ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಕ್ಕೆ ಜಾಗತಿಕ ಹಿರಿಮೆ:ಎಚ್.ಕೆ.ಪಾಟೀಲ

ʼವಿಶ್ವ ಪಾರಂಪರಿಕ ಪಟ್ಟಿʼಗೆ ರಾಜ್ಯದ ನಾಲ್ಕನೇ ತಾಣ ಸೇರ್ಪಡೆ
Published 19 ಸೆಪ್ಟೆಂಬರ್ 2023, 2:01 IST
Last Updated 19 ಸೆಪ್ಟೆಂಬರ್ 2023, 2:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಐತಿಹ್ಯ ಮತ್ತು ಕಲೆ- ಸಂಸ್ಕೃತಿಗೆ ಪ್ರತೀಕವಾಗಿರುವ 12 ಮತ್ತು 15ನೇ ಶತಮಾನಗಳಲ್ಲಿ ನಿರ್ಮಾಣಗೊಂಡಿರುವ ಹಾಸನ ಜಿಲ್ಲೆಯ ಬೆಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳಿಗೆ ಜಾಗತಿಕ ಮನ್ನಣೆ ದೊರೆತಿದ್ದು, ಯೂನೆಸ್ಕೋ ಈ ಮೂರು ದೇಗುಲಗಳನ್ನು ʼವಿಶ್ವ ಪಾರಂಪರಿಕ ತಾಣʼ ಎಂದು ಘೋಷಣೆ ಮಾಡಿರುವುದಾಗಿ ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಪದ್ಭರಿತ ಕರ್ನಾಟಕ ರಾಜ್ಯದ ಸಂಸ್ಕೃತಿ- ಪರಂಪರೆ ಹಿರಿತನಕ್ಕೆ ಮತ್ತು ರಾಜ್ಯ ಸರ್ಕಾರದ ಸತತ ಪರಿಶ್ರಮದ ಫಲವಾಗಿ ರಾಜ್ಯದ ಈ ಮೂರು ದೇಗುಲಗಳ ಕಲೆ ಮತ್ತು ಪರಂಪರೆಯನ್ನು ಯುನೆಸ್ಕೋ ಗುರ್ತಿಸಿದೆ ಎಂದ ಅವರು, ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯುನೆಸ್ಕೋ ಮನ್ನಣೆ ಸಹಕಾರಿ ಆಗಲಿದೆ ಎಂದಿದ್ದಾರೆ.

ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬೆಳವಣಿಗೆಯಿಂದಾಗಿ ಈ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸ್ಥಳೀಯ ಕಲಕುಶಲ ಮತ್ತು ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕುವ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವೂ ಸಹ ಈ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಲಿದೆ ಎಂದು ಪ್ರವಾಸೋದ್ಯಮ ಸಚಿವರು ಭರವಸೆ ನೀಡಿದ್ದಾರೆ.

ರಿಯಾದ್‌ನಲ್ಲಿ ಯೂನೆಸ್ಕೋ ನಿರ್ಧಾರ:

ಸೋಮವಾರ ಸೌದಿ ಅರೆಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆದ ಯೂನೆಸ್ಕೋದ 45ನೇ ಸರ್ವ ಸದಸ್ಯರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, 2014ರಲ್ಲಿ ಆಯ್ಕೆ ಪಟ್ಟಿಗೆ ಈ ದೇಗುಲಗಳನ್ನು ಸೇರ್ಪಡೆಗೊಳಿಸಲಾಗಿತ್ತು. 2018ರಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ)ಗೆ ರಾಜ್ಯ ಸರ್ಕಾರವು ಈ ದೇಗುಲಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿತ್ತು. ಈ ಬೆಳವಣಿಗೆಗಳ ನಂತರ 2022ರಲ್ಲಿ ಅಂತರಾಷ್ಟ್ರೀಯ ಪುರಾತನ ಸ್ಮಾರಕ ಮತ್ತು ಪ್ರದೇಶಗಳ ಸಮಿತಿಯು ಇಲ್ಲಿಗೆ ಭೇಟಿ ನೀಡಿ, ಈ ದೇಗುಲಗಳ ಹಿರಿಮೆ ಬಗ್ಗೆ ಯೂನೆಸ್ಕೋಗೆ ವರದಿ ನೀಡಿತ್ತು ಎಂದು ಸಚಿವರು ವಿವರಿಸಿದರು.

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ದೇಗುಲಗಳ ಬಗ್ಗೆ ಸಲ್ಲಿಕೆಯಾಗಿದ್ದ ವರದಿಯನ್ನು ಆಧರಿಸಿ ಸೋಮವಾರ ನಡೆದ ಯೂನೆಸ್ಕೋ ಸಭೆಯಲ್ಲಿ ಭಾರತವೂ ಸೇರಿದಂತೆ 21 ದೇಶಗಳು ಈ ದೇಗುಲಗಳನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆ ಮಾಡಲು ಸರ್ವಾನುಮತದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ನಾಲ್ಕನೇ ತಾಣ:

ಬೇಲೂರು, ಹಳೆ ಬೀಡು, ಸೋಮನಾಥಪುರ ದೇಗುಲಗಳು ಯುನೆಸ್ಕೋ ಪಟ್ಟಿಗೆ ನಾಲ್ಕನೇ ತಾಣವಾಗಿ ಸೇರ್ಪಡೆಗೊಂಡಿವೆ ಎಂದು ತಿಳಿಸಿರುವ ಸಚಿವ ಎಚ್.ಕೆ. ಪಾಟೀಲ, ಈಗಾಗಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹಂಪೆ, ಪಟ್ಟದಕಲ್ಲು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಎಂದಿದ್ದಾರೆ.

ಜಾಗತಿಕ ಪ್ರವಾಸಿತಾಣ:

ಕರುನಾಡಿನ ಅಂದಿನ ಕಲೆ- ಸಂಸ್ಕೃತಿಯ ಸಿರಿವಂತಿಕೆ ಮತ್ತು ಸರ್ಕಾರದ ಸತತ ಪರಿಶ್ರಮದ ಪರಿಣಾಮ 12 ಮತ್ತು 15ನೇ ಶತಮಾನದಲ್ಲಿ ಹೊಯ್ಸಳರ ವಿಷ್ಣುವರ್ಧನರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಮೂರು ದೇಗುಲಗಳನ್ನು ʼಮೃದು ಕಲ್ಲಿʼನಲ್ಲಿ ನಿರ್ಮಾಣವಾಗಿದೆ. ಇದರ ಕೆತ್ತನೆ ಅಂದಿನ ಕಲೆ- ಸಂಸ್ಕೃತಿ ಮತ್ತು ಪರಂಪರೆಗೆ ಹಿಡಿದ ಕನ್ನಡಿಯಂತಿದೆ. ಇದೀಗ ಈ ಕಲೆ- ಪರಂಪರೆ ಜಾಗತಿಕ ಮಟ್ಟಕ್ಕೆ ತಲುಪಲಿದ್ದು, ಇದರಿಂದ ಈ ಮೂರೂ ದೇಗುಲಗಳು ಜಾಗತಿಕ ಪ್ರವಾಸಿ ತಾಣವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಹರ್ಷ ವ್ಯಕ್ತಪಡಿಸಿದರು.

ಈ ಮೂರು ದೇಗುಲಗಳಿಗೆ ಯೂನೆಸ್ಕೋ ಸ್ಥಾನಮಾನ ದೊರತಿರುವ ಪರಿಣಾಮ ಜಾಗತಿಕ ಮಟ್ಟದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಯೋಜನಾಬದ್ಧ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದ ಸಚಿವರು, ಈ ಬೆಳವಣಿಗೆಯಿಂದ ಸ್ಥಳೀಯರಿಗೂ ಹೆಚ್ಚಿನ ಅನುಕೂಲ ಆಗಲಿದೆ ಎಂದು ಪ್ರತಿಪಾದಿಸಿದರು.

"ಕನ್ನಡ ನಾಡಿನ ಕಲೆ- ಸಂಸ್ಕೃತಿ, ಪರಂಪರೆಯನ್ನು ನಾಡಿನಾದ್ಯಂತ ಬಿಂಬಿಸುವಲ್ಲಿ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳ ಪಾತ್ರ ಪ್ರಮುಖವಾದುದು, ಈ ದೇಗುಲಗಳಿಗೆ ಈ ಹಿಂದೆಯೇ ಜಾಗತಿಕ ಮಟ್ಟದ ಹಿರಿಮೆ ಸಿಗಬೇಕಿತ್ತು. ತಡವಾಗಿಯಾದರೂ ಈಗ ಯೂನೆಸ್ಕೋ ಈ ದೇಗುಲಗಳ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಿರುವುದು ಶ್ಲಾಘನೀಯ, ಇದಕ್ಕೆ ಕಾರಣರಾದ ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ನೇತೃತ್ವದ ಅಧಿಕಾರಿಗಳು ಮತ್ತು ಯೂನೆಸ್ಕೋಗೆ ವಂದನೆಗಳು ಮತ್ತು ರಾಜ್ಯದ ಜನತೆಗೆ ಅಭಿನಂದನೆ."
- ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಮತ್ತು ಕಾನೂನು ಸಚಿವ

* ಕರುನಾಡಿನ ಕಲೆ- ಸಂಸ್ಕೃತಿಗೆ ಜಾಗತಿಕ ಮನ್ನಣೆ.

* 12 ಮತ್ತು 15ನೇ ಶತಮಾನದ ಹೊಯ್ಸಳ ವಿಷ್ಣುವರ್ಧನ ದೊರೆಯ ಕಲೆ ವಿಶ್ವಕ್ಕೆ ಪರಿಚಯ.

* ಯೂನೆಸ್ಕೋ ಪಟ್ಟಿಗೆ ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ದೇಗುಲ.

* 21 ದೇಶಗಳ ಸರ್ವಾನುಮತದ ನಿರ್ಧಾರ.

* ಮೂಲಸೌಕರ್ಯಕ್ಕೆ ಆದ್ಯತೆ- ಸ್ಥಳೀಯರಿಗೆ ಉದ್ಯೋಗಾವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT