ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ: ರಾಜ್ಯದಲ್ಲಿ ಹಿಂದೂ – ಮುಸ್ಲಿಮರ ಭಾವೈಕ್ಯ ಗಣೇಶ

Last Updated 1 ಸೆಪ್ಟೆಂಬರ್ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವೆಡೆ ಹಿಂದೂ– ಮುಸ್ಲಿಂ ಸಮುದಾಯದವರು ಜೊತೆ ಜೊತೆಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.

ಬಾಗಲಕೋಟೆಯ ನವನಗರದ ಸೆಕ್ಟರ್‌ ನಂ.5ರಲ್ಲಿ ಎರಡೂ ಕೋಮಿನವರುಪೆಂಡಾಲ್‌ ಹಾಕಿ, ಮೆರವಣಿಗೆಯಲ್ಲಿ ಗಣೇಶ ಮೂರ್ತಿಯನ್ನು ತಂದು ಕೂಡಿಸಿ ಎಲ್ಲರೂ ಸೇರಿಕೊಂಡು ಪೂಜಿಸಿದರು.

‘ಕೋವಿಡ್‌ನಿಂದಾಗಿ ಎರಡು ವರ್ಷ ಗಣೇಶ ಮೂರ್ತಿಯನ್ನು ಕೂಡಿಸಿರಲಿಲ್ಲ. ಈ ವರ್ಷವೂ ಹಿಂದೂ– ಮುಸ್ಲಿಮರು ಸೇರಿಕೊಂಡೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ’ ಎಂದು ಆಯೋಜಕರಾದ ಪ್ರಮೋದ ಹೇಳಿದರು. ‘ನಮ್ಮಲ್ಲಿ ಮೊದಲಿನಿಂದಲೂ ಭೇದಭಾವ ಇಲ್ಲ. ಎಲ್ಲರೂ ಒಂದಾಗಿಯೇ ಇದ್ದೇವೆ. ನಾವೂ ಗಣೇಶ ಪ್ರತಿಷ್ಠಾಪನೆಗೆ ಕೈಜೋಡಿಸಿದ್ದೇವೆ’ ಎಂದು ಮುಸ್ಲಿಂ ಸಮುದಾಯದ ಸಿರಾಜ್‌ ಹೇಳಿದರು.

‘ಗ್ಯಾರೇಜ್ ಗಣೇಶ’ (ಗಂಗಾವತಿ, ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಶ್ರೀರಾಮನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಗ್ಯಾರೇಜ್‌ ಮಾಲೀಕರು ಸೌಹಾರ್ದದಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. 13 ವರ್ಷಗಳಿಂದ ಅವರ ಈ ಕಾಯಕ ಮುಂದುವರೆದಿದ್ದು, ಮೂರ್ತಿಗೆ ‘ಗ್ಯಾರೇಜ್ ಗಣೇಶ’ ಎಂದು ಹೆಸರಿಡಲಾಗಿದೆ.

‘ಎರಡೂ ಧರ್ಮಗಳ ಗ್ಯಾರೇಜ್‌ ಮಾಲೀಕರು ಮತ್ತು ಕೆಲಸಗಾರರು ಸೇರಿ ಹಣ ಸಂಗ್ರಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೇವೆ. ಸ್ಥಳೀಯ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿದ್ದೇವೆ’ ಎಂದು ಗ್ಯಾರೇಜ್ ಗಣೇಶ ಮಂಡಳಿ ಅಧ್ಯಕ್ಷ ಮುನ್ನಾಭಾಯ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಒಂದೇ ಕಡೆ 14 ಗ್ಯಾರೇಜ್‌ಗಳಿವೆ. ಮೂರ್ತಿ ಇರುವ ಐದು ದಿನ ಎಲ್ಲಾ ಗ್ಯಾರೇಜ್‌ಗಳು ಬಂದ್ ಇರುತ್ತವೆ. ತುರ್ತು ಸಂದರ್ಭದಲ್ಲಿ ರೈತರ ಸಲುವಾಗಿ ಮಾತ್ರ ಗ್ಯಾರೇಜ್ ತೆರೆಯುತ್ತೇವೆ’ ಎಂದರು.

ಮಸೀದಿ ಆವರಣದಲ್ಲಿ ಗಣೇಶೋತ್ಸವ (ಸಂತೇಬೆನ್ನೂರು, ದಾವಣಗೆರೆ ಜಿಲ್ಲೆ): ಹಿರೇಕೋಗಲೂರು ಗ್ರಾಮದ ಜಾಮಿಯಾ ಮಸೀದಿ ಆವರಣದಲ್ಲಿ ಕ್ರೇಜಿಸ್ಟಾರ್ ಹಿಂದೂ- ಮುಸ್ಲಿಂ ವಿನಾಯಕ ಯುವಕ ಸಂಘದ ವತಿಯಿಂದ ಬುಧವಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರು.

‘ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೇ 30 ವರ್ಷಗಳಿಂದ ಮಸೀದಿ ಆವರಣದಲ್ಲಿಯೇ ಗಣೇಶ ಹಬ್ಬ ಆಚರಿಸುತ್ತಿದ್ದೇವೆ. ಮೂರು ದಿನ ವಿಭಿನ್ನ ಧಾರ್ಮಿಕ ಕಾರ್ಯಕ್ರಮ, ಅನ್ನ ದಾಸೋಹ ನಡೆಸುವ ಮೂಲಕ ಎಲ್ಲರೂ ಸಹೋದರರು ಎಂಬ ಸಂದೇಶ ಸಾರುತ್ತಿದ್ದೇವೆ. ನಮ್ಮಲ್ಲಿ ಎಂದಿಗೂ ವೈಮನಸ್ಸು ಸೃಷ್ಟಿಯಾಗಿಲ್ಲ’ ಎಂದು ಸಂಘದ ಅಧ್ಯಕ್ಷ ಇಮ್ರಾನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT