ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಸಂದರ್ಶನ | ಎಲ್‌ಒಸಿಗೆ ಶೇ 7–10ರಷ್ಟು ಕಮಿಷನ್‌: ಎಚ್‌ಡಿ ಕುಮಾರಸ್ವಾಮಿ
ಸಂದರ್ಶನ | ಎಲ್‌ಒಸಿಗೆ ಶೇ 7–10ರಷ್ಟು ಕಮಿಷನ್‌: ಎಚ್‌ಡಿ ಕುಮಾರಸ್ವಾಮಿ
ಫಾಲೋ ಮಾಡಿ
Published 24 ಸೆಪ್ಟೆಂಬರ್ 2023, 1:12 IST
Last Updated 24 ಸೆಪ್ಟೆಂಬರ್ 2023, 1:12 IST
Comments
ಕಾಮಗಾರಿ ಮುಗಿದ ಬಳಿಕ ಗುತ್ತಿಗೆದಾರರಿಗೆ ಎಲ್‌ಒಸಿ(ಹಣ ಭರವಸೆ ಪತ್ರ) ನೀಡಲು ಶೇ 7ರಿಂದ 10 ಪರ್ಸೆಂಟ್‌ ವಸೂಲಿ ಮಾಡಲಾಗುತ್ತಿದೆ. ಬಿಲ್ಡರ್‌ಗಳಿಂದ ಪ್ರತಿ ಚದರಡಿಗೆ ₹200 ನಿಗದಿ ಮಾಡಿ, ವಸೂಲು ಮಾಡಲಾಗುತ್ತಿದೆ. ಹಿಂದೆಂದೂ ಇಷ್ಟು ಭ್ರಷ್ಟಾಚಾರ ಇದ್ದುದನ್ನು ನಾನು ನೋಡಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ಪರಿ ಹಾಗೂ ಮೈತ್ರಿಯ ಅನಿವಾರ್ಯದ ಕುರಿತು ಅವರು ಮಾತನಾಡಿದರು.

‘ತಮ್ಮ ಜೀವನದಲ್ಲಿ ಎಂದೂ ಕಾಣದಿದ್ದ ಭ್ರಷ್ಟ ಬಿಜೆಪಿ ಸರ್ಕಾರ ಎಂದು ಹಳಿಯುತ್ತಿದ್ದೀರಿ. ಈಗ ಅದೆಲ್ಲ ಹೋಯಿತಾ’ ಎಂದು ಕೇಳಿದ ಪ್ರಶ್ನೆಗೆ, ‘ಹೇಳಿದ್ದು ಹೌದು; ನಾಲ್ಕು ವರ್ಷ ಅಧಿಕಾರ ನಡೆಸಿದ ಬಳಿಕ ಕೊನೆ ವರ್ಷ ಆಡಳಿತ ವಿರೋಧಿ ಅಲೆ ಏಳುವುದು ಸಹಜ. ನಾಲ್ಕೇ ತಿಂಗಳಲ್ಲಿ ಕಾಂಗ್ರೆಸ್ ಅಂತಹ ಪರಿಸ್ಥಿತಿ ಎದುರಿಸುತ್ತಿದೆ. ಯಾರ್ಯಾರಿಗೆ ಎಷ್ಟು ದರ ನಿಗದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಯಾರಿಂದ ಎಷ್ಟು ವಸೂಲಿ ಮಾಡಲಾಗುತ್ತಿದೆ. ನಾಲ್ಕು ವರ್ಷದ ಭ್ರಷ್ಟಾಚಾರವನ್ನು ನಾಲ್ಕೇ ತಿಂಗಳಲ್ಲಿ ಮೀರಿಸಿದ್ದಾರೆ. ಹೀಗಾದರೆ ರಾಜ್ಯ ಎಲ್ಲಿ ಉಳಿದೀತು? ಬ್ರ್ಯಾಂಡ್ ಬೆಂಗಳೂರು ಹೇಗೆ ಹೊಳಪು ಪಡೆದೀತು?’ ಎಂದು ಪ್ರಶ್ನಿಸಿದರು.

ಪ್ರ

ಮೈತ್ರಿಯ ಉದ್ದೇಶವೇನು?

2006ರಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದಾಗ ಅದು ಸಹಜ ಮೈತ್ರಿಯಾಗಿತ್ತು. ನಾನಾ ಕಾರಣಗಳಿಂದ ಅದು ಮುರಿದು ಬಿತ್ತು. ಆಗ ಕುಮಾರಸ್ವಾಮಿ ಒಳ್ಳೆಯ ಸರ್ಕಾರ ಕೊಟ್ಟರು ಎಂದು ಕರ್ನಾಟಕದ ಮನೆಮನೆಗಳಲ್ಲಿ ಜನ ಮಾತನಾಡುತ್ತಿದ್ದರು. ಆಗ ಮೂಡಿದ ಒಳ್ಳೆಯ ಅಭಿಪ್ರಾಯವೇ(ಗುಡ್‌ವಿಲ್‌) ಇಂದು ನಮ್ಮ ಪಕ್ಷವನ್ನು ಉಳಿಸಿದೆ. ಆದರೆ, ಕಾಂಗ್ರೆಸ್ ಜತೆ ಮಾಡಿಕೊಂಡ ಅಸಹಜ ಮೈತ್ರಿಯಿಂದಾಗಿ ಎಲ್ಲವೂ ಕಳೆದುಹೋಯಿತು. ಎರಡೂ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ರಾಜ್ಯದ ಜನರಿಗೆ ಕೂಡ ಬಿಜೆಪಿ–ಜೆಡಿಎಸ್‌ ಮೈತ್ರಿಯಾಗಬೇಕೆಂಬ ಭಾವನೆ ಇದೆ.

ಪ್ರ

ಎನ್‌ಡಿಎ ಭಾಗವಾಗಿರುವುದರಿಂದ ರಾಜ್ಯಕ್ಕೆ ಹಿತವೋ ನಿಮ್ಮ ಪಕ್ಷಕ್ಕೋ?

ಅಧಿಕಾರಕ್ಕಾಗಿ ಈ ಮೈತ್ರಿ ಮಾಡಿಕೊಂಡಿಲ್ಲ. ಈ ಸರ್ಕಾರದ ನಡವಳಿಕೆ ನೋಡಿದರೆ ಮುಂದೆ ಐದು ವರ್ಷದ ಇವರೇ ಇದ್ದರೆ ರಾಜ್ಯವನ್ನು ಉಳಿಸುವುದಿಲ್ಲ ಎಂಬುದು ಸ್ಪಷ್ಟ. ಪಕ್ಷವನ್ನು ಬಲಗೊಳಿಸುವ ಜತೆಗೆ ರಾಜ್ಯವನ್ನು ಉಳಿಸುವುದು ನಮ್ಮ ಮುಂದಿರುವ ಗುರಿ. ರಾಜ್ಯವನ್ನು ಸರಿದಾರಿಗೆ ತರಬೇಕಾದರೂ ಇಬ್ಬರೂ ಸೇರಿ ಹೋರಾಟ ನಡೆಸುವುದು ಅನಿವಾರ್ಯ. ಸರ್ಕಾರ ನಡೆಸುವ ಹಿಡಿಮಂದಿ ಸೇರಿಕೊಂಡು ಖಜಾನೆಯನ್ನೇ ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ತಡೆಯೊಡ್ಡಬೇಕಿದೆ.

ಪ್ರ

ಅಂದರೆ ಮತ್ತೆ ಇಬ್ಬರು ಸೇರಿ ಸರ್ಕಾರ ರಚಿಸುತ್ತೀರಾ?

ನಾಲ್ಕು ತಿಂಗಳಲ್ಲೇ ಅವರಲ್ಲಿನ ಭಿನ್ನಾಭಿಪ್ರಾಯ ಹೊರಬಂದಿದೆ. ಮೂವರು ಡಿಸಿಎಂ ಸೃಷ್ಟಿ ಚರ್ಚೆ ನಡೆದಿದೆ. ಇವೆಲ್ಲ ನೋಡುತ್ತಿದ್ದರೆ, ಕಾಂಗ್ರೆಸ್‌ ನಾಯಕರಲ್ಲಿ, ಜನರಲ್ಲಿ ಈ ಸರ್ಕಾರ ಐದು ವರ್ಷ ಇರುತ್ತದೆಯೇ ಎಂಬ ಅನುಮಾನ ಮೂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಎರಡೂ ಪಕ್ಷಗಳು ಪಡೆದ ಮತ ಕೂಡಿದರೆ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. 2019ರಲ್ಲಿ ಲೋಕಸಭಾ ಫಲಿತಾಂಶ ಬಂದರೆ ನಂತರ ಏನಾಯ್ತು?

ಪ್ರ

ನಿಮ್ಮ ನೇತೃತ್ವದ ಸರ್ಕಾರ ಉರುಳಿಸಿದಂತೆ ಮತ್ತೆ ಈ ಸರ್ಕಾರ?

135 ಸದಸ್ಯರ ಬಲದ ಸರ್ಕಾರ ಹೋಗುತ್ತದೆ ಎಂದು ಹೇಳಲಾರೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸದೇ ಇದ್ದರೆ ಸರ್ಕಾರ ವಿಸರ್ಜನೆ ಮಾಡಬೇಕಾದ ಸಂದರ್ಭ ಬರಬಹುದು ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. 25–26 ಸೀಟು ವಿರೋಧ ಪಕ್ಷಗಳ ಪಾಲಾದರೆ ಕಾಂಗ್ರೆಸ್ ಸರ್ಕಾರದ ಸ್ಥಿತಿ ಏನು ಎಂಬುದನ್ನು ಸಚಿವರೇ ಪ್ರಶ್ನಿಸುತ್ತಿದ್ದಾರೆ. ಅವರ ಮಾತುಗಳಲ್ಲೇ ಎಲ್ಲ ಅರ್ಥ ಇದೆಯಲ್ಲ!

ಪ್ರ

ತತಕ್ಷಣದ ಕಾರ್ಯಸೂಚಿ ಏನು?

ನಮ್ಮ ಹಾಗೂ ಬಿಜೆಪಿ ಎರಡೂ ಪಕ್ಷಗಳ ಸಂಘಟನೆಯನ್ನು ಬಲಗೊಳಿಸಬೇಕಿದೆ. ಪರಸ್ಪರ ಸಹಕಾರದೊಂದಿಗೆ ಈ ಕೆಲಸವನ್ನು ಆದ್ಯತೆ ಮೇಲೆ ಮಾಡಲಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವುದು ಒಂದು ಭಾಗ. ಅದಕ್ಕಿಂತ ಮುಖ್ಯವಾಗಿ ನೀರಾವರಿ, ಅಂತರರಾಜ್ಯ ವಿವಾದದಂತಹ ಸೂಕ್ಷ್ಮ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಬುದ್ದಿವಂತಿಕೆ ಹಾಗೂ ಕಾನೂನಾತ್ಮಕ ನೆಲೆಯಲ್ಲಿ ಇವೆಲ್ಲ ಬಗೆಹರಿಸುವುದು ನನ್ನ ಆಸಕ್ತಿ. ಎನ್‌ಡಿಎ ಭಾಗವಾಗಿರುವುದರಿಂದ ಕೇಂದ್ರ ಸರ್ಕಾರದ ಪ್ರಮುಖರ ಮನವೊಲಿಸುವ ಯತ್ನ ಮಾಡುವೆ. ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದೆ ಆಗಿರುವ ಅನ್ಯಾಯ ಸರಿಪಡಿಸುವುದೇ ಮೈತ್ರಿಯ ಪ್ರಮುಖ ಉದ್ದೇಶ.

ಪ್ರ

ನೀವು ವಿರೋಧ ಪಕ್ಷದ ನಾಯಕರಾ ಅಥವಾ ಕೇಂದ್ರ ಸಚಿವರಾ?

ಎರಡೂ ಆಗುವುದಿಲ್ಲ. ಬಿಜೆಪಿಯಿಂದ 66 ಶಾಸಕರು ಗೆದ್ದಿದ್ದು, ಆ ಪಕ್ಷದಲ್ಲೇ ವಿರೋಧ ಪಕ್ಷದ ನಾಯಕರಾಗುವ ಸಮರ್ಥರು ಸಾಕಷ್ಟಿದ್ದಾರೆ. ಅದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇನೆ ವಿನಃ ವಿರೋಧ ಪಕ್ಷದ ನಾಯಕ ಸ್ಥಾನ ಒಪ್ಪಲಾರೆ. ಎರಡೂ ಪಕ್ಷದ ಮಧ್ಯೆ ಸಮನ್ವಯಕಾರನಾಗಿ ಕೆಲಸ ಮಾಡುತ್ತೇನೆ. ಅಧಿಕಾರ ಬೇಡ.

ಪ್ರ

ಮಂಡ್ಯ ನಿಖಿಲ್ ಕುಮಾರಸ್ವಾಮಿಗೆ ದಕ್ಕುತ್ತಾ?

ನಿಖಿಲ್‌ಗೆ ರಾಜಕೀಯ ಆಸಕ್ತಿ ಅಷ್ಟಾಗಿ ಇಲ್ಲ. ಆತ ಸಿನಿಮಾರಂಗದಲ್ಲೇ ಮುಂದೆ ಬರಬೇಕೆಂದು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾನೆ.

ಪ್ರ

ಹಿಂದೆಲ್ಲ ಜನತಾ ಪರಿವಾರ ಕೈಜೋಡಿಸಿದಾಗ ಬಿಜೆಪಿಗೆ ಲಾಭವಾಗಿದೆ. ಜನತಾ ಪರಿವಾರ ಮುಳುಗಿದೆಯಲ್ಲ?

ಬಿಜೆಪಿ ಜತೆಗಿನ ಮೈತ್ರಿ ಮುರಿಯದೇ ಹೋಗಿದ್ದರೆ ಒಡಿಶಾದಲ್ಲಿ ಬಿಜು ಪಟ್ನಾಯಕ್– ನವೀನ್ ಪಟ್ನಾಯಕ್ ರೀತಿಯಲ್ಲೇ ಕರ್ನಾಟಕದಲ್ಲೂ ನಮ್ಮ ಪಕ್ಷ ಬಲಿಷ್ಠವಾಗಿರುತ್ತಿತ್ತು. ಇವತ್ತು ನಮ್ಮ ಪಕ್ಷ ಉಳಿದಿದ್ದರೆ ಅದಕ್ಕೆ ಬಿಜೆಪಿ ಜತೆಗಿನ 20 ತಿಂಗಳ ಸರ್ಕಾರವೇ ಕಾರಣ. ಅಂದು ಮೈತ್ರಿ ಮುರಿದು ಬಿದ್ದುದರಿಂದ ಹಲವು ಶಾಸಕರು, ಮಾಜಿ ಶಾಸಕರು ಬೇರೆ ಪಕ್ಷದ ಕಡೆಗೆ ಹೋದರು. ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾಗ ಎಂ.ಪಿ. ಪ್ರಕಾಶ್, ಪಿ.ಜಿ.ಆರ್. ಸಿಂಧ್ಯ ಅವರಂತಹ ನಾಯಕರು ಇದ್ದರು. ಆಗ ನಮ್ಮ ಪಕ್ಷ ಪಡೆದ ಸ್ಥಾನ 58. ಬಳಿಕ ದೇವೇಗೌಡರ ನಾಯಕತ್ವದಲ್ಲಿ ನಾನೊಬ್ಬನೇ ರಾಜ್ಯ ಸುತ್ತಿದಾಗ 2013ರಲ್ಲಿ 40, 2018ರಲ್ಲಿ 38 ಕ್ಷೇತ್ರಗಳಲ್ಲಿ ಗೆಲ್ಲಲಿಲ್ಲವೇ.

ಪ್ರ

ಕೆಲವು ಶಾಸಕರು ಪಕ್ಷ ಬಿಡಲಿದ್ದಾರಂತೆ?

ಯಾರೂ ಪಕ್ಷ ಬಿಡುವುದಿಲ್ಲ. ಮೈತ್ರಿಯಾಗಿರುವುದರಿಂದ ಬಿಜೆಪಿ–ಜೆಡಿಎಸ್‌ ಎರಡೂ ಪಕ್ಷಗಳ ಶಾಸಕರಲ್ಲಿ ವಿಶ್ವಾಸ ಮೂಡಲಿದ್ದು, ಹೋಗುವ ಮನಸ್ಸು ಮಾಡಿದವರು ಆಯಾ ಪಕ್ಷಗಳಲ್ಲೇ ಉಳಿಯಲಿದ್ದಾರೆ.

ಪ್ರ

ಮುಸ್ಲಿಂ ಸಮುದಾಯದ ನಾಯಕರು ಪಕ್ಷ ಬಿಡುತ್ತಿದ್ದಾರಲ್ಲ?

ಅದು ಅವರ ತೀರ್ಮಾನ. ನಮ್ಮ ಪಕ್ಷ ಉಳಿಸಿಕೊಂಡು ರಾಜ್ಯದ ಹಿತ ಕಾಪಾಡುವುದು ನಮ್ಮ ಗುರಿ. ಬಿಡಲು ಹೊರಟಿರುವವರಿಂದ ನಮ್ಮ ಪಕ್ಷಕ್ಕೆ ಏನು ಸಿಕ್ಕಿದೆ. ಎರಡು ಅವಧಿಯಲ್ಲಿ ಅಧಿಕಾರ ಇಲ್ಲದೇ ಇದ್ದರೂ ಎಲ್ಲ ರೀತಿಯ ನೆರವು ನೀಡಿದೆ. ಎಷ್ಟು ಸ್ಥಾನ ಗೆಲ್ಲಿಸಿಕೊಂಡು ಬಂದರು? ಆ ಸಮುದಾಯಕ್ಕೆ ನಮ್ಮ ಪಕ್ಷ ನೀಡಿದಷ್ಟು ನೆರವನ್ನು ಯಾರೂ ಕೊಟ್ಟಿಲ್ಲ; ಅವರು ನಮ್ಮ ಕೈಹಿಡಿಯಲಿಲ್ಲ.

ಪ್ರ

ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಟ್ಟು ಅವರನ್ನು ಹೊರಗಿಟ್ಟು ಮಾತುಕತೆ ನಡೆಸಿದ್ದೀರಿ?

ದೆಹಲಿಗೆ ಹೋಗುವ ಮೊದಲು ಎಲ್ಲವನ್ನೂ ಇಬ್ರಾಹಿಂ ಅವರ ಜತೆ ಚರ್ಚೆ ನಡೆಸಿಯೇ ಹೋಗಿರುವೆ. ಅವರನ್ನು ಹೊರಗಿಟ್ಟು ಏನನ್ನೂ ಮಾಡಿಲ್ಲ. ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಎಲ್ಲ ವಿವರಗಳನ್ನೂ ಅವರಿಗೆ ನೀಡಿರುವೆ. ಮುಂದಿನ ಚರ್ಚೆಗಳಲ್ಲಿ ಅವರೂ ಇರಲಿದ್ದಾರೆ

ಅನಂತಕುಮಾರ್ ಡಿಸಿಎಂ ಮಾಡಲು ಸಿದ್ದರಾಮಯ್ಯ ಅಣಿಯಾಗಿರಲಿಲ್ಲವೇ?
ತಾವು ಮುಖ್ಯಮಂತ್ರಿ, ಅನಂತಕುಮಾರ್ ಉಪ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲು ಸಿದ್ದರಾಮಯ್ಯನವರು 2004ರಲ್ಲಿ ಜೆಡಿಎಸ್‌ನಲ್ಲಿದ್ದಾಗಲೇ ಅಣಿಯಾಗಿರಲಿಲ್ಲವೇ? ಆಗ ಜಾತ್ಯತೀತ ಸಿದ್ಧಾಂತ ನೆನಪಿಗೆ ಬರಲಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ‘ನಿಮ್ಮ ಪಕ್ಷದ ಜತೆಗೆ ಅಂಟಿಕೊಂಡ ಜಾತ್ಯತೀತ ಪದದ ಕತೆಯೇನು’ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್‌ನ ಕೆಳಹಂತದ ನಾಯಕರು ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಜೋಷಿ, ಸಂತೋಷ್ ಅವರ ಬಗ್ಗೆ ಟೀಕಿಸಿದ್ದೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮಾಡಿದ್ದೇನು’ ಎಂದು ಕೇಳಿದರು. ‘2004ರಲ್ಲಿ ಯಾರಿಗೂ ಬಹುಮತ ಬರದೇ ಇದ್ದಾಗ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಅವರನ್ನು ಸಿದ್ದರಾಮಯ್ಯ ಏಕೆ ಭೇಟಿಯಾಗಿದ್ದರು. ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಭೇಟಿ ಚೆನ್ನೈಗೆ ಬದಲಾಗಿತ್ತು. ಆಗ ನಾಲ್ವರು ಚೆನ್ನೈಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರಲ್ಲ; ಅದೆಲ್ಲ ಮರೆತುಹೋಯಿತಾ. ಈಗ ಅನಂತಕುಮಾರ್ ಅವರಿಲ್ಲ; ಸಿದ್ದರಾಮಯ್ಯ(ಜೆಡಿಎಸ್‌) ಮುಖ್ಯಮಂತ್ರಿ, ಅನಂತಕುಮಾರ್ ಉಪಮುಖ್ಯಮಂತ್ರಿಯಾಗಿ ಸರ್ಕಾರ ರಚಿಸುವ ಮಾತುಕತೆಯಾಗಿತ್ತಲ್ಲವೇ? ಅಂದು ಕೆಎಎಸ್‌ ಅಧಿಕಾರಿಗಳ ಸಂಘದಲ್ಲಿ ನಡೆದ ಸಭೆಯಲ್ಲಿ ಯಾರ್ಯಾರು ಪಾಲ್ಗೊಂಡಿದ್ದರು?’ ಎಂದರು. ‘2008ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದಾಗ ಸಿಟ್ಟಿಗೆದ್ದ ಸಿದ್ದರಾಮಯ್ಯ ಯಡಿಯೂರಪ್ಪನವರನ್ನು ಭೇಟಿಯಾಗಿ, ಹಣಕಾಸು ಖಾತೆ ಕೊಡಿ. ಮಹದೇವಪ್ಪ, ಸತೀಶ ಜಾರಕಿಹೊಳಿ ಪಕ್ಷ ಸೇರುತ್ತೇವೆ ಎಂಬ ಪ್ರಸ್ತಾವ ಮುಂದಿಟ್ಟರಲಿಲ್ಲವೇ? ಸಿದ್ದರಾಮಯ್ಯನವರು ನಮ್ಮ ಪಕ್ಷದಲ್ಲಿದ್ದಾಗ ಸೋನಿಯಾಗಾಂಧಿಯವರನ್ನು ಬೈಯ್ದಿರಲಿಲ್ಲವೇ? ಎಂದು ಪ್ರಶ್ನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT