ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರ ಭವನದಲ್ಲಿ ಡೀಲ್‌: ನಾಚಿಕೆ ಆಗುವುದಿಲ್ಲವೇ; ಪ್ರಿಯಾಂಕ್‌

ಪಿಎಸ್‌ಐ ಹುದ್ದೆಗೆ ಶಾಸಕರಿಂದ ₹ 15 ಲಕ್ಷ ಮುಂಗಡ– ಪರಸಪ್ಪ ಹೇಳಿಕೆಯ ವಿಡಿಯೊ ಬಿಡುಗಡೆ
Published : 12 ಸೆಪ್ಟೆಂಬರ್ 2022, 19:31 IST
ಫಾಲೋ ಮಾಡಿ
Comments

ಬೆಂಗಳೂರು: ‘ಪಿಎಸ್‌ಐ ಹುದ್ದೆಗಾಗಿ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಜೊತೆ ಒಪ್ಪಂದ ಮಾಡಿಕೊಂಡು ₹ 15 ಲಕ್ಷ ಮುಂಗಡವಾಗಿ ಶಾಸಕರ ಭವನದಲ್ಲಿ ಕೊಟ್ಟಿದ್ದೆ’ ‌ಎಂದು ಪರಸಪ್ಪ ಮೇಗೂರು ಹೇಳಿದ ವಿಡಿಯೊ ತುಣುಕು ಬಿಡುಗಡೆ ಮಾಡಿದ ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ‘ಶಾಸಕರ ಭವನದಲ್ಲಿ ಡೀಲ್ ನಡೆದಿದೆಯೆಂದರೆ ನಾಚಿಕೆ ಆಗುವುದಿಲ್ಲವೇ?’ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

‌ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಡೀಲ್ ಮಾಡಿ, 2020 ಆಗಸ್ಟ್‌ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಿದ್ದ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ. ವ್ಯವಹಾರ ಮಾಡಿ ₹ 30 ಲಕ್ಷಕ್ಕೆ ಡೀಲ್ ನಿರ್ಧರಿಸುತ್ತಾರೆ ಎಂದು ಪರಸಪ್ಪ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಈ ಡೀಲ್ ನಂತರ ಮುಂಗಡವಾಗಿ ₹ 15 ಲಕ್ಷ ನೀಡಿದ್ದಾರೆ. ಕೆಲಸ ಆಗದ ಕಾರಣ ಹಣ ಕೇಳಿದಾಗ ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಸರ್ಕಾರವೆಂದರೆ ವಿಧಾನಸೌಧ ಅಲ್ಲವೇ’ ಎಂದೂ ಪ್ರಶ್ನಿಸಿದರು.

‘ಶಾಸಕರು ಹಣ ವಾಪಸ್ ಮಾಡದ ಕಾರಣ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರು, ಸಚಿವರಿಗೆ ಬ್ರೋಕರ್‌ಗಳಾಗಿದ್ದಾರೆ’ ಎಂದ ಅವರು, ‘ಇಷ್ಟೆಲ್ಲಾ ನಡೆದರೂ ಶಾಸಕರಿಗೆ ನೋಟಿಸ್ ನೀಡಿಲ್ಲ. ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಸರ್ಕಾರ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ‘ಶಾಸಕ ಬಸವರಾಜ ದಡೇಸೂರು ಮತ್ತು ಪರಸಪ್ಪ ನಡುವಿನ ಸಂಭಾಷಣೆ ಸೆ. 5ರಂದು ಜಾಲತಾಣಗಳಲ್ಲಿ ಹರಿದಾಡಿದೆ. 6 ರಂದು ಬಿಡುಗಡೆಯಾದಮತ್ತೊಂದು ಆಡಿಯೊದಲ್ಲಿ ಪಿಎಸ್ಐ ನೇಮಕಾತಿಗೆ ₹ 15 ಲಕ್ಷ ನೀಡಿರುವುದಾಗಿ ಪರಸಪ್ಪ ಹೇಳಿದ್ದರು. ಆ ಆಡಿಯೊದಲ್ಲಿರುವ ಧ್ವನಿ ನನ್ನದೆ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಸರ್ಕಾರದ ಭಾಗಿಯಾಗಿರುವುದಕ್ಕೆ ಇದು ಸಾಕ್ಷಿ’ ಎಂದರು.

ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ಎ.ಎಸ್‌. ಪೊನ್ನಣ್ಣ, ‘ಕೆಲಸ ಮಾಡಿಸಿಕೊಡುವುದಾಗಿ ಯಾವುದೇ ವ್ಯಕ್ತಿ ಹಣ ಪಡೆದರೂ ಅಪರಾಧ. ಹೀಗಾಗಿ, ಈ ಆಡಿಯೊ ವಿಚಾರವಾಗಿ ತಕ್ಷಣ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT