ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಸಂಯಮ ಹಾಗೂ ರೋಗಿಷ್ಟ ಮನಸ್ಸು

Last Updated 16 ಜೂನ್ 2018, 9:09 IST
ಅಕ್ಷರ ಗಾತ್ರ

ಪ್ರೊ.ಎಂ.ಎಂ.ಕಲಬುರ್ಗಿಯವರ ಭೀಕರ ಹತ್ಯೆ ನಮ್ಮನ್ನೆಲ್ಲ ತಲ್ಲಣಗೊಳಿಸಿದೆ. ಈ ಆಘಾತಕಾರಿ ಹತ್ಯೆಯ ಕರ್ತೃಗಳು ಯಾರು, ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಇದರ ಬಗೆಗಿನ ಚರ್ಚೆ ಕರ್ನಾಟಕದೊಳಗೆ ಮತ್ತು ಹೊರಗಿನ ಪ್ರಪಂಚಗಳಲ್ಲೂ ವ್ಯಾಪಕವಾಗಿ ನಡೆದಿದೆ. ಗಮನಾರ್ಹ ವಿಚಾರವೆಂದರೆ ಕನ್ನಡದ ಮಾಧ್ಯಮಗಳಲ್ಲಿ ಈ ಘಟನೆಯ ಕುರಿತಾಗಿ ಅಪರೂಪದ ಸಂಯಮ ಮತ್ತು ತಾಳ್ಮೆ ಕಂಡುಬಂದಿತು.

ಆದರೆ. ರಾಷ್ಟ್ರೀಯ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ, ಟ್ವಿಟರ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳು ಮತ್ತು ಅಂತರ್ಜಾಲದ ಸುದ್ದಿತಾಣಗಳಲ್ಲಿ ಬಹುಬಗೆಯ ಊಹಾಪೋಹಗಳಿಗೆ ಆಸ್ಪದ ದೊರಕಿದೆ. ಪ್ರೊ. ಕಲಬುರ್ಗಿಯವರ ಹತ್ಯೆ ಅನಿರೀಕ್ಷಿತವಾಗಿ ನಡೆದಿದ್ದರಿಂದ ಇರಬಹುದು. ಇಲ್ಲವೇ ಮಹಾರಾಷ್ಟ್ರದ ಈರ್ವರು ವಿಚಾರವಾದಿಗಳಾದ ಗೋವಿಂದ ಪಾನ್ಸರೆ ಮತ್ತು ನರೇಂದ್ರ ದಾಭೋಲ್ಕರ್ ಇವರ ಹತ್ಯೆಗೆ ಸಾಮ್ಯತೆಯಿದ್ದ ಕಾರಣದಿಂದ ಇರಬಹುದು.

ಈ ಕೃತ್ಯ ಬಲಪಂಥೀಯ ಅಂಧಶ್ರದ್ಧೆಯ, ಅಂಚಿನ ಗುಂಪಿನ ಕಾರ್ಯಕರ್ತರೇ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಕರ್ನಾಟಕವನ್ನು ತಾಳ್ಮೆ ಕಳೆದುಕೊಂಡ, ಅಸಹಿಷ್ಣು ನಾಡು ಎಂಬಂತೆ ಬಣ್ಣಿಸುವ ಪ್ರವೃತ್ತಿಯೂ ಕಾಣಬರುತ್ತಿದೆ. ಕಲಬುರ್ಗಿಯವರ ಹತ್ಯೆ ಕರ್ನಾಟಕ ಮಾರ್ಪಡಿಸಲಾಗದಂತೆ ಬದಲಾಗುತ್ತಿರುವ ಸಂಕೇತವಿರಬಹುದು ಎಂಬ ದನಿ ಈ ಎಲ್ಲ ಸಂವಹನದಲ್ಲಿ ಗಾಢವಾಗಿದೆ.

ಈ ಹಿನ್ನೆಲೆಯಲ್ಲಿ ನಟರಾಜ ಹುಳಿಯಾರ್ ಅವರು ತಮ್ಮ ಅಂಕಣದಲ್ಲಿ ಬುಧವಾರ ಬರೆದ ಎಚ್ಚರದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವುದು ಅಗತ್ಯವೆಂದು ನಾನು ಭಾವಿಸಿದ್ದೇನೆ. ಪ್ರೊ. ಕಲಬುರ್ಗಿಯವರ ಹತ್ಯೆಯ ಕುರಿತಾಗಿ ಸಿಐಡಿ ಹಾಗೂ ಸಿಬಿಐನಂತಹ ವೃತ್ತಿಪರ ತನಿಖಾಸಂಸ್ಥೆಗಳು ನಿರ್ದಿಷ್ಟ ವಿವರಗಳನ್ನು ಹೊರಗೆಳೆಯುವ ತನಕ ನಾವೆಲ್ಲರೂ ತಾಳ್ಮೆ ತೋರುವುದು ಉಚಿತ. ಹಾಗೆಂದ ಮಾತ್ರಕ್ಕೆ ಸಾಮಾಜಿಕ ತಾಣಗಳಲ್ಲಿ ಈ ಹತ್ಯೆಯನ್ನು ಸಂಭ್ರಮಿಸುವ, ಇತರರಿಗೆ ಪಾಠ ಕಲಿಯಲು ಸಂದೇಶವೆಂದು ಸಾರುವ ರೋಗಿಷ್ಟ ಮನಸ್ಸುಗಳನ್ನು ಖಂಡಿಸಲು ನಾವು ಹಿಂಜರಿಯಬೇಕಿಲ್ಲ.

ಅಲ್ಲದೆ ಕರ್ನಾಟಕದಲ್ಲಿ ಅಸಹಿಷ್ಣುತೆ ಬೆಳೆಯುತ್ತಿದೆ, ಪ್ರಜಾಸತ್ತಾತ್ಮಕ ಸಂಸ್ಕೃತಿ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂಬ ಆತಂಕವೂ ಆಧಾರರಹಿತವಲ್ಲ. ಇಂತಹ ಆತಂಕಕಾರಿ ಬೆಳವಣಿಗೆಗಳಿಗೆ ಜವಾಬ್ದಾರರು ಯಾರೇ ಇದ್ದರೂ ಎಲ್ಲ ಪ್ರಜ್ಞಾವಂತರೂ ನಿರಂತರವಾಗಿ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂಬುದೂ ಸತ್ಯವೇ. ಇವೆಲ್ಲವುಗಳ ನಡುವೆ ನಾವು ನೆನಪಿಸಿಕೊಳ್ಳ ಬೇಕಿರುವುದು ಪ್ರೊ.ಕಲಬುರ್ಗಿಯವರ ದುರಂತ ಅಂತ್ಯವನ್ನಷ್ಟೇ ಅಲ್ಲ. ಸಜ್ಜನಿಕೆ, ನಿಷ್ಠುರತೆ, ಸರಳತೆ ಮತ್ತು ಕ್ರಿಯಾಶೀಲತೆಗಳಿಂದ ತುಂಬಿದ್ದ ಅವರ ಬದುಕನ್ನು. ಕಲಬುರ್ಗಿಯವರ ಕುರಿತಾದ ನಮ್ಮ ನೆನಪುಗಳನ್ನು ಅವರ ಅಪರೂಪದ ಬದುಕು ರೂಪಿಸಬೇಕು ಎನ್ನುವುದು ನನ್ನ ಸರಳ ಸಲ್ಲಿಕೆ.

ಸಂಶೋಧನೆ, ಬರವಣಿಗೆ ಮತ್ತು ಕನ್ನಡಪರ ಚಳವಳಿಗಳಿಗೆ ಮೀಸಲಾಗಿದ್ದ ಬದುಕು ಅವರದು. ಮೂಲತಃ ಸಾಹಿತ್ಯದ ವಿದ್ಯಾರ್ಥಿಯಾದರೂ ಇತಿಹಾಸ, ಜಾನಪದ ಮತ್ತು ಸಾಹಿತ್ಯ ಸಂಸ್ಕೃತಿಗಳನ್ನು ಒಳಗೊಂಡ ಬಹುಶಿಸ್ತೀಯ ಅಧ್ಯಯನ ಮಾದರಿಯನ್ನು ಕಲಬುರ್ಗಿಯವರು ತಮ್ಮ ಚಿಂತನೆ ಮತ್ತು ಸಂಶೋಧನ ಬರಹಗಳಲ್ಲಿ ರೂಢಿಸಿಕೊಂಡರು. ಇದರಿಂದ ಅವರಿಗೆ ಉತ್ತರ ಕರ್ನಾಟಕದ ಐತಿಹಾಸಿಕ ಅನುಭವಗಳನ್ನು ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಇಡಿಯಾಗಿ ನೋಡಲು ಸಾಧ್ಯವಾಯಿತು.

ಜೊತೆಗೆ ಇಂತಹ ಸಂಶೋಧನೆಗೆ ಅಗತ್ಯವಾದ ಎಲ್ಲ ಬಗೆಯ ಆಕರಗಳನ್ನು ಹುಡುಕುವ ಮತ್ತು ಪರಿಷ್ಕರಿಸಿ ಪ್ರಕಟಿಸುವ ಪ್ರವೃತ್ತಿಯೂ ಅವರಲ್ಲಿ ಬೆಳೆಯಿತು. ಹಾಗಾಗಿಯೇ ಶಾಸನಗಳು, ಶಾಸ್ತ್ರಗ್ರಂಥಗಳು, ಸಾಹಿತ್ಯ ಕೃತಿಗಳು, ಜಾನಪದ ಪಠ್ಯಗಳು ಮತ್ತು ಆಚರಣೆಗಳು ಇವೆಲ್ಲವುಗಳ ಬಗ್ಗೆಯೂ ಅವರು ಆಸಕ್ತರು. ಕಲಬುರ್ಗಿಯವರ ಬದುಕಿನ ವಿಶಿಷ್ಟತೆಯನ್ನು ಮೂರು ನೆಲೆಗಳಲ್ಲಿ ನಾನು ಗುರುತಿಸಲು ಬಯಸುತ್ತೇನೆ. ಇವುಗಳ ಪೈಕಿ ಮೊದಲ ಮತ್ತು ಬಹುಮುಖ್ಯ ಅಂಶ ಅವರಲ್ಲಿದ್ದ ಸ್ವವಿಮರ್ಶೆಯ ಶಕ್ತಿ. ಇದು ವೈಯಕ್ತಿಕ ಮತ್ತು ಸಮುದಾಯದ ನೆಲೆಗಳೆರಡರಲ್ಲೂ ಕಾಣುವ ಗುಣ.

ಯಾವ ನಿಷ್ಠುರ ಮಾನದಂಡಗಳು ಇತರರನ್ನು ವಿಮರ್ಶಿಸಲು ಬಳಕೆಯಾಗುತ್ತಿದ್ದವೋ ಅವು ಅವರ ಬರಹ-ಅಭಿಪ್ರಾಯಗಳಿಗೂ ಬಳಸಲ್ಪಡುತ್ತಿದ್ದವು. ತಮ್ಮ ಅಭಿಪ್ರಾಯಗಳನ್ನು ಅವರು ಬದಲಿಸಿಕೊಂಡಿರುವ ನಿದರ್ಶನಗಳುಂಟು. ಹಲವು ಬಾರಿ ನನ್ನೊಡನೆ ತಮ್ಮ ಆತುರದ ಪ್ರವೃತ್ತಿಯ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದರು. ತಮಗೊಂದು ಹೊಸದೊಂದು ಆಕರ ದೊರಕಿದ ಕೂಡಲೆ ಇಲ್ಲವೆ ಹೊಸ ಒಳನೋಟ ಹೊಳೆದ ಮರುಕ್ಷಣವೇ ಲೇಖನವೊಂದನ್ನು ಬರೆದು ಬಿಡಬೇಕು ಎಂಬ ಒಳ ಒತ್ತಡವಿರುತ್ತದೆ. ಈ ಪ್ರವೃತ್ತಿಯಿಂದ ತನಗೆ ಉದ್ಗ್ರಂಥ (ಮಾನೊಗ್ರಾಫ್) ಗಳನ್ನು ಬರೆಯುವ ತಾಳ್ಮೆ ಇಲ್ಲದಾಗಿದೆ ಎಂದೂ ಒಪ್ಪಿಕೊಂಡಿದ್ದರು.

ಪ್ರಬಂಧಗಳ ಬದಲಿಗೆ ಗ್ರಂಥಗಳನ್ನು ರಚಿಸಿದ್ದರೆ ಬಹುಶಃ ತಮಗೆ ಮತ್ತಷ್ಟು ಮನ್ನಣೆ ದೊರಕುತ್ತಿತ್ತೇನೊ ಎಂಬ ವಿಷಾದವೂ ಅವರಲ್ಲಿತ್ತು. ವೈಯಕ್ತಿಕ ನೆಲೆಗಿಂತ ಸಾಮುದಾಯಿಕ ನೆಲೆಯಲ್ಲಿ ಕಲಬುರ್ಗಿಯವರ ಸ್ವವಿಮರ್ಶೆಯ ಶಕ್ತಿ ಹೆಚ್ಚು ಅರ್ಥಪೂರ್ಣವಾಗಿ ಮತ್ತು ಸಾರ್ವಜನಿಕವಾಗಿ ಹೊರಹೊಮ್ಮಿತು. ಸಾಮುದಾಯಿಕ ನೆಲೆಯಲ್ಲಿ ಎನ್ನುವಾಗ ನಾನಿಲ್ಲಿ ಸೂಚಿಸುತ್ತಿರುವುದು ಲಿಂಗಾಯತ ಸಮುದಾಯದ ಬಗ್ಗೆ. ಆದರೆ ಈ ಅಂಶವನ್ನು ಕನ್ನಡ ಮತ್ತು ಹಿಂದೂ ಸಮುದಾಯಗಳಿಗೂ ವಿಸ್ತರಿಸಬಹುದು. ಸ್ವತಃ ಲಿಂಗಾಯತರಾದ ಕಲಬುರ್ಗಿಯವರು ವೀರಶೈವ-ಲಿಂಗಾಯತ ಇತಿಹಾಸವನ್ನು ನಿಷ್ಠುರತೆಯಿಂದ ವ್ಯಾಖ್ಯಾನಿಸಿ ಹಲವು ವಿವಾದಗಳಲ್ಲಿ ಸಿಲುಕಿದರು. 

ಕಲಬುರ್ಗಿಯವರನ್ನು ವಿಚಾರವಾದಿ (ರಾಷನಿಲಿಸ್ಟ್) ಎಂದು ಈಗ ಬಣ್ಣಿಸಲಾಗುತ್ತಿದ್ದರೂ, ವಚನಚಳವಳಿ ಅವರ ವೈಚಾರಿಕತೆಯ ಮೂಲದ್ರವ್ಯಗಳಲ್ಲೊಂದು. ಈ ದೃಷ್ಟಿಯಿಂದ ನೋಡಿದಾಗ ಅವರು ಕರ್ನಾಟಕದ ಇತರ ಪಕ್ಕಾ ವಿಚಾರವಾದಿಗಳಿಗಿಂತ ಭಿನ್ನರಾದವರು. ವೀರಶೈವ-ಲಿಂಗಾಯತ ಇತಿಹಾಸವನ್ನು ಪೂರ್ಣವಾಗಿ ಬಸವಣ್ಣ ಮತ್ತು ವಚನ ಚಳವಳಿಯ ತಾತ್ವಿಕ ಚೌಕಟ್ಟಿನಿಂದಲೇ ಗ್ರಹಿಸಲು ಕಲಬುರ್ಗಿಯವರು ಪ್ರಯತ್ನಿಸಿದರು. ಇದು ಅವರ ಮೂಲ ಒಳನೋಟವಲ್ಲದಿದ್ದರೂ, ಕಲಬುರ್ಗಿಯವರು ನಮ್ಮ ಕಾಲದಲ್ಲಿ ಈ ವಿಶ್ಲೇಷಣ ಮಾದರಿಯ ಅತ್ಯಂತ ಪ್ರಮುಖ ಪ್ರತಿಪಾದಕರು.

ಅಂದರೆ ವಚನಕಾರರು ಸಮಕಾಲೀನ ಶೈವಪರಂಪರೆಗಳಿಂದ ದೂರಸರಿದು, ಹೊಸದಾರಿಯನ್ನು ಅನ್ವೇಷಿಸಿದರು. ಆ ಕಾರಣದಿಂದಲೇ ಲಿಂಗಾಯತ ಸಮುದಾಯ ಹಿಂದೂ ಧರ್ಮದಿಂದ ಅಂದಿನಿಂದ ಇಂದಿನವರೆಗೆ ವಿಭಿನ್ನವಾದ ಗುರುತು ಮತ್ತು ಅಸ್ತಿತ್ವವನ್ನು ಹೊಂದಿದೆ ಎಂದು ಕಲಬುರ್ಗಿಯವರು ಪ್ರತಿಪಾದಿಸಿದರು. ಆದ್ದರಿಂದಲೇ ಲಿಂಗಾಯತರು ಸೆನ್ಸಸ್‌ನಲ್ಲಿ ಹಿಂದೂ ಅಲ್ಲ, ಲಿಂಗಾಯತ ಎಂದೇ ಬರೆಸಬೇಕು ಎಂದು ಅವರು ನಂಬಿದ್ದರು. ಗಮನಿಸಿ. ಅವರು ಈ ವಾದವನ್ನು ತಾತ್ವಿಕ ನೆಲೆಯ ಆಧಾರದ ಮೇಲಿಟ್ಟರು. ಬಹುತೇಕ ಲಿಂಗಾಯತ ರಾಜಕಾರಣಿಗಳು ಮತ್ತು ಮಠಾಧೀಶರು ವಾದಿಸಿದಂತೆ ಕೇವಲ ಅಲ್ಪಸಂಖ್ಯಾತ ಸ್ಥಾನಮಾನ ಪಡೆದು, ಅದರಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಮ್ಮ ಗಟ್ಟಿ ನಿಲುವುಗಳ ಕಾರಣದಿಂದ ಕಲಬುರ್ಗಿಯವರು ಹಿಂದೂ ಬಲಪಂಥೀಯರು ಮತ್ತು ಲಿಂಗಾಯತ ಸಮುದಾಯಗಳೆರಡರಿಂದಲೂ ಕಷ್ಟಕ್ಕೆ ಸಿಲುಕಿದರು.  ಆದರೆ, ತಮಗೆ ಕಾಣುತ್ತಿರುವ ಸತ್ಯದ ಶೋಧನೆ ಮುಖ್ಯವಾದುದು ಎಂಬ ಪ್ರಜ್ಞೆ ಅವರನ್ನು ಮುನ್ನಡೆಯಲು ಅನುವು ಮಾಡಿಕೊಟ್ಟಿತು. ನಾನಿಲ್ಲಿ ಪ್ರಸ್ತಾಪಿಸಬಯಸುವ ಎರಡನೆಯ ಅಂಶ ಕಲಬುರ್ಗಿಯವರು ಇತರ ಸಂಶೋಧಕರನ್ನು ಸಲಹಿದ ರೀತಿ. ಬಹುಶಃ ಕಳೆದ ಐದು ದಶಕಗಳಲ್ಲಿ  ಜಿ. ಎಸ್. ಶಿವರುದ್ರಪ್ಪನವರನ್ನು ಹೊರತುಪಡಿಸಿ ತಮ್ಮ ವಿದ್ಯಾರ್ಥಿಗಳನ್ನು ‘ಶೈಕ್ಷಣಿಕ’ವಾಗಿ ಅವರಷ್ಟು ಮತ್ತಾರೂ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಬೆಳೆಸಲಿಲ್ಲ.

ಸಂಶೋಧನಾ ಮಾರ್ಗದರ್ಶಕರಾಗಿ ಅವರು ತಮ್ಮ ಅಧಿಕೃತ ವಿದ್ಯಾರ್ಥಿಗಳನ್ನು ತಿದ್ದಿ ತೀಡಿದ್ದಲ್ಲದೆ, ನನ್ನಂತಹ ನೂರಾರು ಕಿರಿಯ ಸಂಶೋಧಕರಿಗೆ ಯಥೇಚ್ಛವಾಗಿ ಸಮಯ, ಒಳನೋಟಗಳು ಮತ್ತು ಆಕರಗಳನ್ನು ನೀಡಿದರು. ನಾನು ಎಂ.ಫಿಲ್. ವಿದ್ಯಾರ್ಥಿಯಾಗಿ ಕ್ಷೇತ್ರಕಾರ್ಯಕ್ಕಾಗಿ ಧಾರವಾಡಕ್ಕೆ ಹೋದಾಗಲೆಲ್ಲ, ನಾಲ್ಕೈದು ಗಂಟೆಗಳ ಕಾಲದ ಸುದೀರ್ಘ ಚರ್ಚೆ ನಡೆಸುವುದು ಸರ್ವೆಸಾಮಾನ್ಯವಾಗಿರುತ್ತಿತ್ತು. ವಚನಗಳು, ವೀರಶೈವ ಕಥನಗಳು ಮತ್ತು ಶಾಸ್ತ್ರಗ್ರಂಥಗಳ ಬಗ್ಗೆ ಅವರ ಕಚೇರಿಯಲ್ಲಿ ನಡೆಸಿದ ಇಂತಹ ನಾಲ್ಕು ಚರ್ಚೆಗಳು ನಾನು ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳುವಂತಹವು. 

ಇದು ನನ್ನೊಬ್ಬನ ಅನುಭವವಲ್ಲ. ಉತ್ತರ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಪ್ರಕಟವಾಗಿರುವ ಮಹಾಪ್ರಬಂಧಗಳನ್ನು ಗಮನಿಸಿ. ಎಲ್ಲೆಡೆ ಲೇಖಕನ ಮಾತುಗಳಲ್ಲಿ ಕಲಬುರ್ಗಿಯವರ ಉಲ್ಲೇಖ ಮತ್ತು ಕೃತಜ್ಞತಾಪೂರ್ವಕ ಶ್ಲಾಘನೆ ಪ್ರಾರಂಭದಲ್ಲಿಯೇ ಇರುತ್ತದೆ. ಹೀಗೆ ಉತ್ತರ ಕರ್ನಾಟಕದ ಬಗೆಗಿನ ಸಂಶೋಧನೆ ಕಳೆದ ಅರ್ಧ ಶತಮಾನದಲ್ಲಿ ರೂಪಿಸಿದ ಶ್ರೇಯಸ್ಸು ಪಡೆಯುವವರ ಪಟ್ಟಿಯಲ್ಲಿ ಪ್ರೊ. ಕಲಬುರ್ಗಿಯವರು ಮೊದಲಿಗರು. ಮೂರನೆಯದಾಗಿ, ಕಲಬುರ್ಗಿಯವರಷ್ಟು ಸಹಯೋಗಿತ್ವದ ಸಾಂಸ್ಥಿಕ ಯೋಜನೆಗಳನ್ನು ಕಳೆದ ಐದು ದಶಕಗಳಲ್ಲಿ ಮತ್ತಾರೂ ನಿರ್ವಹಿಸಿಲ್ಲ.

ಕರ್ನಾಟಕ ಮತ್ತು ಕನ್ನಡ ವಿಶ್ವವಿದ್ಯಾಲಯಗಳು ಹಾಗೂ ಕರ್ನಾಟಕ ಸರ್ಕಾರಗಳ ಯೋಜನೆಗಳಲ್ಲದೆ, ಲಿಂಗಾಯತ ಮಠಗಳು ಮತ್ತು ಸಂಘಸಂಸ್ಥೆಗಳೊಡನೆ ಕೈಗೂಡಿಸಿ, ನೂರಾರು ಪ್ರಮುಖ ಕೃತಿಗಳ ಪ್ರಕಟಣೆಗೆ ಅವರು ಕಾರಣ ಕರ್ತರಾಗಿದ್ದಾರೆ. ವೀರಶೈವ ವಾಜ್ಞ್ಮಯ ಮತ್ತು ಅದರ ವಿಶ್ಲೇಷಣೆಯ ಕೃತಿಗಳ ಪ್ರಕಟಣೆಯನ್ನು ಗದಗಿನ ತೋಂಟದಾರ್ಯ ಮಠ, ಬೆಳಗಾವಿಯ ನಾಗನೂರು ಮಠ, ಮೈಸೂರಿನ ಜೆ.ಎಸ್.ಎಸ್. ಮಠ ಇತ್ಯಾದಿಗಳ ಪ್ರಕಟಣ ಯೋಜನೆಗಳ ಮೂಲಕ ಮಾಡುವಲ್ಲಿ ಅವರು ನಾಯಕತ್ವದ ಪಾತ್ರ ವಹಿಸಿದವರು.

ಇದಲ್ಲದೆ ದಾಸ ಸಾಹಿತ್ಯ, ಉತ್ತರ ಕರ್ನಾಟಕದ ಜಾನಪದ ಸಾಹಿತ್ಯ, ಹಳಕಟ್ಟಿ ಸಮಗ್ರ ಸಾಹಿತ್ಯ, ಶಾಸನ ಸಾಹಿತ್ಯಗಳ ಸಂಪಾದನೆ ಮತ್ತು ಪ್ರಕಟಣೆಗಳ ಜವಾಬ್ದಾರಿ ಹೊತ್ತವರು. ನನ್ನ ದೃಷ್ಟಿಯಲ್ಲಿ ಅವರ ಕಡೆಯ ಯೋಜನೆಗಳಲ್ಲೊಂದಾದ ದಖನಿ-ಉರ್ದುವಿನಲ್ಲಿರುವ ವಿಜಯಪುರದ ಕಾಲದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಯೋಜನೆ ಬಹು ಮುಖ್ಯವಾದುದು. ವಿಜಯಪುರದ ಬಿ.ಎಲ್.ಡಿ.ಇ. ಈಗಾಗಲೇ ಈ ಯೋಜನೆಯ ಮೊದಲ ಕಂತಿನ ಸಂಪುಟಗಳನ್ನು ಪ್ರಕಟಿಸಿದೆ. ಕೆಲವೊಮ್ಮೆ ಅವರ ಸಂಪಾದನೆಯ ಮಾನದಂಡಗಳ ಬಗ್ಗೆ, ಅವಸರದ ನಿರ್ಣಯಗಳ ಕುರಿತಾಗಿ ನಾನೇ ಪ್ರಶ್ನೆಗಳೆತ್ತಿರುವುದುಂಟು.

ಆದರೆ ವಿವಾದಾತ್ಮಕ, ನಿಷ್ಠುರಿ ಸಂಶೋಧಕರೊಬ್ಬರು ಎಲ್ಲ ಬಗೆಯ ಸರ್ಕಾರಿ ಮತ್ತು ಸಮುದಾಯದ ಸಂಸ್ಥೆಗಳೊಡನೆ ಜೊತೆಗೂಡಿ ಹೇಗೆ ರಚನಾತ್ಮಕವಾಗಿ ಕೆಲಸ ಮಾಡಿದರು ಎಂದು ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅವರ ಪ್ರೇರಣೆ ಅಧಿಕಾರ-ಸ್ಥಾನಮಾನ ಪಡೆಯುವುದಾಗಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖನಾರ್ಹವಾದುದು. ಸ್ವವಿಮರ್ಶೆ, ವಿದ್ಯಾರ್ಥಿಪೋಷಣೆ ಮತ್ತು ಸಹಭಾಗಿತ್ವ- ಈ ಮೂರೂ ಗುಣಗಳು ನಮ್ಮ ವಿಶ್ವವಿದ್ಯಾಲಯಗಳಿಂದ ಇಂದು ಮರೆಯಾಗಿರುವ ಪ್ರವೃತ್ತಿಗಳು. ಹಾಗಾಗಿಯೇ ಪ್ರೊ.ಕಲಬುರ್ಗಿಯವರು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ನನ್ನಂತಹವರಿಗೆ ವಿಶೇಷವಾಗಿ ಸ್ಮರಣೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT