ಕಲಬುರಗಿ: ದುಡಿಯುವ ಯುವಜನರ ಕಲಿಕಾಸಕ್ತಿಗೆ ಬಲ ತುಂಬಲು ‘ಸಂಧ್ಯಾ ಶಕ್ತಿ’ ಯೋಜನೆಯಡಿ ರಾಜ್ಯ ಸರ್ಕಾರ ಆರಂಭಿಸಿದ್ದ ‘ಸಂಜೆ ಕಾಲೇಜು’ಗಳಿಗೆ ಕಲ್ಯಾಣ ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಸ್ವಾಯತ್ತ) 2021–22ರಲ್ಲಿ ಆರಂಭವಾಗಬೇಕಿದ್ದ ಸಂಜೆ ಕಾಲೇಜು ಈತನಕ ಆರಂಭವೇ ಆಗಿಲ್ಲ. ಜಾಗೃತಿ, ಪ್ರಚಾರದ ಕೊರತೆಯಿಂದಾಗಿ ಸಂಜೆ ಕಾಲೇಜಿಗೆ ಪ್ರವೇಶಾತಿ ಕೋರಿ ಕನಿಷ್ಠ ಒಂದೇ ಒಂದು ಅರ್ಜಿ ಕೂಡ ಸಲ್ಲಿಕೆಯಾಗಿಲ್ಲ.
‘ನಾನು ಈ ವರ್ಷದ ಆಗಸ್ಟ್ ತಿಂಗಳಲ್ಲಷ್ಟೇ ಅಧಿಕಾರ ವಹಿಸಿಕೊಂಡಿರುವೆ. ದಾಖಲೆ ಪ್ರಕಾರ ಹೇಳುವುದಾರೆ ಕಳೆದ ಮೂರು ವರ್ಷಗಳಲ್ಲಿ ಒಂದೂ ಪ್ರವೇಶಾತಿ ನಡೆದಿಲ್ಲ. ಶೀಘ್ರವೇ ಸಮಿತಿಯೊಂದನ್ನು ರಚಿಸಿ ಸಂಜೆ ಕಾಲೇಜಿನ ಕುರಿತು ಜಾಗೃತಿ ಮೂಡಿಸಲಾಗುವುದು. ಈಗಾಗಲೇ ಈ ವರ್ಷದ ಪ್ರವೇಶಾತಿ ಅವಧಿ ಮುಗಿದಿದೆ. ಮುಂದಿನ ವರ್ಷದ ಪ್ರವೇಶಾತಿಗೆ ವ್ಯಾಪಕ ಪ್ರಚಾರ ನಡೆಸಲಾಗುವುದು’ ಎನ್ನುತ್ತಾರೆ ಕಲಬುರಗಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ಪ್ರಭಾರ ಪ್ರಾಚಾರ್ಯೆ ಸವಿತಾ ತಿವಾರಿ.
ಬಳ್ಳಾರಿಯಲ್ಲಿ ಪ್ರವೇಶಾತಿ ಕುಸಿತ: ಕಾಲೇಜು ಶಿಕ್ಷಣ ಇಲಾಖೆಯ ಕಲಬುರಗಿ ಪ್ರಾದೇಶಿಕ ವಲಯ ವ್ಯಾಪ್ತಿಗೆ ಬರುವ ಬಳ್ಳಾರಿಯಲ್ಲಿ ಸಂಜೆ ಕಾಲೇಜಿಗೆ ಸ್ವಲ್ಪ ಸ್ಪಂದನೆ ಇದೆ. ಆದರೂ, ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಗಣನೀಯವಾಗಿ ಕುಸಿಯುತ್ತಲೇ ಇದೆ.
‘2021–22ರಲ್ಲಿ ಬಿ.ಕಾಂ. ಹಾಗೂ ಬಿ.ಸಿ.ಎ. ಕೋರ್ಸ್‌ಗಳಿಗೆ ತಲಾ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2022–23ರಲ್ಲಿ ಪದವಿ ಮೊದಲ ವರ್ಷಕ್ಕೆ ಬಿ.ಕಾಂಗೆ ಒಬ್ಬರೇ ಒಬ್ಬರೂ ಪ್ರವೇಶಾತಿ ಪಡೆಯಲಿಲ್ಲ. ಬಿಸಿಎಗೆ ಮೂರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸಕ್ತ 2023–24ನೇ ಸಾಲಿನಲ್ಲಿ ಎರಡೂ ಕೋರ್ಸ್‌ಗಳಿಗೆ ತಲಾ ಒಬ್ಬೊಬ್ಬರು ಪ್ರವೇಶ ಪಡೆದಿದ್ದಾರೆ. ಸಂಜೆ ಕಾಲೇಜಿನಲ್ಲಿ ಸದ್ಯ 22 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ’ ಎಂದು ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಂಜುನಾಥ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕಲಿಕೆಗೆ ಸಹಕಾರ: ‘ಸಂಜೆ ಕಾಲೇಜಿನ ಕೋರ್ಸ್ ನಡೆಸಲು ಕನಿಷ್ಠ 15 ವಿದ್ಯಾರ್ಥಿಗಳು ಅಗತ್ಯ. 2021–22ರಲ್ಲಿ ದಾಖಲಾದ ತಲಾ 15 ವಿದ್ಯಾರ್ಥಿಗಳಲ್ಲಿ ಎರಡನೇ ವರ್ಷಕ್ಕೆ ಬಡ್ತಿ ಪಡೆಯುವ ವೇಳೆಗೆ ಅದು ತಲಾ 11ಕ್ಕೆ ಕುಸಿಯಿತು. ಇದರಿಂದ ಉಪನ್ಯಾಸಕ ಕಾರ್ಯಭಾರ ತೋರಿಸುವುದು ಸಾಧ್ಯವಾಗಲಿಲ್ಲ. ಬೋಧಕರೇ ಇಲ್ಲದಂತಾಯಿತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿ ಕಾಯಲು ಆಸಕ್ತ ವಿದ್ಯಾರ್ಥಿಗಳಿಗೆ ರೆಗ್ಯುಲರ್ ಕ್ಲಾಸ್‌ಗಳಿಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿದ್ದೇವೆ. ಕೆಲ ವಿದ್ಯಾರ್ಥಿಗಳು ಸ್ವಯಂ ಅಧ್ಯಯನದಲ್ಲಿ ತೊಡಗಿದ್ದಾರೆ’ ಎಂದೂ ಮಂಜುನಾಥ ವಿವರಿಸಿದರು.
2021–22ನೇ ಸಾಲಿನ ಬಜೆಟ್‌ನಲ್ಲಿ ಸಂಧ್ಯಾ ಶಕ್ತಿ ಯೋಜನೆಯಡಿ ರಾಜ್ಯದ 11 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿರುವ ಬಿ.ಕಾಂ ಹಾಗೂ ಬಿಸಿಎ ಕೋರ್ಸ್‌ಗಳುಲ್ಲ ಸಂಜೆ ಕಾಲೇಜು ತೆರೆಯುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆವರಣದಲ್ಲಿ ಸಂಜೆ ಕಾಲೇಜು ತೆರೆದು ಈಗಿರುವ ಮೂಲಸೌಕರ್ಯವನ್ನು ಬಳಸಿಕೊಂಡೇ ಕಲಿಸುವಂತೆ ಸೂಚಿಸಿತ್ತು. ಬಳಿಕ ಸಂಜೆ ಕಾಲೇಜಿಗೆ ಒಬ್ಬರು ಪ್ರಾಂಶುಪಾಲರು ಏಳು ಬೋಧಕರು ಸೇರಿದಂತೆ ಒಟ್ಟು 13 ಸಿಬ್ಬಂದಿ ಬೇಕು ಎಂಬ ಬೇಡಿಕೆಗಳು ಕಾಲೇಜು ಶಿಕ್ಷಣ ಇಲಾಖೆಗಳಿಗೆ ಸಲ್ಲಿಕೆಯಾಗಿದ್ದವು. ಬೇರೆ ಕಾಲೇಜಿಗೆ ಕೊಟ್ಟರೆ ಉತ್ತಮ... ‘ಕಲಬುರಗಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಾಗಲೇ 20ಕ್ಕೂ ಹೆಚ್ಚಿನ ಕೋರ್ಸ್‌ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅದರೊಂದಿಗೆ ಸಂಜೆ ಕಾಲೇಜು ನಡೆಸುವುದು ಅವರಿಗೆ ಕಷ್ಟವಾಗಬಹುದು. ನಗರದಲ್ಲೇ ಇರುವ ಬೇರೆ ಕಾಲೇಜಿನಲ್ಲಿ ಸಂಜೆ ಕಾಲೇಜು ಆರಂಭಿಸಿದರೆ ವಿದ್ಯಾರ್ಥಿಗಳನ್ನು ಸೆಳೆಯಬಹುದು’ ಎಂಬುದು ಶಿಕ್ಷಣ ಪ್ರೇಮಿಗಳ ಅಭಿಪ್ರಾಯ.
ನಮ್ಮಲ್ಲಿ ಕಾಲೇಜು ಕೊಠಡಿಗಳು ಸೇರಿದಂತೆ ಅಗತ್ಯ ಸೌಕರ್ಯಗಳಿವೆ. ವಿದ್ಯಾರ್ಥಿಗಳು ಬಂದರೆ ಸಂಜೆ ಕಾಲೇಜು ನಡೆಸಲಾಗುವುದು.–ಸವಿತಾ ತಿವಾರಿ, ಪ್ರಭಾರ ಪ್ರಾಚಾರ್ಯೆ, ಸರ್ಕಾರಿ ಪದವಿ ಕಾಲೇಜು(ಸ್ವಾಯತ್ತ) ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.