ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಇಳಿಯುತಿದೆ ನೋಡಿದಿರಾ?: ಇತಿಹಾಸ ಎಂದಿಗೂ ಕ್ಷಮಿಸದು

Last Updated 13 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ನಡೆದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಿದೇಶಿ ಸೆಲೆಬ್ರಿಟಿಗಳು ಮಾಡಿದ ಟ್ವೀಟ್‌, ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರದ ಕೆಲವು ಸಚಿವರು ಹಾಗೂ ಭಾರತೀಯ ಸೆಲೆಬ್ರಿಟಿಗಳು ಟ್ವೀಟ್‌ ಮೂಲಕವೇ ನೀಡಿದ ಪ್ರತಿಕ್ರಿಯೆ – ಎರಡೂ ವಿವಾದದ ಬಿರುಗಾಳಿಯನ್ನು ಎಬ್ಬಿಸಿವೆ. ವಿವಾದಕ್ಕೆ ಕಾರಣವಾಗಿರುವ ಎರಡು ಭಿನ್ನ ವಾದಗಳು ಇಲ್ಲಿ ಮುಖಾಮುಖಿಯಾಗಿವೆ. ಒಂದು ವಾದ, ಸರ್ಕಾರದ ಪ್ರತಿಕ್ರಿಯೆಯಲ್ಲಿನ ಟೊಳ್ಳುತನವನ್ನು ಬಯಲು ಮಾಡಲು ಹಂಬಲಿಸಿದರೆ, ಮತ್ತೊಂದು ವಾದ, ರೈತ ಚಳವಳಿಯೊಳಗೆ ನುಸುಳಿವೆ ಎನ್ನಲಾದ ದೇಶ ವಿಭಜಕ ಶಕ್ತಿಗಳ ಕುರಿತು ಮಾತನಾಡಿದೆ...

***

ಪ್ರಸ್ತುತ ರೈತ ಹೋರಾಟದ ಪ್ರಾರಂಭದಿಂದಲೂ ಅವರ ನ್ಯಾಯಯುತವಾದ ಹೋರಾಟದೊಳಗೆ ಕೆಲವು ಅಪಾಯಕಾರಿ ಸಂಘಟನೆಗಳು ನುಸುಳಿರುವ ದುಃಶಕುನಗಳು ಕಾಣಿಸಿ ಕೊಂಡಿದ್ದವು. ಖಲಿಸ್ತಾನದ ಧ್ವಜಗಳು ಹಾಗೂ ಉಗ್ರ ಭಿಂದ್ರನ್ ವಾಲೆಯ ಚಿತ್ರಗಳು ಕಾಣಿಸಿಕೊಂಡಿದ್ದು, ಹಾಗೆಯೇ ಉಗ್ರರು, ಗಲಭೆಕೋರರು ಮತ್ತು ಮಾವೊವಾದಿಗಳ ಪರವಾದವರನ್ನು ಬಿಡುಗಡೆ ಮಾಡಬೇಕೆನ್ನುವ ಅತಿರೇಕದ ಬೇಡಿಕೆಗಳು ಕೇಳಿಬಂದಿದ್ದು ಅದಕ್ಕೆ ಸಾಕ್ಷ್ಯವನ್ನು ನುಡಿಯುತ್ತಿದ್ದವು. ಸರ್ಕಾರದ ಮುಂದೆ ಯಾವುದೇ ಕಾರಣಕ್ಕೂ ಬಿಗಿಪಟ್ಟಿನ ಬೇಡಿಕೆಯಾಗಿ ವರವರ ರಾವ್ ಹಾಗೂ ಉಮರ್ ಖಾಲಿದ್‌ನನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟರಲ್ಲ, ಅದಕ್ಕೂ ಪಂಜಾಬಿನ ರೈತನಿಗೂ ಏನು ಸಂಬಂಧ?

ಸ್ವೀಡನ್ನಿನ ಪರಿಸರ ಹೋರಾಟಗಾರ್ತಿ ಗ್ರೇತಾ ಥನ್ಬರ್ಗ್ ಈ ಬಗ್ಗೆ ಅವಸರದ ಟ್ವೀಟ್ ಮಾಡದೇ ಇದ್ದಿದ್ದರೆ ಬಹುಶಃ ರೈತ ಹೋರಾಟಕ್ಕೂ ಭಾರತವಿಭಜಕ ಶಕ್ತಿಗಳಿಗೂ ಮತ್ತು ಖಲಿಸ್ತಾನಿ ಪರ ಗುಂಪುಗಳಿಗೂ ಇರುವ ಸಂಬಂಧ ಹೊರಬೀಳುತ್ತಿರಲಿಲ್ಲ. ತನಗೆ ಅರ್ಥವೇ ಆಗದ ಒಂದು ವಿಷಯದ ಬಗ್ಗೆ ತನ್ನ ಬೆಂಬಲ ಸೂಚಿಸುತ್ತಾ ಗ್ರೇತಾ, ಈ ಬಗೆಯ ಹೋರಾಟಗಳಲ್ಲಿ -ಇವುಗಳ ಸಾಮಾಜಿಕ ಜಾಲತಾಣಗಳ ಕ್ಯಾಂಪೇನುಗಳು ಮತ್ತು ಹ್ಯಾಶ್‌ಟ್ಯಾಗ್‌ ವಾರುಗಳನ್ನೂ ಸೇರಿಸಿಕೊಂಡು- ಯಾವ ಬಗೆಯ ನಿಲುವನ್ನು ತಳೆಯಬೇಕು, ಹೇಗೆ ಇವನ್ನು ಹಬ್ಬಿಸಬೇಕು ಎಂಬ ಬಗೆಗಿನ ‘ಟೂಲ್ ಕಿಟ್’ನ ರಹಸ್ಯವನ್ನೇ ಆಕೆ ಬಿಟ್ಟುಕೊಟ್ಟಂತಾಗಿದೆ. ದೆಹಲಿಯ ಹಿಂಸಾಚಾರ ಮತ್ತು ಗಣತಂತ್ರ ದಿನದಂದು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದು ಈ ‘ಟೂಲ್ ಕಿಟ್ಟಿ’ನ ವಿವರವಾದ ಯೋಜನೆಯ ಯಥಾವತ್ ಅನುಸರಣೆಯಷ್ಟೆ.

ನಮಗೆ ಒಪ್ಪಿಗೆಯಿದೆಯೋ ಇಲ್ಲವೋ, ಸಂಸತ್ತಿನಲ್ಲಿ ಮಂಡಿಸಲಾದ ಕೃಷಿ ಕಾನೂನುಗಳನ್ನು ವಿರೋಧಿಸುವ ಎಲ್ಲ ಹಕ್ಕುಗಳೂ ರೈತರಿಗೆ ಇವೆಯಷ್ಟೆ. ಭಾರತ ಸರ್ಕಾರವೂ ಇದನ್ನು ಗೌರವಿಸಿದೆ ಮತ್ತು ರೈತ ಸಂಘಟನೆಗಳೊಂದಿಗೆ ಹಿರಿಯ ಮಂತ್ರಿಗಳ ಮೂಲಕವೇ ತಿಂಗಳುಗಳಿಂದ ಹತ್ತಕ್ಕೂ ಹೆಚ್ಚು ಸುತ್ತು ಮಾತುಕತೆಯನ್ನು ನಡೆಸುತ್ತ ಬಂದಿದೆ. ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ, ಕೂಳೆ ಸುಡುವ ಸಮಸ್ಯೆಯ ಬಗ್ಗೆ ಮತ್ತು ಕನಿಷ್ಠ ಬೆಂಬಲಬೆಲೆಯ ಬಗ್ಗೆಯೂ ರೈತರ ಅನೇಕ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಪ್ರಸ್ತುತ ಕಾನೂನುಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವಲ್ಲಿ ಯಾವುದೇ ಅರ್ಥಪೂರ್ಣ ಸಲಹೆಗಳಿಗೆ ಸರ್ಕಾರದ ಸ್ವಾಗತವಿದೆ ಎಂದು ಪ್ರಧಾನಮಂತ್ರಿಯವರೇ ಭರವಸೆ ಕೊಟ್ಟಿದ್ದಾರೆ, ಮಂತ್ರಿಗಳಂತೂ ನಿರಂತರ ಸಂಪರ್ಕದಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ ಸಹ ಈ ಹೋರಾಟದ ಆಶಯವನ್ನು ಗೌರವಿಸಿ ಪ್ರತಿಭಟನೆಯು ಮುಂದುವರೆಯಲು ಅವಕಾಶ ನೀಡಿದೆ. ಇದನ್ನೇ ಬಳಸಿಕೊಂಡು ಗಣತಂತ್ರ ಗಣರಾಜ್ಯೋತ್ಸವ ದಿನದಂದು ಆ ಕುಖ್ಯಾತ ಟ್ರ್ಯಾಕ್ಟರ್ ರ‍್ಯಾಲಿಯೂ ನಡೆದಿದೆ. ಸರ್ಕಾರ ಮತ್ತು ನ್ಯಾಯಾಲಯಗಳ ಈ ಕ್ರಮಗಳೆಲ್ಲವೂ ಭಿನ್ನಾಭಿಪ್ರಾಯವನ್ನು ಗಟ್ಟಿಗೊಳಿಸಿವೆಯೋ ಅಥವಾ ಹತ್ತಿಕ್ಕಿವೆಯೋ? ಅಥವಾ ಹತ್ಯಾಕಾಂಡವನ್ನು ಆಯೋಜಿಸುತ್ತಿವೆಯೋ?

ಅಂತರರಾಷ್ಟ್ರೀಯವಾಗಿ ಹುಯಿಲೆಬ್ಬಿಸುವ ಪ್ರಯತ್ನಗಳು 1980ರ ಪಂಜಾಬಿನ ಬರ್ಬರವಾದ ಸ್ಥಿತಿಯನ್ನು ಮತ್ತೆ ತರಲು ಪ್ರಯತ್ನಿಸುತ್ತಿರುವಂತೆ ಕಾಣುತ್ತವೆ; ಸಿಖ್ಖರಿಗೆ ಪ್ರತ್ಯೇಕವಾಗಿ ಖಲಿಸ್ತಾನವಾಗಬೇಕೆಂದು ಅಂದು ಕಟ್ಟಿದ ಉಗ್ರವಾದ, ಹಿಂಸಾಚಾರ ಮತ್ತು ಆಕ್ರಮಣಗಳು ನೆನಪಾಗುವಂತಿವೆ. ಅನೇಕ ವೀರರ ಅಸಂಖ್ಯ ಪ್ರಯತ್ನಗಳು ಮತ್ತು ಪ್ರಾಣಾರ್ಪಣೆಯಿಂದ ಆ ಹೋರಾಟವನ್ನು ದಮನ ಮಾಡಲಾಗಿದೆ. ಆದರೆ, ಅವುಗಳ ಗುಪ್ತ ಚಟುವಟಿಕೆಗಳು ನಡೆಯುತ್ತಲೇ ಬಂದಿವೆ. ಇದು ಕೆನಡಾ, ಇಟಲಿ, ಇಂಗ್ಲೆಂಡ್‌ ಇತ್ಯಾದಿ ಪ್ರಪಂಚದ ಬೇರೆ ಭಾಗಗಳಲ್ಲಿ ಬೆಂಬಲ ಗಿಟ್ಟಿಸಿಕೊಂಡು, ಪಾಕಿಸ್ತಾನದ ಐಎಸ್‌ಐನ ಆಶ್ರಯದಲ್ಲಿ ಬೆಳೆಯಿತೆಂದು, 2018ರಲ್ಲಿ ಹಲವು ಉಗ್ರರನ್ನು ಬಂಧಿಸಿದ ಸಂದರ್ಭದಲ್ಲಿ, ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೇ ಹೇಳಿದ್ದರು.

ಭಾರತದಲ್ಲಿ ನಡೆದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪರಿಸರ ಹೋರಾಟಗಾರ್ತಿ ಗ್ರೇತಾ ಥನ್ಬರ್ಗ್‌ ಹಾಗೂ ಪಾಪ್‌ ಗಾಯಕಿ ರಿಯಾನಾ ಅವರು ಮಾಡಿದ ಟ್ವೀಟ್‌ ವಿರೋಧಿಸಿ ಯುನೈಟೆಡ್‌ ಹಿಂದೂ ಫ್ರಂಟ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು
ಭಾರತದಲ್ಲಿ ನಡೆದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪರಿಸರ ಹೋರಾಟಗಾರ್ತಿ ಗ್ರೇತಾ ಥನ್ಬರ್ಗ್‌ ಹಾಗೂ ಪಾಪ್‌ ಗಾಯಕಿ ರಿಯಾನಾ ಅವರು ಮಾಡಿದ ಟ್ವೀಟ್‌ ವಿರೋಧಿಸಿ ಯುನೈಟೆಡ್‌ ಹಿಂದೂ ಫ್ರಂಟ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು

ಖಲಿಸ್ತಾನಿ ಪರವಾದ ಹಲವು ಸಂಘಟನೆಗಳು ಬೇರೆ ಬೇರೆ ದೇಶಗಳಿಂದ ಕೆಲಸ ಮಾಡುತ್ತಿವೆ ಎಂಬುದು ರಹಸ್ಯವೇನಲ್ಲ. ಇವುಗಳಲ್ಲಿ ಬಬ್ಬರ್ ಖಲ್ಸಾ, ಭಿಂದ್ರನ್ ವಾಲಾ ಟೈಗರ್ ಫೋರ್ಸ್ ಆಫ್ ಖಲಿಸ್ತಾನ್, ಖಲಿಸ್ತಾನ್ ಕಮಾಂಡೊ ಫೋರ್ಸ್, ಖಲಿಸ್ತಾನ್ ಲಿಬರೇಶನ್ ಆರ್ಮಿ ಇತ್ಯಾದಿಗಳಿವೆ. ಇವುಗಳ ಜೊತೆಗೆ ಇತ್ತೀಚಿನ ಸಂಘಟನೆಗಳಾದ ಸಿಖ್ಸ್‌ ಫಾರ್ ಜಸ್ಟಿಸ್ (SFJ-2007), ವರ್ಲ್ಡ್ ಸಿಖ್‌ ಆರ್ಗನೈಸೇಶನ್ (WSO) ಮತ್ತು ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ (PJF) ಮೊದಲಾದವು ಸೇರಿಕೊಂಡಿವೆ. ಬಹುತೇಕ ಇವು ಖೋಟಾ ಸಂಘಟನೆಗಳಾಗಿದ್ದು, ತಮ್ಮ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ - 2020ರಲ್ಲಿ ಲಂಡನ್ನಿನ SFJ ಹೇಳಿಕೊಂಡಿದ್ದಂತೆ- ತಮ್ಮ ಗುರಿ ‘ಭಾರತದ ಕಪಿಮುಷ್ಟಿಯಿಂದ ಪಂಜಾಬ್‌ ಅನ್ನು ಮುಕ್ತಗೊಳಿಸುವುದು’ ಎಂದು ಘೋಷಿಸಿಕೊಂಡಿವೆ. ಈಗ್ಗೆ ಅನೇಕ ದಶಕಗಳಿಂದ ಇಂತಹ ಸಂಘಟನೆಗಳ ಜಾಡು ಹಿಡಿದಿದ್ದ ಭಾರತದ ಗುಪ್ತಚರ ಸಂಸ್ಥೆಗಳು, ಇವುಗಳಿಗೆ ಐಎಸ್‌ಐನಿಂದ ಧಾರಾಳವಾಗಿ ಹಣ ಹರಿದುಬರುವುದನ್ನು, ಭಾರತದಲ್ಲಾಗುವ ಗಲಭೆಗಳಲ್ಲಿ ಮತ್ತು ಪಂಜಾಬಿನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್‌ ಅವರಂಥವರ ರಾಜಕೀಯ ಹತ್ಯೆಗಳಲ್ಲೂ ಇವುಗಳ ಪಾತ್ರ ಇರುವುದನ್ನು ಪತ್ತೆಹಚ್ಚಿವೆ. ಗೂಗಲ್ ಪತ್ತೆಹಚ್ಚಿದ ಗ್ರೇತಾ ‘ಟೂಲ್ ಕಿಟ್’ನ ಸುಳಿವು ಕೂಡ ಮೋ ಧಲಿವಾಲ್ ಕಡೆಗೆ ಕೈಮಾಡುತ್ತದೆ. ಈತ ವ್ಯಾಂಕೋವರಿನಲ್ಲಿರುವ ಡಿಜಿಟಲ್ ಬ್ರ್ಯಾಂಡಿಂಗ್ ಏಜೆನ್ಸಿಯ ನಿರ್ದೇಶಕ ಮತ್ತು ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ನಿನ ಸಹನಿರ್ಮಾತೃ. ಈತ ತನ್ನ ಹಿಂದಿನ ಟ್ವೀಟುಗಳಲ್ಲಿ ‘ನಾನೊಬ್ಬ ಖಲಿಸ್ತಾನಿ... ಖಲಿಸ್ತಾನ್ ಒಂದು ಆಲೋಚನೆ, ಒಂದು ಜೀವಂತ ಚಳವಳಿ’ ಎಂದೆಲ್ಲಾ ಎದೆ ಬಡಿದುಕೊಂಡಿದ್ದಾನೆ.

ಗ್ರೇತಾಳ ಈ ಅರಚಾಟದ ಜೊತೆಗೆ ಆಶ್ಚರ್ಯವೆಂಬಂತೆ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ನಾ ಮುಂದು ತಾ ಮುಂದು ಎಂಬಂತೆ ದನಿಸೇರಿಸಿದ್ದಾರೆ. ಅಮೆರಿಕದ ಪಾಪ್-ತಾರೆ ರಿಯಾನಾ, ಅಮೆರಿಕ ಉಪಾಧ್ಯಕ್ಷೆಯ ಸಂಬಂಧಿ ಮೀನಾ ಹ್ಯಾರಿಸ್, ಹಾಲಿವುಡ್ ನಟ ಜಾನ್ ಕ್ಯೂಜಕ್, ಫುಟ್‌ಬಾಲ್ ಪಟು ‘ಜುಜು’ ಶೆರ್ಮನ್ ಇವರೆಲ್ಲ ಬಿಡಿ, ಪೋರ್ನ್ ಸ್ಟಾರ್ ಮಿಯಾ ಖಲೀಫಾ ಕೂಡ ಬೆಂಬಲ ಕೊಟ್ಟದ್ದಾಯ್ತು. ಇವು ಭಾರತೀಯ ಕೃಷಿಯ ವಾಸ್ತವ ಮತ್ತು ಸಂಕೀರ್ಣತೆಯನ್ನು ಅರ್ಥಮಾಡಿಕೊಂಡು, ಇಲ್ಲಿನ ಹೋರಾಟಗಾರರಿಗೆ ಬೆಂಬಲ ಸೂಚಿಸಿ ನೀಡಿದ ಮುಗ್ಧ ಹೇಳಿಕೆಗಳೇ? ಅಥವಾ ಗ್ರೇತಾಳ ಟೂಲ್ ಕಿಟ್‌ನಲ್ಲಿ ಗೊತ್ತಾದಂತೆ ಒಂದು ಪೂರ್ವಯೋಜಿತ ಷಡ್ಯಂತ್ರವೇ? ಈ ಯಾವ ತಾರೆಯರೂ ಬಿಟ್ಟಿಗೆ ಟ್ವೀಟ್ ಮಾಡುವವರಲ್ಲ ಮತ್ತು ಇವರೆಲ್ಲರೂ ಪೇಯ್ಡ್ ಪ್ರೊಮೋಷನ್ ಮಾಡುವವರೇ. ಹಾಗಿದ್ದಲ್ಲಿ ರೈತರನ್ನು ಇಲ್ಲಿ ಹಾಡಹಗಲೇ ಹತ್ಯೆ ಮಾಡುತ್ತಿದ್ದಾರೆ ಎನ್ನುವಂತಹ ಇಷ್ಟುದೊಡ್ಡ ಹುಸಿ ಹುಯಿಲನ್ನು ಎಬ್ಬಿಸಲು, ಅದಕ್ಕೆ ಅಂತರರಾಷ್ಟ್ರೀಯ ಸಹಮತಿ ಗಿಟ್ಟಿಸಲು ದುಡ್ಡು ಕೊಡುತ್ತಿರುವವರು ಯಾರು? ಇವೆಲ್ಲವೂ ಸಹಜವಾದವು ಎಂದುಕೊಳ್ಳುವುದು ಮುಗ್ಧತೆಯಷ್ಟೇ ಅಲ್ಲ, ದೇಶಕ್ಕೆ ಮಾರಕವೂ ಹೌದು.

ವಿಕ್ರಮ್ ಸಂಪತ್
ವಿಕ್ರಮ್ ಸಂಪತ್

ತಥಾಕಥಿತ ಪರಿಸರ ಹೋರಾಟಗಾರ್ತಿ ಗ್ರೇತಾ ಭಾರತೀಯ ಕೃಷಿಯ, ಅದರಲ್ಲೂ ಪಂಜಾಬ್ ಮತ್ತು ಹರಿಯಾಣದ ಕೃಷಿಪದ್ಧತಿಯ ಪರ ನಿಲ್ಲುವುದರಲ್ಲೇ ದೊಡ್ಡ ವ್ಯಂಗ್ಯವಿದೆ. ಈ ರಾಜ್ಯಗಳಲ್ಲಿ ಅತಿ ನೀರುಬಯಸುವ ಬೆಳೆಗಳನ್ನು ಬೆಳೆಯುವ ಮೂಲಕ ಅಂತರ್ಜಲ ನಾಶವಾಗುತ್ತಿದೆ; ಅತಿಯಾದ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತಿದೆ; ಇಲ್ಲಿ ಸುಡುವ ಕೂಳೆಯ ಹೊಗೆಗೆ ಇಡೀ ಉತ್ತರ ಭಾರತ ಉಸಿರುಗಟ್ಟುತ್ತದೆ; ಗೋಧಿ-ಭತ್ತಗಳ ಏಕಬೆಳೆಯ ಕೃಷಿಯಿಂದ ಮಣ್ಣಿನ ಗುಣ ನಾಶವಾಗುವುದಲ್ಲದೇ ಜಲಮಾಲಿನ್ಯ ಮತ್ತು ವಾಯುಮಾಲಿನ್ಯ ಹೆಚ್ಚುತ್ತಿದೆ. ಇವೆಲ್ಲವೂ ಪರಿಸರರಕ್ಷಣೆಗೆ ವಿರುದ್ಧವಾಗಿಯೇ ಇವೆ! ಇವೆಲ್ಲವೂ ಅರ್ಥವಾಗಿದ್ದರೆ ಆಕೆ ತಾನು ಮುಂಚೂಣಿಯಲ್ಲಿರುವ, ಬರಿಯ ಸ್ಥಿತಿವಂತರ ಕನಸಾದ ‘ಜೀವಂತ ಭೂಮಿ’ಯ ರಕ್ಷಣೆಯ ಬಗ್ಗೆ ಮತ್ತೊಮ್ಮೆ ಯೋಚಿಸುತ್ತಿದ್ದಳು. ಈ ತಾರೆಗಳಿಗೆ, ಆಂದೋಲನಜೀವಿಗಳಿಗೆ ಇವ್ಯಾವುವೂ ನಿಜವಾಗಿ ಬೇಕಿಲ್ಲ. ಸಿಎಎ ವಿರುದ್ಧದ ಹೋರಾಟ ನೆಲಕಚ್ಚಿದ ಮೇಲೆ ಈ ರೈತರ ಹೋರಾಟ ಮೆಲ್ಲಗೆ ನುಸುಳಿ, ದೇಶದಲ್ಲಿ ಗಲಭೆ ಸೃಷ್ಟಿಸಿ, ಜಾಗತಿಕ ವೇದಿಕೆಗಳಲ್ಲಿ ಹುಯಿಲೆಬ್ಬಿಸಿ, ಸಂವಿಧಾನಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಬೀಳಿಸಲು ಒಂದು ಅನುಕೂಲಸಿಂಧು ವೇದಿಕೆಯಾಗಿದೆ. ಈ ರಾಜಕೀಯ ಷಡ್ಯಂತ್ರಕ್ಕೆ ಬಲಿಪಶುಗಳಾಗಿ ಸಿಕ್ಕವರು ತಿಂಗಳುಗಳಿಂದ ಚಳಿ-ಬಿಸಿಲೆನ್ನದೇ ಹೋರಾಡುತ್ತಿರುವ ನಿಜವಾದ ರೈತರು. ಈ ಗುಪ್ತ ಅಂತರರಾಷ್ಟ್ರೀಯ ಸಂಘಸಂಸ್ಥೆಗಳ ಜಾಲಕ್ಕೆ ಸಿಕ್ಕಿ, ಅವರ ಕೈಯಲ್ಲಿನ ದಾಳವಾಗುವುದು ಯಾವ ರೈತನಿಗೂ ಅಥವಾ ಆತನನ್ನು ನಿಜವಾಗಿ ಬೆಂಬಲಿಸುವ ನಾಗರಿಕನಿಗೂ ಏನೂ ಸಹಾಯ ಮಾಡುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ತನಗೆ ಒಪ್ಪಿಗೆಯಿಲ್ಲದ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದ್ದೇ ಇದೆ. ಅದರಲ್ಲೂ ಆತನನ್ನು ಚುನಾವಣೆಯಲ್ಲಿ ಮಣಿಸಲು ಆಗದೇ ಇದ್ದಾಗ ಬೇರೆ ದಾರಿಯೇನಿದೆ?! ಆದರೆ ಆ ದ್ವೇಷದಿಂದ ಸಂಶಯಾಸ್ಪದವಾದ ಸಂಘಸಂಸ್ಥೆಗಳೊಂದಿಗೆ ಸೇರಿಕೊಂಡು, ಅವರಿಗೆ ಬೌದ್ಧಿಕ ಸಮರ್ಥನೆಗಳನ್ನು ಒದಗಿಸುತ್ತಾ ಭಾರತದ ಐಕ್ಯವನ್ನು ಮುರಿಯುವ ಕೆಲಸ ಮಾಡುವುದು ಪಾತಕವಷ್ಟೇ ಅಲ್ಲ, ಅಂತಹವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT