಲಕ್ಷ
lಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 2,162
*ದಾಖಲಾಗದ 6 ರಿಂದ 14 ವರ್ಷದ ಮಕ್ಕಳು: 1,545.
ಮಕ್ಕಳು ಶಾಲೆಗೆ ಬರೋದು ಶೂ, ಸಾಕ್ಸ್‌ಗಳಿಗಲ್ಲ: ಬಿ.ಸಿ. ನಾಗೇಶ್
‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು ಶೂ, ಸಾಕ್ಸ್ ಹಾಕಿಕೊಳ್ಳಲು ಅಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
‘ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಇಲ್ಲ’ ಎಂಬ ‘ಪ್ರಜಾವಾಣಿ’ಯ ವರದಿ ಉಲ್ಲೇಖಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಟ್ವೀಟ್‌ಗೆ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಪ್ರತಿಕ್ರಿಯಿಸಿದರು.
‘ಶೂ, ಸಾಕ್ಸ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಎಂತಹ ಗುಣಮಟ್ಟದ ಶಿಕ್ಷಣ ನೀಡಿದ್ದರು? ಎಷ್ಟು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದರು? ಎಷ್ಟು ಶಾಲೆಗೆ ಹೊಸ ಕೊಠಡಿ ಕೊಟ್ಟಿದ್ದರು? ಶಿಕ್ಷಣಕ್ಕೆ ಎಷ್ಟು ಅನುದಾನ ನೀಡಿದ್ದರು ಎಂಬುದರ ಬಗ್ಗೆ ದಾಖಲೆ ನೀಡಲಿ. ನಮ್ಮ ಸರ್ಕಾರದ ಅವಧಿಯಲ್ಲಿನ ದಾಖಲೆಪತ್ರಗಳನ್ನೂ ಬಿಡುಗಡೆ ಮಾಡುತ್ತೇವೆ’ ಎಂದು ಅವರು ಸವಾಲು ಹಾಕಿದರು.
‘ಶೂ, ಸಾಕ್ಸ್ ಕೊಡುತ್ತಿಲ್ಲ ಎಂಬುದು ಸಿದ್ದರಾಮಯ್ಯ ಅವರ 101ನೇ ಸುಳ್ಳು. ಕಲಿಕಾ ಚೇತರಿಕೆಗೆ ₹150 ಕೋಟಿ ಖರ್ಚು ಮಾಡಲಾಗಿದೆ. ಮಳೆಯಿಂದ ಹಲವು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಹೀಗಾಗಿ, 7 ಸಾವಿರ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.