ಟೆಹರಾನ್: ಪಾಕಿಸ್ತಾನದಿಂದ ಇರಾಕ್‌ಗೆ ಶಿಯಾ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಕೇಂದ್ರ ಇರಾನ್‌ನಲ್ಲಿ ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಯಾಝದ್ ಪ್ರಾಂತ್ಯದಲ್ಲಿ ಅವಘಡ ನಡೆದಿದೆ. ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದು, ಈ ಪೈಕಿ 14 ಮಂದಿಯ ಸ್ಥಿತಿ ಗಂಭೀರವಾಗಿದೆ. ಬಸ್‌ನಲ್ಲಿ ಇದ್ದವರೆಲ್ಲರೂ ಪಾಕಿಸ್ತಾನದವರು ಎಂದು ಸ್ಥಳೀಯ ತುರ್ತು ಸೇವೆ ಅಧಿಕಾರಿ ಮಹಮ್ಮದ್ ಆಲಿ ಮಾಲೆಕ್‌ಜಾದೇಹ್ ತಿಳಿಸಿದ್ದಾರೆ.
‘ಬಸ್‌ನ ಬ್ರೇಕ್ ವಿಫಲವಾಗಿರುವುದು ಮತ್ತು ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ’ ಎಂದು ಅವರು ಹೇಳಿದ್ದಾರೆ.
ಹೆದ್ದಾರಿಯಲ್ಲಿ ಬಸ್ ಮಗುಚಿ ಬಿದ್ದಿದ್ದು, ಮೇಲ್ಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ ಮತ್ತು ಬಾಗಿಲುಗಳು ತೆರೆದಿವೆ. ರಕ್ಷಣಾ ಕಾರ್ಯಕರ್ತರು ಒಡೆದ ಗಾಜಿನ ನಡುವೆ ನುಗ್ಗಿ ಕಾರ್ಯಾಚರಣೆ ನಡೆಸಿದರು.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು, ‘ಬಸ್ ಅಪಘಾತಕ್ಕೀಡಾದ ಸುದ್ದಿ ತಿಳಿದು ನೋವುಂಟಾಗಿದೆ. ರಾಜತಾಂತ್ರಿಕ ಅಧಿಕಾರಿಗಳು ಸಂತ್ರಸ್ತರಿಗೆ ನೆರವು ನೀಡಲಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.