ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ಕ್ಯಾರಾ ಸುರಂಗ ಕುಸಿತ: ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ರಾಜ್ಯ ತಂಡ

ಉತ್ತರಕಾಶಿಯಲ್ಲಿ 41 ಕಾರ್ಮಿಕರ ರಕ್ಷಣೆ–ಕೋಲಾರದ ಮೈನಿಂಗ್ ಎಂಜಿನಿಯರ್‌ ಭಾಗಿ
Published 30 ನವೆಂಬರ್ 2023, 18:12 IST
Last Updated 30 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಕೋಲಾರ: ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ–ಬಡಕೋಟ್‌ ಸುರಂಗ ಮಾರ್ಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರ ಬರಲು ರಾಜ್ಯದ ತಂತ್ರಜ್ಞರ ಪಾತ್ರವೂ ಇದೆ.

ಕೋಲಾರ ಜಿಲ್ಲೆಯ ಮೈನಿಂಗ್‌ ಎಂಜಿನಿಯರ್ ಎಚ್‌.ಎಸ್‌.ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಬೆಂಗಳೂರಿನ ಬೆಳ್ಳಂದೂರು ಸ್ಕ್ವಾಡ್ರೋನ್‌ ಇನ್ಫ್ರಾ ಅಂಡ್‌ ಮೈನಿಂಗ್‌ ಕಂಪನಿಯ ಒಂಬತ್ತು ತಂತ್ರಜ್ಞರ ತಂಡ ಏಳು ದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಸೇನಾಪಡೆಯ ಅಧಿಕಾರಿಗಳ ತುರ್ತು ಕರೆಯ ಮೇರೆಗೆ ಈ ತಂಡದವರು ನ.22ರಂದು ವಿಮಾನದಲ್ಲಿ ಬೆಂಗಳೂರಿನಿಂದ ಡೆಹ್ರಾಡೂನ್‌ಗೆ ಪ್ರಯಾಣ ಬೆಳೆಸಿದ್ದರು. ಸೇನಾಪಡೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಇವರು ಡ್ರೋಣ್‌ ಹಾಗೂ ಸೆನ್ಸರ್‌ ತಂತ್ರಜ್ಞಾನದ ಸಹಾಯ ನೀಡಿದ್ದಾರೆ.

‘ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲು ನೇತೃತ್ವ ವಹಿಸಿಕೊಂಡಿದ್ದ ಭಾರತೀಯ ಸೇನೆ ಹಾಗೂ ಇತರ ರಕ್ಷಣಾ ಸಿಬ್ಬಂದಿ ಮುಂದೆ ಐದು ಯೋಜನೆ  ಇದ್ದವು. ಸುರಂಗ ಕೊರೆಯುವಾಗ ನಾವು ಡ್ರೋನ್‌ ಹಾಗೂ ಸೆನ್ಸರ್‌ ಮೂಲಕ ಸಲಹೆ ನೀಡುತ್ತಿದ್ದೆವು. ನೀರು, ಕಲ್ಲು ಇರುವ ಭಾಗ, ಭೂಮಿ ಅದುರುವ ಭಾಗವನ್ನು ಪತ್ತೆ ಹಚ್ಚಿ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ ರವಾನಿಸುತ್ತಿದ್ದೆವು. ಆರು ಗಂಟೆಗೊಮ್ಮೆ ವರದಿ ಕೊಡುತ್ತಿದ್ದೆವು’ ಎಂದು ವೆಂಕಟೇಶ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡ್ರೋಣ್‌ ಸೇರಿದಂತೆ ವಿವಿಧ ಉಪಕರಣಗಳನ್ನು ನಾವು ತೆಗೆದುಕೊಂಡು ಹೋಗಿದ್ದೆವು. ಸುಮಾರು 120 ಮೀಟರ್‌ ತನಕ ಭೂಮಿ ಒಳಗಡೆ ಏನಿದೆ ಎಂಬುದನ್ನು ಈ ಉಪಕರಣಗಳಿಂದ ಪತ್ತೆ ಹಚ್ಚಬಹುದು. 9 ಕಿ.ಮೀ ದೂರದಲ್ಲಿ ನಾವು ಉಳಿದುಕೊಂಡಿದ್ದೆವು. ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯವನ್ನು ನಮಗೆ ನೀಡಿದ್ದರು’ ಎಂದರು.

ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ಡ್ರಿಲ್‌ ಮಾಡುವಾಗ ಭೂಮಿ ಸ್ಥಿತಿಗತಿ ಕುರಿತು ಸೆನ್ಸರ್‌ ತಂತ್ರಜ್ಞಾನದ ಮೂಲಕ ನಾವು ಮಾಹಿತಿ ಕೊಡುತ್ತಿದ್ದೆವು. 24 ಗಂಟೆಯೂ ಕಾರ್ಯನಿರ್ವಹಿಸಿದ್ದೇವೆ.
–ಎಚ್‌.ಎಸ್‌.ವೆಂಕಟೇಶ್‌ ಪ್ರಸಾದ್‌, ಮೈನಿಂಗ್‌ ಎಂಜಿನಿಯರ್‌, ಕೋಲಾರ

ಬಂಗಾರಪೇಟೆಯ ವೆಂಕಟೇಶ್‌ ಪ್ರಸಾದ್‌ ಮೈನಿಂಗ್‌ ಎಂಜಿನಿಯರಿಂಗ್‌ ವ್ಯಾಸಂಗ ಮುಗಿಸಿ ರಾಜಸ್ಥಾನದಲ್ಲಿರುವ ಹಿಂದೂಸ್ತಾನ್‌ ಜಿಂಕ್‌ ಲಿಮಿಟೆಡ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈಗ ಸ್ಕ್ವಾಡ್ರೋನ್‌ ಇನ್ಫ್ರಾ ಅಂಡ್‌ ಮೈನಿಂಗ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ತಂಡದಲ್ಲಿ ಕಂಪನಿಯ ಸಿಇಒ ಸೈರಿಕ್‌ ಜೋಸೆಫ್‌, ಮೈನಿಂಗ್‌ ಎಂಜಿನಿಯರ್‌ಗಳಾದ ಆಸಿಫ್ ಮುಲ್ಲಾ, ವೆಂಕಟೇಶ್‌ ಪ್ರಸಾದ್‌, ಅಮೋಘ್‌, ಏರೋನಾಟಿಕಲ್‌ ಎಂಜಿನಿಯರ್‌ಗಳಾದ ಗಜಾನನ, ಎನ್‌ವಿಡಿ ಸಾಯಿ, ಎಲೆಕ್ಟ್ರಿಕ್‌ ಎಂಜಿನಿಯರ್‌ ಶ್ರೀಕಾಂತ್‌, ಪ್ರೊಸೆಸರ್‌ ರೇಜು, ಜಿಯೋಫಿಜಿಸ್ಟ್‌ ಸತ್ಯ ಇದ್ದರು.

‘ತಂತ್ರಜ್ಞಾನವೇ ನಮ್ಮ ವಿಶ್ವಾಸ’
‘ಕಾರ್ಮಿಕರು ಸುರಕ್ಷಿತವಾಗಿ ಹೊರ ಬರುತ್ತಾರೆ ಎಂಬ ವಿಶ್ವಾಸ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲರಿಗೂ ಇತ್ತು. ಏಕೆಂದರೆ ನಮ್ಮಲ್ಲಿ ಅತ್ಯುತ್ತಮ ತಂತ್ರಜ್ಞಾನ ಇತ್ತು. ಜೊತೆಗೆ ಕೆಲಸ ಮಾಡುವವರಲ್ಲಿ ಸಮನ್ವಯ ಚೆನ್ನಾಗಿತ್ತು. ಪ್ರತಿ ತಂಡಕ್ಕೂ ಒಂದೊಂದು ಜವಾಬ್ದಾರಿ ನೀಡಲಾಗಿತ್ತು’ ಎಂದು ಮೈನಿಂಗ್‌ ಎಂಜಿನಿಯರ್‌ ವೆಂಕಟೇಶ್‌ ಪ್ರಸಾದ್‌ ತಿಳಿಸಿದರು. ‘ಸುರಂಗ ಮಾರ್ಗದಲ್ಲಿನ ಭೂಮಿ ಸ್ಥಿತಿಗತಿ ಅರಿಯುವುದು ನನ್ನ ಕೆಲಸವಾಗಿತ್ತು. ನಮ್ಮ ತಂಡದಲ್ಲಿದ್ದ ಉಳಿದವರು ಒಂದೊಂದು ಕೆಲಸ ಮಾಡುತ್ತಿದ್ದರು. ಇದು ಇಡೀ ತಂಡದ ಪ್ರಯತ್ನ’ ಎಂದರು.

‘ಕಾರ್ಮಿಕರು ಹೊರಗೆ ಬಂದಾಗ ಎಲ್ಲರೂ ಭಾವುಕ’

‘ಸತತ ಕಾರ್ಯಾಚರಣೆಯ ಬಳಿಕ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಾಗ ಎಲ್ಲರೂ ಭಾವುಕರಾದರು. ಪ್ರತಿಯೊಬ್ಬರ ಮುಖದಲ್ಲಿ ಇಷ್ಟು ದಿನ ಕೆಲಸ ಮಾಡಿದ ದಣಿವು ಮರೆಯಾಗಿ ನಗು ಮೂಡಿತು. ಪ್ರತಿಯೊಬ್ಬರು ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದೆವು. 41 ಕಾರ್ಮಿಕರೂ ನಮ್ಮನ್ನು ಅಭಿನಂದಿಸಿದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಕೇಂದ್ರ ಸಚಿವ ವಿ.ಕೆ.ಸಿಂಗ್‌ ಹಾಗೂ ಅಧಿಕಾರಿಗಳು ನಮ್ಮ ಕೆಲಸ ಶ್ಲಾಘಿಸಿದರು’ ಎಂದು ವೆಂಕಟೇಶ್‌ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT