ಬೆಂಗಳೂರು: ರಾಜ್ಯದ ಶೇ 90ರಷ್ಟು ಗ್ರಾಮ ಪಂಚಾಯಿತಿಗಳ ಅವಧಿ ಇನ್ನೆರಡು ತಿಂಗಳ ಒಳಗೆ ಮುಕ್ತಾಯವಾಗಲಿದ್ದು, ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳ ಜತೆಗೇ ಗ್ರಾಮ ಪಂಚಾಯಿತಿಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ‘ಮೂರು ಸ್ತರ: ಒಂದು ಗ್ರಾಮ–ಒಂದು ಚುನಾವಣೆ’ ಸೂತ್ರವನ್ನು ಸಿದ್ಧಪಡಿಸುತ್ತಿದೆ.

ಮೂರೂ ಸ್ತರದ ಪಂಚಾಯಿತಿಗಳಿಗೆ ಒಂದೇ ಬಾರಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್ ಒಳಗೆ ಮಾಡಿಕೊಂಡು, ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಲು ತೀರ್ಮಾನಿಸಿದೆ. ಒಂದು ಗ್ರಾಮ ಒಂದು ಚುನಾವಣೆಯಿಂದಾಗಿ ಗ್ರಾಮೀಣ ಜನರು ತಮ್ಮ ಮತಗಟ್ಟೆಗೆ ತೆರಳಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಏಕಕಾಲಕ್ಕೆ ಪ್ರತ್ಯೇಕ ಮೂರು ಮತದಾನ ಮಾಡಬಹುದು. ಇದರಿಂದ ಸಮಯ, ಶ್ರಮ ಹಾಗೂ ಚುನಾವಣಾ ವೆಚ್ಚ ಕಡಿಮೆಯಾಗುತ್ತದೆ.

ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬದಲಿಗೆ ಮತ ಪತ್ರ (ಬ್ಯಾಲಟ್ ಪೇಪರ್) ಬಳಸಿ ಮತ ಚಲಾಯಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಹಿಂದೆ ಇವಿಎಂಗಳನ್ನು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಲಾಗಿತ್ತು.

ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ 2020–21ರಲ್ಲಿ ಚುನಾವಣೆ ನಡೆಸಲಾಗಿತ್ತು. ಅವುಗಳ ಅವಧಿಯು ಇದೇ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ಒಳಗೆ ಕೊನೆಗೊಳ್ಳಲಿವೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು.

ಕೆಲ ವರ್ಷಗಳ ಹಿಂದೆಯೇ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡು ಪ್ರಕಟಿಸಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ನೀಡಿತ್ತು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೊರೆ ಹೋಗಿತ್ತು. ನಂತರ ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಅಂತಿಮಗೊಳಿಸಿರಲಿಲ್ಲ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವಿವಿಧ ಸಂಘಟನೆಗಳ ಜನಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಈ ವಿಷಯ ವಿಧಾನಮಂಡಲದ ಅಧಿವೇಶನದಲ್ಲೂ ಚರ್ಚೆಯಾಗಿತ್ತು.

ಒಂದು ಚುನಾವಣೆಗೆ ವ್ಯಾಜ್ಯಗಳ ತೊಡಕು

ಮೂರೂ ಸ್ತರಗಳಿಗೆ ಚುನಾವಣೆ ನಡೆಸಲು ಹಿಂದೆಯೇ ಚಿಂತನೆ ನಡೆದಿತ್ತು. ಕ್ಷೇತ್ರ ಪುನರ್ವಿಂಗಡಣೆ ಮೀಸಲಾತಿ ಪಟ್ಟಿ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಸೇರಿದಂತೆ ಸಣ್ಣ ವಿಷಯಗಳಿಗೂ ಕೆಲವರು ಕೋರ್ಟ್ ಮೊರೆ ಹೋಗುತ್ತಾರೆ. ಇದರಿಂದ ಒಂದು ಗ್ರಾಮ–ಒಂದು ಚುನಾವಣೆ ಆಶಯ ಸಾಕಾರಕ್ಕೆ ತೊಡಕಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ‘ಕೋರ್ಟ್ ವಿವಾದ ಮತ್ತಿತರ ಕಾರಣಗಳಿಗಾಗಿ ಚುನಾವಣೆ ವಿಳಂಬವಾಗುವ ಗ್ರಾಮ ಪಂಚಾಯಿತಿಗಳ ಸಂಖ್ಯೆ ಶೇ 10ಕ್ಕಿಂತ ಕಡಿಮೆ. ತಾಲ್ಲೂಕು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಈಗಾಗಲೇ ಸಿದ್ಧತೆ ನಡೆದಿದೆ. ಹಾಗಾಗಿ ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳನ್ನೂ ಸೇರಿಸಿಕೊಂಡು ಒಟ್ಟಿಗೆ ಚುನಾವಣೆ ನಡೆಸುವ ಆಲೋಚನೆ ಇದೆ. ಶೀಘ್ರ ಚುನಾವಣೆ ನಡೆಸಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜನಪ್ರತಿನಿಧಿಗಳ ಸಮಿತಿಗೆ ಒತ್ತಾಯ

ಐದು ವರ್ಷ ಪೂರೈಸುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಆದೇಶಕ್ಕೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿಗಳ ಸದಸ್ಯರ ಮಹಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ‘2026–31ನೇ ಅವಧಿಗೆ ಮತ್ತೆ ಚುನಾವಣೆ ನಡೆಯುವವರೆಗೆ ಅವಧಿ ಮುಗಿದ ದಿನಾಂಕದಿಂದ ಅನ್ವಯವಾಗುವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ತಕ್ಷಣ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕು’ ಎಂಬ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಲ್ಲಿ ನೀಡಿರುವ ಅವಕಾಶದಂತೆ ಈಗಿರುವ ಜನಪ್ರತಿನಿಧಿಗಳ ಆಡಳಿತ ಸಮಿತಿಗಳನ್ನೇ ನೂತನ ಆಡಳಿತ ಸಮಿತಿಗಳನ್ನಾಗಿ ಮುಂದಿನ ಆರು ತಿಂಗಳಿಗೆ ನೇಮಕ ಮಾಡಬೇಕು ಎಂದು ಮಹಾಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಒತ್ತಾಯಿಸಿದ್ದಾರೆ.

ಮೂರು ಸ್ತರಗಳ ಪ್ರತ್ಯೇಕ ಚುನಾವಣೆಯಿಂದ ಒಂದೂವರೆ ವರ್ಷ ಚುನಾವಣೆ ಪ್ರಕ್ರಿಯೆಯಲ್ಲೇ ಮುಗಿದುಹೋಗುತ್ತದೆ. ಕೆಲಸಗಳೇ ಆಗುವುದಿಲ್ಲ. ಒಂದು ಗ್ರಾಮ–ಒಂದು ಚುನಾವಣೆ ಇದಕ್ಕೆ ಪರಿಹಾರ
-ಮಂಜುನಾಥ ಭಂಡಾರಿ, ವಿಧಾನಪರಿಷತ್ ಸದಸ್ಯ

ಅಂಕಿ ಅಂಶಗಳು

5,948: ಕರ್ನಾಟಕದ ಗ್ರಾಮ ಪಂಚಾಯಿತಿಗಳು

95 ಸಾವಿರ: ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು

31: ಜಿಲ್ಲಾ ಪಂಚಾಯಿತಿಗಳು

240: ತಾಲ್ಲೂಕು ಪಂಚಾಯಿತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.