ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಮಣಿಸಲು ‘ಇಂಡಿಯಾ’ ಅಣಿ: ಬಿಜೆಪಿಯೇತರ 26 ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ

Published 18 ಜುಲೈ 2023, 20:03 IST
Last Updated 18 ಜುಲೈ 2023, 20:03 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ (ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್– ‘ಇಂಡಿಯಾ’‌) ರಚಿಸಿಕೊಂಡಿದ್ದು, ಚುನಾವಣಾ ರಾಜಕೀಯದತ್ತ ಒಂದು ಹೆಜ್ಜೆ ಮುಂದಿಟ್ಟಿವೆ.

ಮೈತ್ರಿಕೂಟದ ಮುಂದಿನ ಸಭೆಯನ್ನು ಶೀಘ್ರದಲ್ಲಿ ಮುಂಬೈಯಲ್ಲಿ ನಡೆಸಿ, 11 ಸದಸ್ಯರ ಸಮನ್ವಯ ಸಮಿತಿ ರಚಿಸಲು ಇಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಾಯಕರು ತೀರ್ಮಾನಿಸಿದ್ದಾರೆ.

ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ನಡೆದ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೈತ್ರಿಕೂಟದ ಹೆಸರು ಪ್ರಕಟಿಸಿದರು. ಅಧಿಕಾರಕ್ಕಾಗಿ ಅಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಾಂವಿಧಾನಿಕ ಸಂಸ್ಥೆಗಳ ಉಳಿವು‌, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ಈ ‘ಇಂಡಿಯಾ’ ಎಂದೂ ಘೋಷಿಸಿದರು.

‘ಮಹಾರಾಷ್ಟ್ರದ ಮುಂಬೈಯಲ್ಲಿ ‘ಇಂಡಿಯಾ’ದ ‌ಸಭೆ ಸೇರಿ, ಒಕ್ಕೂಟದ ಸಮನ್ವಯ ಸಮಿತಿ, ಪ್ರಚಾರ‌ ಮತ್ತು ಇತರ ಸಮಿತಿಗಳ ನಿರ್ವಹಣೆಗೆ ಕಾರ್ಯದರ್ಶಿಯನ್ನು ನೇಮಿಸುತ್ತೇವೆ. ದೆಹಲಿಯಲ್ಲಿ ಕಚೇರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಪಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ ಬಿಜೆಪಿಯೇತರ 16 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಇಲ್ಲಿ ನಮ್ಮ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಭೆ ನಡೆಸಿದ್ದು, ಇಷ್ಟು ದಿನ ಮೈತ್ರಿ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ನಮ್ಮ ಒಗ್ಗಟ್ಟು ನೋಡಿ ಮೋದಿ ಹೆದರಿದ್ದಾರೆ. ಅವರು 30 ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಎನ್‌ಡಿಎದಲ್ಲಿ ಅಷ್ಟು ಪಕ್ಷಗಳು ಇವೆಯೇ, ಅವುಗಳಲ್ಲಿ ಎಷ್ಟು ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿವೆ ಎನ್ನುವುದು ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದೆ. ವಿರೋಧ ಪಕ್ಷಗಳ ನಾಯಕರು, ಕಾರ್ಯಕರ್ತರ ವಿರುದ್ಧ ಸಿಬಿಐ, ಇ.ಡಿ ಮತ್ತಿತರ ಸ್ವಾಯತ್ತ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ತಮ್ಮ ತಮ್ಮ ರಾಜ್ಯಗಳಲ್ಲಿ ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿದ್ದರೂ, ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ‌ದ್ದೇವೆ. ಒಮ್ಮತದಿಂದ ಅನೇಕ ನಿರ್ಣಯಗಳನ್ನು ಕೈಗೊಂಡಿದ್ದೇವೆ’ ಎಂದರು.

‘ದೇಶದ ಬಹುತೇಕ ಮಾಧ್ಯಮಗಳು ಮೋದಿ ನಿಯಂತ್ರಣದಲ್ಲಿವೆ. ಅವರ ನಿರ್ದೇಶನಗಳಿಲ್ಲದೆ ಕೆಲವು ಮಾಧ್ಯಮಗಳು ಕೆಲಸ ಮಾಡುವುದಿಲ್ಲ. ಇಷ್ಟು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷಗಳು ಹಾಗೂ ನಾಯಕರ ವಿರುದ್ಧ ಮಾಧ್ಯಮಗಳು ಕೆಲಸ ಮಾಡಿರುವುದನ್ನು ನೋಡಿಲ್ಲ. ಮೋದಿ  ಸರ್ಕಾರದ ವಿರುದ್ಧ ಯುವಕರು, ರೈತರು, ಉದ್ಯಮಿಗಳು ಬೇಸತ್ತಿದ್ದಾರೆ. ಈ ಪರಿಸ್ಥಿತಿಯ ವಿರುದ್ಧ ನಾವು ಒಟ್ಟಾಗಿ ಹೋರಾಟ ಮಾಡಿ 2024ರ ಚುನಾವಣೆಯಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವಿದೆ’ ಎಂದರು.

‘ಇಂಡಿಯಾ’ ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ, ‘ಅದನ್ನು ಸಮನ್ವಯ ಸಮಿತಿ ನಿರ್ಧರಿಸಲಿದೆ. ಈ ಸಮಿತಿಯ ಸದಸ್ಯರನ್ನು ಮುಂಬೈಯಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು.

‘ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಚಾರದಲ್ಲಿ ಒಮ್ಮತ ಮೂಡಿದೆಯೇ’ ಎಂಬ ಪ್ರಶ್ನೆಗೆ, ‘ಯುಸಿಸಿ ಮಸೂದೆ ನೋಡದೆ ಚರ್ಚೆ ಮಾಡಲು ಹೇಗ ಸಾಧ್ಯ? ನಾವು ಮಣಿಪುರದ ಸಂಘರ್ಷ, ನಿರುದ್ಯೋಗ, ಹಣದುಬ್ಬರ ಮತ್ತಿತರ ವಿಚಾರಗಳ ಬಗ್ಗೆ ಹೋರಾಟ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ವಿಚಾರವಾಗಿ ಚರ್ಚಿಸಿದ್ದೇವೆ’ ಎಂದರು.

‘ಸೀಟು ಹಂಚಿಕೆ ವಿಚಾರವಾಗಿ ಹೇಗೆ ತೀರ್ಮಾನಿಸುತ್ತೀರಿ?’ ಎಂದು ಕೇಳಿದಾಗ, ‘ಇದು ದೊಡ್ಡ ವಿಚಾರವಲ್ಲ. ಎಲ್ಲ ನಾಯಕರು, ಸಮನ್ವಯ ಸಮಿತಿ ಸೇರಿ ತೀರ್ಮಾನ ಮಾಡಲಿದೆ’ ಎಂದರು.

‘ಕೇಂದ್ರ ಸರ್ಕಾರ ಸ್ಥಳೀಯ ಪಕ್ಷಗಳನ್ನು ಇಬ್ಬಾಗ ಮಾಡುತ್ತಿದ್ದು, ಈ ಸಮಯದಲ್ಲಿ ನೀವು ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಹೇಗೆ ಒಗ್ಗಟ್ಟಾಗಿ ಕೊಂಡೊಯ್ಯುತ್ತೀರಿ’ ಎಂಬ ಪ್ರಶ್ನೆಗೆ, ‘ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಇಲ್ಲಿದ್ದಾರೆ. ಶಾಸಕರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ, ಜನ ಈ ‌ನಾಯಕರ ಬೆನ್ನಿಗೆ ನಿಲ್ಲಲಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ. ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಎನ್‌ಸಿಪಿಯ ಶರದ್‌ ಪವಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಪಂಜಾಬ್ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್‌, ಸಿಪಿಎಂನ ಸೀತಾರಾಂ ಯೆಚೂರಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌, ಸಿಪಿಐನ ಡಿ. ರಾಜಾ ಇದ್ದರು.  ಸೋನಿಯಾ ಗಾಂಧಿ, ನಿತೀಶ್‌ ಕುಮಾರ್‌, ಲಾಲೂ ಪ್ರಸಾದ್‌ ಹಾಜರಿರಲಿಲ್ಲ. 

ಹೆಸರು ಸೂಚಿಸಿದ್ದು ಮಮತಾ
‘ಮೈತ್ರಿಕೂಟಕ್ಕೆ ಹೆಸರಿಡುವ ಕುರಿತು ವಿರೋಧ ಪಕ್ಷಗಳ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದರು. ಒಬ್ಬೊಬ್ಬರು ಒಂದೊಂದು ಹೆಸರು ಮುಂದಿಟ್ಟರು. ಸೀತಾರಾಂ ಯಚೂರಿ ‘ವೀ ಫಾರ್ ಡೆಮಾಕ್ರಸಿ’, ವೈಕೋ ಅವರು  ‘ಇಂಡಿಯನ್ ಪೀಪಲ್ಸ್ ಅಲಯನ್ಸ್‌’ ಹೆಸರು ಸೂಚಿಸಿದರು. ಮಮತಾ ಬ್ಯಾನರ್ಜಿ ‘ಇಂಡಿಯಾ‘ ಹೆಸರು ಸೂಚಿಸಿದರು. ಎಂ.ಕೆ. ಸ್ಟಾಲಿನ್ ಮತ್ತು ರಾಹುಲ್ ಗಾಂಧಿ ಈ ಹೆಸರನ್ನು ಅನುಮೋದಿಸಿದರು‘ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಇಂಡಿಯಾದಲ್ಲಿರುವ ‘ಡಿ’ ಪದದ ಅರ್ಥ ಏನಿರಬೇಕು? ಎಂಬ ಬಗ್ಗೆಯೂ ಚರ್ಚೆ ನಡೆಯಿತು. ‘ಡಿ’ ಎಂದರೆ ಡೆಮಾಕ್ರಸಿ ಎಂದು ಮೊದಲು ನಿರ್ಧರಿಸಲಾಗಿತ್ತು. ಚರ್ಚೆಯ ಬಳಿಕ ಡೆಮಾಕ್ರಟಿಕ್ ಬದಲು ಡೆವಲಪ್‌ಮೆಂಟಲ್‌ ಎಂದು ಅಂತಿಮಗೊಳಿಸಲಾಯಿತು ಎಂದೂ ಗೊತ್ತಾಗಿದೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ ‘ಇಂಡಿಯಾ’ದ ಸವಾಲು ಎದುರಿಸಲು ಸಾಧ್ಯವೇ‘? ‌ಈ ಯುದ್ಧದಲ್ಲಿ ‘ಇಂಡಿಯಾ’ ಗೆಲ್ಲಲಿದೆ. ಬಿಜೆಪಿ ಸೋಲಲಿದೆ‌
– ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ.

ಎನ್‌ಡಿಎ ವಿರುದ್ಧ ಇಂಡಿಯಾ – ರಾಹುಲ್‌

‘ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದು ಸಂಪೂರ್ಣ ಸಂಪತ್ತು ಕೆಲವು ಉದ್ಯಮಿಗಳ ವಶಕ್ಕೆ ಸೇರುತ್ತಿದೆ. ನಮ್ಮದು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಹೋರಾಟವಲ್ಲ. ನಮ್ಮದು ಬಿಜೆಪಿ ವಿಚಾರಧಾರೆ ಚಿಂತನೆಗಳ ವಿರುದ್ಧದ ಹೋರಾಟ. ದೇಶದ ಧ್ವನಿಯ ಪರ ಹೋರಾಟ. ಈ ಕಾರಣಕ್ಕೆ ಮೈತ್ರಿಗೆ ‘ಇಂಡಿಯಾ’ ಎಂದು ಹೆಸರಿಡಲಾಗಿದೆ. ಎನ್‌ಡಿಎ ಮತ್ತು ‘ಇಂಡಿಯಾ’ ಪರಸ್ಪರ ವಿರುದ್ಧ ‘ಇಂಡಿಯಾ’ ದ್ದುಮೋದಿ ವಿರುದ್ಧದ ಹೋರಾಟ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಣ್ಣಿಸಿದರು.

‘ಇಂಡಿಯಾ ವಿರುದ್ಧ ಯಾರೇ ನಿಂತರೂ ಗೆಲುವು ಯಾರಿಗೆ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿ ನಮ್ಮ ವಿಚಾರಧಾರೆಗಳನ್ನು ಒಂದಾಗಿ ಜನರಿಗೆ ತಿಳಿಸಬೇಕಿದೆ. ಬಿಜೆಪಿಯ ಸಿದ್ಧಾಂತಗಳು ದೇಶದ ಪರಿಕಲ್ಪನೆಯ ಮೇಲೆ ದಾಳಿ ಮಾಡುತ್ತಿದೆ. ನಿರುದ್ಯೋಗ ಬೆಲೆ ಏರಿಕೆ ಸಮಸ್ಯೆಗಳು ಹೆಚ್ಚುತ್ತಿವೆ. ಇದು ರಾಜಕೀಯ ಪಕ್ಷಗಳ ಹೋರಾಟವಲ್ಲ. ಇದು ಭಾರತದ ಪರಂಪರೆ ಸಾಮರಸ್ಯದ ಭಾವ ಸರ್ವಜನರ ಒಳಿತಿನ ರಕ್ಷಣೆಯ ಹೋರಾಟವಾಗಿದೆ. ನಾವು ಪ್ರಜಾಪ್ರಭುತ್ವ ಸಂವಿಧಾನ ಜನರ ಧ್ವನಿಯ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ’ ಎಂದೂ ಹೇಳಿದರು.

ಸಾಧ್ಯವಾದರೆ ನಮ್ಮನ್ನು ತಡೆಯಿರಿ– ಮಮತಾ

‘26 ಪಕ್ಷಗಳ ಮಧ್ಯೆ ನಮ್ಮ ಮೈತ್ರಿ ಬೆಸೆದಿದೆ. ಇಂದಿನಿಂದ ನಿಜವಾದ ಸವಾಲು ಆರಂಭವಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರ ಕೆಡಹುವುದು ಖರೀದಿಸುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಲಸವಾಗಿದೆ. ಹೀಗಾಗಿ ನಾವೆಲ್ಲರೂ ಸೇರಿ ‘ಇಂಡಿಯಾ’ ಎಂಬ ಮೈತ್ರಿಕೂಟ ಸ್ಥಾಪಿಸಿದ್ದೇವೆ‘ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ‘ಯುವಕರು ರೈತರು ವಿದ್ಯಾರ್ಥಿಗಳು ದಲಿತರು ಉತ್ತಮ ಆರ್ಥಿಕತೆ ದೇಶದ ಪರ ನಾವಿದ್ದೇವೆ. ನಮ್ಮ ಸವಾಲುಗಳು ಹೋರಾಟ ಪ್ರಚಾರ ಎಲ್ಲವನ್ನು ‘ಇಂಡಿಯಾ’ ಅಡಿಯಲ್ಲಿ ಮಾಡುತ್ತೇವೆ. ನಿಮಗೆ ಸಾಧ್ಯವಾದರೆ ನಮ್ಮನ್ನು ತಡೆಯಿರಿ. ವಿಪತ್ತುಗಳಿಂದ ಭಾರತವನ್ನು ರಕ್ಷಣೆ ಮಾಡಿ. ಭಾರತೀಯರನ್ನು ರಕ್ಷಿಸಿ’ ಎಂದು ಮೋದಿ ಸರ್ಕಾರವನ್ನು ಉದ್ದೇಶಿಸಿ ಹೇಳಿದರು.

‘ದೇಶವನ್ನು ಮಾರುವುದರಲ್ಲಿ ಪ್ರಜಾಪ್ರಭುತ್ವವನ್ನು ಖರೀದಿಸುವಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದೆ. ಇದೇ ಕಾರಣಕ್ಕೆ ಯಾವುದೇ ಸಂಸ್ಥೆಗಳನ್ನು  ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಯಾವುದೇ ವಿರೋಧ ಪಕ್ಷಗಳ ನಾಯಕರು ಧ್ವನಿ ಎತ್ತಿದರೆ ಅವರ ವಿರುದ್ಧ ಐಟಿ ಇಡಿ ದಾಳಿ ಮಾಡಲಾಗುತ್ತಿದೆ’ ಎಂದರು.

ಎಲ್ಲ ಕ್ಷೇತ್ರದ ಬರ್ಬಾದ್ ಮಾಡಿದ ಮೋದಿ– ಕೇಜ್ರಿವಾಲ್

‘ಒಂಬತ್ತು ವರ್ಷಗಳ ಹಿಂದೆ ದೇಶದ ಜನ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ಬಹುಮತಗಳಿಂದ ಗೆಲ್ಲಿಸಿದ್ದರು. ದೇಶಕ್ಕಾಗಿ ಕೆಲಸ ಮಾಡಲು ಅವರಿಗೆ ಅವಕಾಶಗಳಿದ್ದವು. ಆದರೆ ಅವರು ಯಾವುದೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿಲ್ಲ. ಎಲ್ಲ ಕ್ಷೇತ್ರಗಳನ್ನು ಬರ್ಬಾದ್ ಮಾಡುವಲ್ಲಿ ಯಾವುದೇ ಅವಕಾಶಗಳನ್ನು ಬಿಟ್ಟಿಲ್ಲ. ರೈಲ್ವೆ ಆರ್ಥಿಕತೆ ವಿಮಾನ ನಿಲ್ದಾಣ ಭೂಮಿ ಆಕಾಶ ಎಲ್ಲವನ್ನು ಮಾರಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದರು.

‘ದೇಶದಲ್ಲಿ ಯುವಕರು ರೈತರು ಕೈಗಾರಿಕೆ ಮಹಿಳೆಯರು ಕಾರ್ಮಿಕರು ಎಲ್ಲರೂ ಬೇಸತ್ತಿದ್ದಾರೆ. ಹೀಗಾಗಿ ಈ 26 ಪಕ್ಷಗಳು ತಮಗಾಗಿ ಸೇರಿಲ್ಲ‘ ಎಂದರು.

ಒಂದು ಪಕ್ಷ ವ್ಯಕ್ತಿ ವಿರುದ್ಧ ಹೋರಾಟವಲ್ಲ– ಉದ್ಧವ್ ಠಾಕ್ರೆ

‘ನಮ್ಮಲ್ಲಿ ವಿವಿಧ ವಿಚಾರಧಾರೆಗಳ ಪಕ್ಷಗಳು ಒಂದಾಗಿ ಸೇರಿವೆ. ರಾಜತಂತ್ರದಲ್ಲಿ ವಿಭಿನ್ನ ವಿಚಾರಧಾರೆಗಳು ಇರಬೇಕು.ಈ ವಿಭಿನ್ನತೆ ನಡುವೆ ನಾವು ಒಂದಾಗಿರುವುದಕ್ಕೆ ಕಾರಣ ನಮಗಾಗಿ ಅಲ್ಲ ದೇಶವೇ ನಮ್ಮ ಪರಿವಾರ. ನಮ್ಮ ಕುಟುಂಬದಂತಿರುವ ದೇಶವನ್ನು ರಕ್ಷಿಸಲು ನಮ್ಮ ಒಗ್ಗೂಡುವಿಕೆ. ನಮ್ಮ ಹೋರಾಟ ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ವಿರುದ್ಧ ಅಲ್ಲ. ನಮ್ಮ ಹೋರಾಟ ನೀತಿ ವಿರುದ್ಧ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಇಂದು ಹೋರಾಟ ಮಾಡಲಾಗುವುದು. ಮುಂದೆ ಏನಾಗಲಿದೆ ಎಂದು ಭೀತರಾಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ನಾವಿದ್ದೇವೆ ಎಂದು ಹೇಳಲು ನಾವು ಒಟ್ಟಾಗಿದ್ದೇವೆ. ಒಬ್ಬ ವ್ಯಕ್ತಿ ಅಥವಾ ಪಕ್ಷ ಇಡೀ ದೇಶವಾಗಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ದೇಶವನ್ನು ಸುರಕ್ಷಿತವಾಗಿಡುತ್ತೇವೆ’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ 26 ಪಕ್ಷಗಳು

  1. ಕಾಂಗ್ರೆಸ್‌

  2. ಟಿಎಂಸಿ

  3. ಡಿಎಂಕೆ

  4. ಎಎಪಿ

  5. ಜೆಡಿಯು

  6. ಆರ್‌ಜೆಡಿ

  7. ಜೆಎಂಎಂ

  8. ಎನ್‌ಸಿಪಿ

  9. ಶಿವಸೇನಾ (ಉದ್ಧವ್ ಠಾಕ್ರೆ)

  10. ಎಸ್‌ಪಿ ರಾಷ್ಟ್ರೀಯ ಲೋಕದಳ

  11. ಅಪ್ನಾ ದಳ (ಕಮೆರಾವಾಡಿ)

  12. ನ್ಯಾಷನಲ್ ಕಾನ್ಫರೆನ್ಸ್

  13. ಪಿಡಿಪಿ

  14. ಸಿಪಿಐ

  15. ಸಿಪಿಐ (ಎಂ)

  16. ಸಿಪಿಐ (ಎಂಎಲ್)

  17. ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ

  18. ಆಲ್ ಇಂಡಿಯಾ ಫಾರ್ವಡ್ ಬ್ಲಾಕ್

  19. ಎಂಡಿಎಂಕೆ

  20. ವಿಸಿಕೆ (ವಿಡುದಲೈ ಚಿರುತೈಗಳ್‌ ಕಚ್ಚಿ)

  21. ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ)

  22. ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ)

  23. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

  24. ಕೇರಳ ಕಾಂಗ್ರೆಸ್ (ಮಾಣಿ)

  25. ಕೇರಳ ಕಾಂಗ್ರೆಸ್ (ಜೋಸೆಫ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT