ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಸಂಪನ್ಮೂಲ ಹಂಚುವ ಸಾಧನವಲ್ಲ

Last Updated 16 ಜೂನ್ 2018, 9:09 IST
ಅಕ್ಷರ ಗಾತ್ರ

ಮೀಸಲಾತಿಯ ಕುರಿತಾದ ಹೊಸದೊಂದು ತಾತ್ವಿಕ ಮತ್ತು ಐತಿಹಾಸಿಕ ಚರ್ಚೆಯನ್ನು ಆರಂಭಿಸಬೇಕಿರುವ ಸಮಯ ಈಗ ಬಂದಿದೆ. ಮುಂದುವರಿದ ಸಮುದಾಯಗಳು ಮೀಸಲಾತಿಗಾಗಿ ರಾಷ್ಟ್ರದಾದ್ಯಂತ ಹಕ್ಕೊತ್ತಾಯ ಮಾಡುತ್ತಿವೆ. ಈ ಸಂದರ್ಭದಲ್ಲಿ ಮೀಸಲಾತಿಯ ಉದ್ದೇಶ ಮತ್ತು ಸ್ವರೂಪಗಳ ಬಗ್ಗೆ ಅಸ್ಪಷ್ಟತೆ ಮೂಡಿದೆ ಮಾತ್ರವಲ್ಲ, ಮೀಸಲಾತಿಯ ಬೇಡಿಕೆಯನ್ನು ಮುಂದಿಡುವ ನೆಪದಲ್ಲಿ ‘ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಪಾಲು ನಮಗೆ ಕೊಡಿ’ ಎನ್ನುವ ಹೊಸ ವಕ್ರ ವಾದವನ್ನು ಹಲವು ಮುಂದುವರಿದ ಜಾತಿಗಳು ಮುಂದಿಟ್ಟಿವೆ. ಇದು ಕೇವಲ ಮೀಸಲಾತಿ ವಿಚಾರಕ್ಕೆ, ಅಂದರೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿಗೆ  ಸೀಮಿತವಾಗುತ್ತಿಲ್ಲ. ಬದಲಿಗೆ ರಾಜ್ಯ ಬಜೆಟ್‌ನಲ್ಲಿಯೇ ಪಾಲು ಕೇಳುವ ದಿಕ್ಕಿನಲ್ಲಿಯೂ ಮುಂದುವರಿಯುತ್ತಿದೆ.

ಎಲ್ಲ ರಾಜಕೀಯ ಪಕ್ಷಗಳೂ ಮುಂದುವರಿದ ಜಾತಿಗಳ ಬೇಡಿಕೆಗಳನ್ನು ಸಹಾನುಭೂತಿಯಿಂದಲೇ ಪರಿಗಣಿಸುತ್ತಿವೆ. ಉದಾಹರಣೆಗೆ, ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಸರ್ಕಾರ ಮರಾಠರಿಗೆ ಶೇ 16 ಮೀಸಲಾತಿ ನೀಡುವ ನಿರ್ಧಾರ ತೆಗೆದುಕೊಂಡಿತ್ತು.

ಚುನಾವಣೆಯಲ್ಲಿ ಇದರಿಂದ ಅನುಕೂಲವಾಗಬಹುದೆಂಬ ಕಾಂಗ್ರೆಸ್‌ನ ನಿರೀಕ್ಷೆ ಸುಳ್ಳಾಯಿತು. ಅಲ್ಲದೆ ಮುಂಬೈ ಉಚ್ಚ ನ್ಯಾಯಾಲಯ ಈ ಕ್ರಮಕ್ಕೆ ತಡೆಯಾಜ್ಞೆಯನ್ನೂ ನೀಡಿತು. ಆದರೆ ಹೊಸ ಬಿಜೆಪಿ ಸರ್ಕಾರವೇನೂ ಮರಾಠರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿಲ್ಲ. ಹಾಗೆಯೇ 2014ರ ಲೋಕಸಭಾ ಚುನಾವಣೆಗಳಿಗೆ ಮೊದಲು ಯುಪಿಎ ಸರ್ಕಾರ ಉತ್ತರ ಭಾರತದ ಒಂಬತ್ತು ರಾಜ್ಯಗಳಲ್ಲಿ ‘ಜಾಟ’ರಿಗೆ ಮೀಸಲಾತಿ ಸಿಗುವಂತೆ ಮಾಡಲು ಆ ಸಮುದಾಯವನ್ನು ಹಿಂದುಳಿದ ಜಾತಿಗಳ ಕೇಂದ್ರ ಪಟ್ಟಿಗೆ ಸೇರಿಸಿತು.

ಸರ್ವೋಚ್ಚ ನ್ಯಾಯಾಲಯ ಇದನ್ನು ತಡೆ ಹಿಡಿದಿದ್ದರೂ, ನಂತರದಲ್ಲಿ ಮೋದಿ ಸರ್ಕಾರವೂ ನ್ಯಾಯಾಲಯದಲ್ಲಿ ‘ಜಾಟ’ರ ಪರವಾಗಿಯೇ ವಾದಿಸಿದೆ. 2015ರಲ್ಲಿ ರಾಜಸ್ತಾನದಲ್ಲಿ ವಸುಂಧರಾ ರಾಜೇಯವರ ಬಿಜೆಪಿ ಸರ್ಕಾರವು ಗುಜ್ಜರ ಸಮುದಾಯಕ್ಕೆ ವಿಶೇಷ ಹಿಂದುಳಿದ ಜಾತಿಯ ಸ್ಥಾನಮಾನ ನೀಡಿ, ಶೇ 5 ಮೀಸಲಾತಿ ನೀಡಿತು.

ಇದುವರೆಗೆ ಹಿಂದುಳಿದ ವರ್ಗಗಳಲ್ಲಿದ್ದ ಗುಜ್ಜರರು ತಮ್ಮನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಜೊತೆಗೆ ಇತರ ಮುಂದುವರಿದ ವರ್ಗಗಳನ್ನು ಸಮಾಧಾನಿಸಲು ಅವುಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 14 ಮೀಸಲಾತಿ ನೀಡುವ ಹೊಸ ಕ್ರಮವನ್ನೂ ರಾಜಸ್ತಾನ ಸರ್ಕಾರ ಘೋಷಿಸಿದೆ. ಯಾವ ಪ್ರಮುಖ ರಾಜಕೀಯ ಪಕ್ಷವೂ ಯಾವುದೇ ಪ್ರಬಲ ಸಮುದಾಯವಾಗಲೀ ಮೀಸಲಾತಿಗೆ ಹಕ್ಕೊತ್ತಾಯ ಮಾಡುವಾಗ ಇಲ್ಲವೇ ತನಗೆ ಅನುಕೂಲಕರವಾಗಬಹುದಾದ ಮತ್ತೊಂದು ಮೀಸಲು ಗುಂಪಿನಲ್ಲಿ ಸೇರಿಸುವಂತೆ ಹೋರಾಟ ಪ್ರಾರಂಭಿಸಿದರೆ, ಅದನ್ನು ಸಾರ್ವಜನಿಕವಾಗಿ ವಿರೋಧಿಸುವ ಧೈರ್ಯ ತೋರಿಸುತ್ತಿಲ್ಲ.

ಕಳೆದೆರಡು ತಿಂಗಳುಗಳಿಂದ ಗುಜರಾತಿನಲ್ಲಿ ನಡೆಯುತ್ತಿರುವ ಪತಿದಾರ್ (ಪಟೇಲ್) ಆಂದೋಲನವನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು. ಯಾವುದೇ ಮಾನದಂಡವಿಟ್ಟು ವಿಶ್ಲೇಷಿಸಿದರೂ ಪಟೇಲರು ಮುಂದುವರಿದ ಜನಾಂಗ. ಸಾಂಪ್ರದಾಯಿಕವಾಗಿ ಭೂಮಾಲೀಕರಾದ ಪಟೇಲರು ಸ್ವಾತಂತ್ರ್ಯಾನಂತರದಲ್ಲಿ ಉದ್ದಿಮೆದಾರರಾಗಿ ಗುಜರಾತಿನಲ್ಲಿ ಮತ್ತು ಹೊರಗೆ, ಮುಖ್ಯವಾಗಿ ಅಮೆರಿಕ ಹಾಗೂ ಇಂಗ್ಲೆಂಡ್‌ಗಳಲ್ಲಿ ಯಶಸ್ಸನ್ನು ಕಂಡವರು.

ಉದಾಹರಣೆಗೆ ಇಂದು ಅಮೆರಿಕದಲ್ಲಿರುವ 17 ಲಕ್ಷ ಪಟೇಲರು ಸುಮಾರು 15,500 ಹೋಟೆಲಗಳ ಮಾಲೀಕತ್ವ ಪಡೆದಿದ್ದಾರೆ. ಗುಜರಾತಿನಲ್ಲಿಯೇ 1947ರ ನಂತರ ಕೃಷಿ, ವಜ್ರದ ಉದ್ದಿಮೆ ಮತ್ತು ಸಣ್ಣ/ಮಧ್ಯಮ ಕೈಗಾರಿಕೆಗಳನ್ನು ಆರಂಭಿಸಿ, ಗಣನೀಯ ಯಶಸ್ಸು ಗಳಿಸಿದರು. ಇಂದು ಪಟೇಲರು ಟೆಕ್ಸ್‌ಟೈಲ್ಸ್, ವಜ್ರ, ರಿಯಲ್ ಎಸ್ಟೇಟ್ ಮತ್ತು ಫಾರ್ಮ ಕ್ಷೇತ್ರಗಳನ್ನು ನಿಯಂತ್ರಿಸುವ ಹಾಗೆ ಬೆಳೆದಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದಾರೆ.

ರಾಜಕೀಯವಾಗಿಯೂ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸರ್ದಾರ್ ಪಟೇಲರ ನಾಯಕತ್ವದಲ್ಲಿ ಕಾಂಗ್ರೆಸ್‌ಗೆ ಲಗ್ಗೆ ಹಾಕಿದ್ದರು ಮತ್ತು 1970ರ ದಶಕದವರೆಗೂ ರಾಜ್ಯ ರಾಜಕಾರಣವನ್ನು ನಿಯಂತ್ರಿಸಿದರು. 1990ರ ನಂತರ ಬಿಜೆಪಿಗೆ ತನ್ನ ಬೆಂಬಲ ವರ್ಗಾಯಿಸಿದ ಪಟೇಲ ಜನಾಂಗ ಇಂದೂ ರಾಜಕೀಯವಾಗಿ ನಿರ್ಣಾಯಕ ವರ್ಗವೇ. ಗುಜರಾತಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅಲ್ಲದೆ 7 ಜನ ಇತರ ಮಂತ್ರಿಗಳು ಈ ಜನಾಂಗಕ್ಕೆ ಸೇರಿದವರು.

ಕುತೂಹಲಕರ ಅಂಶವೆಂದರೆ, ಪಟೇಲ ಸಮುದಾಯ ಕಾಂಗ್ರೆಸ್ ತೊರೆಯಲು ಕಾರಣ,  ಹಿಂದುಳಿದ ವರ್ಗಗಳು ಮಾಧವಸಿನ್ಹಾ ಸೋಲಂಕಿಯವರ ನಾಯಕತ್ವದಲ್ಲಿ ಕಾಂಗ್ರೆಸ್‌ನಲ್ಲಿ ಸಂಘಟಿತರಾದುದು. 1980ರಲ್ಲಿ ಅಧಿಕಾರಕ್ಕೆ ಬಂದ ಸೋಲಂಕಿ, ಜಾತಿ ಆಧಾರಿತ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಿದಾಗ ಮತ್ತು 1985ರ ಚುನಾವಣೆಯ ನಂತರ ಶೇ 28 ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಲು ನಿರ್ಧರಿಸಿದಾಗ, ಪಟೇಲರುಗಳೇ ನಾಯಕತ್ವ ವಹಿಸಿದ್ದ ಮತ್ತು ಮಧ್ಯಮ ವರ್ಗಗಳು ಭಾಗವಹಿಸಿದ್ದ ವಿದ್ಯಾರ್ಥಿ ಚಳವಳಿ 1981  ಮತ್ತು 1985ರಲ್ಲಿ ಗುಜರಾತಿನಾದ್ಯಂತ ತೀವ್ರವಾಗಿ ನಡೆಯಿತು. ಹಿಂಸಾತ್ಮಕ ಸ್ವರೂಪ ತಳೆದ ಈ ಚಳವಳಿ ನೂರಕ್ಕಿಂತ ಹೆಚ್ಚು ಜನರ ಸಾವಿಗೆ ಮತ್ತು ಸಾವಿರಾರು ಮಂದಿ ತಮ್ಮ ಮನೆ-ಮಠ ಕಳೆದುಕೊಳ್ಳಲು ಕಾರಣವಾಯಿತು. ಬಹುಶಃ 1990ರ ಮಂಡಲ್ ವಿರೋಧಿ ಆಂದೋಲನಕ್ಕೂ ಮೊದಲು ಗುಜರಾತಿನ ವಿದ್ಯಾರ್ಥಿ ಆಂದೋಲನಗಳೇ ಅತ್ಯಂತ ಪ್ರಮುಖ ಮೀಸಲಾತಿ ವಿರೋಧಿ ಆಂದೋಲನಗಳು. ಇದರ ಪರಿಣಾಮವಾಗಿಯೇ ಮಾಧವಸಿನ್ಹಾ ಸೋಲಂಕಿ ಅಧಿಕಾರ ಕಳೆದುಕೊಂಡರು.

ಹೀಗೆ ನೋಡಿದಾಗ, ಪಟೇಲರು ಇಂದು ಮೀಸಲಾತಿ ಕೇಳುತ್ತಿದ್ದಾರೆ ಎಂಬುದು ಆಶ್ಚರ್ಯಕರವಲ್ಲ. ರಾಜಕೀಯ ಪ್ರಾಬಲ್ಯ ಮತ್ತು ಉದ್ದಿಮೆಗಳಲ್ಲಿ ಪಡೆದಿರುವ ಯಶಸ್ಸು ಪಟೇಲ ಸಮುದಾಯದೊಳಗಿನ ಅಸಮಾನತೆಯನ್ನು ಕಡಿಮೆಯೇನೂ ಮಾಡಿಲ್ಲ. ಹಾಗಾಗಿ ಅರ್ಥಿಕವಾಗಿ ಹಿಂದುಳಿದಿರುವ ಪತಿದಾರ ಉಪಜಾತಿಗಳು ತಮ್ಮ ಆಕಾಂಕ್ಷೆಗಳನ್ನು ಬಿಟ್ಟುಕೊಡರು ಮತ್ತು ಅವಕಾಶಗಳಿಗೆ ಹೋರಾಡಲು ಸಿದ್ಧರಾಗಿದ್ದಾರೆ.

ಆದರೂ ಹಾರ್ದಿಕ್ ಪಟೇಲ್ ಎಂಬ 22 ವರ್ಷದ ಯುವಕನ ನಾಯಕತ್ವದಲ್ಲಿ ನಡೆಯುತ್ತಿರುವ ಪತಿದಾರ್ ಆಂದೋಲನ ಪಡೆದಿರುವ ವ್ಯಾಪಕ ಬೆಂಬಲ ನಮ್ಮನ್ನು ಚಕಿತರನ್ನಾಗಿಸುತ್ತದೆ. ಸೂರತ್ ಮತ್ತು ಅಹಮದಾಬಾದ್‌ಗಳಲ್ಲಿ ನಾಲ್ಕೈದು ಲಕ್ಷ ಜನರು ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕೆಲವೇ ವಾರಗಳಲ್ಲಿ ಹಾರ್ದಿಕ್ ಒಬ್ಬ ರಾಷ್ಟ್ರೀಯ ‘ಐಕಾನ್’ ಆಗಿ ಹೊರಹೊಮ್ಮಿದ್ದಾರೆ ಮತ್ತು ಹಿಂದುಳಿದ ವರ್ಗದ ಸ್ಥಾನಮಾನ ಪಡೆಯಲು ಹೋರಾಡುತ್ತಿರುವ ಇತರ ಗುಂಪುಗಳ ಸಂಘಟನೆಗೆ ಮುಂದಾಗಿದ್ದಾರೆ.

ಈ ಹೋರಾಟವೀಗ ‘ನಮಗೆ (ಪಟೇಲರಿಗೆ) ಮೀಸಲಾತಿ ಕೊಡಿ ಇಲ್ಲವೇ ಮೀಸಲಾತಿಯನ್ನೇ ತೆಗೆಯಿರಿ’ ಸಂಘರ್ಷವಾಗಿ ಪರಿವರ್ತಿತವಾಗಿದೆ. ಸಾಂಪ್ರದಾಯಿಕವಾಗಿ ಸಾಮಾನ್ಯ ವರ್ಗದ ಅವಕಾಶಗಳನ್ನು ಹೆಚ್ಚಾಗಿ ಪಡೆಯುತ್ತಿದ್ದ ಪಟೇಲರಿಗೆ ಇಂದು ಆ ವರ್ಗದೊಳಗೂ ಇತರ ಸಮುದಾಯದವರಿಂದ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಸರ್ಕಾರಿ ಹುದ್ದೆಗೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಪಟೇಲರು ತಮ್ಮ ಸಮುದಾಯಕ್ಕೆ ಮಾತ್ರ ಇರುವ ಮೀಸಲಾತಿಯ ಮೂಲಕವೇ ತಮ್ಮ ಪಾಲು ಪಡೆಯಬೇಕೆಂದು ಯೋಚಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ಮೀಸಲಾತಿಯ ಉದ್ದೇಶವೇನು ಹಾಗೂ ಇದರ ಲಾಭ ಯಾರಿಗೆ ದೊರಕಬೇಕು ಎಂದು ಕೇಳಿಕೊಳ್ಳುವ ಸಂದರ್ಭದಲ್ಲಿಯೇ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಮುಸ್ಲಿಮರಿಗೂ ಮೀಸಲಾತಿಯ ಅಗತ್ಯವಿದೆ ಎಂದು ಗಂಭೀರವಾದ ಚರ್ಚೆಯೊಂದನ್ನು ಪ್ರಾರಂಭಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಬೇಕಿರುವ ಮುಸ್ಲಿಮರನ್ನು ಸಾಧ್ಯವಿದ್ದಲ್ಲಿ ಸೇರಿಸಬೇಕು, ಇಲ್ಲದಿದ್ದರೆ ‘ಎಲ್ಲರೊಡನೆ ಎಲ್ಲರ ವಿಕಾಸ’ ಎಂಬ ಮೋದಿ ಸರ್ಕಾರದ ಗುರಿ ಸಫಲವಾಗದು ಎಂದು ಅವರು ಮುಸ್ಲಿಮ್ ಸಂಘಟನೆಗಳ ಸಭೆಯೊಂದರಲ್ಲಿ ವಾದಿಸಿದ್ದಾರೆ.

ಇಂದು ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಮತ್ತು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಹೊರಗಿದ್ದಾರೆ ಎಂಬುದು ಸತ್ಯವೇ. ಆದರೆ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ರಾಜಕೀಯ ನಿಯಂತ್ರಣ ಸಾಧಿಸಿದ್ದ ಸಮುದಾಯಕ್ಕೆ ಯಾವ ಬಗೆಯ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂಬುದು ಸಂಕೀರ್ಣ ಪ್ರಶ್ನೆ. ಇದಕ್ಕೆ ಉತ್ತರಗಳನ್ನು ಮೀಸಲಾತಿಯ ನಿಬಂಧನೆಗಳೊಳಗೆ ಕಂಡುಕೊಳ್ಳಬೇಕೆ ಅಥವಾ ಬೇರೆ ಬಗೆಯ ನೀತಿಗಳನ್ನು ರೂಪಿಸಬೇಕೆ ಎಂಬ ಪ್ರಶ್ನೆಗಳಿಗೆ ಸರಳ ಉತ್ತರಗಳಿಲ್ಲ.

ಹಿಂದುಳಿದ ವರ್ಗಗಳ ಸ್ಥಾನಮಾನ ಪಡೆಯಲು ಮುಂದುವರಿದವರೂ ಸ್ಪರ್ಧಿಸುವುದು ಹೊಸ ವಿದ್ಯಮಾನವೇನಲ್ಲ. ಇಲ್ಲಿ ಕೇವಲ ಆರ್ಥಿಕ ಹಿಂದುಳಿದಿರುವಿಕೆಯನ್ನು ಮಾನದಂಡವಾಗಿ ಮೀಸಲಾತಿಯ ಸಂದರ್ಭದಲ್ಲಿ ಪರಿಗಣಿಸುವುದು ಮೀಸಲಾತಿ ವ್ಯವಸ್ಥೆಯೇ ಮುರಿದುಬಿದ್ದಿರುವುದರ ಸಂಕೇತ. ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಆಧಾರದ ಮೇಲೆ ಮೀಸಲಾತಿ ಪಡೆಯಲು ಹಿಂದುಳಿದಿರುವಿಕೆಯ ತೀರ್ಮಾನವಾಗಬೇಕು ಎಂಬುದು ನನ್ನ ನಿಲುವು.

ಈ ನಿಟ್ಟಿನಲ್ಲಿ ಮೀಸಲಾತಿಯನ್ನು ತೀರ್ಮಾನಿಸುವಾಗ ಆರ್ಥಿಕ ಹಿಂದುಳಿದಿರುವಿಕೆಯನ್ನು ಕೇವಲ ಈ ಮೇಲೆ ಗುರುತಿಸಿದ ಮಾನದಂಡಗಳ ಜೊತೆಯಲ್ಲಿ ಮಾತ್ರ ಪರಿಗಣಿಸಬೇಕೆ ಹೊರತು, ಅದೊಂದನ್ನೇ ಪ್ರತ್ಯೇಕವಾಗಿ ಅಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ಸಮುದಾಯದವರಿಗೆ, ಸಾರ್ವಜನಿಕ ನೀತಿಯ ಇತರೆ ಸಾಧನಗಳ ಮೂಲಕ ಸಾಧ್ಯವಿರುವ ಅನುಕೂಲಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಬಹುದು ಮತ್ತು ಹಾಗೆಯೇ ಮಾಡಬೇಕು. ಆದರೆ ಅವುಗಳಿಗೆ ಮೀಸಲಾತಿಯನ್ನು ನೀಡುವುದು ಅದರ ಹಾಗೂ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಿದಂತೆ.

ನನ್ನ ಮಾತಿನ ಆಶಯ ಇಷ್ಟೇ. ಇಂದು ಹಿಂದುಳಿದಿರುವಿಕೆಯ ತೀರ್ಮಾನವಾಗುವುದು ಕೇವಲ ಐತಿಹಾಸಿಕವಾಗಿ ಅವಕಾಶ ವಂಚಿತರಾಗಿದ್ದರೆಂದಷ್ಟೇ ಅಲ್ಲ. ಅದರ ಜೊತೆಗೆ ಇಂದೂ ಸಹ ಜಾತಿ ವ್ಯವಸ್ಥೆಯ ಕಾರಣದಿಂದ ಅಸಮಾನತೆಯನ್ನು ಎದುರಿಸಬೇಕಾಗಿದೆ ಎಂಬ ಕಾರಣದಿಂದ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ , ಪಂಗಡಗಳಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಎಂಬುದು ಅವಕಾಶಗಳನ್ನು ಕಲ್ಪಿಸಲು ಇರುವ ಅಸಮರ್ಪಕ, ಅಪರಿಪೂರ್ಣ ಆದರೆ ಸಂಪೂರ್ಣವಾಗಿ ಅಗತ್ಯವಿರುವ, ಇರುವ ಆಯ್ಕೆಗಳ ಪೈಕಿ ಅತ್ಯುತ್ತಮವಾದ ಒಂದು ಸಾಧನ. ಸಮಾನತೆಯನ್ನು ಸಾಧಿಸಲು, ಜಾತಿಯಾಧಾರಿತ ತಾರತಮ್ಯ ಮತ್ತು ಶೋಷಣೆಗಳನ್ನು ತೊಡೆಯಲು ಮೀಸಲಾತಿಯಷ್ಟೇ ಸಾಲದು, ಮತ್ತಷ್ಟು ಸಾಧನಗಳು ಬೇಕು ಎಂಬುದು ನಾವು ಕಳೆದ ಏಳು ದಶಕಗಳಲ್ಲಿ ಕಲಿತಿರುವ ಪಾಠ. ಆದರೆ ರಾಜ್ಯದ ಸೌಲಭ್ಯಗಳು ಮತ್ತು ಸಂಪನ್ಮೂಲಗಳನ್ನು ಎಲ್ಲರಿಗೂ ಹಂಚುವ ಸಾಧನವನ್ನಾಗಿ ಮೀಸಲಾತಿಯನ್ನು ಪರಿವರ್ತಿಸಬಾರದು. ಈಗ ಮೀಸಲಾತಿಯನ್ನು ಕೇಳುತ್ತಿರುವ ಮೇಲ್ವರ್ಗದವರ ಉದ್ದೇಶ ಅಂತಹ ವ್ಯವಸ್ಥೆಯನ್ನು ರೂಪಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT