ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗೊಂದು ಮಠ ಏಕೆ ಬೇಡ?

Last Updated 16 ಜೂನ್ 2018, 9:09 IST
ಅಕ್ಷರ ಗಾತ್ರ

ಭಾರತದ ಜಾತಿ ಪದ್ಧತಿಯ ಬಗೆಗಿನ ಅಧ್ಯಯನಗಳಲ್ಲಿ ಪ್ರಖ್ಯಾತ ಫ್ರೆಂಚ್ ಮಾನವಶಾಸ್ತ್ರಜ್ಞ ಲೂಯಿ ಡ್ಯೂಮೊ ಅವರ ಹೊಮೊ ಹೈರಾರ್ಕಿಕಸ್ (1970) ಎಂಬ ಕೃತಿ ಪ್ರಮುಖವಾದುದು. ಈ ಮಹತ್ವಪೂರ್ಣ ಮತ್ತು ವಿವಾದಾತ್ಮಕ ಪುಸ್ತಕದ ಮೊದಲನೆಯ ಪ್ಯಾರಾದಲ್ಲಿಯೇ ಡ್ಯೂಮೊ ಒಂದು ತೂಹಲಕರವಾದ ವಿದ್ಯಮಾನದೆಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ: ಭಾರತದಲ್ಲಿ ಬದುಕಿದ್ದ ಯಾವುದೇ ಪಾಶ್ಚಿಮಾತ್ಯನೂ ಜಾತಿ ಪದ್ಧತಿಯ ನಿರ್ಮೂಲನೆಯನ್ನು ಪ್ರತಿಪಾದಿಸಿಲ್ಲ. ಇದಕ್ಕೆ ಅವರು ನೀಡುವ ಕಾರಣವೆಂದರೆ, ಪಾಶ್ಚಿಮಾತ್ಯರಿಗೆ ಜಾತಿ ನಿರ್ಮೂಲನ ಪ್ರಯತ್ನವೇ ಅಪ್ರಾಯೋಗಿಕವೆಂದೆನಿಸಿದೆ, ಇಲ್ಲವೇ ಜಾತಿ ವ್ಯವಸ್ಥೆಯ ಸಕಾರಾತ್ಮಕ ಆಯಾಮಗಳು ತಿಳಿದಿವೆ. ಅಂದರೆ ಡ್ಯೂಮೊ ಹೇಳುತ್ತಿರುವುದು ಜಾತಿ ವಿನಾಶದ ಚರ್ಚೆ ಸಂಪೂರ್ಣವಾಗಿ ಭಾರತೀಯರ ಗೀಳಾಗಿದೆ ಎಂದು.

ಡ್ಯೂಮೊ ಗುರುತಿಸುವ ಈ ಅಂಶ ನನಗೆ ಮತ್ತೆ ನೆನಪಾದದ್ದು ಐದನೆಯ ಬಾರಿಗೆ ಪರ್ಯಾಯ ಏರುವ ಸಿದ್ಧತೆಯಲ್ಲಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಯವರು ‘ಜಾತಿಗೊಂದು ಮಠವಿದ್ದರೆ ತಪ್ಪೇನಿಲ್ಲ’ ಎಂದು ಪ್ರತಿಪಾದಿಸಿದಾಗ. ನಮ್ಮ ಇಂದಿನ ವಾಸ್ತವವನ್ನು ನೋಡಿದಾಗ ಪೇಜಾವರರ ಈ ಮಾತು ವಿವಾದಕ್ಕೆ ಎಡೆ ಮಾಡಿಕೊಡಬೇಕಿಲ್ಲ.

ಏಕೆಂದರೆ ಕಳೆದ ಎರಡು ದಶಕಗಳಲ್ಲಿ ಜಾತಿಗಳು ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತವಾಗುತ್ತಿವೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಮ್ಮ ಸಮಾಜದೊಳಗಿನ ಮೊಬಿಲೈಜೇಶನ್ ಜಾತಿಗಳ ಆಧಾರದ ಮೇಲೆಯೇ ನಡೆಯುತ್ತಿದೆ. ಅವುಗಳ ಪ್ರಾತಿನಿಧಿಕ ಸಂಸ್ಥೆಗಳಾಗಿ ಮಠಗಳು ಹೆಚ್ಚು ಗಟ್ಟಿಗೊಳ್ಳುತ್ತಿವೆ, ನೆಲೆಯೂರುತ್ತಿವೆ. ಇದು ಮುಂದುವರಿದ ಮತ್ತು ಹಿಂದುಳಿದ ಜಾತಿಗಳೆಲ್ಲವಕ್ಕೂ ಅನ್ವಯವಾಗುವ ಮಾತು. ಈ ವಾಸ್ತವವನ್ನು ಒಪ್ಪಲು ಪೇಜಾವರರ ವೈಚಾರಿಕ ಎದುರಾಳಿಗಳಾದ ಪ್ರಗತಿಪರರಿಗೆ ಇರಿಸುಮುರಿಸಾ
ದರೂ ಯಾರೂ ಇದನ್ನು ನಿರಾಕರಿಸುವಂತಿಲ್ಲ.

ಆದರೆ ಇದು ಅಪೇಕ್ಷಣೀಯ ವಾಸ್ತವವೇ? ಪೇಜಾವರರ ನಿಲುವಿನ ಅಪಾಯವಾದರೂ ಏನು? ಜಾತಿಯ ಹೊರತಾಗಿ ಭಾರತೀಯ ಸಮಾಜವನ್ನು, ಮತ್ತು ಮುಂದುವರಿದು, ಹಿಂದೂ ಧರ್ಮವನ್ನು ಕಲ್ಪಿಸಿಕೊಳ್ಳಲು ಪೇಜಾವರರಂತಹವರಿಗೆ ಸಾಧ್ಯವಿಲ್ಲವೇ? 

ಅವರ ಸಾರ್ವಜನಿಕ ಹೇಳಿಕೆಗಳು ಮತ್ತು ಚಟುವಟಿಕೆಗಳನ್ನು ಗಮನಿಸಿದಾಗ, ವಿಶ್ವೇಶತೀರ್ಥ ಸ್ವಾಮಿಯವರು ಹಿಂದೂ ಸಮಾಜವನ್ನು ಜಾತಿಯ ಚೌಕಟ್ಟಿನೊಳಗೇ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಅವರ ದೃಷ್ಟಿಯಲ್ಲಿ ಜಾತಿ ವಿಭಜಕ ಶಕ್ತಿಯಲ್ಲ. ಬದಲಿಗೆ ಹಿಂದೂ ಸಮಾಜದಲ್ಲಿ ಒಡಕುಗಳಿದ್ದರೆ ಅದಕ್ಕೆ ಪ್ರಗತಿಪರರೇ ಕಾರಣ. ಪ್ರಗತಿಪರರಿಗೆ ಹಿಂದೂ ಸಮಾಜ ಜಗಳವಾಡುತ್ತಿರಬೇಕೆಂಬ ಅಪೇಕ್ಷೆಯಿದೆ ಎಂದೂ ಅವರು ವಾದಿಸುತ್ತಾರೆ. ವಿಶ್ವೇಶತೀರ್ಥರು ಸರಿಯಾಗಿ ಗ್ರಹಿಸದಿರುವ ಅಂಶವಿದು. ಜಾತಿಯ ವಿಚಾರದಲ್ಲಿ ಪ್ರಗತಿಪರ ವಿಚಾರಧಾರೆಯ ಬಹುಮುಖ್ಯ ನಿಲುವೆಂದರೆ ಜಾತಿ ವಿನಾಶ. ಈ ವಾದದ ಇಬ್ಬರು ಮುಖ್ಯ ವಕ್ತಾರರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಾ. ಲೋಹಿಯಾ ಇಬ್ಬರೂ ಯಾವುದೇ ಸಂಕೋಚ, ದಾಕ್ಷಿಣ್ಯಗಳಿಲ್ಲದೆ ಹಿಂದೂ ಸಮಾಜದ ನಾಶವನ್ನೇ ತಮ್ಮ ಗುರಿಯೆಂದು ಸ್ಪಷ್ಟವಾಗಿ ಹೇಳುತ್ತಾರೆ.

ನಮ್ಮ ಚರ್ಚೆಯನ್ನು ವಿಸ್ತರಿಸಲು ಅನುಕೂಲವಾಗುವಂತೆ, ಜಾತಿಯೆಂದಾಗ ನಾವು ಯಾವುದನ್ನು ಸೂಚಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟ
ಪಡಿಸಿಕೊಳ್ಳೋಣ. ನಮ್ಮೆಲ್ಲರ ಅರಿವಿಗೆ ಸಿಗುವ ಜಾತಿಯ ಪ್ರತಿದಿನದ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಜಾತಿ ವ್ಯವಸ್ಥೆಯ ಬಗ್ಗೆ ಕೆಲವು ಸಾಮಾನ್ಯ ಲಕ್ಷಣಗಳನ್ನು ಗುರುತಿಸಬಯಸುತ್ತೇನೆ. ಉದಾಹರಣೆಗೆ ಭಾರತದಾದ್ಯಂತ ಇಂದಿಗೂ ಪ್ರತಿ ಪ್ರಾಂತ್ಯದಲ್ಲಿಯೂ ಸಾವಿರಾರು ಜಾತಿಗಳು ಮತ್ತು ಉಪಜಾತಿಗಳಿವೆ. ಇವುಗಳು ಶ್ರೇಣಿಯೊಂದರಲ್ಲಿ ಜೋಡಿಸಲ್ಪಟ್ಟಿವೆ. ಶ್ರೇಣಿ ವ್ಯವಸ್ಥೆಯನ್ನು ನಿರ್ಧರಿಸುವ ತತ್ವವೇನು ಎಂಬುದರ ಬಗ್ಗೆ ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಹಲವಾರು ಜಾತಿಗಳ ಇರುವಿಕೆಯನ್ನು, ಅವುಗಳು ಶ್ರೇಣೀಕೃತವಾಗಿ ಜೋಡಣೆಯಾಗಿರುವುದನ್ನು ಮತ್ತು ಇಂತಹ ವ್ಯವಸ್ಥೆಯೊಂದು ಇಂದಿಗೂ ಭಾರತದಲ್ಲಿ ಮುಂದುವರಿಯುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕಳೆದ ಅರ್ಧ ಶತಮಾನದಲ್ಲಿ ಆಗಿರಬಹುದಾದ ಬದಲಾವಣೆ ಮತ್ತು ಚಲನಶೀಲತೆಗಳು ಶ್ರೇಣೀಕೃತ ವ್ಯವಸ್ಥೆಯನ್ನು ಮೂಲಭೂತವಾಗಿ ಬದಲಿಸಿಲ್ಲ.

ಆಧುನೀಕರಣವಾದಂತೆ ಜಾತಿ ಪದ್ಧತಿ ಮರೆಯಾಗುತ್ತದೆ ಎಂಬ ನಿರೀಕ್ಷೆ ಭಾರತವನ್ನು ಅಭ್ಯಸಿಸುತ್ತಿದ್ದ ಸಮಾಜಶಾಸ್ತ್ರಜ್ಞರಲ್ಲಿತ್ತು. ಇದಕ್ಕೊಂದು ಕಾರಣವೆಂದರೆ ಆಧುನಿಕ ಉದ್ಯೋಗಗಳು ಸೃಷ್ಟಿಯಾದಂತೆ, ಸಾಂಪ್ರದಾಯಿಕವಾಗಿ ಜಾತಿಗಳು ಕಸುಬುಗಳೊಡನೆ ಹೊಂದಿದ್ದ ಸಂಬಂಧ ಮುರಿ
ಯುತ್ತದೆ ಎಂಬ ನಿರೀಕ್ಷೆ. ಐತಿಹಾಸಿಕವಾಗಿ ಜಾತಿಗಳು ಜ್ಞಾನ ಮತ್ತು ತಂತ್ರಜ್ಞಾನಗಳ ಒಡೆತನ ಪಡೆದಿದ್ದವು. ಅಂದರೆ ತಮ್ಮ ಕಸುಬಿಗೆ ಸಂಬಂ
ಧಿಸಿದ ಜ್ಞಾನ ಮತ್ತು ಕೌಶಲಗಳನ್ನು ನಿಯಂತ್ರಿಸುತ್ತ, ತಮ್ಮ ಜಾತಿಯೊಳಗೆ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಆಧುನಿಕ ಶಿಕ್ಷಣ ಅಸ್ತಿತ್ವಕ್ಕೆ ಬಂದ ಮೇಲೆ ಜಾತಿಗಳು ಕಸುಬುಗಳ ಜೊತೆಗೆ ಹೊಂದಿದ್ದ ಸಂಬಂಧ ಬದಲಾಗಿದೆ. ಇದರಿಂದ ಎಲ್ಲರೂ ಎಲ್ಲ ಕಸುಬುಗಳನ್ನು ಮಾಡಲು ಅವಕಾಶವಿರುವ ವ್ಯವಸ್ಥೆ ರೂಪುಗೊಂಡಿದ್ದರೂ ಜಾತಿ ಔಪಚಾರಿಕವಾಗಿ ಮುಂದುವರಿದಿದೆ.

ಅಲ್ಲದೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿಯೂ ನಮ್ಮ ಸಮಾಜದೊಳಗಿನ ಪರಸ್ಪರ ಬೆರೆಯುವಿಕೆಯನ್ನು (ಸೋಶಿಯಲ್ ಇಂಟರಾಕ್ಷನ್) ಗಣನೀಯವಾಗಿ ಜಾತಿ ವ್ಯವಸ್ಥೆಯು ಪ್ರಭಾವಿಸುತ್ತಿದೆ. ಇದು ಮದುವೆ, ಸ್ನೇಹ, ಉದ್ಯೋಗ ನೀಡುವುದು ಮತ್ತು ರಾಜಕೀಯ ಚಟುವಟಿಕೆಗಳು (ಅದರಲ್ಲೂ ಮತದಾನದಲ್ಲಿ)- ಹೀಗೆ ಬಹುತೇಕ ವಲಯಗಳಲ್ಲಿ ಇಂದಿಗೂ ಸತ್ಯ. ಜಾಗತೀಕರಣವಾಗಲಿ, ಕಳೆದ ಎರಡು ದಶಕಗಳ ಸಾಮಾಜಿಕ ಚಲನಶೀಲತೆಯಾಗಲಿ (ಮೊಬಿಲಿಟಿ) ಜಾತಿಯ ಪ್ರಭಾವವನ್ನು ಕಡಿಮೆ ಮಾಡಲಾಗಿಲ್ಲ. ಇದರ ಪರಿಣಾಮವಾಗಿ ನಮ್ಮ ಸಮುದಾಯ ಪ್ರಜ್ಞೆಯನ್ನು ರೂಪಿಸುವಲ್ಲಿ ಸಹ ಜಾತಿಗಳು ತಮ್ಮ ಪ್ರಭಾವ ಬೀರುತ್ತವೆ. ಅಂದರೆ ನಮ್ಮ ಸಮಾಜ ಯಾವ ಬಗೆಯದಾಗಿರುತ್ತದೆ ಎಂಬುದನ್ನು ಅದರೊಳಗೆ ರಚಿತವಾಗಿರುವ ಶ್ರೇಣೀಕೃತ ವ್ಯವಸ್ಥೆ ಇಂದಿಗೂ ನಿರ್ಧರಿಸುತ್ತದೆ. ಔಪಚಾರಿಕವಾಗಿ ಸಂವಿಧಾನದ ಮೂಲಕ ಲಭ್ಯವಾಗಿರುವ ಸಮಾನತೆಯನ್ನು ಜಾತಿ ವ್ಯವಸ್ಥೆ ಅಲ್ಲಗಳೆಯುತ್ತದೆ.

ಜಾತಿ ಹೊಸ ರೂಪಗಳನ್ನು ಪಡೆದುಕೊಂಡು ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಆಧುನಿಕತೆಯ ಕೆಲವು ಸಂದರ್ಭಗಳೂ ಸಹಕರಿಸಿವೆ. ಉದಾಹರಣೆಗೆ ಸಂಸದೀಯ ಪ್ರಜಾಪ್ರಭುತ್ವವು ಜಾತಿಗಳು ಹಿತಾಸಕ್ತಿ ಗುಂಪುಗಳಾಗಿ ಹೊರಹೊಮ್ಮಲು ಅನುವು ಮಾಡಿಕೊಟ್ಟಿದೆ. ಅಂದರೆ ತಮ್ಮ ಜಾತಿಯ ನಾಯಕರು ಮಾತ್ರ ತಮ್ಮ ಹಿತಾಸಕ್ತಿಗಳನ್ನು ಕಾಯಬಲ್ಲರು ಎಂಬ ನಂಬಿಕೆ ಹಿತಾಸಕ್ತಿ ಗುಂಪುಗಳ (ಇಂಟರೆಸ್ಟ್ ಗ್ರೂಪ್) ರಚನೆಗೆ ಕಾರಣವಾಗುತ್ತದೆ. ಆದರೆ ಇಂತಹ ನಂಬಿಕೆಗಳು ಮೂಡುವುದು ಸಹ ಜಾತಿಯೊಳಗೆಯೇ ನಮ್ಮ ಹೆಚ್ಚಿನ ಸಾಮಾಜಿಕ ಬಾಂಧವ್ಯಗಳನ್ನು ಇಟ್ಟು
ಕೊಳ್ಳುವ ಪ್ರಾಚೀನ ಅಭ್ಯಾಸದಿಂದ.

ಜಾತಿಯ ಈ ಯಾವ ಹಳೆಯ-ಹೊಸ ಆಯಾಮಗಳೂ ಪೇಜಾವರರಿಗೆ ತಪ್ಪಾಗಿ ಕಾಣಿಸುತ್ತಿಲ್ಲ. ಹಾಗಾಗಿಯೇ ಜಾತಿಗಳು ಹಾಗೂ ಅವುಗಳನ್ನು ಪೋಷಿಸುವ ಮಠಗಳು ಇರಲಿ ಎಂದು ಅವರು ವಾದಿಸುತ್ತಾರೆ. ಇಂತಹ ವಾದದಿಂದ ಮೂರು ಅಪಾಯಗಳಿವೆ.

ಮೊದಲಿಗೆ, ಪೇಜಾವರರಿಗೆ ನಮ್ಮ ಬದುಕು, ವ್ಯಕ್ತಿತ್ವ ಮತ್ತು ಗುರುತುಗಳನ್ನು (ಐಡೆಂಟಿಟಿ) ಕಟ್ಟಿಕೊಳ್ಳಲು ಜಾತಿಯೇ ಬಹುದೊಡ್ಡ ಸಂಪನ್ಮೂಲವಾಗಿ ಕಾಣುತ್ತಿದೆ. ಏಕೆಂದರೆ ನಮ್ಮ ಮೂಲ ನಂಬಿಕೆಗಳನ್ನು, ದಿನನಿತ್ಯದ ಆಚರಣೆಗಳನ್ನು, ಆಹಾರ ಕ್ರಮದಂತಹ ಬದುಕಿನ ಪ್ರಾಥಮಿಕ ಅಭ್ಯಾಸಗಳನ್ನು ಮತ್ತು ನಮ್ಮ ನೈತಿಕತೆಯನ್ನು ಜಾತಿ ಸಂಸ್ಕೃತಿಯೊಳಗಿನಿಂದಲೇ ಪಡೆಯಬೇಕೆಂಬ ಒತ್ತಡ ಇಲ್ಲಿ ಕಾಣುತ್ತದೆ. ಅಂದರೆ ನಾವು ಮನುಷ್ಯರಾಗುವುದೇ ಜಾತಿಗಳ ಮೂಲಕ ಎನ್ನುವ ಆಗ್ರಹ ಇಲ್ಲಿದೆ. ಐತಿಹಾಸಿಕವಾಗಿ ನಮ್ಮ ಸಂಸ್ಕೃತಿಗಳು ಬಹುಮಟ್ಟಿಗೆ ಜಾತಿ ಸಂಸ್ಕೃತಿಗಳೇ ಆಗಿದ್ದವು. ಆದರೆ ಇಂದು ಕೂಡ ನಮ್ಮ ಸಂಸ್ಕೃತಿಯೊಳಗಿನಿಂದಲೇ ನಮಗೆ ಬೇಕಾಗಿರುವುದೆಲ್ಲ ದೊರಕುತ್ತದೆ ಎಂಬ ಹಟ ಈ ಮೂಲಕ ವ್ಯಕ್ತವಾಗುತ್ತಿದೆ.

ಎರಡನೆಯದಾಗಿ, ಜಾತಿಗಳು ಹೆಚ್ಚು ಪ್ರಭಾವಶಾಲಿಗಳಾದಂತೆ ಇತರ ಬಗೆಯ ಸಮುದಾಯಗಳನ್ನು ಕಟ್ಟಿಕೊಳ್ಳುವ ಮತ್ತು ಅವುಗ
ಳನ್ನು ಉಳಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಕಡಿಮೆಯಾಗುತ್ತದೆ. ನಾವು ವಾಸ ಮಾಡುವ ನಗರ, ಹಳ್ಳಿಗಳಲ್ಲಿ, ಕೆಲಸ ಮಾಡುವ ಜಾಗಗಳಲ್ಲಿ ನಮ್ಮ ಬಾಂಧವ್ಯಗಳನ್ನು ಜಾತಿಯ ನಂಟು ತೀರ್ಮಾನಿಸುವುದಾದರೆ, ಅಷ್ಟರ ಮಟ್ಟಿಗೆ ನಾವು ಹೊಸ ಸಮುದಾಯಗಳನ್ನು ಕಟ್ಟಿಕೊಳ್ಳುವಲ್ಲಿ ಸೋಲು
ತ್ತೇವೆ. ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಕಂಪೆನಿಗಳಲ್ಲಿ ಮತ್ತು ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಜಾತಿಯ ಪ್ರಭಾವ ಇಂದು ಹಿಂದೆಂದಿಗಿಂತಲೂ ಅಧಿಕವಾಗಿದೆ ಎನ್ನುವುದು ಯಾರಿಗೂ ಆಶ್ಚರ್ಯ ಮೂಡಿಸುವುದಿಲ್ಲ. ನಮ್ಮ ಹಕ್ಕುಗಳನ್ನು ಗಳಿಸಲು, ಬದುಕು ಕಟ್ಟಿಕೊಳ್ಳಲು ಸಂವಿಧಾನ ನೀಡುವ ಹಕ್ಕುಗಳಿಗಿಂತ, ಜಾತಿ ನಾಯಕನ ಇಲ್ಲವೇ ಮಠಾಧಿಪತಿಯ ಬೆಂಬಲ ಅಗತ್ಯ ಎಂಬ ಭಾವನೆ ಇಂದೂ ದಟ್ಟವಾಗಿದೆ.

ಮೂರನೆಯದಾಗಿ, ಜಾತಿಗೊಂದು ಮಠವಿರಲಿ ಎನ್ನುತ್ತ, ಎಲ್ಲ ಜಾತಿಯವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಗತ್ಯಗಳನ್ನು ಆಯಾ ಜಾತಿಗೇ, ಅದರ ಧರ್ಮಗುರುಗಳಿಗೆ ಸೀಮಿತಗೊಳಿಸಿದಂತೆ ಆಗುತ್ತದೆ. ಮನುಷ್ಯನನ್ನು ಕಾಡುವ ಮೂಲಭೂತ ಪ್ರಶ್ನೆಗಳನ್ನು ಜಾತಿಯ ಚೌಕಟ್ಟಿನೊಳಗೆಯೇ ನ್ವೇಷಿಸುತ್ತೇವೆ ಎನ್ನುವುದು ನಮ್ಮ ಚಿಂತನೆಯ ಸಾಧ್ಯತೆಗಳಿಗೆ ನಾವು ಹಾಕಿಕೊಳ್ಳುವ ಕಡಿವಾಣವೇನೊ ಎನಿಸುತ್ತದೆ. ಇಲ್ಲಿ ವಿಜ್ಞಾನ ಬೇಡ, ಹೊರಗಿನ ಆಧ್ಯಾತ್ಮಿಕ ಚಿಂತನೆ ಬೇಡ, ಜಾತಿಮಠದ ಗುರುಗಳೇ ಸಾಕು ಎಂಬ ಮನೋಭಾವವಿದೆ.

ನಾನು ಇಲ್ಲಿ ಗುರುತಿಸುತ್ತಿರುವ ಅಪಾಯಗಳನ್ನು ಆಚರಣೆಯಲ್ಲಿ ಕೆಲವರು ಮೀರಬಹುದು. ಆದರೆ ಬಹುಸಂಖ್ಯಾತರ ಪಾಲಿಗೆ ಜಾತಿಯ ಚೌಕಟ್ಟಿನೊಳಗೆಯೇ ಬದುಕಿನ ಹೆಚ್ಚಿನ ಸಾಧ್ಯತೆಗಳನ್ನು ಅನ್ವೇಷಿಸುವ ವ್ಯವಸ್ಥೆಯೊಂದನ್ನು ನಾವು ರೂಪಿಸಿಕೊಂಡಿದ್ದೇವೆ. ಜಾತಿ ವಿನಾಶದ ಮಾತು ಚಾಲನೆಗೆ ಬಂದು ಎಂಟು ದಶಕಗಳೇ ಕಳೆದಿವೆ. ಆದರೂ ಹಿಂದೆಂದಿಗಿಂತಲೂ ಇಂದು ಆ ಗುರಿಯಿಂದ ದೂರವಾಗಿದ್ದೇವೆ ಎಂಬ ಅನುಮಾನ ಮೂಡುತ್ತಿದೆ. ಅದಕ್ಕಾಗಿಯಾದರೂ ಪೇಜಾವರರ ಮಾತುಗಳ ವಿರುದ್ಧ ದನಿಯೆತ್ತಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT