ಶಹಾಪುರ (ಯಾದಗಿರಿ ಜಿಲ್ಲೆ): ‘ಈ ಸರ್ಕಾರ ನಿಮ್ಮನ್ನು ರಕ್ಷಣೆ ಮಾಡುವುದಿಲ್ಲ. ನಾನು ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡುತ್ತೇನೆ. ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಮುಸ್ಲಿಮರು ಯಾವ ರೀತಿ ಪೆಟ್ರೋಲ್ ಬಾಂಬ್, ತಲವಾರ್ ತೋರಿಸುತ್ತಾರೆ. ಕಲ್ಲು ತೂರಾಟ ಮಾಡುತ್ತಾರೆ. ನೀವು ಕೂಡಾ ಸನ್ನದ್ಧರಾಗಿ ಮೆರವಣಿಗೆ ಹೋಗಿ’ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಹಾಪುರ ನಗರದಲ್ಲಿ ಶನಿವಾರ ಹಿಂದೂ ಮಹಾಗಣಪತಿ ಮಹಾ ಮಂಡಳಿಯಿಂದ ಹಮ್ಮಿಕೊಂಡಿರುವ ಮಹಾಗಣಪತಿ ವಿಸರ್ಜನೆ ಶೋಭಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದಾಗ ಅವರು ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಮುಸ್ಲಿಮರನ್ನು ಓಲೈಕೆ ಮಾಡಿಕೊಂಡು ಬಂದಿದ್ದಾರೆ. ಹಿಂದೂಗಳ ಬಗ್ಗೆ ಅಸಹನೆ ಇಟ್ಟುಕೊಂಡಿದ್ದಾರೆ. ಹಿಂದೂಗಳು ನಿಮಗೆ ಓಟ ಹಾಕಿಲ್ವ?. ವೀರಶೈವ ಸಮಾಜಕ್ಕೆ ಸೇರಿದ 35 ಶಾಸಕರು ನಿಮ್ಮ ಬೆಂಬಲಕ್ಕೆ ಇದ್ದಾರೆ. ಮಾತೆತ್ತಿದರೆ ಹಿಂದುಳಿದವರ ಬಗ್ಗೆ ಭಾಷಣ ಹೊಡಿತ್ತೀರಿ. ಹಿಂದುಳಿದ ವರ್ಗದ ಬಗ್ಗೆ ನಿರ್ದಯದ ಭಾವನೆ ಇದೆ’ ಎಂದು ಅವರು ಆರೋಪಿಸಿದರು.
‘ಗಣೇಶ ಉತ್ಸವಕ್ಕೆ ನಿರ್ಬಂಧ ಹಾಕುತ್ತೀದ್ದಿರಿ. ಬೆಂಗಳೂರು, ತುಮಕೂರು ಕಲ್ಲು ತೂರಾಟ ಆಗುತ್ತದೆ. ಹಿಂದೂ ಕಾರ್ಯಕರ್ತರು ಎಲ್ಲಾದರೂ ಹೋದರೆ ಮತ್ತು ಹಿಂದೂಪರ ಧ್ವನಿ ಎತ್ತುವರು ಹೋದರೆ ನೀವು ಬ್ಯಾನ್ ಮಾಡಿಬಿಟ್ಟಿವಿ ಅಂತ ಹೇಳಿ ಪೊಲೀಸರನ್ನು ಕರೆದು ಜಿಲ್ಲೆಯಿಂದ ಹೊರ ಹಾಕುವ ಪ್ರವೃತ್ತಿ ಮಾಡುತ್ತಿದ್ದಿರಿ’ ಎಂದು ಪರೋಕ್ಷವಾಗಿ ಆಂದೋಲ ಸಿದ್ದಲಿಂಗಯ್ಯ ಸ್ವಾಮಿ ಅವರನ್ನು ಶಹಾಪುರಕ್ಕೆ ನಿರ್ಬಂಧ ಹಾಕಿದ ಕ್ರಮ ಬಗ್ಗೆ ಅವರು ಕಿಡಿಕಾರಿದರು.
‘ಮುಸ್ಲಿಮರು ಸಾಕಷ್ಟು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಅವರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ್, ಕರಣ ಸುಬೇದಾರ್, ಶಿವರಾಜ ದೇಶಮುಖ, ರಾಜಶೇಖರ ಗೂಗಲ್, ಬಸವರಾಜ ವಿಭೂತಿಹಳ್ಳಿ, ಅಡಿವೆಪ್ಪ ಜಾಕಾ ಉಪಸ್ಥಿತರಿದ್ದರು.