ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ದೇಣಿಗೆ ನೀಡಿ: ಸಚಿವ ಮಧುಬಂಗಾರಪ್ಪ ಮನವಿ

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯ ಲಾಂಛನ ಅನಾವರಣ
Published : 11 ಸೆಪ್ಟೆಂಬರ್ 2024, 19:39 IST
Last Updated : 11 ಸೆಪ್ಟೆಂಬರ್ 2024, 19:39 IST
ಫಾಲೋ ಮಾಡಿ
Comments

ಬೆಳಗಾವಿ: ‘ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆ ಜಾರಿಗೊಳಿಸಿದೆ. ಉದ್ಯೋಗಿಗಳು, ಉದ್ಯಮಿಗಳು, ಪಾಲಕರು ಮತ್ತು ಹಳೆ ವಿದ್ಯಾರ್ಥಿಗಳು ಉದಾರ ದೇಣಿಗೆ ನೀಡಿ ಪ್ರಗತಿಯ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಲಾಂಛನ ಅನಾವರಣ, ದಾನಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿವೆ. 56 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪಿಯು ವಿದ್ಯಾರ್ಥಿಗಳೂ ಸೇರಿ ಒಟ್ಟು 1.05 ಕೋಟಿ ವಿದ್ಯಾರ್ಥಿಗಳಿದ್ದಾರೆ. ಕಳೆದ ದಶಕಗಳಲ್ಲಿ ಇಲ್ಲಿ ಕಲಿತು ಹೋದವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಅವರು ತಾವು ಕಲಿತ ಶಾಲೆಗಳಿಗೆ ಮರಳಬೇಕು. ಕನಿಷ್ಠ ₹ 5 ಸಾವಿರ ದೇಣಿಗೆ ನೀಡಬೇಕು ಅಥವಾ ಇಷ್ಟವಾದದ್ದನ್ನು ಕೊಡುಗೆ ಕೊಡಬೇಕು. ಇದರಿಂದ ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗುತ್ತದೆ’ ಎಂದರು.

‘ಜನರ ಸಹಭಾಗಿತ್ವದಿಂದ ಶಿಕ್ಷಣ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ತರಲಾಗಿದೆ. 7ನೇ ವೇತನ ಆಯೋಗ ಜಾರಿಯಾದ ತಕ್ಷಣ ಶಿಕ್ಷಕರೆಲ್ಲ ತಮ್ಮ ಒಂದು ತಿಂಗಳ ವೇತನವನ್ನು ಈ ಯೋಜನೆಗೆ ನೀಡಬೇಕು. ಸುಮಾರು 31 ಸಾವಿರ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಕಟ್ಟಲಾಗಿದೆ. ವಾಟ್ಸ್ಆ್ಯಪ್‌ ಗ್ರೂಪುಗಳಲ್ಲಿ ಸೇರಿಸಲಾಗಿದೆ. ಈಗಾಗಲೇ ಕೆಲವರು ಲಕ್ಷಗಟ್ಟಲೇ ದಾನ ನೀಡಿದ್ದಾರೆ’ ಎಂದರು.

‘ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಾವುರು ಕಲಿತ ಸಿದ್ದರಾಮನಹುಂಡಿಯ ಸರ್ಕಾರಿ ಶಾಲೆಗೆ ₹ 10 ಲಕ್ಷ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ಬಂಗಾರಪ್ಪ ಅವರು ಕಲಿತ ಶಾಲೆಗೆ ನಾನು ₹10 ಲಕ್ಷ ದೇಣಿಗೆ ನೀಡಿದ್ದೇನೆ. ಹಲವು ಶಾಸಕರೂ ಇಂಥ ಕೆಲಸಕ್ಕೆ ಮುಂದಾಗಿದ್ದಾರೆ. ಇದೊಂದು ಕ್ರಾಂತಿಕಾರಕ ನಡೆಯಾಗಬೇಕು’ ಎಂದರು.

ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಗೆ ಸೆಪ್ಟೆಂಬರ್ 25ರಂದು ಚಾಲನೆ ನೀಡಲಾಗುವುದು. ಇದಕ್ಕೆ ಅಜೀಮ್‌ ಪ್ರೇಮ್‌ಜಿ ಫೌಂಡೇಷನ್‌ ₹1500 ಕೋಟಿ ದೇಣಿಗೆ ನೀಡಿದೆ.
–ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ಲಾಂಛನ ಅನಾವರಣಗೊಳಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ‘ಇದು ಸರ್ಕಾರದ ಯೋಜನೆ ಮಾತ್ರವಲ್ಲ. ಪ್ರತಿಯೊಬ್ಬ ಶಿಕ್ಷಕ, ಪಾಲಕ, ಇಲಾಖೆಯ ಅಧಿಕಾರಿಗಳೂ ಜವಾಬ್ದಾರರು‘ ಎಂದರು.

‘ಧಾರ್ಮಿಕ ಕಾರ್ಯಗಳಿಗೆ ಹುಡುಕಿಕೊಂಡು ಹೋಗಿ ದೇಣಿಗೆ ಕೊಡುತ್ತೀರಿ. ಸರ್ಕಾರಿ ಶಾಲೆಗಳಿಗೆ ಕೊಟ್ಟು ನೋಡಿ; ದೇಶದ ಭವಿಷ್ಯ ಬದಲಾಗುತ್ತದೆ’ ಎಂದರು.

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಧ್ಯಕ್ಷತೆ ವಹಿಸಿದ್ದರು. 45ಕ್ಕೂ ಹೆಚ್ಚು ದಾನಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT