ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿವರ್ ಮೊಬಿಲಿಟಿಗೆ ಸೌಲಭ್ಯ: ಸಚಿವರ ಭರವಸೆ

Published 8 ಆಗಸ್ಟ್ 2024, 16:41 IST
Last Updated 8 ಆಗಸ್ಟ್ 2024, 16:41 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಲು ಉದ್ದೇಶಿಸಿರುವ ರಿವರ್‌ ಮೊಬಿಲಿಟಿ ಕಂಪನಿಗೆ ಜಮೀನು ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಗುರುವಾರ ತಮ್ಮನ್ನು ಭೇಟಿಯಾದ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಮಣಿ ಮತ್ತು ಉಪಾಧ್ಯಕ್ಷೆ ಮಯೂರಿ ಮೋಹಿಡೇಕರ್‌ ಜತೆ ಭವಿಷ್ಯದ ಸಂಪರ್ಕ ಸಾರಿಗೆ ವ್ಯವಸ್ಥೆ ಕುರಿತು ಮಾತುಕತೆ ನಡೆಸಿದರು.

ಸದ್ಯಕ್ಕೆ ರಿವರ್‌ ಮೊಬಿಲಿಟಿ ಕಂಪನಿಯು ಹೊಸಕೋಟೆ ಬಳಿ ಇರುವ ತನ್ನ ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ 1.20 ಲಕ್ಷ ಇ.ವಿ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ. ಇದನ್ನು ವರ್ಷಕ್ಕೆ 5 ಲಕ್ಷಕ್ಕೆ ಕೊಂಡೊಯ್ಯಲು ಕಂಪನಿ ಬಯಸಿದ್ದು, ಅದಕ್ಕಾಗಿ ಜಮೀನಿಗೆ ಬೇಡಿಕೆ ಇಟ್ಟಿದೆ. ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ತೋರಿಸಿದ್ದು, ಅವರು ಬಯಸಿದ ಪ್ರಕಾರ ಜಮೀನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಂಪನಿಯು ಇ.ವಿ ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸುತ್ತಿದ್ದು, ₹400 ಕೋಟಿ ಹೂಡಿಕೆ ಮಾಡಿದೆ. ಕಂಪನಿಯ ಇ.ವಿ ವಾಹನವು ಒಂದು ಸಲ ಚಾರ್ಜ್‌ ಮಾಡಿದರೆ 120 ಕಿ.ಮೀ ಓಡಲಿದೆ ಎಂದು ಎಂ.ಬಿ.ಪಾಟೀಲ ಮಾಹಿತಿ ನೀಡಿದರು.

ರಾಜ್ಯದಲ್ಲಿ ಇ.ವಿ.ಕ್ಷೇತ್ರದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಅಲ್ಲದೇ, ಸರ್ಕಾರ ಕೂಡ ನಾನಾ ಬಗೆಯ ಉತ್ತೇಜನ ಕ್ರಮಗಳನ್ನು ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಸಾಂಪ್ರದಾಯಿಕ ವಾಹನಗಳು ಜನಪ್ರಿಯವಾಗಲಿವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT