ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಪೌರತ್ವ | ಹೊಸ ಯೋಜನೆ: ಸುಮಾರು 5 ಲಕ್ಷ ವಲಸಿಗರಿಗೆ ಅನುಕೂಲ

Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದಲ್ಲಿ ಕಾನೂನಿನ ಮಾನ್ಯತೆ ಇಲ್ಲದೆ ವಾಸಿಸು ತ್ತಿರುವ ಲಕ್ಷಾಂತರ ಮಂದಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅವರಿಗೆ ಪೌರತ್ವ ನೀಡುವ ಯೋಜನೆಯನ್ನು ಶ್ವೇತಭವನ ಮಂಗಳವಾರ ಪ್ರಕಟಿಸಿದೆ.

ಅಮೆರಿಕ ಪೌರತ್ವ ಇರುವವರ ಅನೇಕ ಸಂಗಾತಿಗಳು ಕಾನೂನಾತ್ಮಕ ಸ್ಥಾನಮಾನವಿಲ್ಲದೆ ದೇಶದಲ್ಲಿ ವಾಸಿಸುತ್ತಿದ್ದಾರೆ. ಹೊಸ ಯೋಜನೆ ಮೂಲಕ ಅವರು ಶಾಶ್ವತ ವಾಸ ಮತ್ತು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಬೈಡನ್‌ ಆಡಳಿತ ಮಾಹಿತಿ ನೀಡಿದೆ.

ಈ ಯೋಜನೆಯಿಂದ ಅಮೆರಿಕನ್ನರ ಸುಮಾರು 5 ಲಕ್ಷ ಸಂಗಾತಿಗಳಿಗೆ ದೇಶದ ಪೌರತ್ವ ದೊರೆಯುವ ಸಾಧ್ಯತೆ ಇದೆ. ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅಧ್ಯಕ್ಷ ಜೋ ಬೈಡನ್‌ ಅವರು ಈ ಯೋಜನೆ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. 

ಯಾರು ಅರ್ಹರು?: 2024ರ ಜೂನ್‌ 17ರೊಳಗೆ 10 ವರ್ಷ ಅಮೆರಿಕದಲ್ಲಿ ವಾಸಿಸಿರುವ ಮತ್ತು ಅಮೆರಿಕದ ಪ್ರಜೆಯನ್ನು ವಿವಾಹವಾಗಿರುವ ವಲಸಿಗರು ಹೊಸ ಯೋಜನೆಯ ನಿಯಮದ ಅನ್ವಯ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.

ಈ ದಂಪತಿಗಳ ಮಕ್ಕಳು (ಪೋಷಕರೊಂದಿಗೆ ಇದ್ದರೆ) ಸಹ ಅದೇ ಪ್ರಕ್ರಿಯೆ ಅನ್ವಯ ಪೌರತ್ವ ಪಡೆಯಲು ಅರ್ಹತೆ ಪಡೆಯಲಿದ್ದಾರೆ. ಸುಮಾರು 50,000 ಮಕ್ಕಳಿಗೆ ಇದರಿಂದ ಅನುಕೂಲವಾಗಬಹುದು
ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಂಪತಿಗಳು ಮದುವೆಯಾಗಿ ಎಷ್ಟು ವರ್ಷಗಳಾಗಿವೆ ಎಂಬುದು ಮುಖ್ಯವಲ್ಲ. ಆದರೆ, 2024ರ ಜೂನ್‌ 17ರ ಬಳಿಕ (ಸೋಮವಾರ) ಯಾವುದೇ ಸಮಯದಲ್ಲಿ 10 ವರ್ಷಗಳ ವಾಸವನ್ನು ಪೂರೈಸುವ ವಲಸಿಗರು ಈ ಯೋಜನೆಯಡಿ ಫಲಾನುಭವಿಯಾಗಲು ಅರ್ಹರಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರ್ಹ ವಲಸಿಗರ ಅರ್ಜಿ ಮೊದಲು ಅನುಮೋದನೆಗೊಳ್ಳಬೇಕು. ನಂತರ ‘ಗ್ರೀನ್‌ ಕಾರ್ಡ್‌’ಗೆ ಅರ್ಜಿ ಸಲ್ಲಿಸಲು ಮೂರು ವರ್ಷಗಳ ಅವಕಾಶ ದೊರೆಯುತ್ತದೆ. ಅಲ್ಲದೆ ಅವರಿಗೆ ತಾತ್ಕಾಲಿಕ ಕೆಲಸದ ಪರವಾನಗಿಯೂ ಸಿಗುತ್ತದೆ. ಜತೆಗೆ ಗಡಿಪಾರು ಕ್ರಮದಿಂದಲೂ ರಕ್ಷಣೆ ದೊರೆಯುತ್ತದೆ.

ಬೇಸಿಗೆ ಅಂತ್ಯದ ವೇಳೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ದೊರೆಯುವ ಸಾಧ್ಯತೆ ಇದೆ. ಈ ಕುರಿತು ಅರ್ಜಿ ಜತೆ ಪಾವತಿಸಬೇಕಾದ ಶುಲ್ಕವನ್ನು ಅಂತಿಮಗೊಳಿಸಲಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT