ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಗೂ ನಮಗೂ ಸಂಬಂಧವಿಲ್ಲ: ಉಕ್ರೇನ್ ಸ್ಪಷ್ಟನೆ

Published 23 ಮಾರ್ಚ್ 2024, 12:58 IST
Last Updated 23 ಮಾರ್ಚ್ 2024, 12:58 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್‌): ಮಾಸ್ಕೋದಲ್ಲಿ ಕಿಕ್ಕಿರಿದು ತುಂಬಿದ್ದ ಸಭಾಂಗಣಕ್ಕೆ ನುಗ್ಗಿ ಉಗ್ರರು ನಡೆಸಿರುವ ಗುಂಡಿನ ದಾಳಿಗೆ ಉಕ್ರೇನ್‌ ನಂಟಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ, ಈ ಆರೋಪವನ್ನು ಉಕ್ರೇನ್‌ ತಳ್ಳಿಹಾಕಿದೆ.

ಮಾಸ್ಕೋದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದರು. ಈ ಭೀಕರ ದಾಳಿಯಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವೀಸ್‌ (ಎಫ್‌ಎಸ್‌ಬಿ), ದಾಳಿ ನಡೆಸಿದ ಬಂದೂಕುಧಾರಿಗಳನ್ನು ಬಂಧಿಸಲಾಗಿದೆ. ಅವರು ಉಕ್ರೇನ್‌ಗೆ ಪಲಾಯನ ಮಾಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದೆ. ಇದಕ್ಕೆ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ನಿಕಟವರ್ತಿ ಮಿಖಾಯ್ಲೊ ಪೊಡೊಲ್ಯಾಕ್‌ ಅವರು ಎಕ್ಸ್‌/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, 'ರಷ್ಯಾದ ಎಫ್‌ಎಸ್‌ಬಿ ವರದಿಯು ಆಧಾರ ರಹಿತ ಮತ್ತು ಅರ್ಥಹೀನವಾದದ್ದು' ಎಂದಿದ್ದಾರೆ.

'ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶದಂತೆ ಎಫ್‌ಎಸ್‌ಬಿ ನೀಡುತ್ತಿರುವ ಯೋಜಿತ ಮತ್ತು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ' ಎಂದು ಉಕ್ರೇನ್‌ ಗುಪ್ತಚರ ಮೂಲಗಳೂ ಹೇಳಿವೆ.

ರಷ್ಯಾ ಇತಿಹಾಸದಲ್ಲಿ ಕಳೆದ ಎರಡು ದಶಕಗಳಲ್ಲೇ ಅತ್ಯಂತ ಭೀಕರವಾದದ್ದು ಎನ್ನಲಾಗುತ್ತಿರುವ ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಹೊತ್ತುಕೊಂಡಿದೆ.

ಆದಾಗ್ಯೂ, ದಾಳಿಯೊಂದಿಗೆ ಉಕ್ರೇನ್‌ಗೆ ನಂಟಿದೆ ಎಂದಿರುವ ಎಫ್‌ಎಸ್‌ಬಿ, 'ಕೃತ್ಯ ನಡೆಸಿದ ಉಗ್ರರು, ಕಾರಿನ ಮೂಲಕ ರಷ್ಯಾ–ಉಕ್ರೇನ್‌ ಗಡಿಯತ್ತ ಪರಾರಿಯಾಗಲು ಪ್ರಯತ್ನಿಸಿದ್ದರು. ಅಪರಾಧಿಗಳು, ಗಡಿ ದಾಟುವ ಉದ್ದೇಶ ಹೊಂದಿದ್ದರು. ಅವರಿಗೆ ಉಕ್ರೇನ್‌ ಕಡೆಯವರೊಂದಿಗೆ ಸಂಪರ್ಕ ಹೊಂದಿದ್ದಾರೆ' ಎಂದು ಆರೋಪಿಸಿದೆ. ಆದರೆ, ಹೆಚ್ಚಿನ ಮಾಹಿಯನ್ನು ಬಿಟ್ಟುಕೊಟ್ಟಿಲ್ಲ.

ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಸೇರಿದಂತೆ ರಷ್ಯಾದ ಹಲವು ಶಾಸಕರೂ, ಯಾವುದೇ ಸಾಕ್ಷ್ಯಗಳನ್ನು ನೀಡದೆ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಸೇರಿದಂತೆ ಒಟ್ಟು 11 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ ಎಂದು ರಷ್ಯಾ ಹೇಳಿದೆ. ಆದರೆ, ದಾಳಿಯ ಹೊಣೆ ಹೊತ್ತಿರುವ ಐಎಸ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT