ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌: ಸಭಾಪತಿ ಭರವಸೆ- ವಿಪಕ್ಷ ಧರಣಿ ವಾಪಸ್

Published 6 ಡಿಸೆಂಬರ್ 2023, 14:59 IST
Last Updated 6 ಡಿಸೆಂಬರ್ 2023, 14:59 IST
ಅಕ್ಷರ ಗಾತ್ರ

ವಿಧಾನ ಪರಿಷತ್‌ (ಬೆಳಗಾವಿ): ‘ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ 7ನೇ ವೇತನ ಆಯೋಗದ ವರದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾನೇ ಉತ್ತರ ಕೊಡಿಸುತ್ತೇನೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದ ಬಳಿಕ ವಿರೋಧ ಪಕ್ಷದ ಸದಸ್ಯರು ಧರಣಿ ಕೈಬಿಟ್ಟರು.

ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದ ಎದುರು ಧರಣಿ ನಡೆಸಿದ ಬಿಜೆಪಿ, ಜೆಡಿಎಸ್‌ ಸದಸ್ಯರು, ‘ಆಯೋಗ ವರದಿ ಪೂರ್ಣಗೊಂಡಿದ್ದರೂ ವಿನಾ ಕಾರಣ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಬೇಕು’ ಎಂದು ಪಟ್ಟುಹಿಡಿದರು.

ಮಧ್ಯಪ್ರವೇಶಿಸಿದ ಮುಖ್ಯ ಸಚೇತಕ ಸಲೀಂ ಅಹ್ಮದ್, ‘ಮುಖ್ಯಮಂತ್ರಿ ಪರವಾಗಿ ಸಭಾನಾಯಕ ಎನ್.ಎಸ್. ಬೋಸರಾಜು ಈಗಾಗಲೇ  ಉತ್ತರ ನೀಡಿದ್ದಾರೆ’ ಎಂದರು.

ಇದರಿಂದ ಕೆರಳಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ವೈ.ಎ. ನಾರಾಯಣಸ್ವಾಮಿ, ತೇಜಸ್ವಿನಿಗೌಡ ಮತ್ತಿತರರು, ‘ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ. ಈ ಧೋರಣೆ ಯಾಕೆ? ಈ ವಿಚಾರದಲ್ಲಿ ಮುಖ್ಯಮಂತ್ರಿ ಸದನದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಲಿ’ ಎಂದು ಆಗ್ರಹಿಸಿದರು.

ಆಗ ಸಲೀಂ ಅಹ್ಮದ್, ‘ವಿರೋಧ ಪಕ್ಷಗಳ ಸದಸ್ಯರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದರು. ಗದ್ದಲ ಉಂಟಾದ ಕಾರಣ ಸದನವನ್ನು ಸಭಾಪತಿ 10 ನಿಮಿಷ ಮುಂದೂಡಿದರು‌. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರೆಸಿದರು.

ಸಚಿವ ಕೃಷ್ಣ ಬೈರೇಗೌಡ, ‘ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಮುಖ್ಯಮಂತ್ರಿಯಿಂದ ಉತ್ತರ ಕೊಡಿಸಲು ಪ್ರಯತ್ನಿಸಲಾಗುವುದು. ನಾವು ನುಡಿದಂತೆ ನಡೆಯುವವರು’ ಎಂದರು.

ಆಗ ಸಭಾಪತಿ, ‘ಸರ್ಕಾರದ ಪರವಾಗಿ ಈಗಾಗಲೇ ಉತ್ತರ ಬಂದಿದೆ. ಇದರ ನಡುವೆಯೂ ಮುಖ್ಯಮಂತ್ರಿ ಅವರ ಬಳಿ ನಾನೇ ಮಾತನಾಡಿ ಉತ್ತರ ಕೊಡಿಸುವೆ’ ಎಂದು ಭರವಸೆ ನೀಡಿದರು.

‘ಮದರಸಾಗಳಲ್ಲಿ ಕನ್ನಡ, ಗಣಿತ, ವಿಜ್ಞಾನ ಬೋಧನೆ’

ವಿಧಾನಪರಿಷತ್‌: ‘ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಬೋಧಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜೆಡಿಎಸ್‌ನ ಬಿ.ಎಂ‌. ಫಾರೂಖ್ ಪರವಾಗಿ ಅಬ್ದಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಿಗೆ ಧಾರ್ಮಿಕ ಬೋಧನೆ ಮಾತ್ರವಲ್ಲದೆ ಸಾಮಾಜಿಕ ಬದುಕು ಕಟ್ಟಿಕೊಳ್ಳುವ ಇತರ ವಿಷಯಗಳ ಕುರಿತು ಬೋಧನೆ ಮಾಡಲಾಗುವುದು. ಪ್ರಾಯೋಗಿಕವಾಗಿ 100 ಮದರಸಾಗಳಲ್ಲಿ ಈ ರೀತಿ ಬೋಧನೆ ಆರಂಭಿಸಲಾಗುವುದು’ ಎಂದರು.

‘ ವಕ್ಫ್‌ ಆಸ್ತಿಗಳಲ್ಲಿ ಹಾಗೂ ವಕ್ಫ್ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ನೋಂದಾಯಿತ ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರಾಯೋಗಿಕವಾಗಿ ಎರಡು ವರ್ಷ ಕನ್ನಡ, ಇಂಗ್ಲೀಷ್, ವಿಜ್ಞಾನ, ಗಣಿತ ಹಾಗೂ ಇತರೆ ವಿಷಯಗಳ ಬಗ್ಗೆ ಸತತವಾಗಿ ಬೋಧಿಸಿ, ರಾಷ್ಟ್ರೀಯ ಮುಕ್ತ ಶಾಲೆಗಳ ಮೂಲಕ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆ ಬರೆಯುವಂತೆ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ’ ಎಂದರು.

ಜಮೀರ್‌ ಗೈರು: ಕಾವೇರಿದ ವಾಗ್ವಾದ

ವಿಧಾನ ಪರಿಷತ್‌: ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ಗೈರಾದ ವಿಷಯ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಕಾವೇರಿದ ವಾಗ್ವಾದಕ್ಕೆ ಕಾರಣವಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್‌, ವಕ್ಪ್ ಆಸ್ತಿಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡುತ್ತಿರುವ ಬಗ್ಗೆ ಸಚಿವ ಜಮೀರ್  ಅವರಿಗೆ ಪ್ರಶ್ನೆ ಕೇಳಿದ್ದರು. ಈ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜಮೀರ್ ಪರವಾಗಿ ಉತ್ತರಿಸಿದರು.

ಪ್ರಶ್ನೆ ಮುಗಿಯುತ್ತಿದ್ದಂತೆ ಸಭಾಪತಿ ಅವರು, ‘ಸಚಿವರಿಗೆ ಸದನಕ್ಕೆ ಬಂದು ಮುಖ ತೋರಿಸಲು ಹೇಳಿ’ ಎಂದು ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರಿಗೆ ಸಲಹೆ ನೀಡಿದರು.

ಸಭಾಪತಿ ಹೀಗೆ ಹೇಳುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಸದಸ್ಯರು, ‘ಸಚಿವರು ಸದನಕ್ಕೆ ಏಕೆ ಬಂದಿಲ್ಲ?ಸಮಸ್ಯೆ ಏನು? ಅವರು ಅನುಮತಿ ಪಡೆದಿದ್ದಾರೆಯೇ? ಏನು ಕಾರಣ ನೀಡಿದ್ದಾರೆ’ ಎಂದು ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದರು.

ಬಿಜೆಪಿಯ ವೈ.ಎ. ನಾರಾಯಣಸ್ವಾಮಿ. ‘ಸರ್ಕಾರಕ್ಕೆ ಸಭಾಪತಿ ಚಾಟಿ ಬೀಸಬೇಕು, ಮುಖ ತೋರಿಸಿ ಎಂದು ಮಾತ್ರ ಹೇಳಿದರೆ ಹೇಗೆ’ ಎಂದು ಪ್ರಶ್ನಿಸಿದರು. ಆಗ ಸದನದ ನಿಯಮ ಓದಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಉಳಿದದ್ದು ಸಭಾಪತಿಗಳ ನಿರ್ಣಯಕ್ಕೆ ಬಿಟ್ಟಿದ್ದು ಎಂದರು.

ಆಗ ಸಭಾಪತಿ, ‘ಜಮೀರ್ ಅನುಮತಿ ಪಡೆದುಕೊಂಡಿದ್ದಾರೆ, ಅವರ ಕಾರಣಗಳು ನನಗೆ ಸಂಬಂಧ ಇಲ್ಲ’ ಎಂದು ಪುನರುಚ್ಚರಿಸಿದರು.

‘ಸಚಿವರು ಪೀಠಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ನೀಡಬೇಕು’ ಎಂದು ಕೋಟ ಶ್ರೀನಿವಾಸ ಪೂಜಾರಿ ಕೋರಿದಾಗ, ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸಭಾಪತಿ ತಿಳಿಸಿದರು.

‘ಸದಸ್ಯರು ಸಮ್ಮತಿಸಿದರೆ ಹಾಲಿನ ದರ ಹೆಚ್ಚಳ’

ವಿಧಾನ ಪರಿಷತ್‌: ‘ಸದನದ ಸದಸ್ಯರು ಸಮ್ಮತಿಸಿದರೆ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹಾಲಿನ ಮಾರಾಟ ದರ ಹೆಚ್ಚಿಸಲು ಸರ್ಕಾರ ಸಿದ್ಧವಿದೆ’ ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ಕಾಂಗ್ರೆಸ್ಸಿನ ಕೆ. ಹರೀಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಲಿನ ಮಾರಾಟ ದರವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ಇದರಿಂದ ರೈತರಿಗೆ ಅನುಕೂಲ ಆಗುವುದಾದರೆ ಖಂಡಿತವಾಗಿಯೂ ನಮ್ಮ ಸರ್ಕಾರ ಸಿದ್ಧವಿದೆ. ಆದರೆ, ಅದಕ್ಕೂ ಮೊದಲು ಸದನದ ಸದಸ್ಯರ ಒಪ್ಪಿಗೆ ಅಗತ್ಯ’ ಎಂದು ಮನವಿ ಮಾಡಿದರು.

‘ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರ ಉತ್ಪಾದನೆಗೆ ಅವಶ್ಯಕವಿರುವ ಕಚ್ಚಾ ಪದಾರ್ಥಗಳ ವೆಚ್ಚದ ಮೇಲೆ ಪಶು ಆಹಾರದ ದರವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಪಶು ಆಹಾರದ ಬೆಲೆ ಒಂದು ಕೆಜಿಗೆ ₹ 1 ಹೆಚ್ಚಳವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT