ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವೇತನಕ್ಕಾಗಿ ನೌಕರರ ಪ್ರತಿಭಟನೆ: ಡಯಾಲಿಸಿಸ್ ಸೇವೆ ಅಸ್ತವ್ಯಸ್ತ

Published 2 ಡಿಸೆಂಬರ್ 2023, 15:50 IST
Last Updated 2 ಡಿಸೆಂಬರ್ 2023, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಲ್ಕು ತಿಂಗಳ ಬಾಕಿ ವೇತನ ನೀಡಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಡಯಾಲಿಸಿಸ್ ಕೇಂದ್ರಗಳ ನೌಕರರ ಪೈಕಿ ಕೆಲವರು ವಿಷ ಕುಡಿದು ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್‌ ಸಿಬ್ಬಂದಿ ಮುಷ್ಕರ ನಿರತರಾಗಿರುವ ಕಾರಣ ಸೇವೆಗಳಲ್ಲಿ ವ್ಯತ್ಯಯವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ದುಬಾರಿಯಾಗಿದೆ. ಮೂತ್ರಕೋಶ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿರುವ ಬಡವರು ಮತ್ತು ಮಧ್ಯಮ ವರ್ಗದವರು ಡಯಾಲಿಸಿಸ್‌ಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಈ ಕೇಂದ್ರಗಳನ್ನು ನೆಚ್ಚಿಕೊಂಡಿದ್ದಾರೆ. ಕೇಂದ್ರಗಳು ಚಿಕಿತ್ಸೆಗಾಗಿ ನಿರ್ದಿಷ್ಟ ಸಿಬ್ಬಂದಿಯನ್ನು ಆಶ್ರಯಿಸಿವೆ. ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದಾಗಿ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆ ಸಿಗದೇ ಕಷ್ಟಪಡುವಂತಾಗಿದೆ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ದೂರಿದ್ದಾರೆ.

ನವೆಂಬರ್ 30ರಿಂದ ಕೆಲಸಕ್ಕೆ ಗೈರಾಗಿ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿರುವ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೂ ಪ್ರತಿಭಟನೆ ಕುಳಿತಿರುವ ನೌಕರರು, ಬೇಡಿಕೆ ಈಡೇರಿಸುವವರೆಗೂ ಸ್ಥಳದಿಂದ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆ ಸ್ಥಳದಲ್ಲಿ ಶನಿವಾರ ಹಾಜರಿದ್ದ ರಾಜ್ಯ ಡಯಾಲಿಸಿಸ್ ಸಂಘದ ಉಪಾಧ್ಯಕ್ಷ ಬೀದರ್ ಜಿಲ್ಲೆಯ ರಾಮು ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಅದನ್ನು ಗಮನಿಸಿದ ಸಹೋದ್ಯೋಗಿಗಳು ಕೂಡಲೇ ರಾಮು ಹಾಗೂ ಇತರರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಸಚಿವ, ಅಧಿಕಾರಿಗಳ ವರ್ತನೆಯಿಂದ ಬೇಸರ: ‘ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನ. 30ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಸಚಿವರಾಗಲಿ ಹಾಗೂ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ’ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಆರ್‌ಎಸ್ ಸಂಸ್ಥೆಯವರು 9 ತಿಂಗಳ ಇಎಸ್‌ಐ ಮತ್ತು ಪಿಎಫ್ ನೀಡಿಲ್ಲ. ಕೆಎಸ್‌ಕೆಎಜಿ ಸಂಸ್ಥೆಯವರು (ಸಂಜೀವಿನಿ ಸಂಸ್ಥೆ) 20 ತಿಂಗಳ ಇಎಸ್‌ಐ ಮತ್ತು ಪಿಎಫ್ ಕೊಟ್ಟಿಲ್ಲ. ಸೇವಾ ಭದ್ರತೆಯೂ ಇಲ್ಲ. ರಾಜ್ಯ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT