ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪುಸ್ತಕ ಖಗೋಳ ವಿಜ್ಞಾನದ ವಿಶ್ವ ದರ್ಶನಕ್ಕೊಂದು ಏಣಿ

Published 26 ಆಗಸ್ಟ್ 2023, 20:09 IST
Last Updated 26 ಆಗಸ್ಟ್ 2023, 20:09 IST
ಅಕ್ಷರ ಗಾತ್ರ

––ಎಸ್‌.ರವಿಪ್ರಕಾಶ್

ಬೆಂಗಳೂರು: ಚಂದ್ರಯಾನ–3ರ ಲ್ಯಾಂಡರ್‌(ವಿಕ್ರಮ್)–ರೋವರ್‌ (ಪ್ರಜ್ಞಾನ್) ಚಂದ್ರನ ಅಂಗಳಕ್ಕೆ ಇಳಿದಿರುವುದರ ಹರ್ಷೋಲ್ಲಾಸದ ‘ಜ್ವರ’ ಇಡೀ ಜಗತ್ತಿನಲ್ಲಿ ವ್ಯಾಪಿಸಿರುವ ವೇಳೆಯಲ್ಲೇ ‘ನವಕರ್ನಾಟಕ’ ಪ್ರಕಟಿಸಿರುವ ‘ಖಗೋಳ ದರ್ಶನ–ಅಂತರಿಕ್ಷಕ್ಕೆ ಹಂತ ಹಂತದ ಮೆಟ್ಟಿಲು’ ಕೃತಿ ಹೊರಬಂದಿದೆ. ವಾಸ್ತವದಲ್ಲಿ ವಿಕ್ರಮ್ ಮತ್ತು ಪ್ರಜ್ಞಾನ್ ಚಂದ್ರನ ಅಂಗಳಕ್ಕೆ ಇಳಿಯುವುದಕ್ಕೂ ಮೊದಲೇ ಓದುಗರ ಮಡಿಲಿಗೆ ಖಗೋಳ ದರ್ಶನ ಅಡಿ ಇಟ್ಟಿದೆ.

ಧರೆಯಲ್ಲಿನ ಪ್ರತಿಯೊಂದೂ ಜೀವಿಗೂ ಖಗೋಳವೆನ್ನುವುದು ವಿಸ್ಮಯ. ಮಿದುಳು ಹೆಚ್ಚು ವಿಕಾಸಗೊಂಡಿರುವ ಮಾನವ ಅಲ್ಲಿಗೆ ಏಣಿ ಇಡುವ ಪ್ರಯತ್ನ ಮಾಡಿದರೆ, ಉಳಿದ ಜೀವಿಗಳು ಖಗೋಳ ವಿದ್ಯಮಾನಗಳಿಗೆ ತಮ್ಮದೇ ಆದ ರೀತಿಯಲ್ಲಿ ಸಂವೇದನೆಗಳನ್ನು ವ್ಯಕ್ತ‍ಪಡಿಸುವುದನ್ನು ಸೂಕ್ಷ್ಮ ಮನಸ್ಸಿನಿಂದ ನೋಡಿದಾಗ ಗೋಚರಿಸುತ್ತದೆ. ಪ್ರತಿಯೊಂದು ಜೀವಿಗೂ ಬ್ರಹ್ಮಾಂಡದೊಂದಿಗೆ ಅಗೋಚರ ನಂಟು ಇರುವುದು ಸ್ಪಷ್ಟ. ಇಂತಹ ಅನೂಹ್ಯ ಖಗೋಳದ ದರ್ಶನಕ್ಕೆ ಈ ಕೃತಿ ‘ಕಿಂಡಿ ಬಾಗಿಲು’.

ನಮ್ಮ ಸೌರ ಮಂಡಲ ಮತ್ತು ಅದರ ಗ್ರಹಗಳು, ಆಕಾಶಗಂಗೆ, ನಕ್ಷತ್ರಪುಂಜಗಳು, ಕಪ್ಪುಕುಳಿಗಳು ಇವುಗಳ ಸೃಷ್ಟಿ , ವಿಕಾಸ, ಲಯ ಇತ್ಯಾದಿಗಳು ಕುರಿತು ಆ ಕ್ಷೇತ್ರಗಳಲ್ಲೇ ಕೆಲಸ ಮಾಡಿರುವ ಖಭೌತ ವಿಜ್ಞಾನಿಗಳೇ ವಿದ್ವತ್‌ಪೂರ್ಣ ಲೇಖನಗಳನ್ನು ಬರೆದಿರುವುದು ವಿಶೇಷತೆ. 457 ಪುಟಗಳ ಈ ಕೃತಿ ನುಣುಪು ಹಾಳೆಗಳ ಮೇಲೆ ವಿಷಯಕ್ಕೆ ಪೂರಕವಾಗಿ ವರ್ಣರಂಜಿತ ಛಾಯಾಚಿತ್ರಗಳು, ರೇಖಾಚಿತ್ರಗಳು, ಗ್ರಾಫಿಕ್ಸ್‌ಗಳನ್ನು ಒಳಗೊಂಡಿದೆ. ವಿವಿಧ ಖಗೋಳ ದೂರದರ್ಶಕ ವೀಕ್ಷಣಾಲಯಗಳು ಸೆರೆ ಹಿಡಿದ ರಮ್ಯವಾದ ನಕ್ಷತ್ರಪುಂಜ, ಭೀಮ ಪುಂಜ, 5.5 ಕೋಟಿ ಜ್ಯೋತಿರ್ವರ್ಷ ದೂರದಲ್ಲಿರುವ ಗ್ಯಾಲಕ್ಸಿಯಲ್ಲಿ ಸುರಳಿಯಲ್ಲಿ ಸ್ಫೋಟಿಸಿರುವ ಸುಪರ್ನೋವಾ, 2 ಜ್ಯೋತಿರ್ವರ್ಷ ದೂರದಲ್ಲಿರುವ ಕ್ಯರಿನಾ ನೆಬ್ಯುಲಾ ಮತ್ತು ಅಂತಹ ಹಲವು ಅಪರೂಪದ ಚಿತ್ರಗಳಿವೆ. ಖಗೋಳ ವೀಕ್ಷಣಾಲಯಗಳು, ಬಾಹ್ಯಾಕಾಶಯಾನಗಳ ವಿವರಗಳು ಖಗೋಳ ವಿಜ್ಞಾನದ ಆಸಕ್ತರ ಜ್ಞಾನದ ದಾಹವನ್ನು ತಣಿಸುವ ಸಮಗ್ರ ಕೃತಿ. ತೀರಾ ಇತ್ತೀಚಿನ ತಾಜಾ ಮಾಹಿತಿಗಳನ್ನೂ ಅಡಕಗೊಳಿಸಲಾಗಿದೆ.

ಬಹು ಚರ್ಚಿತ ವಿಶ್ವದ (universe) ಅಗೋಚರ ಶಕ್ತಿಯ ಕುರಿತು ಒಂದು ಅಧ್ಯಾಯವಿದೆ. ವಿಶ್ವದಲ್ಲಿ ಕಾಣಸಿಗುವ ಭೌತಿಕ ವಸ್ತುವು ಸಾಮಾನ್ಯ ದ್ರವ್ಯ ಅಥವಾ ಕಪ್ಪು ದ್ರವ್ಯ ಅಥವಾ ಎರಡರ ಮಿಶ್ರಣ. ಅದರ ಒಟ್ಟು ಮೊತ್ತದಿಂದ ಸಮತಲದ ಜ್ಯಾಮಿತಿಯನ್ನು ವಿವರಿಸುವುದು ಕಷ್ಟ. ಚೈತ್ಯನದ ಈ
ಅಗಾಧ ವ್ಯತ್ಯಾಸವನ್ನು ಹೊಂದಿಸಲು ಬೇರೊಂದು ಮೂಲವನ್ನೇ ಹುಡುಕಬೇಕಾಗುವುದು. ಈ ಬಗೆಯ ಸಮತಲದ ಜ್ಯಾಮಿತಿಯನ್ನು ಮಾರ್ಪಡಿಸಲು ಆಗದ ಶಕ್ತಿ ಯನ್ನು ಅಗೋಚರ ಶಕ್ತಿ ಎನ್ನಲಾಗುತ್ತದೆ. ಇದೇ ವಿಶ್ವದ ವೇಗೋತ್ಕರ್ಷಕ್ಕೆ ಕಾರಣ. ಇದು ಗುರುತ್ವಾಕರ್ಷಣ ವಿರೋಧಿ ಬಲವೂ ಆಗಿದೆ. ಅಗೋಚರ ವಸ್ತುವಿನ
ನಿಗೂಢ ಗುಣಲಕ್ಷಣಗಳು ವಿಜ್ಞಾನಿ ಗಳ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿದೆ. ನಾವು ಕಾಣುವ ವಿಶ್ವವು ಶೇ 4 ಭಾಗ ಮಾತ್ರ. ಉಳಿದೆಲ್ಲದರ ಬಗ್ಗೆ ಅರಿವೇ ಇಲ್ಲ, ಅತೀತವಾಗಿಯೇ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಆ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಗಗನಯಾನಿಗಳ ಕುರಿತ ಅಧ್ಯಾಯವೂ ಹಲವು ಸ್ವಾರಸ್ಯಕರ ಮಾಹಿತಿಗಳನ್ನು ಒಳಗೊಂಡಿದೆ.

ಖಗೋಳ ದರ್ಶನ– ಅಂತರಿಕ್ಷಕ್ಕೆ ಹಂತ ಹಂತದ ಮೆಟ್ಟಿಲು ಸಂ: ಡಾ.ಬಿ.ಎಸ್.ಶೈಲಜಾ ಡಾ.ಟಿ.ಆರ್.ಅನಂತರಾಮು ಪ್ರ: ನವಕರ್ನಾಟಕ ಸಂ:080–22161900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT