ಭಾನುವಾರ, ಅಕ್ಟೋಬರ್ 24, 2021
28 °C

ಬಿ.ಕೆ ಹರಿಪ್ರಸಾದ್‌ ಲೇಖನ| ಸಂಘದ ಮಿತಿ ದಾಟದ ನಾಯಕ ನರೇಂದ್ರ ಮೋದಿ

ಬಿ.ಕೆ. ಹರಿಪ್ರಸಾದ್‌ Updated:

ಅಕ್ಷರ ಗಾತ್ರ : | |

ಗುಜರಾತ್‌ ರಾಜ್ಯದ ರಾಜಕಾರಣದಲ್ಲಿ ಸೃಷ್ಟಿಯಾದ ವಿಚಿತ್ರ ಸನ್ನಿವೇಶವೊಂದರಲ್ಲಿ ಒದಗಿಬಂದ ಅವಕಾಶದಿಂದ ರಾಜಕೀಯದಲ್ಲಿ ಮೇಲೆದ್ದು ಬಂದವರು ನರೇಂದ್ರ ಮೋದಿ. ಕೇಶುಭಾಯ್‌ ಪಟೇಲ್‌ ಅವರನ್ನು ಪದಚ್ಯುತಿಗೊಳಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಯ್ಕೆಯ ರೂಪದಲ್ಲಿ ಮೋದಿ ಅವರಿಗೆ ಮುಖ್ಯಮಂತ್ರಿಯ ಗಾದಿ ಒಲಿದುಬಂತು. ಒಂದು ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದ ಮತ್ತು ಚುನಾವಣೆಯ ನಾಯಕತ್ವವನ್ನು ವಹಿಸಿರದ ಅವರು ಸಂಘ ಪರಿವಾರದ ಕೃಪೆಯಿಂದಾಗಿ ನೇರವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆ ಬಳಿಕವೇ ಅವರು ಚುನಾವಣೆಯನ್ನು ಎದುರಿಸಿದವರು. ಮೋದಿ ಚುನಾವಣೆಯನ್ನು ಗೆದ್ದು ನಾಯಕನಾಗಿಲ್ಲ, ಬದಲಿಗೆ ಅಧಿಕಾರಕ್ಕೇರಿ ಚುನಾವಣೆ ಗೆದ್ದರು ಎಂಬುದೇ ಅವರ ಬೆಳವಣಿಗೆಯ ಗತಿಯನ್ನು ನಿರೂಪಿಸುತ್ತದೆ.

13 ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ನಂತರ ಪ್ರಧಾನಿಯಾಗಿ ಏಳು ವರ್ಷ ಕಳೆದಿದ್ದಾರೆ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಾಯಕನೊಬ್ಬ ಮುತ್ಸದ್ದಿಯಾಗಿ ಬದಲಾಗಬೇಕಿತ್ತು. ಇಡೀ ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸುವಂತಹ ವ್ಯಕ್ತಿತ್ವ ಅವರಲ್ಲಿ ರೂಪುಗೊಳ್ಳಬೇಕಿತ್ತು. ಧರ್ಮ, ಜಾತಿ, ಪಕ್ಷ ಎಲ್ಲವನ್ನೂ ಮೀರಿ ಇಡೀ ದೇಶದ ಪರವಾಗಿ ಯೋಚಿಸುವ ಮತ್ತು ಕೆಲಸ ಮಾಡುವ ಪ್ರವೃತ್ತಿ ಅವರಲ್ಲಿ ಬೆಳೆಯಬೇಕಿತ್ತು. ಆದರೆ, ಮೋದಿ ಅದಕ್ಕೆ ತದ್ವಿರುದ್ಧವಾಗಿಯೇ ಉಳಿದಿದ್ದಾರೆ. ಸುದೀರ್ಘವಾಗಿ ದೇಶದ ಆಡಳಿತ ನಡೆಸಿದ ಬಳಿಕವೂ ನರೇಂದ್ರ ಮೋದಿ ಅವರಲ್ಲಿ ಒಬ್ಬ ಮುತ್ಸದ್ದಿ ಕಾಣುತ್ತಿಲ್ಲ. ಇದಕ್ಕೆ ಕಾರಣ, ಅವರು ಜನರ ನಡುವೆ ಬೆಳೆದುಬಂದ ನಾಯಕನಲ್ಲ ಎಂಬುದು. ಸಂಘ ಪರಿವಾರದ ರಾಜಕೀಯ ದಾಳವಾಗಿ ಮುನ್ನೆಲೆಗೆ ಬಂದ ಅವರು ಅದೇ ಜಾಡಿನಲ್ಲಿ ಸಾಗುತ್ತಿದ್ದಾರೆ. ತಾನು ಒಂದು ವರ್ಗದ ಜನರ ಪ್ರತಿನಿಧಿಯಷ್ಟೇ ಎಂಬುದನ್ನು ಪ್ರಧಾನಿ ತನ್ನ ಕೆಲಸಗಳಲ್ಲಿ ತೋರಿಸುತ್ತಿದ್ದಾರೆ. ಪ್ರಧಾನಿಯೊಬ್ಬರು ಕಣ್ಣುಪಟ್ಟಿ ಕಟ್ಟಿದ ಕುದುರೆಯಂತೆ ಸಾಗುತ್ತಿರುವುದು ಈ ದೇಶದ ದುರಂತ.

ಜನರ ನಡುವೆ ಬೆಳೆಯುವ ನಾಯಕರಿಗೆ ಜನಸಾಮಾನ್ಯರ ನೋವು– ನಲಿವುಗಳನ್ನು ಅರಿಯುವ ಛಾತಿ ಇರುತ್ತದೆ. ಜನರ ಜತೆಗಿನ ಒಡನಾಟವೇ ಅವರನ್ನು ಮುತ್ಸದ್ದಿ ನಾಯಕರನ್ನಾಗಿ ಪರಿವರ್ತಿಸುತ್ತದೆ. ಆದರೆ, ಮೋದಿಯವರು ಜನರಿಂದ ಬೆಳೆದುಬಂದ ನಾಯಕನಲ್ಲ. ಅವರನ್ನು ಬೆಳೆಸಿರುವುದು ಆರ್‌ಎಸ್‌ಎಸ್‌. ಆ ಪ್ರಭಾವದಿಂದ ಹೊರಬರಲು ಅವರಿಗೆ ಸಾಧ್ಯವಾಗದೇ ಇರುವುದರಿಂದಾಗಿ ಮೋದಿಯವರ ಆಡಳಿತದ ಮೇಲೆ ಸಂಪೂರ್ಣವಾಗಿ ಸಂಘದ ಛಾಯೆ ಗಾಢವಾಗಿ ಆವರಿಸಿದೆ. ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿದ್ದ ಅಟಲ್‌ ಬಿಹಾರಿ ವಾಜಪೇಯಿಯವರು ಇಂತಹ ಮಿತಿಗಳನ್ನು ದಾಟಿ ಮುನ್ನಡೆದಿದ್ದರು. ಪ್ರಧಾನಿ ದೇಶದ ಎಲ್ಲ ಜನರಿಗೆ ಸೇರಿದವರು ಎಂಬ ಭಾವನೆ ಮೂಡಿಸುವಲ್ಲಿ ವಾಜಪೇಯಿ ಯಶಸ್ವಿಯಾಗಿದ್ದರು. 

ಮೋದಿಯವರು ಪ್ರಧಾನಿಯಾಗಿ ಏಳು ವರ್ಷಗಳಲ್ಲಿ ಒಮ್ಮೆಯೂ ನೇರಾನೇರ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳನ್ನು ಎದುರಿಸಿಲ್ಲ. ಇದು ಮೋದಿ ಅವರಲ್ಲಿ ಇರುವ ಪುಕ್ಕಲುತನವನ್ನು ತೋರಿಸುತ್ತದೆ. ಧೈರ್ಯದ ಕೊರತೆಯೇ ಅವರನ್ನು ಸರ್ವಾಧಿಕಾರಿ ಧೋರಣೆಯತ್ತ ತಳ್ಳಿಬಿಟ್ಟಿದೆ. ಜನಪರ ರಾಜಕಾರಣದಲ್ಲಿ ಬೆಳೆದುಬಂದ ನಾಯಕರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಗೌರವವಿರುತ್ತದೆ. ಆದರೆ, ಇವರು ಜನರ ನಡುವೆ ಬೆಳೆದ ರಾಜಕಾರಣಿಯಲ್ಲದೆ ಇರುವುದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆಯೇ ಗೌರವವಿಲ್ಲದವರಂತೆ ನಡೆದುಕೊಳ್ಳುತ್ತಾರೆ. 

ಆಡಳಿತ ಮತ್ತು ಜನಸ್ಪಂದನೆಯ ವಿಚಾರದಲ್ಲಿ ಪ್ರಧಾನಿ ಧನಾತ್ಮಕವಾದ ಮಾದರಿಗಳನ್ನು ಸೃಷ್ಟಿಸಬೇಕಿತ್ತು. ಆದರೆ, ಗುಜರಾತ್‌ ಮುಖ್ಯಮಂತ್ರಿಯಾದ ದಿನದಿಂದ ಈವರೆಗೆ ನರೇಂದ್ರ ಮೋದಿಯವರು ನಮ್ಮ ನಡುವೆ ಪ್ರಚುರಪಡಿಸಿರುವ ಮಾದರಿಗಳನ್ನು ನೋಡಿದರೆ ಎಲ್ಲವೂ ನಕಾರಾತ್ಮಕ. ಗುಜರಾತ್‌ ಮಾದರಿ ಎಂದು 20 ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಆದರೆ, ಈಗಲೂ ಅಂತಹ ಮಾದರಿಯೊಂದನ್ನು ನಿರೂಪಿಸಲು ಅವರಿಗೆ ಸಾಧ್ಯವಾಗಿಲ್ಲ. ಇವರಿಗಿಂತ ಮೊದಲು ಪ್ರಧಾನಿ ಹುದ್ದೆಯಲ್ಲಿದ್ದ ಡಾ.ಮನಮೋಹನ್‌ ಸಿಂಗ್‌ ಅವರು ನೂರು ಮಾತುಗಳನ್ನಾಡಿದರೆ ಒಂದಾದರೂ ಸುಳ್ಳು, ತಪ್ಪು ಸಿಗಬಹುದಾ ಎಂದು ಹುಡುಕುವುದೇ ಕಷ್ಟವಾಗುತ್ತಿತ್ತು. ಮೋದಿ ನೂರು ಮಾತುಗಳನ್ನಾಡಿದರೆ ಒಂದಾದರೂ ಸತ್ಯ ಇದೆಯೇ ಎಂದು ಹುಡುಕಬೇಕಾದ ಪರಿಸ್ಥಿತಿ ಇದೆ. ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವ ವ್ಯಕ್ತಿ ಇವರು. 70 ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಮಹನೀಯರು ಕಟ್ಟಿದ ಎಲ್ಲ ಸಂಸ್ಥೆಗಳನ್ನೂ ನಿರ್ನಾಮ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶದ ಸಾರ್ವಜನಿಕ ಆಸ್ತಿಗಳೆಲ್ಲವನ್ನೂ ಬಂಡವಾಳಶಾಹಿಗಳ ಕೈಗೆ ಒಪ್ಪಿಸಲು ಪ್ರಧಾನಿಯ ವೇಷತೊಟ್ಟ ವ್ಯಾಪಾರಿಯಂತೆ
ಕೆಲಸ ಮಾಡುತ್ತಿದ್ದಾರೆ. ಇವು ಭಾರತದ ಪಾಲಿಗೆ ಯಾವತ್ತೂ ಧನಾತ್ಮಕ ಆಡಳಿತದ ಮಾದರಿ ಎನಿಸಿಕೊಳ್ಳಲಾರವು.

ಇಡೀ ದೇಶ ನನ್ನದು ಮತ್ತು ದೇಶದ ಎಲ್ಲರೂ ನನ್ನವರು ಎಂಬ ಭಾವನೆ ಪ್ರಧಾನಿ ಹುದ್ದೆಯಲ್ಲಿ ಇರುವವರಲ್ಲಿ ಹಾಸುಹೊಕ್ಕಾಗಿ ಇರಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ ವಿಚಾರದಲ್ಲಿ ನಾಟಕೀಯತೆ ಇರಬಾರದು. ಆದರೆ, ಪ್ರಧಾನಿಯೇ ಜನರ ನಡುವೆ ದ್ವೇಷದ ಕಿಡಿ ಹೊತ್ತಿಸುವಂತಹ ಮಾತುಗಳನ್ನಾಡಿರುವುದನ್ನೂ ಈ ದೇಶ ಕಂಡಿದೆ. ಪ್ರಧಾನಿಯಾದವರಿಗೆ ದೇಶದೊಳಗೆ ಶತ್ರುಗಳಿರುವುದಿಲ್ಲ. ಆದರೆ, ರಾಜಕೀಯ ವಿರೋಧಿಗಳು ಇರುತ್ತಾರೆ. ವಿರೋಧ ಪಕ್ಷದವರೆಲ್ಲ ಶತ್ರುಗಳು ಎಂದು ಭಾವಿಸಿರುವ ನರೇಂದ್ರ ಮೋದಿ, ತಮ್ಮ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರನ್ನೂ ಅದೇ ಭಾವನೆಯಲ್ಲಿ ನೋಡುತ್ತಾರೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ, ಎನ್‌ಐಎಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಜನರ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ಇಂತಹ ನಡೆಗಳು ಹೇಗೆ ದೇಶಕ್ಕೆ ಮುತ್ಸದ್ದಿ ನಾಯಕನನ್ನು ನೀಡಲು ಸಾಧ್ಯ?

ಲೇಖಕ– ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ

(ನಿರೂಪಣೆ–ವಿ.ಎಸ್‌.ಸುಬ್ರಹ್ಮಣ್ಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು