ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಜಾತ ಸಂಸ್ಕೃತಿಯ ಪ್ರತೀಕ

Last Updated 24 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಭಾರತಕ್ಕೆ ಬಂದ ವಿದೇಶಿ ಗಣ್ಯರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ, ಸ್ಮಾರಕಗಳಿಗೆ ಕರೆದುಕೊಂಡುಹೋಗುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಆಗ್ರಾದ ತಾಜಮಹಲನ್ನೋ ದೆಹಲಿಯ ಕೆಂಪುಕೋಟೆಯನ್ನೋ ತೋರಿಸುತ್ತಿದ್ದರು. 2017ರ ಏಪ್ರಿಲ್‍ನಲ್ಲಿ ಆಸ್ಟ್ರೇಲಿಯದ ಪ್ರಧಾನಿ ಭಾರತಕ್ಕೆ ಬಂದಿದ್ದರು. ನರೇಂದ್ರ ಮೋದಿಯವರು ಅವರನ್ನು ದೆಹಲಿಯ ಅಕ್ಷರಧಾಮ ಮಂದಿರಕ್ಕೆ ಕರೆದುಕೊಂಡುಹೋದರು. ಮಾಧ್ಯಮಗಳು ಅದಕ್ಕೆ ವಿವಿಧ ರೀತಿಯ ವಿಶ್ಲೇಷಣೆ ಮಾಡಿದವು! ಆಸ್ಟ್ರೇಲಿಯದ ಪ್ರಧಾನಿಯನ್ನು ದೇವ ಮಂದಿರಕ್ಕೆ ಕರೆದೊಯ್ದ ಔಚಿತ್ಯವನ್ನು ಪೂರ್ವಗ್ರಹವಿಲ್ಲದೆ ವಿಶ್ಲೇಷಿಸಿದರೆ ಕೆಲವು ಸತ್ಯಗಳು ನಮ್ಮ ಅರಿವಿಗೆ ಬರುತ್ತವೆ.

ಭಾರತದ ಅಭಿಜಾತ ಸಂಸ್ಕೃತಿ ಎಂದು ಪರಿಚಯಿಸುವುದಾದರೆ ಯಾವುದನ್ನು ಪರಿಚಯಿಸಬೇಕು ಎನ್ನುವ ಪ್ರಶ್ನೆಗೆ ಭಾರತದ ಶ್ರದ್ಧಾಕೇಂದ್ರಗಳನ್ನು ಎನ್ನುವುದು ಸರಿಯಾದ ಉತ್ತರ. ಇಲ್ಲಿನ ನಿಸರ್ಗ ರಮಣೀಯ ಸ್ಥಳಗಳನ್ನೋ, ತಾಂತ್ರಿಕವಾಗಿ ಅದ್ಭುತವೆನಿಸುವ ಸ್ಮಾರಕ, ಸೇತುವೆಗಳನ್ನೋ ತೋರಿಸಿದರೆ ಭಾರತದ ಜೀವನ ದೃಷ್ಟಿ, ಜೀವನ ಮೌಲ್ಯಗಳ ಪರಿಚಯವಾಗುವುದಿಲ್ಲ. ಐದು ಸಾವಿರ ವರ್ಷಗಳ ಪರಂಪರೆ ಎನ್ನುತ್ತೇವೆ. ಅದು ಭಾರತೀಯರ ಧಾರ್ಮಿಕ ಶ್ರದ್ಧೆ; ಸಾಮಾನ್ಯವಾದ ಮತೀಯ ನಂಬಿಕೆ, ಪೂಜಾ ಪದ್ಧತಿಗಳನ್ನು ಮೀರಿದ ಜೀವನ ದರ್ಶನ. ಪ್ರತಿಯೊಬ್ಬನಿಗೂ ಸ್ವತಂತ್ರವಾಗಿ ಚಿಂತಿಸುವ, ಆರಾಧಿಸುವ ಅವಕಾಶವನ್ನು ಅದು ನೀಡಿದೆ. ಯಾರೂ ಯಾವ ಕಾಲದಲ್ಲಿಯೂ ಹೊಸದೊಂದು ಆಧ್ಯಾತ್ಮಿಕ, ಧಾರ್ಮಿಕ ಮಾರ್ಗವೊಂದನ್ನು ಪ್ರಾರಂಭಿಸುವ ಅನುಕೂಲವಿದೆ. ಇದು ಭಾರತದ ಅನನ್ಯತೆ. ಇದರ ಸರಿಯಾದ ಪರಿಚಯವಾಗುವುದು ಶಾಸ್ತ್ರಬದ್ಧವಾಗಿ ನಿರ್ಮಿಸಿದ ದೇವಸ್ಥಾನಗಳಲ್ಲಿ.

ವೇದ ಕಾಲದಲ್ಲಿ ದೇವಸ್ಥಾನಗಳಿರಲಿಲ್ಲ. ರಾಮಾಯಣ ಮಹಾಭಾರತಗಳಲ್ಲಿ ಪೂಜೆ, ಯಜ್ಞಗಳ ವಿವರವಿದ್ದರೂ ದೇವಾಲಯಗಳ ಉಲ್ಲೇಖವಿಲ್ಲ. ನಂತರ ಬಂದ ನಮ್ಮ ದೇವಸ್ಥಾನಗಳು ಬದುಕಿನ ಕೇಂದ್ರಗಳಾದವು. ಭಾರತದ ಕಾವ್ಯ, ಶಾಸ್ತ್ರ, ಶಿಲ್ಪ, ಚಿತ್ರ, ಸಂಗೀತ, ನೃತ್ಯ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಔಷಧ ಎಲ್ಲದಕ್ಕೂ ದೇವಸ್ಥಾನವೇ ಕೇಂದ್ರ. ಸಮಾಜದ ಸಾಮರಸ್ಯದ ನೆಲೆಯೂ ಅದೇ ಆಗಿದೆ. ಮಠ ಮಂದಿರಗಳು ಎಂಬ ಜೋಡಿ ಶಬ್ದದ ಬಳಕೆ ಬಂದಿದೆ. ಮಠ ಎಂದರೆ ಶಾಲೆ. ಸಮಾಜದ ಸಾಮರಸ್ಯಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶಕವಾದ ನೆಲೆಗಳವು. (ದೇವಾಲಯಕ್ಕೆ ಎಲ್ಲರಿಗೂ ಪ್ರವೇಶವಿಲ್ಲದ, ವಿದ್ಯೆಗೆ ಕೆಲವರಿಗೆ ಅಧಿಕಾರವಿಲ್ಲದ ಪರಿಸ್ಥಿತಿ ನಂತರದ್ದು.)

ಇಂತಹ ದೇವಾಲಯಗಳು, ಮಠಗಳು ವಿವಾದದ ಕೇಂದ್ರಗಳಾಗುವುದು ನಮ್ಮ ಪರಂಪರೆಯನ್ನು ಅಣಕಿಸಿದಂತೆ. ಹಾಗೆಂದು ಅಂತಹ ಉದಾಹರಣೆಗಳಿಗೆ ಕೊರತೆಯಿಲ್ಲ. ಸರ್ವಾಂತರ್ಯಾಮಿಯೂ ಸರ್ವಾತ್ಮಕನೂ ಆದ ದೇವರ ಪೂಜೆಯ ವಿಷಯದಲ್ಲಿ, ದೇವಸ್ಥಾನದ ಆಸ್ತಿಯ ವಿಷಯದಲ್ಲಿ ಜಗಳ ಮಾಡುವುದು ನಮ್ಮ ಶ್ರದ್ಧೆಯ ಬುಡವನ್ನೇ ಅಲುಗಿಸುವಂತಹ ಸಂಗತಿ. ಭಾರತದ ಲಕ್ಷಾಂತರ ದೇವಾಲಯಗಳಲ್ಲಿ ಎಲ್ಲೋ ಕೆಲವು ಮಠ, ಮಂದಿರಗಳಲ್ಲಿ ವಿವಾದಗಳಿವೆ. ಅವು ವಿಪರೀತವಾದ ಸ್ವರೂಪ ಪಡೆದಿದ್ದೂ ಇದೆ. ಆದರೆ ಯಾವ ಜಗಳವೂ ದೇವರಿದ್ದಾನೆಯೇ ಇಲ್ಲವೇ ಎನ್ನುವ ಪ್ರಶ್ನೆಗೆ ಸಂಬಂಧಿಸಿದ್ದಲ್ಲ. ಅಥವಾ ನನ್ನ ಶ್ರದ್ಧೆ ನಿಜವಾದದ್ದು ಇನ್ನೊಬ್ಬನದ್ದಲ್ಲ ಎನ್ನುವುದರ ಕುರಿತಾದದ್ದೂ ಅಲ್ಲ. ದೇವಸ್ಥಾನದ ಆಡಳಿತ, ಅರ್ಚನೆ, ಆಸ್ತಿಯ ಪಾಲುದಾರಿಕೆಗೆ ಸಂಬಂಧಿಸಿದ್ದು ಮಾತ್ರ. ಅದು ಭಕ್ತರ ನಡುವಣ ವಿವಾದವಲ್ಲ, ಭವಿಗಳ ನಡುವಣ ಜಗಳ. ಆದರೂ ಸಮಾಜಕ್ಕೆ ಮುಜುಗರದ ವಿಷಯ.

ಇದೇ ಸಂದರ್ಭವನ್ನು ಬಳಸಿಕೊಂಡು ಶ್ರದ್ಧಾಹೀನರು ತಮ್ಮ ಸಿದ್ಧಾಂತವನ್ನು ಸಮಾಜದ ಮುಂದಿಡಲು ಮುಂದಾಗುವುದು ಸಹಜ. ‘ಸಕ್ಕರೆ ರೋಗದವನಿಗೆ ಬೆಲ್ಲದ ಬೆಲೆಯ ಬಗ್ಗೇಕೆ ಅಷ್ಟು ಚಿಂತೆ!’ ಎಂಬ ಮಾತನ್ನು ಇಲ್ಲಿ ಯಾರೂ ಗಮನಕ್ಕೆ ತೆಗೆದುಕೊಂಡಂತಿಲ್ಲ. ಆಸ್ತಿಕರ ನಡುವಣ ಜಗಳದಲ್ಲಿ ನಾಸ್ತಿಕರಿಗೆ ಬಹಳ ಆಸಕ್ತಿ! ಇಷ್ಟೆಲ್ಲ ವೈಜ್ಞಾನಿಕ ಬೆಳವಣಿಗೆಗಳಾದ ಮೇಲೆ ದೇವಸ್ಥಾನಗಳೇಕೆ ಬೇಕು ಎಂದು ಕೇಳುವವರೂ ಇದ್ದಾರೆ. ಅಯೋಧ್ಯೆಯ ರಾಮ ಮಂದಿರದ ವಿಚಾರದಲ್ಲಿ ಇಂತಹ ಅನೇಕ ಮಾತುಗಳು ಬಂದಿವೆ. ಅಧ್ಯಾತ್ಮಕ್ಕೆ, ಧಾರ್ಮಿಕತೆಗೆ ವಿಜ್ಞಾನ ಪರ್ಯಾಯ ಎಂದು ತಿಳಿದವರಿದ್ದಾರೆ. ಶ್ರದ್ಧೆ ಎಂದರೆ ಪ್ರಶ್ನಿಸದೆ ಒಪ್ಪುವ ಮನೋಭಾವ ಎಂದು ಭಾವಿಸಿದವರೂ ಇದ್ದಾರೆ. ಅವರಿಗೆಲ್ಲ ಮಠ ಮಂದಿರಗಳ ಜಗಳವೆಂದರೆ ಹಬ್ಬದ ಕಜ್ಜಾಯ ಸಿಕ್ಕಂತೆಯೇ. ಮಠ ಮಂದಿರಗಳು ಸಮಾಜಕ್ಕೆ ಬೇಕಾಗಿಯೇ ಇಲ್ಲ ಎನ್ನುವ ಜನ, ಮಠ ಮಂದಿರಗಳಲ್ಲಿ ಏನು ನಡೆಯುತ್ತಿದೆ ಎಂದು ಬಹಳ ಕಾಳಜಿ ಮಾಡುತ್ತಾರೆ!

ಮಂದಿರಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು, ಸರ್ವಸ್ಪರ್ಶಿಯಾಗಿರಬೇಕು ಎಂದು ಕಾಳಜಿ ಮಾಡಿದವರು ಅನೇಕರಿದ್ದಾರೆ. ಶ್ರದ್ಧೆಯ ನೆಲೆಯಲ್ಲಿ ಶೋಷಣೆಯಾಗಿದ್ದರಿಂದ ಶ್ರದ್ಧೆಯೇ ಬೇಡ ಎನ್ನುವುದು ವಿವೇಕವಲ್ಲ ಎಂಬುದು ಬಾಬಾ ಸಾಹೇಬ ಅಂಬೇಡ್ಕರ್ ನಿಲುವೂ ಆಗಿತ್ತು. ಮಾನವ ಬದುಕಿಗೆ ಧಾರ್ಮಿಕ ಸ್ವಾತಂತ್ರ್ಯ, ಆಧ್ಯಾತ್ಮಿಕ ಮೌಲ್ಯಗಳು ಬೇಕು ಎಂದು ದೃಢವಾಗಿ ನಂಬಿದ್ದ ಅಂಬೇಡ್ಕರ್ ಅವರು ಅಸ್ಪೃಶ್ಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಮಂದಿರ ಪ್ರವೇಶದ ಅವಕಾಶಕ್ಕಾಗಿ ಹೋರಾಡಿದರು. 1930ರಲ್ಲಿ ಅಂಬೇಡ್ಕರ್ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಸಿಕದ ಕಾಳಾರಾಮ ಮಂದಿರ ಪ್ರವೇಶಕ್ಕಾಗಿ ನಡೆದ ಹೋರಾಟ ಐತಿಹಾಸಿಕವಾದದ್ದು. ಜಾತಿ ಪದ್ಧತಿ, ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹಿಡಿದ ಗೆದ್ದಲು ಎನ್ನುವುದು ಒಂದು ವಿಷಯವಾದರೆ, ಪ್ರತೀ ಮನುಷ್ಯನಿಗೂ ಮಂದಿರ ಪ್ರವೇಶದ ಅವಕಾಶ ನೀಡಬೇಕು ಎನ್ನವುದು ಭಾರತೀಯ ವಿವೇಕ. ಇಂಥದೇ ಪ್ರಯತ್ನವನ್ನು ವಿನಾಯಕ ದಾಮೋದರ ಸಾವರ್ಕರ್‌ 1929ರಲ್ಲಿ ರತ್ನಗಿರಿಯಲ್ಲಿ ಮಾಡಿದರು. ಪತಿತಪಾವನ ಮಂದಿರವನ್ನೇ ನಿರ್ಮಿಸಿ ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಇಲ್ಲೆಲ್ಲ ನಮ್ಮ ಸಮಾಜದ ಸಾಮರಸ್ಯಕ್ಕೆ ಮಂದಿರವೇ ಕೇಂದ್ರವಾಗಬಲ್ಲದು ಎಂಬುದು ಅನುಭವ ಸಿದ್ಧ. ಹಾಗಿದ್ದರೆ ಈ ಜಗಳಗಳು ಯಾಕೆ ಎಂಬ ಪ್ರಶ್ನೆ ಮತ್ತೆ ಉದ್ಭವವಾಗುತ್ತದೆ. ಈಗಿರುವ ಜಗಳಗಳೆಲ್ಲ ತಾತ್ವಿಕವಾದುವಲ್ಲ. ಮನುಷ್ಯರ ನಡುವಿನ ತಪ್ಪು ತಿಳಿವಳಿಕೆ ಅಥವಾ ಆಸ್ತಿ-ಅಧಿಕಾರಗಳ ಕುರಿತ ಶುದ್ಧ ಲೌಕಿಕ ವಿವಾದ. ಕಾನೂನಿನ ನೆಲೆಯಲ್ಲಿ ಅಥವಾ ಪರಸ್ಪರ ಮಾತುಕತೆಯಲ್ಲಿ ಬಗೆಹರಿಸಬಹುದಾದ ಸಂಗತಿಗಳು. ಶ್ರದ್ಧೆಯನ್ನು ಕಾನೂನಿನ ಅಡಿಯಲ್ಲಿ ಚರ್ಚಿಸಲಾಗುವುದಿಲ್ಲ ಮತ್ತು ಅನುಕೂಲಕರ ಹೊಂದಾಣಿಕೆಯಾಗಿ ಸ್ವೀಕರಿಸಲೂ ಬರುವುದಿಲ್ಲ.

ಲೌಕಿಕ ಜಗಳಕ್ಕೂ ಪರಂಪರೆಯ ಶ್ರದ್ಧೆಗೂ ಸಂಬಂಧವಿಲ್ಲ ಎನ್ನುವ ಅನೇಕ ಸಂಗತಿಗಳು ನಮ್ಮ ಸುತ್ತ ಘಟಿಸುವುದಕ್ಕೆ ನಾವೇ ಸಾಕ್ಷಿಯಾಗಿರುತ್ತೇವೆ. ಆದರದು ನಮ್ಮ ಗಮನಕ್ಕೆ ಬಾರದಷ್ಟು ನಮ್ಮ ಸ್ವಭಾವದಲ್ಲಿ ಅನನ್ಯವಾಗಿ ಬೆರೆತಿದೆ. ಎಸ್.ಎಲ್.ಭೈರಪ್ಪನವರ ‘ಆವರಣ’ ಕಾದಂಬರಿಯ ಒಂದು ವಿವರಣೆ ಇದಕ್ಕೆ ಉತ್ತಮ ಉದಾಹರಣೆ. ‘ನರಸಾಪುರ ಮತ್ತು ಕಾಳೇನಹಳ್ಳಿಯ ನಡುವೆ ನೀರಿಗಾಗಿ ಜಗಳವಿರುತ್ತದೆ. ನರಸಾಪುರದ ಕೆರೆ ತುಂಬಿ ಹರಿದರೆ ಮಾತ್ರ ಕಾಳೇನಹಳ್ಳಿಯ ಕೆರೆಗೆ ನೀರು ಸಿಗುತ್ತಿತ್ತು. ಕಾಳೇನಹಳ್ಳಿಗೆ ಬರ ಬಂದ ವರ್ಷ ಆ ಊರಿನ ಯುವಕರು ನರಸಾಪುರ ಕೆರೆಯ ತೂಬನ್ನು ಒಡೆದು ನೀರು ಕೆಳಗೆ ಹರಿಯುವಂತೆ ಮಾಡುತ್ತಾರೆ. ಕೆರೆಯ ಒಡ್ಡೇ ಒಡೆದು, ನೀರೆಲ್ಲ ಹರಿದುಹೋಯಿತು. ನರಸಾಪುರದ ಜನ ಸಿಟ್ಟಿನಿಂದ ಬಡಿಗೆ ಹಿಡಿದು ಕಾಳೇನಹಳ್ಳಿಗೆ ನುಗ್ಗುತ್ತಾರೆ. ಹೊಡೆದಾಟವಾಗುತ್ತದೆ. ಒಂದೆರಡು ಹೆಣಗಳೂ ಬೀಳುತ್ತವೆ. ತಿರುಗಿ ನರಸಾಪುರಕ್ಕೆ ಹೊರಟವರು ಕಾಳೇನಳ್ಳಿಯ ಗ್ರಾಮದೇವತೆ ಕಾಳಮ್ಮನ ಗುಡಿಯ ಬಾಗಿಲಿಗೆ ಹಣೆ ಮುಟ್ಟಿಸಿ ನಮಸ್ಕರಿಸಿ ಹೋಗುತ್ತಾರೆ. ಅಂತೆಯೇ ನರಸಾಪುರದ ಹಾದಿಯಲ್ಲಿ ಓಡಾಡುವ ಕಾಳೇನಹಳ್ಳಿಯವರು ನರಸಾಪುರದ ಗದ್ದೆ ಕೆಂಪಮ್ಮನ ಗುಡಿಯ ಜಗಲಿಯಲ್ಲಿ ಕುಳಿತೆದ್ದು ಹೋಗುತ್ತಾರೆ’

ಅಂದರೆ ವ್ಯಾವಹಾರಿಕ ಜಗಳದಿಂದಾಗಿ ಅಂತರಂಗದ ಶ್ರದ್ಧೆ ಬದಲಾಗುವುದಿಲ್ಲ. ಇದು ಭಾರತೀಯ ಮನಸುಗಳ ವಿಶೇಷ.
ನಮ್ಮ ದೇಶದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ದೇವ ದರ್ಶನಕ್ಕೆ ತಾರತಮ್ಯವಿಲ್ಲ. ಆದರೂ ಚರಾಚರಗಳಲ್ಲೆಲ್ಲ ದೇವರೇ ಇದ್ದಾನೆ ಎಂದು ನಂಬಿರುವ ನಮಗೆ ಅದೇ ನಂಬುಗೆಯನ್ನು ಎಲ್ಲ ಕಡೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಸ್ಮಯದ ಸಂಗತಿ, ವಿಸ್ಮೃತಿಯ ವಿಕಾರ. ಭಾರತದ ದೇವಾಲಯವಾಸ್ತು ಅದೆಷ್ಟು ವ್ಯವಸ್ಥಿತವಾದ ಶಾಸ್ತ್ರವೆಂದರೆ ದೇವಾಲಯಗಳಲ್ಲಿ ಅಪೇಕ್ಷಿತ ಕಂಪನಗಳು ಉಂಟಾಗುತ್ತವೆ. ಎಂತಹ ಪ್ರಕ್ಷುಬ್ಧ ಮನಸಿಗೂ ಸಾಂತ್ವನ ನೀಡಬಲ್ಲ ಪರಿಸರ ನಿರ್ಮಾಣವಾಗುತ್ತದೆ. ಮಂದಿರ ಮತ್ತು ಅದರ ಪರಿಸರದ ಆಧಾರದಲ್ಲಿ ಕ್ಷೇತ್ರ, ಶ್ರೀ ಕ್ಷೇತ್ರ, ಮಾಹಾ ಕ್ಷೇತ್ರಗಳೆಂಬ ವಿಭಾಗಗಳಿವೆ. ಉದಾಹರಣೆಗೆ ಶ್ರೀ ಕ್ಷೇತ್ರವೆಂದರೆ; ವಿಮಾನಗೋಪುರವುಳ್ಳ ಧ್ವಜಸ್ತಂಭ, ಮುಖಮಂಟಪ, ಚಂದ್ರಸಾಲೆ, ಸುಖನಾಸಿ, ಗರ್ಭಗ್ರಹ, ಪ್ರದಕ್ಷಿಣ ಪಥ, ಉತ್ಸವಗಳು, ರಥ-ರಥಬೀದಿ, ಆರು ತೀರ್ಥಗಳು (ಕೆರೆಗಳು), ನಿರ್ದಿಷ್ಟ ಅಂತರದಲ್ಲಿ ಪರಿವಾರ ದೇವತೆಗಳು ಎಲ್ಲ ಇರಬೇಕು. ಅಂದರೆ ಹಾದಿ ಬೀದಿಯ ನಡುವೆ, ಅಂದ ಆಕಾರವಿಲ್ಲದೆ ಎದ್ದುನಿಂತ ಗುಡಿಗಳನ್ನೆಲ್ಲ ಪರಂಪರೆಯ ಮಂದಿರಗಳ ಸಾಲಿನಲ್ಲಿ ನಿಲ್ಲಿಸಲಾಗದು. ಸಾರ್ವಜನಿಕ ಹಿತಕ್ಕಾಗಿ ಅಂತಹ ಗುಡಿಗಳನ್ನು ಕೆಡವಬೇಕಾಗಿ ಬಂದರೆ ಅದನ್ನು ವಿರೋಧಿಸಲಾಗದು.

ನಂಬುವವರಿಗೆ ನೂರು ಕಾರಣಗಳಾದರೆ, ನಗುವವರಿಗೆ ನೂರು ಹಾದಿಗಳು. ನಮ್ಮ ದೇಶದಲ್ಲಿ ವಿಪರೀತವಾಗಿ ಅಣಕಿಸಲ್ಪಟ್ಟ ಮೌಲ್ಯ ಭಕ್ತಿ, ಅಂತೆಯೇ ವಿಶೇಷವಾಗಿ ವಿಸ್ತರಿಸಲ್ಪಟ್ಟ ಮೌಲ್ಯವೂ ಭಕ್ತಿಯೇ. ನಮ್ಮ ಎಲ್ಲ ಕಲೆಗಳು ಶ್ರದ್ಧಾ ಮೂಲದವು. ಅವುಗಳಲ್ಲಿರುವ ಶ್ರದ್ಧೆಯನ್ನು ತೆಗೆದು ಉಳಿದ ಅಂಶಗಳನ್ನು ಇಟ್ಟುಕೊಂಡರೆ ಆಗ ಅದು ಸೆಕ್ಯುಲರ್ ಆಗುತ್ತದೆ ಎನ್ನುವ ವಾದವೊಂದು ಬೆಳೆದಿದೆ, ಪ್ರಯೋಗಗಳೂ ನಡೆದಿವೆ. ಅದು ಹೇಗಿರುತ್ತದೆಂದರೆ ಹಕ್ಕಿಯನ್ನು ಕೊಂದು ಅದರ ಹೊಟ್ಟೆಯಲ್ಲಿ ಹುಲ್ಲು ತುಂಬಿ, ಮೈಗೆ ಸಂರಕ್ಷಕಗಳನ್ನು ಸವರಿ ಪ್ರಯೋಗಾಲಯಗಳಲ್ಲಿ ಇಡುತ್ತಾರಲ್ಲ ಹಾಗಿರುತ್ತದೆ. ಈ ಶ್ರದ್ಧಾಹೀನ ವಿಚಾರದ (ಅದಕ್ಕೆ ಸೆಕ್ಯುಲರ್ ಎಂದು ಹೆಸರು, ಅದನ್ನು ಪ್ರತಿಪಾದಿಸುವುದು ಪ್ರಗತಿಪರತೆ!) ಪ್ರಭಾವ ಹೇಗೆ ಬೆಳೆದಿದೆ ಎಂದರೆ ಹಾಳು ಬಿದ್ದ ಪ್ರಾಚೀನ ಗುಡಿ ಕಲೆಯ ನೆಲೆಯಾಗಿ ಕಾಣುತ್ತದೆ, ಪೂಜೆ ನಡೆಯುತ್ತಿರುವ ಭವ್ಯ ದೇವಾಲಯವೊಂದು ಮೂಢನಂಬಿಕೆಯ ತಾಣವಾಗಿ ಗೋಚರಿಸುತ್ತದೆ. ಈ ವೈರುಧ್ಯವೂ ವಿಸ್ಮಯವೇ!

ದೇವರಿಗೆ ನೂರು ಅವತಾರ ಕಲ್ಪಿಸಬಲ್ಲ ನಮಗೆ ಬದುಕಿನ ಮೌಲ್ಯಗಳ ನೆಲೆಯಾಗಿ ಮನೆ-ಮಂದಿರಗಳೆರಡೂ ಬೇಕು. ಆದರೆ ಮಂದಿರಗಳು ವಿವಾದದ ಕೇಂದ್ರಗಳಾದರೆ ಒಡೆದ ಮನಸುಗಳ ಮನೆಯಂತೆ ಆಗುತ್ತವೆ. ಕರ್ನಾಟಕದವರಿಗೆಲ್ಲ ಅತ್ಯಂತ ಪರಿಚಿತವಾದ ಶ್ರದ್ಧಾ ಕೇಂದ್ರ ಧರ್ಮಸ್ಥಳ. ಅಲ್ಲಿ ನಿತ್ಯ ನ್ಯಾಯದಾನವೂ ನಡೆಯುತ್ತದೆ. ಅದಕ್ಕೆ ಭಕ್ತರು ‘ಸತ್ಯಕೋರ್ಟ್’ ಎಂದು ಕರೆಯುತ್ತಾರೆ. ಅಲ್ಲಿ ವಕೀಲರಿಲ್ಲ, ಕೋರ್ಟ್ ಫೀ ಇಲ್ಲ, ಆಗ್ರಹವೂ ಇಲ್ಲ, ವಿಲಂಬವೂ ಇಲ್ಲ. ಅಂತರಂಗದ ಶ್ರದ್ಧೆಯೇ ಆಧಾರ, ಆತ್ಮಸಾಕ್ಷಿಯೇ ಪ್ರಮಾಣ. ಒಂದು ಕಡೆ ದೇವಸ್ಥಾನವೇ ಸತ್ಯ ಕೋರ್ಟ್, ಇನ್ನೊಂದು ಕಡೆ ಕೋರ್ಟ್‌ಗಳಲ್ಲಿ ದೇವಸ್ಥಾನದ ವಿವಾದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT